ಗುರಿ ತಪ್ಪುತ್ತಿರುವ ಗುರುಗಳಿಂದ ಗುರುಕುಲಕ್ಕೇ ಅವಮಾನ
— ವಿವೇಕ ಬೆಟ್ಕುಳಿ
(ಲೇಖಕರ ಧ್ವನಿಯಲ್ಲಿ)
[ಎಲ್ಲ ಶಿಕ಼ಕರೂ ಹೀಗಲ್ಲ ಅಂತ ಸಮಸ್ಯೆಯನ್ನೆ ತೊಡೆದು ಹಾಕುವುದು ಸರಿ ಅಲ್ಲ. ಶೈಕ್ಷಣಿಕ ಕೊರತೆ, ಅವಕಾಶ ವಂಚನೆ, ಅನ್ಯಾಯ, ಅಥವ ಅನಾಹುತ ಒಂದೇ ಮಗುವಿಗೆ ಆದರೂ ಅದು ಸಮಾಜದ ಸೋಲು. ವಿವೇಕ ಬೆಟ್ಕುಳಿ ಅವರು ಇಲ್ಲಿ ಹೇಳಿರುವದಕ್ಕಿಂತ ಗುರುತರ ಹಗರಣಗಳು ಅಮೆರಿಕೆಯಲ್ಲೂ ಆಗಿವೆ. ಅಂಥವುಗಳು ಆಗದಂತೆ ನೋಡಿಕೊಳ್ಳುವುದು ನಮ್ಮ ಜವಾಬುದಾರಿ - ಅಂದರೆ ತಂದೆತಾಯಿಗಳು ಮಕ್ಕಳ ಶಿಕ್ಷಣದಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಮತ್ತು ಶಾಲೆಯ ಅಧಿಕಾರಿಗಳು ದಾರಿ ತಪ್ಪಿದ ಶಿಕ್ಷಕರ ನಡತೆಯನ್ನು ಕೂಡಲೆ ಸರಿಪಡಿಸುವುದು ಇಲ್ಲವೆ ವಜಾಗೊಳಿಸುವುದು. ಇಂದಿನ ಭರಾಟೆಯ ಜೀವನದಲ್ಲಿ ತಮ್ಮನ್ನೆ ಕಳೆದುಕೊಂಡಿರುವ ತಂದೆತಾಯಿಗಳಿಗೆ, ಶಿಕ್ಷಣ ಕೇವಲ ದುಡ್ಡಿನ ವ್ಯವಹಾರವಾಗಿರುವ ಶಾಲೆಗಳಿಗೆ ಅಥವ ಶಿಕ್ಷಕರಿಗೆ ಇದು ಸಾಧ್ಯವೆ? – ಸಂ.]
“ಗುರುವಿನ ಗುಲಾಮನಾಗುವ ತನಕ ದೊರಯದಣ್ಣ ಮುಕುತಿ” ಪುರಂದರ ದಾಸರ ಈ ಹಾಡು ಗುರುವಿನ ಮಹತ್ವವನ್ನು ತೋರಿಸುತ್ತಿತ್ತು. ಇಂದು, ಮುಕ್ತಿಯ ಮಾತು ಬಿಡಿ, ಗುರುವಿಗೆ ಗುರಿಯೇ ಇಲ್ಲದಂತೆ ಆಗಿರುವುದು. ಕೆಲ ಶಿಕ್ಷಕರ ವರ್ತನೆಯಿಂದ ಗುರುಕುಲಕ್ಕೇ ಅವಮಾನ ಉಂಟಾಗುತ್ತಿರುವುದು. ಶೈಕ್ಷಣಿಕ ವ್ಯವಸ್ಥೆಯಲ್ಲಿ ಮುಖ್ಯ ಭಾಗೀದಾರರಾದ ಶಿಕ್ಷಕರ ಪಾತ್ರ ಏನಾಗುತ್ತಿದೆ ಎಂಬುದರ ಬಗ್ಗೆ ಒಂದು ಅವಲೋಕನ ಮಾಡಿದರೆ ಶಿಕ್ಷಕರ ದಿನದ ಆಚರಣೆಗೆ ಅರ್ಥ ಬಂದೀತು. ಗುರುವಿನ ಗೌರವ ಕಡಿಮೆ ಆಗಲು ಶಿಕ್ಷಕರು ಯಾವ ರೀತಿ ಕಾರಣರಾಗಿರುವರು ಎಂಬುದನ್ನು ಈ ಕೆಳಗಿನಂತೆ ನೋಡಬಹುದಾಗಿದೆ.
