ನಾನಾರು
ಆದಿ ಶಂಕರ ವಿರಚಿತ ಆತ್ಮಷಟ್ಕ (ನಿರ್ವಾಣ ಷಟ್ಕ)
ಕನ್ನಡಕ್ಕೆ : ವಿಶ್ವೇಶ್ವರ ದೀಕ್ಷಿತ
ನಾನಾರು
ಮತಿ, ಮನಸು, ಬಗೆ, ನಾನ್ಕೆ ಯಾವುದೂ ನಾನಲ್ಲ;
ಕಿವಿ ನಾಲಿಗೆಗಳಲ್ಲ, ಕಣ್ಣು ಮೂಗುಗಳಲ್ಲ;
ಜಲ, ಗಾಳಿ, ನೆಲ, ಬಾನು, ಬೆಂಕಿಯೂ ನಾನಲ್ಲ;
ತಿಳಿ ಅರಿವು-ನಲಿವಿರವು, ಶಿವ ನಾನು, ಶಿವ ನಾನು. [೧]
ನುಡಿ, ಹರಣ, ಐದೊಡಲ ಗಾಳಿಗಳು ನಾನಲ್ಲ;
ಐದು ಚೀಲಗಳಲ್ಲ, ಏಳ್ ಧಾತುಗಳು ಅಲ್ಲ;
ಹುಟ್ಟು ಹೊರಗೆಸೆವಂಗ, ಕೈ ಕಾಲುಗಳು ಅಲ್ಲ;
ತಿಳಿ ಅರಿವು-ನಲಿವಿರವು, ಶಿವ ನಾನು, ಶಿವ ನಾನು. [೨]
ಹಗೆ ಒಲವುಗಳು ಇಲ್ಲ, ಮರುಳ್ ಆಸೆಗಳು ಇಲ್ಲ;
ಸೊಕ್ಕಿಲ್ಲ ನನ್ನಲ್ಲಿ, ಕರುಬಿಲ್ಲ ನನ್ನಲ್ಲಿ;
ಅರ ಇಲ್ಲ, ಸಿರಿ ಇಲ್ಲ, ಬಯಕೆ ಬಿಡುತೆಗಳಿಲ್ಲ;
ತಿಳಿ ಅರಿವು-ನಲಿವಿರವು, ಶಿವ ನಾನು, ಶಿವ ನಾನು. [೩]
ಒಳಿತು ಕೆಡಕುಗಳಿಲ್ಲ, ನೋವು ನಲಿವುಗಳಿಲ್ಲ;
ಮಂತ್ರ ತೀರ್ಥಗಳಿಲ್ಲ, ಯಾಗ ವೇದಗಳಿಲ್ಲ;
ಸವಿಯುವವ, ಸವಿಯುವುದು, ಸವಿಯು ಸಹ ನಾನಲ್ಲ;
ತಿಳಿ ಅರಿವು-ನಲಿವಿರವು, ಶಿವ ನಾನು, ಶಿವ ನಾನು. [೪]
ಅಳುಕು ಸಾವುಗಳಿಲ್ಲ, ಜಾತಿ ಒಡಕುಗಳಿಲ್ಲ;
ನನಗಿಲ್ಲ ತಾಯ್ ತಂದೆ - ಹುಟ್ಟೆ ಇಲ್ಲವೊ ಮೊದಲು!
ಗೆಳೆಯ ನೆಂಟರು ಇಲ್ಲ, ಗುರು ಶಿಷ್ಯರೆನಗಿಲ್ಲ;
ತಿಳಿ ಅರಿವು-ನಲಿವಿರವು, ಶಿವ ನಾನು, ಶಿವ ನಾನು. [೫]
ಬದಲಿಲ್ಲದವ ನಾನು, ನನಗಿಲ್ಲ ಆಕಾರ -
ಹೊಕ್ಕಿರುವೆ ಎಲ್ಲೆಲ್ಲು; ಮಿಗೆ ಕರಣಗಳನೆಲ್ಲ
ಬೆಸುಗೆಗೊಳ್ಳುವನಲ್ಲ, ಬಿಡುಗೆ ಅಳವುಗಳಿಲ್ಲ;
ತಿಳಿ ಅರಿವು-ನಲಿವಿರವು, ಶಿವ ನಾನು, ಶಿವ ನಾನು. [೬]
ಟಿಪ್ಪಣಿ
[೧] ನಾನ್+ಇಕೆ=ನಾನಿಕೆ -> ನಾನ್ಕೆ, also +ಕೆ is same as +ಇಕೆ per Kittel Hence ನಾನ್+ಕೆ =ನಾನ್ಕೆ ~ ಅಹಂಕಾರ
[೨.೧] ಐದು ವಾಯುಗಳು : ಪ್ರಾಣ, ಅಪಾನ, ವ್ಯಾನ, ಉದಾನ, ಮತ್ತು ಸಮಾನ
[೨.೨] ಏಳು ಧಾತುಗಳು : ರಸ, ರಕ್ತ, ಮಾಂಸ, ಮೇದ, ಅಸ್ತಿ, ಮಜ್ಜಾ, ಮತ್ತು ಶುಕ್ರ
[೬] ಸರ್ವೇಂದ್ರಿಯ :
ತಿಳಿವು ಕರಣಗಳು / ಜ್ಞಾನೇಂದ್ರಿಯಗಳು ಐದು : ಕಿವಿ (ಶೋತ್ರ), ಕಣ್ಣು (ಚಕ್ಷು), ಮೂಗು (ನಾಸಿಕ), ನಾಲಿಗೆ (ಜಿಹ್ವೆ ) ಮತ್ತು ಚರ್ಮ (ತ್ವಕ್).
ಗೆಯ್ಮೆ ಕರಣಗಳು / ಕರ್ಮೇಂದ್ರಿಯಗಳು, ಭೌತಿಕ ಪ್ರಪಂಚದೊಂದಿಗೆ ಸಂವಹನ ನಡೆಸುವ ಅಂಗಗಳು ಐದು: ಕಾಲು (ಪಾದ) ಕೈ (ಪಾಣಿ), ಗುದ (ಪಾಯು), ಜನನಾಂಗ (ಉಪಸ್ಥ), ಮತ್ತು ಬಾಯಿ (ವಾಕ್)
ಆತ್ಮಷಟ್ಕ (ನಿರ್ವಾಣ ಷಟ್ಕ)
ಮನೋಬುದ್ಧ್ಯಹಂಕಾರಚಿತ್ತಾನಿ ನಾಹಂ
ನ ಚ ಶ್ರೋತ್ರಜಿಹ್ವೇ ನ ಚ ಘ್ರಾಣನೇತ್ರೇ
ನ ಚ ವ್ಯೋಮಭೂಮಿರ್ನ ತೇಜೋ ನ ವಾಯುಃ
ಚಿದಾನಂದರೂಪಃ ಶಿವೋಽಹಂ ಶಿವೋಽಹಂ [೧]
ನ ಚ ಪ್ರಾಣಸಂಜ್ಞೋ ನ ವೈ ಪಂಚವಾಯುಃ
ನ ವಾ ಸಪ್ತಧಾತುರ್ನ ವಾ ಪಂಚಕೋಶಃ
ನ ವಾಕ್ ಪಾಣಿಪಾದೌ ನ ಚೋಪಸ್ಥಪಾಯು
ಚಿದಾನಂದರೂಪಃ ಶಿವೋಽಹಂ ಶಿವೋಽಹಂ [೨]
ನ ಮೇ ದ್ವೇಷರಾಗೌ ನ ಮೇ ಲೋಭಮೋಹೌ
ಮದೋ ನೈವ ಮೇ ನೈವ ಮಾತ್ಸರ್ಯಭಾವಃ
ನ ಧರ್ಮೋ ನ ಚಾರ್ಥೋ ನ ಕಾಮೋ ನ ಮೋಕ್ಷಃ
ಚಿದಾನಂದರೂಪಃ ಶಿವೋಽಹಂ ಶಿವೋಽಹಂ [೩]
ನ ಪುಣ್ಯಂ ನ ಪಾಪಂ ನ ಸೌಖ್ಯಂ ನ ದುಖಂ
ನ ಮಂತ್ರೋ ನ ತೀರ್ಥಂ ನ ವೇದಾ ನ ಯಜ್ಞಾಃ
ಅಹಂ ಭೋಜನಂ ನೈವ ಭೋಜ್ಯಂ ನ ಭೋಕ್ತಾ
ಚಿದಾನಂದರೂಪಃ ಶಿವೋಽಹಂ ಶಿವೋಽಹಂ [೪]
ನ ಮೃತ್ಯುರ್ನಶಂಕಾ ನ ಮೇ ಜಾತಿಭೇದಃ
ಪಿತಾ ನೈವ ಮೇ ನೈವ ಮಾತಾ ನ ಜನ್ಮ
ನ ಬಂಧುರ್ನ ಮಿತ್ರಂ ಗುರುರ್ನೈವ ಶಿಷ್ಯಃ
ಚಿದಾನಂದರೂಪಃ ಶಿವೋಽಹಂ ಶಿವೋಽಹಂ [೫]
ಅಹಂ ನಿರ್ವಿಕಲ್ಪೋ ನಿರಾಕಾರರೂಪೋ
ವಿಭುತ್ವಾಚ್ಚ ಸರ್ವತ್ರ ಸರ್ವೇಂದ್ರಿಯಾಣಾಂ
ನ ಚಾಸಂಗತಂ ನೈವ ಮುಕ್ತಿರ್ನ ಮೇಯಃ
ಚಿದಾನಂದರೂಪಃ ಶಿವೋಽಹಂ ಶಿವೋಽಹಂ [೬]
ತಾಗುಲಿ : Shankara, atmashatka, nirvanashatka, Vishweshwar Dixit