ಹಳೆಯದೆಂದೆಲ್ಲವೂ ಒಳಿತೆನಲು ಹೊಲ್ಲ - ಕಾಳಿದಾಸನ ಕಾವ್ಯದೃಷ್ಟಿ

ಚೆನ್ನುಡಿ

ಹಳೆಯದೆಂದೆಲ್ಲವೂ ಒಳಿತೆನಲು ಹೊಲ್ಲ
ಕಾಳಿದಾಸನ ಕಾವ್ಯದೃಷ್ಟಿ

ಪುರಾಣ ಅಂದರೆ ಹಿಂದಿನದು, ಹಳೆಯದು. ಅದೆಲ್ಲ ಒಳ್ಳೆಯದು.  ಹೊಸದೆಲ್ಲವೂ ಕೆಟ್ಟದ್ದು.  ಹಿಂದಿನದನ್ನು ಪ್ರಶ್ನಾತೀತವಾಗಿ ಪಾಲಿಸಬಹುದು. ಆದರೆ  ಹೊಸದನ್ನು ಒಪ್ಪಿಕೊಳ್ಳುವ ಮಾತೇ ಇಲ್ಲ. ಯಾವುದೇ ಹೊಸ ಮಾರ್ಗ, ಹೊಸ ವಿಚಾರವನ್ನು ಅನುಸರಿಸುವುದರಲ್ಲಿ ಮನುಷ್ಯನಿಗೆ ಅಳುಕು ಸಹಜವಾದದ್ದು. ಆದರೆ ಈ ಸಾಮಾನ್ಯ ನಿಲುವು ಎಷ್ಟು ಸರಿ? ಕಾಳಿದಾಸ ಹೇಳಿದ್ದೇನು? ಕವಿ ಕಾಣದ್ದನ್ನು ಕಂಡವರಾರು? ಗಾದೆ ಮಾತು ಹೇಳಿದ್ದೇನು?

ಪುರಾಣಮಿತ್ಯೇವ ನ ಸಾಧು ಸರ್ವಂ
            ನ ಚಾಪಿ ಕಾವ್ಯಂ ನವಮಿತ್ಯವದ್ಯಮ್;
ಸಂತಃ ಪರೀಕ್ಷ್ಯಾನ್ಯತರದ್ಭಜಂತೇ
            ಮೂಢಃ ಪರಪ್ರತ್ಯಯನೇಯಬುದ್ಧಿಃ.

                                   -ಕಾಳಿದಾಸ (ಮಾಲವಿಕಾಗ್ನಿಮಿತ್ರ, ೧-೨)

ಇದು ಕಾಳಿದಾಸನ ಮಾಲವಿಕಾಗ್ನಿಮಿತ್ರ ನಾಟಕದಲ್ಲಿ ಬರುವ ಸೂತ್ರಧಾರನ ಮಾತು.

ಇದರ ಕನ್ನಡ ಭಾವಾನುವಾದ ಹೀಗಿದೆ:

ಹಳೆಯದೆಂದೆಲ್ಲವೂ ಒಳಿತೆನಲು ಹೊಲ್ಲ;
   ಹೊಳವು ಹೊಸತೆಂದು ಹೀಗಳೆಯಲೂ ಸಲ್ಲ.
ಬಲ್ಲವರು ಒಪ್ಪುವರು ಆರಯ್ದು ಎಲ್ಲ,
   ಹೆಡ್ಡರಿಗೆ ಹೆರನುಡಿಯೆ ನನ್ನಿ, ಸವಿಬೆಲ್ಲ!

