ಸ್ತ್ರೀಯನ್ನು ದೇವತೆ ಎಂದೂ, "ಮಾತೃ ದೇವೋ ಭವ" ಎಂದೂ ಕರೆದ ಸನಾತನ ಧರ್ಮ ಅದೇ ಉಸುರಿನಲ್ಲಿ "ನ ಸ್ತ್ರೀ ಸ್ವಾತಂತ್ರ್ಯಮರ್ಹತಿ" ಎಂದೂ ಗಂಡ ತೀರಿದ ಹೆಣ್ಣು ಮುಂಡೆ ಎಂದೂ ಘೋಷಿಸುತ್ತದೆ. ಕಾಲ ಬದಲಾಗಿದೆ. ಹೆಣ್ಣು ಮಕ್ಕಳು ಈಗ ವಿದ್ಯಾವಂತರಾಗಿದ್ದಾರೆ, ಸರಿ ಸುಮಾರಾಗಿ ಕೆಲಸ ಮಾಡುತ್ತಿದ್ದಾರೆ, ಆರ್ಥಿಕವಾಗಿ ಸುಧಾರಿಸಿದ್ದಾರೆ. ಆದರೂ, ಕೌಟುಂಬಿಕ ಮತ್ತು ಸಾಮಾಜಿಕ ವಲಯಗಳಲ್ಲಿ ಅಸಮಾನಳು, ದೌರ್ಜನ್ಯಪೀಡಿತಳು. ಹೊಣೆ ಹೆಚ್ಚಾಗಿದೆ; ಅದಕ್ಕೆ ತಕ್ಕಂತೆ ನೆಮ್ಮದಿ ಸಿಗುತ್ತಿಲ್ಲ. ಸ್ತ್ರೀ-ಪುರುಷರ ಅ-ಸಮೀಕರಣಗಳಲ್ಲಿ ತೃತೀಯ ಲಿಂಗವೂ ಸೇರಿ ಸಮಸ್ಯೆಯನ್ನು ತೊಡಕುಗೊಳಿಸಿದೆ. ಇದಕ್ಕೆ ಉತ್ತರ ಎನ್ನುವಂತೆ ಸ್ತ್ರೀತ್ವವಾದ ಮುಂದೆ ಬಂದಿದೆ. ಏನಿದು? ಇಲ್ಲಿ ಶ್ರೀನಿವಾಸ ಭಟ್ಟರು ಹೇಳುವ, ಸ್ತ್ರೀತ್ವ ಮತ್ತು ಸ್ತ್ರೀ ಸಂವೇದನೆಗಳ ಸಮ್ಮಿಶ್ರಣವೆ ಸುಖ ಶಾಂತಿ ಸಮೃದ್ಧಿಗಳಿಗೆ ಸಮರ್ಪಕ ರಸಾಯನವೆ? ಸಮೀಕರಣ ಸಾಧ್ಯವೆ? ಸಮತ್ವ ಸಾಧುವೆ? - ಸಂ