ಕೃಮತಿ(AIಯನ್ನು ಕನ್ನಡಕ್ಕೆ ಹೇಗೆ ಉಪಯೋಗಿಸಿಕೊಳ್ಳಬಹುದು? ಬರೆಹ ಕ್ಷೇತ್ರ ಒಂದನ್ನೆ ತೆಗೆದುಕೊಳ್ಳೋಣ. ಉತ್ತಮ ಲೇಖನ/ಕವಿತೆಗಳನ್ನು ಕೃಮತಿ(AI)ಬರೆಯಬಲ್ಲುದೆ? ಬರೆದದ್ದು ಸ್ವತಂತ್ರ ಮತ್ತು ಸೃಜನಶೀಲ ಬರವಣಿಗೆ ಅನ್ನಬಹುದೆ? ಅಂಥದ್ದನ್ನು ಕೃಮತಿ ಬರೆದದ್ದು ಎಂದು ಸಾಮಾನ್ಯ ಓದುಗ ಗುರುತಿಸಬಲ್ಲನೆ? ಗುರುತಿಸಿದರೂ, ಸ್ವಾಗತಿಸುವನೋ, ತಿರಸ್ಕರಿಸುವನೋ? AI ಕುರಿತು ಇರುವ ಆತಂಕ, ಅನುಮಾನ, ವಿವಾದಗಳು ಯಾವವು?
ಕನ್ನಡ ಮತ್ತು AI,
ಒಂದು ಪ್ರಯೋಗ
ಕಳೆದ ಹತ್ತು ವರ್ಷಗಳಲ್ಲಿ ಗಣಕಗಳು ಅಗಾಧವಾದ ಸಾಮರ್ಥ್ಯವನ್ನು ಕಂಡಿವೆ. ಯಂತ್ರಾಂಶ (hardware)ಮತ್ತು ತಂತ್ರಾಂಶ (software)ಎರಡೂ ವರ್ಷ ವರ್ಷವೂ ಹೆಚ್ಚುತ್ತಿರುವ ಗತಿಯಲ್ಲಿ ಅಭಿವೃದ್ಧಿ ಹೊಂದಿವೆ. ಚಂದ್ರನ ಮೇಲೆ ಇಳಿದ ಮೊದಲ ಅಪೋಲೋ ನಿಯೋಜನೆಯಲ್ಲಿಯ ಗಣಕಗಳಿಗಿಂತ ಇಂದಿನ ಮೊಬೈಲ ದೂರವಾಣಿಗಳು ಕೂಡ ಸಾವಿರಾರು ಪಟ್ಟು ಶಕ್ತಿಯುತವಾಗಿವೆ ಅಂದರೆ ಇಂದಿನ ಸುಪರ-ಗಣಕಗಳ ಸಾಮರ್ಥ್ಯವನ್ನು ನೀವೇ ಊಹಿಸಿಕೊಳ್ಳಿ. ಚದುರಂಗದಾಟ, ಸಹಜ ನುಡಿ (natural language)ತಿಳಿವಿಕೆ, ಮಾತು ಗ್ರಹಿಕೆ ಇತ್ಯಾದಿ ಯಾವನ್ನು ನಾವು ಮಾನವನ ಬುದ್ದಿಮತ್ತೆಗೆ ಮೀಸಲು ಎಂದುಕೊಂಡಿದ್ದೆವೋ ಅವುಗಳಲ್ಲೆಲ್ಲ ಮೀರಿದ ಪ್ರಗತಿಯನ್ನು ಗಣಕಗಳು ಸಾಧಿಸಿವೆ. ಜೊತೆಗೆ ಅಂತರ್ಜಾಲದ ಬೆಳವಣಿಗೆ ಮತ್ತು ವ್ಯಾಪಕತೆಯಿಂದ ವಿಶ್ವಕೋಶಗಟ್ಟಲೆ ಜ್ಞಾನ ಪ್ರತಿಯೊಬ್ಬರ ಅಂಗೈಯಲ್ಲೂ ದೊರೆತಿದೆ. ಹೀಗೆ, ಕಳೆದ ೫೦ ವರ್ಷಗಳಿಂದ ನಡೆದ ಸಂಶೋಧನೆಯ ಫಲವಾಗಿ ಇಂದು ಕೃತಕಮತಿ (ಕೃ.ಮತಿ) ಮುಂಚೂಣಿಗೆ ಬಂದಿದೆ.
