ತೋಳಬಂದಿ ಮತ್ತು ಸೌಂದರ್ಯಸಾಧನೆ

ಚೆನ್ನುಡಿ

ತೋಳಬಂದಿ ಮತ್ತು ಸೌಂದರ್ಯಸಾಧನೆ

ಮನುಷ್ಯ‌, ಹೆಂಗಸಾಗಲಿ ಗಂಡಸಾಗಲಿ, ತನ್ನ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಏನೇನೋ ಮಾಡುತ್ತಾನೆ. ಹಾಲು, ಜೇನು, ತೈಲ, ತುಪ್ಪ ಗಳೊಂದಿಗೆ, ಸುಗಂಧ ದ್ರವ್ಯಗಳನ್ನು ಬೆರೆಸಿ, ಉಜ್ಜಿ ಉಜ್ಜಿ ಅಭ್ಯಂಜನ ಸ್ನಾನ ಮಾಡುತ್ತಾನೆ. ನಯವಾದ ರೇಷ್ಮೆಯ ಬಟ್ಟೆಯನ್ನು, ನಾಗಚರ್ಮದ ಪಾದರಕ್ಷೆಗಳನ್ನು ತೊಡುತ್ತಾನೆ. ಹೊಳೆಯುವ ಚಿನ್ನದ ಆಭರಣಗಳನ್ನು, ಕೋರೈಸುವ ವಜ್ರದ ಓಲೆ ಉಂಗುರಗಳನ್ನು, ನಡುವಲ್ಲಿ ವಂಕಿ, ಡಾಬುಗಳನ್ನು, ಕಾಲಲ್ಲಿ ಗೆಜ್ಜೆ, ಪಿಲ್ಲೆ, ಪೈಜಣ, ರುಳಿ, ಸರಪಳಿಗಳನ್ನು, ಮೂಗುತಿಯನ್ನು, ಕೈಗಳಲ್ಲಿ, ತೋಡೆ, ಕಡಗ, ಬಳೆಗಳನ್ನು ಹಾಕಿಕೊಳ್ಳುತ್ತಾನೆ. ಇವುಗಳಲ್ಲಿ ಯಾವುದು ನಿಜವಾದ ಸೌಂದರ್ಯವರ್ಧಕ? ಯಾವುದು ಶಾಶ್ವತ?

ಇದಕ್ಕೆ ೭ನೆ ಶತಮಾನದ, ವಿದ್ವಾಂಸನಾದ ಭರ್ತೃಹರಿಯನ್ನು ಕೇಳೋಣ. ಈತ "ಸುಭಾಷಿತ ತ್ರಿಶತೀ" ಎನ್ನುವ ಗ್ರಂಥವನ್ನು ಬರೆದಿದ್ದಾನೆ. ಇದರಲ್ಲಿ ನೀತಿಶತಕ, ಶೃಂಗಾರಶತಕ, ವೈರಾಗ್ಯಶತಕ ಎನ್ನುವ ಮೂರು ಶತಕಗಳು - ಅಂದರೆ ನೂರು ಬಿಡಿ ಪದ್ಯಗಳ ಕಂತೆಗಳು ಇವೆ. ಈಗ ನೀತಿಶತಕದಲ್ಲಿನ ಪದ್ಯ ಒಂದನ್ನು ನೋಡೋಣ:

 


ಕೇಯೂರಾ ನ ವಿಭೂಷಯಂತಿ

  ಭರ್ತೃಹರಿ, ನೀತಿಶತಕ, ಪದ್ಯ ೧೭.

   ಕೇಯೂರಾ ನ ವಿಭೂಷಯಂತಿ ಪುರುಷಂ ಹಾರಾ ನ ಚಂದ್ರೋಜ್ವಲಾಃ 
      ನ ಸ್ನಾನಂ ನ ವಿಲೇಪನಂ ನ ಕುಸುಮಂ ನಾಲಂಕೃತಾ ಮೂರ್ಧಜಾಃ
 ವಾಣ್ಯೇಕಾ ಸಮಲಂಕರೋತಿ ಪುರುಷಂ ಯಾ ಸಂಸ್ಕೃತಾ ಧಾರ್ಯತೇ
    ಕ್ಷೀಯಂತೇ ಖಲು ಭೂಷಣಾನಿ ಸತತಂ ವಾಗ್ಭೂಷಣಂ ಭೂಷಣಂ
 