ಅಧಿಕಾರಿಗಳ ಜನಪ್ರತಿಧಿಗಳ ಬಾಲಂಗೋಚಿಗಳಾದ ಶಿಕ್ಷಕರು: ನಮ್ಮಲ್ಲಿ ಹೆಚ್ಚಿನ ಶಿಕ್ಷಕರು ರಾಜಕಾರಣಿಗಳ ಮತ್ತು ಮೇಲಾಧಿಕಾರಿಗಳ ಹಿಂದೆ ಸುತ್ತುವುದೇ ಶಿಕ್ಷಕ ವೃತ್ತಿ ಎಂದು ತಿಳಿದುಕೊಂಡಿರುವರು. ಆ ಕಾರಣಕ್ಕಾಗಿ ತಮ್ಮ ಮೊಬೈಲಗಳ ಡಿಪಿಯಲ್ಲಿಯೂ ಅದೇ ರೀತಿ ಪೋಟೋವನ್ನು ಹಾಕಿ ಪ್ರದರ್ಶಿಸುವರು. ಕ್ರೀಡಾಕೂಟ ಇರಲಿ, ಪ್ರತಿಭಾ ಕಾರಂಜಿ ಇರಲಿ, ಶಿಕ್ಷಕರ ಸಮಾವೇಶ ಇರಲಿ ಅಥವಾ ಯಾವುದೇ ಶಾಲೆಯಲ್ಲಿನ ಉದ್ಘಾಟನೆ, ಅಡಿಗಲ್ಲು ಸಮಾರಂಭ ಇರಲಿ, ಈ ರೀತಿಯ ಎಲ್ಲಾ ದಿನಪತ್ರಿಕೆಯಲ್ಲಿ ಸುದ್ದಿ ಬರುವಂತಹ ಕಾರ್ಯಕ್ರಮಗಳಲ್ಲಿ ಈ ಶಿಕ್ಷಕರು ಕಾಣ ಬರುವರು. ಬಹುತೇಕ ಎಲ್ಲಾ ಪೋಟೋಗಳಲ್ಲಿಯೂ ಕಾಣಿಸಿಕೊಳ್ಳುವರು. ಇದೊಂದು ಕಾಯಿಲೆಯೋ, ಹುಚ್ಚೋ ಗೊತ್ತಿಲ್ಲ ಆದರೆ ಈ ತೆರನಾದ ನಮ್ಮ ನಡವಳಿಕೆಯನ್ನು ಗಮನಿಸುತ್ತಿರುವ ಸಮಾಜ ಶಿಕ್ಷಕ ವೃತ್ತಿಯ ಬಗ್ಗೆಯೇ ಕೇವಲವಾಗಿ ಮಾಡತನಾಡುವಂತಹ ಸ್ಥಿತಿ ಬಂದಿರುವುದು. ಬೆರಳಣಿಕೆಯ ಶಿಕ್ಷಕರ ಇಂತಹ ವರ್ತನೆ ಶಿಕ್ಷಕ ಸಮುದಾಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತಿರುವುದು.
ಮದ್ಯವ್ಯಸನದ ಶಿಕ್ಷಕರು: ಪ್ರತಿಯೊಂದು ವ್ಯಕ್ತಿಗೆ ವ್ಯಕ್ತಿಗತ ಜೀವನ ಇದ್ದೇ ಇರುವುದು. ಆದರೂ ಗುರು ಎನಿಸಿಕೊಂಡವನ ವ್ಯಕ್ತಿಗತ ಜೀವನ ವಿದ್ಯಾರ್ಥಿಗಳಿಗೆ ಆದರ್ಶವಾಗಿರಬೇಕು. ಹುಟ್ಟಿದ ತಾನು ಕಲಿಸುವ ಮಕ್ಕಳ ಮುಂದೆಯೇ ಮನೆಯಲ್ಲಿ ಮಧ್ಯಪಾನ ಮಾಡುವುದು, ಶಾಲೆಗೆ ಬರುವಾಗ ತೂರಾಡುತ್ತಾ ಬರುವುದು ಇವೆಲ್ಲಾ ವರ್ತನೆಗಳ ಕೆಲವೊಂದು ಶಿಕ್ಷಕಕರು ಪ್ರತಿ ತಾಲ್ಲೂಕಿನಲ್ಲಿಯೂ ಇರುವರು. ಇವರ ಬಗ್ಗೆ ಯಾವುದೇ ಕ್ರಮವನ್ನು ಕೈಗೊಳ್ಳದೇ ನಮ್ಮ ವ್ಯವಸ್ಥೆ ಅಂಥವರನ್ನು ಸಂಬಳ ನೀಡಿ ಸಾಕುತ್ತಿರುವುದು. ಇಂತಹ ವ್ಯಕ್ತಿಗಳ ಕಾರಣದಿಂದಾಗಿ ಸಮಾಜ ಇಂದಿನ ಶಿಕ್ಷಕ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿರುವುದನ್ನು ಕಾಣಬಹುದಾಗಿದೆ.