ಉದಾಹರಣೆಗಾಗಿ, OpenAI ಕಂಪನಿಯ ChatGPT ಎನ್ನುವ ತಂತ್ರಾಂಶವು ಸಂಶೋಧಕರಲ್ಲೂ, ಶಾಲಾ ವಿದ್ಯಾರ್ಥಿಗಳಲ್ಲೂ, ಸಾಮಾನ್ಯರಲ್ಲೂ ಚಲಾವಣೆಗೆ ಬಂದಿದೆ.
ChatGPT ತಂತ್ರಾಂಶ ಓಪನ್ ಏ.ಆಯ್.(OpenAI)ಅನ್ನುವ ಕಂಪನಿಯಿಂದ ಅಭಿವೃದ್ಧಿಪಡಿಸಲಾದ ಒಂದು ಕೃತಕ-ಮತಿ (AI)ಭಾಷಾ ಮಾದರಿ. ಇದು ಅಂತರ್ಜಾಲದಿಂದ ಬೃಹತ್ ಪ್ರಮಾಣದ ಪಠ್ಯದ ಮೇಲೆ ತರಬೇತಿ ಪಡೆದಿದೆ. ನಿರ್ದಿಷ್ಟ ಪ್ರಾಂಪ್ಟ್ ಒಂದನ್ನು ಕೊಟ್ಟಾಗ, ಮಾನವ ತರಹದ ನೈಸರ್ಗಿಕ ಭಾಷೆಯ ಪಠ್ಯವನ್ನು ರಚಿಸಬಹುದು. ಪ್ರಶ್ನೆಗಳಿಗೆ ಉತ್ತರಿಸಬಹುದು, ವಿವಿಧ ವಿಷಯಗಳ ಕುರಿತು ಸಂವಾದಿಸಬಹುದು. ಮತ್ತು ಸೃಜನಶೀಲ ಬರವಣಿಗೆಯ ತುಣುಕುಗಳನ್ನು ರಚಿಸಬಹುದು. ಹೆಚ್ಚಿನ ಮಾಹಿತಿಗೆ: https://chat-gpt.org/
ಪ್ರಶ್ನೆ
ಇಂಥ ಕೃಮತಿ(AIಯನ್ನು ಕನ್ನಡಕ್ಕೆ ಹೇಗೆ ಉಪಯೋಗಿಸಿಕೊಳ್ಳಬಹುದು? ಬರೆಹ ಕ್ಷೇತ್ರ ಒಂದನ್ನೆ ತೆಗೆದುಕೊಳ್ಳೋಣ. ಉತ್ತಮ ಲೇಖನ/ಕವಿತೆಗಳನ್ನು ಕೃಮತಿ(AI)ಬರೆಯಬಲ್ಲುದೆ? ಬರೆದದ್ದು ಸ್ವತಂತ್ರ ಮತ್ತು ಸೃಜನಶೀಲ ಬರವಣಿಗೆ ಅನ್ನಬಹುದೆ? ಅಂಥದ್ದನ್ನು ಕೃಮತಿ ಬರೆದದ್ದು ಎಂದು ಸಾಮಾನ್ಯ ಓದುಗ ಗುರುತಿಸಬಲ್ಲನೆ? ಗುರುತಿಸಿದರೂ, ಸ್ವಾಗತಿಸುವನೋ, ತಿರಸ್ಕರಿಸುವನೋ?