ಇಲ್ಲಿ ಪುರಾಣ ಅಂದರೆ ʼಪುರಾಣʼ,ಭಾಗವತ ಇತ್ಯಾದಿ, ಅಷ್ಟೇ ಅಲ್ಲ. ಕಾಳಿದಾಸ ಹೇಳಿದ್ದು ಕಾವ್ಯ ರಚನೆಯ ಹಿನ್ನೆಲೆಯಲ್ಲಿ.  ಕಾಳಿದಾಸನಿಗಿಂತ ಮುಂಚಿನವರು, ಪೂರ್ವಸೂರಿಗಳಾದ ಭಾಸ, ಸೌಮಿಲ್ಲ ಮುಂತಾದವರು, ತಮ್ಮ ಪ್ರಸಿದ್ಧ ಕಾವ್ಯಗಳಿಂದ ಬೇರೆ ಕಾವ್ಯಗಳೆ ಇಲ್ಲ ಎನ್ನುವಂತೆ ಕಾವ್ಯದ ವ್ಯಾಖ್ಯಾನವನ್ನು ಜನಮನದಲ್ಲಿ ಸೃಷ್ಟಿಸಿದ್ದರು‌ ಎನ್ನಬಹುದು. ಇಂತಹ ವಾತಾವರಣದಲ್ಲಿ, ಎಷ್ಟೇ ಪ್ರತಿಭಾನ್ವಿತನಾಗಿದ್ದರೂ ಹೊಸ ಕವಿಯಾದ ಕಾಳಿದಾಸನಿಗೆ ಅಳುಕು ಇದ್ದದ್ದೇ.  ಆಗ, ಕಾವ್ಯ, ಹೊಸದಿರಲಿ ಹಳೆಯದಿರಲಿ, ಅದರ ಗುಣಾವಗುಣಗಳನ್ನು ಪರಿಶೀಲಿಸಿ ಅದರ ಶ್ರೇಷ್ಠತೆಯನ್ನು ‌ ನಿರ್ಣಯಿಸಬೇಕು ಎಂದು, ಹಿಂದಿನವರನ್ನು ಮನ್ನಿಸುತ್ತಲೂ, ಸಹೃದಯರಲ್ಲಿ ವಿನಯಪೂರ್ವಕವಾಗಿಯೂ, ತನಗೇ ತಿರುಗೇಟು ಕೊಡುವ ಸಂಭವ ಇದ್ದರೂ, ಈ ಮಾತಿನಲ್ಲಿ ಸಮಾಧಾನ ಹೇಳಿಕೊಂಡಿದ್ದಾನೆ. 

ಈಗ ಜನರ ತಿಳುವಳಿಕೆ ಕಾಳಿದಾಸನ ಹೇಳಿಕೆಯ ಕಾವ್ಯವಿಶೇಷತೆಯನ್ನು ಮೀರಿ ವಿಸ್ತರಿಸಿದೆ.   ಹಳೆಯದು ಎಂದರೆ ಆಗಲೆ ಪ್ರತಿಷ್ಠಿತವಾದದ್ದು, ಯಾವುದೇ ಪ್ರಶ್ನೆ/ಸಂಶಯ/ಸಂಕೋಚ ಇಲ್ಲದೆ ಕೂಡಲೆ ಒಪ್ಪಿಕೊಳ್ಳಬೇಕಾದದ್ದು ಎನ್ನುವ ಅರ್ಥ.  ಅದು ಮೂರ್ತ ವಸ್ತುವಾಗಲಿ,  ಅಮೂರ್ತ ವಿಷಯವಾಗಲಿ, ಯೋಜನೆ ಆಗಲಿ, ಯೋಚನೆ ಆಗಲಿ, ರಚನೆ ಆಗಲಿ, ಬರಿ ಕಲ್ಪನೆ ಆಗಲಿ, ಎಲ್ಲದಕ್ಗೂ ಅನ್ವಯಿಸುವಂತೆ ಅರ್ಥೈಸಲಾಗಿದೆ.  ಇಂಥ ಅಭಿಪ್ರಾಯವನ್ನೆ "ಅಜ್ಜ ನೆಟ್ಟ ಆಲದ ಮರ ಅಂತ ಅದಕ್ಕೆ ನೇಣು ಹಾಕಿಕೊಳ್ಳಬಹುದೆ?"  ಮತ್ತು ಅನುಲೋಮವಾಗಿ, " All that glitters is not gold" ಎನ್ನುವ ಗಾದೆ ಮಾತುಗಳಲ್ಲಿ ಕಾಣಬಹುದು. 
ಅದಕ್ಕೇ, ರವಿ ಕಾಣದ್ದನ್ನು ಕವಿ ಕಂಡ; ಕವಿ ಕಾಣದ್ದನ್ನು? ಓದುಗ ಕಂಡ! ಇದೇ ಕಾವ್ಯದ ಲಕ್ಷಣ ಅಲ್ಲವೆ?

ನಿಮ್ಮವನೆ ಆದ
ವಿಶ್ವೇಶ್ವರ ದೀಕ್ಷಿತ
ಹಳೆಯದೆಂದೆಲ್ಲವೂ ಒಳಿತೆನಲು ಹೊಲ್ಲ, ಕಾಳಿದಾಸನ ಕಾವ್ಯದೃಷ್ಟಿ
ಕನ್ನಡ ಕಲಿ, ಬಿತ್ತರಿಕೆ, 
October 09, 2023

https://youtu.be/Bo8yPb04ah4
https://podcasters.spotify.com/pod/show/kannadakali/episodes/-----Kalid…


ತಾಗುಲಿ: chennudi, kAlidasa, MalavikagniMitra