ಶಿಕ್ಷಕ ವೃತ್ತಿಯನ್ನುಒಂದು ಉಪ ಉದ್ಯೋಗ್ಯವಾಗಿ ಮಾಡಿ ಕೊಂಡಿರುವುದು: ಪ್ರತಿಯೊಂದು ತಾಲ್ಲೂಕಿನಲ್ಲಿಯೂ ಕನಿಷ್ಠ ೩-೪ ಶಿಕ್ಷಕರಾದರೂ ಇಂಥವರಿರುವರು. ಇವರಿಗೆ ಕಲ್ಲು ಕಣಿ, ಟ್ರಕ್ ವ್ಯವಹಾರ, ಮರಳು ತೆಗೆಯುವುದು, ಮರವನ್ನು ಕಡಿಸುವುದು, ಬಡ್ಡಿ ಸಾಲ ನೀಡುವುದು, ಬಾರ್ ನಡೆಸುವುದು, ಕ್ಲಬ್ ನಡೆಸುವುದು ಈ ರೀತಿಯ ಮುಖ್ಯ ವ್ಯವಹಾರ ಇರುವುದು. ಜೊತೆಯಲ್ಲಿ ಶಿಕ್ಷಕ ವೃತ್ತಿಯೂ ಇರುವುದು. ಇಂತಹ ಶಿಕ್ಷಕರು ಆರ್ಥಿಕವಾಗಿ ಬಲಾಢ್ಯರಾದ ಕಾರಣ ಯಾರೂ ಇವರ ವಿರುದ್ದವಾಗಿ ಮಾತನಾಡುವುದಿಲ್ಲ. ವಾರಕ್ಕೆ ಒಮ್ಮೆ, ಅಥವಾ ಟೈಮ ಸಿಕ್ಕಾಗ ಶಾಲೆಗೆ ಹೋಗಿ ಹಾಜರಿ ಹಾಕಿ ಬರುವರು. ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರುವರು. ಒಟ್ಟಾರೇ ಯಾವ ಕೆಲಸಕ್ಕಾಗಿ ಗುರುವಿನ ಹುದ್ದೆ ಸಿಕ್ಕಿದೆಯೋ ಅದನ್ನು ಬಿಟ್ಟು ಉಳಿದೆಲ್ಲಾ ಕೆಲಸದಲ್ಲಿ ಇವರು ಮುಂದೆ ಇರುವರು. ಇಂತಹ ಕೆಲವು ಹುಳಗಳಿಂದಾಗಿ ಶಿಕ್ಷಕ ಸಮಾಜದ ಮಾನ-ಮರ್ಯಾದೆ ಎಲ್ಲಾ ಕಡೆ ಹರಾಜಾಗುತ್ತಿರುವುದು.