ಪ್ರಯೋಗ
ಈ ಪ್ರಶ್ನೆಗಳನ್ನು ಉತ್ತರಿಸುವ ಪ್ರಯತ್ನದಲ್ಲಿ, ಒಂದು ಪುಟ್ಟ ಸರಳ ಪ್ರಯೋಗ ಯಾಕೆ ಮಾಡಬಾರದು? ಸಂದರ್ಭ: ದಕ್ಷಿಣ ಕ್ಯಲಿಫೋರ್ನಿಯ ಕರ್ನಾಟಕ ಸಾಂಸ್ಕೃತಿಕ ಸಂಘದ (ಕೆಸಿಎ https://socalkca.com ) ೫೦ನೇ ಹುಟ್ಟು ಹಬ್ಬ, ಸುವರ್ಣ ಮಹೋತ್ಸವ. ಅದರ ಸ್ಮರಣ ಸಂಚಿಕೆಗೆ ಒಂದು ಅಭಿನಂದನಾತ್ಮಕ ಸಂದೇಶ ಅಥವ ಲೇಖನ ಬೇಕಾಗಿತ್ತು. ಅದಕ್ಕಾಗಿ ಕೆಳಗಿನ ಪ್ರಾಂಪ್ಟ್‌ಗಳನ್ನು ChatGPTಗೆ ಒಂದೊಂದಾಗಿ ಕೊಟ್ಟೆ. ಏನಿದು ಪ್ರಾಂಪ್ಟು? ಒಂದು ನಿರ್ದೇಶ ವಾಕ್ಯ, ಒಂದು ಪ್ರಶ್ನೆ ಆಗಬಹುದು. ಅದರೊಂದಿಗೆ ಕೆಲವು ಸೂಚ್ಯ ಮಾಹಿತಿ ತುಣುಕುಗಳನ್ನು ಸೇರಿಸಿದಷ್ಟೂ ಉತ್ತಮ ಉತ್ತರ ಬರಬಹುದು. ನಾ ಕೊಟ್ಟ ಪ್ರಾಂಪ್ಟಗಳು ಇಂಗ್ಲಿಷಲ್ಲೆ ಇದ್ದವು; ಕನ್ನಡದಲ್ಲಿ ಕೇಳಬಹುದಾಗಿತ್ತೇನೋ. ಇರಲಿ. ಈ ಪ್ರಾಂಪ್ಟುಗಳು ಯಾವವು?
- write an essay in kannada about karnataka cultural association of southern california - ಇಲ್ಲಿ essay ಅಂತ ಕೇಳಿದರೂ ನಾ ಎಣಿಸಿದಂತೆ ಪುಟಗಟ್ಟಲೆ ಉತ್ತರ ಬರಲಿಲ್ಲ. ಬದಲಾಗಿ ಮೂಡಿದ್ದು ಒಂದು ಪ್ಯಾರಾ!
- write a poem on ದಕ್ಷಿಣ ಕ್ಯಾಲಿಫೋನಿಯದ ಕರ್ನಾಟಕ ಸಾಂಸ್ಕೃತಿಕ ಸಂಘ - ಇಲ್ಲಿ ಕವಿತೆ ಅಂದರೆ ಅದೇನೂ ಛಂದೋಬದ್ಧವಾಗಿರಲಿಲ್ಲ; ಲಯ ಪ್ರಾಸಗಳೂ ಇರಲಿಲ್ಲ; ಸುಮ್ಮ ಸುಮ್ಮನೆ ಅಲ್ಲಲ್ಲಿ ವಾಕ್ಯಗಳನ್ನು ಒಡೆದು ಸಾಲು ಸಾಲುಗಳಲ್ಲಿ ಪೋಣಿಸುವ ನಟನೆಯೂ ಇರಲಿಲ್ಲ; ಸಾಮಾನ್ಯ ಗದ್ಯವೂ ಅಲ್ಲ; ಒಂದು ರೀತಿಯ "ನವೋನವ ಕವಿತೆ" ಅನ್ನಬಹುದು!
- write a jingle in kannada for Golden Jubiliy celebration of Karnataka Cultural association of southern california
ಉತ್ತರಗಳು
ಉತ್ತರಗಳು ತುಸು ಅಸಹಜ ಎನಿಸಿದರೂ, ಅಚ್ಚರಿಗೊಳಿಸುವಂಥವು. ಇಲ್ಲಿ ಕಂಡ ಕೆಲವು ಅಂಶಗಳು ಹೀಗಿವೆ:
- ಅದೆ ಪ್ರಾಂಪ್ಟನ್ನು ಮತ್ತೆ ಕೊಟ್ಟರೂ ಉತ್ತರ ಬೇರೆ;
- ಅನೇಕ ಪುನರುಕ್ತಿಗಳು;
- ಉದ್ದುದ್ದ ವಾಕ್ಯಗಳು;
- ಮಾತು-ಬರಹಗಳಲ್ಲಿ ಸಾಮಾನ್ಯವಾಗಿ ಕಂಡುಬರದ ಅಥವ ಅರ್ಥಹೀನ ಎನಿಸುವ ಪದಗಳ ಬಳಕೆ;
- ಕವನ ಬರೆಯಲು ಕೇಳಿದರೂ ಗದ್ಯವೇ ಬರಬಹುದು;
- ವ್ಯಾಕರಣ ದೋಷಗಳು; ಮತ್ತು
- ಕೆಲವು ಅಸಂಬಂಧಿತ ವಿಷಯ/ವಾಕ್ಯಗಳು.
ChatGPT ಬರೆದ ಲೇಖನ
ChatGPTಯ ಮರುನುಡಿಗಳಲ್ಲಿ ಇದ್ದ ಪುನರುಕ್ತಿ ಮತ್ತು ಅಪ್ರಸ್ತುತ ವಾಕ್ಯಗಳನ್ನು ಕೈಬಿಟ್ಟು, ಕೆಲವು ವ್ಯಾಕರಣ ದೋಷಗಳನ್ನು ತಿದ್ದಿ, ಮತ್ತು ʼಪದ್ಯʼವನ್ನು ಸಾಲು ಸಾಲಾಗಿ ಜೋಡಿಸಿ ಒಂದು ಗದ್ಯ-ಪದ್ಯ ಲೇಖನವನ್ನು ಸ್ಮರಣ ಸಂಚಿಕೆಗೆ ಸಿದ್ಧಗೊಳಿಸಿದೆ.&
ಆತಂಕ, ಅನುಮಾನ, ವಿವಾದಗಳು
ಈ ಲೇಖನ ಕೃಮತಿ (AI)ತಂತ್ರಾಂಶ (ChatGPT)ಬರೆದ ಮೊದಲ ಕನ್ನಡ ಗದ್ಯ-ಪದ್ಯ ಏನೋ! ಇದೊಂದು ಅದ್ಭುತ ಬೆಳವಣಿಗೆ ಎಂದು ಕೆಲವರು ಸ್ವಾಗತಿಸಿ ಕೊಂಡಾಡಿದರೆ, ಇನ್ನು ಕೆಲವರು ಕೃಮತಿ ಮಾನವ ಕುಲವನ್ನೆ ನಾಶಮಾಡಬಲ್ಲ ಅಪಾಯಕಾರಿ ಬೆಳವಣಿಗೆ, ಇದನ್ನು ಇಲ್ಲಿಗೇ ನಿಲ್ಲಿಸಬೇಕು ಎನ್ನುತ್ತಿದ್ದಾರೆ. ChatGPT ನಿಜವಾಗಿಯೂ ಸೃಜನಶೀಲವಾಗಿ ಬರೆಯಬಲ್ಲುದೆ ಅಥವ ಅಂತರ್ಜಾಲದಲ್ಲಿನ ತುಣುಕುಗಳನ್ನು ತುಸು ಪೋಣಿಸಿ, ತುಸು ಕುಸುರಿಸಿ, ತುಸು ಕಲಸುಮೇಲೋಗರಿಸಿ ಬಡಿಸುತ್ತಿದೆಯೆ? ಕೆಲವರಂತೂ, ಆಗಲೆ, ಕಾಪಿರೈಟ್ ಉಲ್ಲಂಘನೆಯ ಆರೋಪವನ್ನು ಇದರ ಮೇಲೆ ಹೊರಿಸುತ್ತಿದ್ದಾರೆ. ಇನ್ನು ಕೆಲವರು, ChatGPTಯನ್ನು ಸಹ-ಲೇಖಕನಾಗಿಸಿ ಜರ್ನಲ್‌ಗಳಿಗೆ ಲೇಖನಗಳನ್ನು ಕಳಿಸುತ್ತಿದ್ದಾರೆ. ChatGPT ಒಂದು/ಒಬ್ಬ ಲೇಖಕ ಎಂದು ಒಪ್ಪಬೇಕೋ ಬಿಡಬೇಕೋ ಎನ್ನುವುದು, ಸದ್ಯಕಂತೂ , ಸಂಪಾದಕರಿಗೆ ತಲೆನೋವಾಗಿ ಪರಿಣಮಿಸಿದೆ.
ChatGPT ಬರೆದ "ಪದ್ಯ":
ದಕ್ಷಿಣ ಕಲಿಫೋರ್ನಿಯಾದ
ಕರ್ನಾಟಕ ಸಾಂಸ್ಕೃತಿಕ ಸಂಘವು
ಉನ್ನತ ಸಮಾಜದ ನೆಲೆವೀಡು
ಅಮೆರಿಕದ ಹೃದಯದಲ್ಲಿ ತಲೆಬಾಗಿದೆ.
ನಿಸ್ತುಲ ಹೃದಯದಿಂದ ಸ್ವಾಗತಿಸುವ
ಸಂತಸ ಸೌಜನ್ಯವು ತುಂಬಿದೆ.
ಚಿಂತನೆಗಳ ಬೆಳಕಿನಲ್ಲಿ ಸ್ಥಿರವಾಗಿದೆ.
ಸ್ನೇಹ ಬಂಧನದ ಅಮೃತಧಾರೆಯು ಹರಿಯುತ್ತಿದೆ,
ಸಮುದಾಯದ ಸಿರಿಗನ್ನಡ ಬೆಳಕು ಬೀರುತ್ತಿದೆ.
ಕರ್ನಾಟಕ ಸಾಂಸ್ಕೃತಿಕ ಸಂಘಕ್ಕೆ ಅಭಿನಂದನೆಗಳು,
ಕೂಟದ ೫೦ರ ಸಂಭ್ರಮಕ್ಕೆ, ಹಾರ್ದಿಕ ಅಭಿನಂದನೆಗಳು,
ಸಮೂಹದ ಅಭ್ಯುದಯಕ್ಕೆ ಶುಭಮಯ ಕಾಮನೆಗಳು!
ಗದ್ಯ-ಪದ್ಯದ ಪೂರ್ತಿ ಲೇಖನವನ್ನು ಕನ್ನಡಕಲಿ.ಕಾಂ ಅಲ್ಲಿ ಓದಬಹುದು. ಈ ವಿಡಿಯೋದ ಕೆಳಗಡೆ ವಿವರಣೆಯಲ್ಲಿ ಕೊಟ್ಟಿರುವ URL https://kannadakali.com/article/language/chatgptonkca.html ಮೇಲೆ ಕ್ಲಿಕ್ಕಿಸಿದರೆ ಆಯ್ತು.
ಈ ಪ್ರಯೋಗ ಪೂರ್ತಿ ಆಗಬೇಕಾದರೆ ನಿಮ್ಮ ಅನಿಸಿಕೆ ಅಭಿಪ್ರಾಯಗಳು ಅಗತ್ಯ. ನೀವೂ ಪ್ರಯೋಗ ಮಾಡಿ. ದಯವಿಟ್ಟು, ಧಾರಾಳವಾಗಿ, ಜಾಲತಾಣದಲ್ಲಿ ಅಥವ ಈ ವಿಡಿಯೋ ಮೇಲೆ ಏನಂತಿಗಳನ್ನು (ಕಮೆಂಟು) ಹಾಕಿ.
ನಿಮ್ಮವನೆ ಆದ,
ವಿಶ್ವೇಶ್ವರ ದೀಕ್ಷಿತ
ಕನ್ನಡ ಕಲಿ ಬಿತ್ತರಿಕೆ ಸಪ್ಟಂಬರ ೧, ೨೦೨೩
ಕನ್ನಡ ಮತ್ತು AI,ಒಂದು ಪ್ರಯೋಗ
ತಾಗುಲಿ: ChatGPT, Kannada and AI, KCA
Awesome to see kannada in chatGPT
Awesome to see kananda in…