ತೋಳಬಂದಿ ಒಡವೆಯಲ್ಲ

ಚಂದ್ರ ಹೊಳಪಿನ ಹಾರ ತೋಳಬಂದಿಗಳೊಡವೆಯಲ್ಲ; 
          ಮೈ ತೊಳೆದು ಪರಿಮಳಿಸಿ ತಲೆಯಲ್ಲಿ ಹೂ ಮುಡಿದರಲ್ಲ!  
   ಕಂನಡೆಯು ತುಂಬಿರುವ ಕಂನುಡಿಯೆ ಚೆನ್ನೊಡವೆ ನರಗೆ; 
                 ನುಡಿಯೊಡವೆಯೇ ಒಡವೆ, ಅಳಿಯುವವು ಮಿಗಿದೊಡವೆ ಎಲ್ಲ.

ಮೈ ಕೈ, ತೋಳು, ನಡು, ತಲೆ, ಕಾಲುಗಳಲ್ಲಿ ಏನೇ ಹಾಕಿಕೊಂಡರೂ, ಅವು ಎಲ್ಲ ಕ್ರಮೇಣ ಮಸುಕಾಗಿ, ಕ್ಷೀಣಿಸುತ್ತ, ಅಳಿದು ಹೋಗುತ್ತವೆ. ಆದರೆ, ಒಳ್ಳೆಯ ನಡೆ ನಡತೆಗಳಜೊತೆ ಓಳ್ಳೆಯ ಮಾತುಗಳು ನಿಜವಾದ, ಯಾವಾಗಲೂ ಕೆಡದೆ ಇರುವ, ಯವಾಗಲೂ ಶೋಭೆಯನ್ನು ಕೊಡುವ ಅಲಂಕಾರಗಳು, ಒಡವೆಗಳು.

ತ್ರಿಶತಿ ಚಾಲೆಂಜ್‌ : ಪ್ರಯತ್ನಿಸಿ

  1. ಈ ಬಿತ್ತರಿಕೆಯಲ್ಲಿ ಹೇಳಿದವುಗಳಲ್ಲದೆ^ ಇತರ ಒಂದು ನೂರು (೧೦೦) ಸಾಂಪ್ರದಾಯಿಕ ಮತ್ತು ಆಧುನಿಕ ಉಡುಗೆ/ತೊಡುಗೆ/ಒಡವೆ/ಆಭರಣಗಳನ್ನು ಪಟ್ಟಿ ಮಾಡಬಲ್ಲಿರಾ?
  2. ಮನುಷ್ಯ ಸ್ನಾನಕ್ಕೆ ಬಳಸುವ ಒಂದು ನೂರು (೧೦೦) ಸಾಧನ/ದ್ರವ್ಯಗಳನ್ನು ಪಟ್ಟಿ ಮಾಡಬಲ್ಲಿರಾ?
  3. (ಒಳ್ಳೆಯ) ನುಡಿ ನಡೆಗಳಲ್ಲದೆ, ಮನುಷ್ಯನಿಗೆ ಶೋಭೆ ತರುವ ತಾಳ್ಮೆ, ಅನುಕಂಪ, ಔದಾರ್ಯ ಇತ್ಯಾದಿ ಒಂದು ನೂರು (೧೦೦) ಒಳ್ಳೆಯ ಗುಣಗಳನ್ನು ಹೆಸರಿಸಬಲ್ಲಿರಾ?

_________
^ ರೇಷ್ಮೆಯ ಬಟ್ಟೆ, ನಾಗಚರ್ಮದ ಪಾದರಕ್ಷೆ, (ಚಿನ್ನದ / ವಜ್ರದ) ಓಲೆ ಉಂಗುರಗಳು, ವಂಕಿ, ಡಾಬು, ಗೆಜ್ಜೆ, ಪಿಲ್ಲೆ, ಪೈಜಣ, ರುಳಿ, ಸರಪಳಿ,, ಮೂಗುತಿ, ತೋಡೆ, ಕಡಗ, ಬಳೆ

ನಿಮ್ಮವನೆ ಆದ
ವಿಶ್ವೇಶ್ವರ ದೀಕ್ಷಿತ

ಕನ್ನಡ ಕಲಿ, ಬಿತ್ತರಿಕೆ,
ತೋಳಬಂದಿ ಮತ್ತು ಸೌಂದರ್ಯಸಾಧನೆ
July 08, 2023

https://youtu.be/gO50IIwWJa0
https://podcasters.spotify.com/pod/show/kannadakali/episodes/Tabandi-Ma…


ತಾಗುಲಿ: chennudi, Bhatrihari, NitiShataka, keyura