ಜಾತಿ-ಹಣ-ಅಧಿಕಾರ-ರಾಜಕೀಯ ಪ್ರಭಾವದ ಬಳಕೆ: ಜಿಲ್ಲೆ/ತಾಲ್ಲೂಕಿನ ಅಧಿಕಾರಿ ನಮ್ಮ ಜಾತಿಯವನು, ಜನಪ್ರತಿಗಳು ನಮ್ಮ ಜಾತಿಯವರು, ಮಂತ್ರಿ ನಮ್ಮ ಸಂಬಂಧಿ ಈ ಎಲ್ಲಾ ಆಯಾಮಗಳನ್ನು ಬಳಸಿ ಯಾವ ಶಿಕ್ಷಕ ಮಾತು ಪ್ರಾರಂಭಿಸುವನೋ/ಲಾಭ ಪಡೆದುಕೊಳ್ಳುವನೋ ಅಂತಹ ಶಿಕ್ಷಕರಿಂದಲೇ ಗುರುವಿನ ಮಾನ ಹರಾಜಾಗಿರುವುದು. ಮಾಡುವ ಕೆಲಸದಿಂದ ಶಿಕ್ಷಕರನ್ನು ಗುರುತಿಸುವಂತೆ ಆಗಬೇಕು. ಅದನ್ನು ಬಿಟ್ಟು, ಬೇರೆ ಕಾರಣದಿಂದ ಗುರುತಿಸಲ್ಪಟ್ಟರೆ/ಸನ್ಮಾನಿಸಲ್ಪಟ್ಟರೆ ಆ ಹುದ್ದೆಯ ಗೌರವ ಮಣ್ಣು ಪಾಲಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಸ್ವ ಹಿತಾಸಕ್ತಿಗಾಗಿ ದಾಖಲೆಗಳ ಸೃಷ್ಠಿ: ತಮ್ಮ ಊರಿನಲ್ಲಿ ಅಥವಾ ಊರಿನ ಪಕ್ಕದ ಶಾಲೆಯಲ್ಲಿಯೇ ಸೇವೆ ಸಲ್ಲಿಸುವುದಕ್ಕಾಗಿ, ವರ್ಗಾವಣೆಯ ಉದ್ದೇಶಕ್ಕಾಗಿ ಹೀಗೆ ಶಿಕ್ಷಕರಾದವರು ತಮ್ಮ ಸ್ವ ಹಿತಾಸಕ್ತಿಗಾಗಿ ದಾಖಲೆಗಳನ್ನು ಸೃಷ್ಠಿಸುವುದು ನಡೆಯುವುದು. ಇಲ್ಲಿ ಯಾವುದೇ ಶೈಕ್ಷಣಿಕ ಗೊತ್ತು ಗುರಿ ಇರುವುದಿಲ್ಲ. ಈ ಪರಿಣಾಮದಿಂದಾಗಿಯೇ ಎಲ್ಲಾ ತಾಲ್ಲೂಕಿನಲ್ಲಿಯೂ ಶಿಕ್ಷಕರ ಅಸಮಾನ ಹಂಚಿಕೆಯನ್ನು ಗಮನಿಸಬಹುದಾಗಿದೆ. ಇಂತಹ ನಡೆತೆಗಳನ್ನು ಸೂಕ್ಮವಾಗಿ ಅವಲೋಕಿಸುವ ಸಮಾಜ ಶಿಕ್ಷಕರ ಬಗ್ಗೆ ವ್ಯಂಗವಾಗಿ ಮಾತನಾಡುವುದನ್ನು ಗಮನಿಸಬಹುದಾಗಿದೆ.
ಸರ್ಕಾರಿ ನೌಕರರ ಮಕ್ಕಳ ಪ್ರಾಥಮಿಕ ಪ್ರೌಢ ಶಿಕ್ಷಣ ಖಾಸಗಿ ಶಾಲೆಯಲ್ಲಿ: ಸರ್ಕಾರಿ ನೌಕರಿ, ಅಥವಾ ಸರ್ಕಾರ ನೀಡುವ ಸಂಬಳ ಬೇಕು. ಆದರೆ ನಮ್ಮ ಮಕ್ಕಳನ್ನು ಸಕ್ರಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗೆ ಕಳುಹಿಸುವುದಿಲ್ಲ. ಇಂದು ಇಂದಿನ ಜನಪ್ರತಿನಿಧಿಗಳ/ಸರ್ಕಾರಿ ನೌಕರರ / ಆರ್ಥಿಕವಾಗಿ ಸಬಲರ ಅಲಿಖಿತ ನಿಯಮವಾಗಿದೆ. ಈ ಬಗ್ಗೆ ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸುತ್ತಿರುವ ಪ್ರತಿಯೊಂದು ಪಾಲಕರಿಗೂ ಗೊತ್ತು. ಆದರೂ ಅಸಾಯಕರಾಗಿರುವರು. ಪ್ರಮುಖವಾಗಿ ಶಿಕ್ಷಕ ಸಮುದಾಯ ತಾವು ಪಾಠ ಮಾಡುತ್ತಿರುವ ಶಾಲೆಯಲ್ಲಿಯೇ ತಮ್ಮ ಮಕ್ಕಳನ್ನು ಓದಿಸಿದರೆ ಆ ಊರಿನ ಸಮುದಾಯ ಗುರುವನ್ನು ನೋಡುವ ರೀತಿ ಬದಲಾಗುವುದು.
ಈ ರೀತಿಯ ಕಾರಣಗಳು ಗುರುವಿನ ಗೌರವ ಕಡಿಮೆಯಾಗುವಂತೆ ಮಾಡಿರುವುದು. ಗುರುವಿನ ಕೆಲಸ ಎಲ್ಲಿಯವರೆ ಸೇವೆ ಎನಿಸಿಕೊಳ್ಳುತ್ತಾ ಇತ್ತೋ ಅಲ್ಲಿಯವರೆಗೆ ಸಮಾಜದಲ್ಲಿ ಗೌರವ- ಸನ್ಮಾನಗಳು ಇದ್ದವು. ಗುರುವಿನ ಕೆಲಸ ವೃತ್ತಿಯೆಂದು ಪರಿಗಣಿಸಿದ ನಂತರ ಈ ವೃತ್ತಿಯನ್ನು ಪಡೆದುಕೊಳ್ಳಲು ವಾಮಮಾರ್ಗವನ್ನು ಅನುಸರಿಸುವುದು ಹೆಚ್ಚಾಯಿತು. ನಕಲು ಮಾಡಿ ಪಾಸಾದವರು, ದುಡ್ಡು ಕೊಟ್ಟು ನೌಕರಿ ಹಿಡಿದವರು, ಜಾತಿ, ಅಧಿಕಾರ ಪ್ರಭಾವ ಬಳಸಿ ಹುದ್ದೆಯನ್ನು ಗಿಟ್ಟಿಸಿಕೊಂಡವರು ಈ ವೃತ್ತಿಗೆ ಬಂದು ಸೇರಿದರು. ಇವರುಗಳ ಸಂಖ್ಯೆ ಹೆಚ್ಚಾದಂತೆ ಗುರುವಿಗೆ ಸಮಾಜದಲ್ಲಿ ಗೌರವ ಕಡಿಮೆಯಾಗುತ್ತಾ ಬಂದಿತು.
ಪ್ರಾಮಾಣಿಕವಾಗಿ ಜೀವಮಾನ ಪೂರ್ತಿ ಬೇರೆ ಯಾವುದೋ ಊರು, ಕೇರಿಯಲ್ಲಿ ಹಳ್ಳಿಯಲ್ಲಿಯೇ ಇದ್ದು ಸೇವೆ ಸಲ್ಲಿಸಿದ ಶಿಕ್ಷಕರು, ಈ ಉದ್ಯೋಗವನ್ನು ಜೀವನದ ಧ್ಯೇಯವನ್ನಾಗಿ ಮಾಡಿಕೊಂಡ ಶಿಕ್ಷಕರು, ಏನಾದರೂ ಹೊಸತನವನ್ನು ತನ್ನ ವಿದ್ಯಾರ್ಥಿಗಳಲ್ಲಿ ಕಾಣಲು ಕನಸು ಕಾಣುವ ನೂರಾರು ಹೊಸ ಉತ್ಸಾಹಿ ಶಿಕ್ಷಕರು ಈ ಎಲ್ಲರ ಕೊಡುಗೆ ಇಂದಿಗೂ ಸಮಾಜದಲ್ಲಿ ನಮ್ಮ ಸುತ್ತ ಮುತ್ತಲು ಇರುವ ಕಾರಣಕ್ಕಾಗಿ ಇನ್ನೂ ಸಮಾಜದಲ್ಲಿ ಗುರುವಿನ ಬಗ್ಗೆ ಕಿಂಚಿತ್ತಾದರೂ ಗೌರವ ಇರುವುದು. ಅದನ್ನಾದರೂ ಉಳಿಸಿಕೊಳ್ಳುವ ಹಿನ್ನಲೆಯಲ್ಲಿ ಕಾರ್ಯ ನಿರ್ವಹಿಸುವ ಅಗತ್ಯವಿದೆ.
ಪೂರಕ ಓದಿಗೆ: