ಹುಚ್ಚರಣೆ: ದಾಸರನ್ನು ಆಡಿ ಕೊಲ್ಲಿರೋ! ಮತ್ತು ಕನ್ನಡದ ಏಳು ಅಪಸ್ವರಗಳು

ಹುಚ್ಚರಣೆ :   
ದಾಸರನ್ನು ಆಡಿ ಕೊಲ್ಲಿರೋ!    
ಮತ್ತು   
ಕನ್ನಡದ ಏಳು ಅಪಸ್ವರಗಳು

¾ ವಿಶ್ವೇಶ್ವರ ದೀಕ್ಷಿತ

[ಕನ್ನಡವೆಂಬುದು ಮಂತ್ರ ಕಣಾ!                           
ಹೌದು. ಕನ್ನಡ ಉಚ್ಚಾರ ಸೂಕ್ಷ್ಮವಾದದ್ದು. ಉಚ್ಚಾರದಲ್ಲಿ ನಿಖರತೆ, ಸ್ಪಷ್ಟತೆ, ಒತ್ತು, ಬಿಗಿ, ಮತ್ತು ವಿರಾಮಗಳು ಅವಶ್ಯ. ಉಚ್ಚಾರ ಸರಿ ಇರದಿದ್ದರೆ, ಯಾವ ವೃತ್ತಾಸುರ ಉದ್ಭವಿಸದಿದ್ದರೂ, ಅಪಾರ್ಥ, ಅನಾಹುತ, ಆಭಾಸ, ಇಲ್ಲವೆ ನಗೆಪಾಟಲು ಕಟ್ಟಿಟ್ಟ ಬುತ್ತಿ.                           
ಅನ್ಯಾರ್ಥ, ಅಪಾರ್ಥ, ಅನರ್ಥ, ಆಭಾಸಗಳು ಹುಟ್ಟುವುದು ಅನಾವಶ್ಯಕ ವರ್ಣ ಲೋಪ, ವರ್ಣ ಆದೇಶ, ಮತ್ತು ವರ್ಣ ಆಗಮಗಳಿಂದ. ಯಾಕೆ ಹೀಗೆ? ಅಲಸಿ ನಾಲಗೆ ಮತು ಉದಾಸೀನತೆಗಳು ಎಂದು ಮೇಲ್ನೋಟದಲ್ಲಿ ತೋರಿದರೂ, ಕನ್ನಡದ ಮತ್ತು ಪದಗಳ ತಿಳಿವು ಇಲ್ಲದಿರುವುದೆ ಮುಖ್ಯ ಕಾರಣ.                           
ವಿಶೇಷವಾಗಿ ಹಾಡುಗಾರರು, ಭಾಷಣಕಾರರು, ಮೊದಲ ಗುರು ಎನಿಸುವ ತಾಯಿ-ತಂದೆ, ಮತ್ತು ಶಿಕ್ಷಕರು ಕನ್ನಡ ಉಚ್ಚಾರದ ವಿಷಯದಲ್ಲಿ ಹೆಚ್ಚಿನ ಗಮನ ಇರಿಸುವುದು ಒಳಿತು. ನವಿರು ಹಾಸ್ಯದೊಂದಿಗೆ, ಈ ಬಿತ್ತರಿಕೆಯಲ್ಲಿ, ಎತ್ತಿ ತೋರಿಸಲಾದ ʼಏಳು ಅಪಸ್ವರʼಗಳನ್ನು ಅರಿತು ನಿವಾರಿಸಿಕೊಂಡರೆ ನಿಮ್ಮ ಕನ್ನಡ ಕಸ್ತೂರಿಯಾಗುವುದರಲ್ಲಿ ಸಂಶಯವಿಲ್ಲ. - ಸಂ..]

ನನ್ನ ಉತ್ತರ ಭಾರತೀಯ ಗೆಳೆಯನೊಬ್ಬ ಬೆಂಗಳೂರಿನಲ್ಲಿ ತನ್ನ ಬಸ್ಸಿಗಾಗಿ ನಿಲ್ದಾಣದಲ್ಲಿ ಕಾದು ನಿಂತಿದ್ದ. ಒಂದೊಂದಾಗಿ ಬಸ್ಸುಗಳು ಬಂದು ಹೋದವು. ಕಂಡಕ್ಟರ್ ಗಳು ಜನರನ್ನು "ಮುಂದೆ, ಮುಂದೆ" ಎಂದು ಬಸ್ಸಿನಲ್ಲಿ ಹತ್ತಿಸುವುದನ್ನು ನೋಡುತ್ತಿದ್ದ. ಕನ್ನಡ ಪದವೊಂದನ್ನು ಕಲಿತ. ತಾನೇ ಕಲಿತದ್ದಕ್ಕೆ ಖುಷಿಯೋ ಖುಷಿ. ಅದನ್ನು ಪ್ರಯೋಗಿಸುವ ತವಕ. ಬಸ್ಸು ಹತ್ತುವಾಗ, "ಮುಂಡೆ, ಮುಂಡೆ" ಎಂದು, ಪಾಪ, ಎದುರಿಗಿನ ಹೆಂಗಸೊಬ್ಬಳ ಮೊಳಕೈವರೆಗೂ ಬಳೆ ತುಂಬಿದ ಕೈಯಿಂದ ಕಪಾಳಮೋಕ್ಷ ಮಾಡಿಸಿಕೊಂಡು ಬಿಟ್ಟ. ಇದೊಂದು ಅರಿಯದ ಅಪರಾಧ ಎನಿಸಿದರೂ ಅವನ ಕನ್ನಡ ಕಲಿಯುವ ಆಸಕ್ತಿ ಮೆಚ್ಚಬೇಕಾದ್ದೆ! ಕನ್ನಡಿಗರೇ ಇಂತಹ ಪ್ರಮಾದಗಳನ್ನೆಸಗುತ್ತಿರುವಾಗ ಬೇರೆ ಭಾಷಿಕರನ್ನು ಹೇಗೆ ದೂಷಿಸುವುದು? ನಮ್ಮ ನುಡಿಯನ್ನು ಗಂಭೀರವಾಗಿ ಪರಿಗಣಿಸಿ ನಮ್ಮನ್ನು ನಾವು ತಿದ್ದಿಕೊಳ್ಳುವುದು ಮತ್ತು ಇತರರಿಗೆ ತಿಳಿ ಹೇಳುವುದು ನಮ್ಮ ಹೊಣೆಯಲ್ಲವೆ?                           
ಇಲ್ಲಿನ ಅನೇಕ ಆಭಾಸಗಳಿಗೆ ಕನ್ನಡ ನುಡಿಯ ತಿಳಿವಿನ ಕೊರತೆ ಅಷ್ಟೇ ಅಲ್ಲ, ಕಂಪ್ಯೂಟರ್ ಲಿಪ್ಯಂತರಣ ತಂತ್ರಾಂಶಗಳೂ ಕಾರಣ ಆಗಿವೆ. ಒಂದೊಂದು ತಂತ್ರಾಶವೂ ಬೇರೆ ಬೇರೆ ಲಿಪ್ಯಂತರ ಕ್ರಮವನ್ನು ರೋಮನ್ ಕೀಲಿಮಣೆಗೆ ಅಳವಡಿಸಿಕೊಂಡು ಬರಹಗಾರ, ಹಾಡುಗಾರ, ಓದುಗ, ಮತ್ತು ಕೇಳುಗ ಎಲ್ಲರನ್ನೂ ಗೊಂದಲಕ್ಕೀಡು ಮಾಡುವುದು ಸುಲಭವಾಗಿದೆ. ಇನ್ನೂ ಶೈಶವಾವಸ್ಥೆಯಲ್ಲಿರುವ ಪದಪೂರಣ ಇತ್ಯಾದಿ "ಸ್ಮಾರ್ಟ್" ಸಲಕರಣೆಗಳ ಮೇಲಿನ ಅವಲಂಬನದಿಂದ ಅರಿವಿಲ್ಲದೆಯೆ ಅನಪೇಕ್ಷಿತ ಅರ್ಥಾನರ್ಥಗಳನ್ನು ಹುಟ್ಟಿಸಬಹುದಾಗಿದೆ.                           
ದಾಸರ ಕೃತಿಗಳನ್ನು ಉದಾಹರಿಸುತ್ತ, ಈ ಲೇಖನಕ್ಕೆ ಉದ್ರೇಕಕರ ತಲೆಬರಹವನ್ನು ಕೊಟ್ಟಿದ್ದರೂ, ಇಲ್ಲಿ ಎತ್ತಿರುವ ಸಮಸ್ಯೆ ಕನ್ನಡಕ್ಕೆ ಸಾಮಾನ್ಯವಾದದ್ದು. ಆದ್ದರಿಂದ “ದಾಸರನ್ನು ಹಾಡಿಕೊಳ್ಳಿರೋ!” ಎಂದು ಇರಬೇಕಾದ ತಲೆಬರಹದ ಈ ಲೇಖನವನ್ನು "ಕನ್ನಡವನ್ನು ಅಸಡ್ಡೆಯಿಂದ ಮಾತಾಡಿ ಕೊಲ್ಲಿರೋ" ಎಂದು ಅರ್ಥೈಸಿಕೊಳ್ಳುವುದು ಸಮಂಜಸ.

೧ ಪಾಯಸದಲ್ಲಿ ನೊಣ                           
ನಾಲಗೆ ಹೊರಳದವರು ಣಕಾರವನ್ನು ನಕಾರವಾಗಿ ಉಚ್ಚರಿಸಬಹುದು, ಅಂತೆಯೆ ನ-ಣ ಕಾರಗಳು ಅಥವ ರ-ನಕಾರಗಳು ಒಂದರ ನಂತರ ಒಂದು ಬಂದರೆ ಇತರರಿಗೂ ಚಾಲೆಂಜ್ ಆಗಬಹುದು.

ನ --> ಣ:                           
ಜಗದೋದ್ಧಾರನ ಆಡಿಸಿದಳ್ಯಶೋದೆ                           
ಜಗದೋದ್ಧಾರನ                           
(ಪುರಂದರ ದಾಸ)

ಇದು ದಾಸರ ಒಂದು ಜನಪ್ರಿಯ ರಚನೆ. ಚಿಕ್ಕದಾದರೂ ಇದರಲ್ಲಿನ ಪ್ರತಿಮೆ, ಭಾವ, ಮತ್ತು ನಾಟಕೀಯ ಅಂಶಗಳಿಂದ ರಂಗಪ್ರವೇಶ ನೃತ್ಯಗಳಲ್ಲಿ ಬಹಳವಾಗಿ ಬಳಸಿಕೊಳ್ಳುವ ಕೃತಿ.;                           
ಆದರೆ ಇದರಲ್ಲಿನ ನಕಾರವನ್ನು ಣಕಾರವಾಗಿ "ಜಗದೋದ್ಧಾರಣ ಆಡಿಸಿದಳೆಶೋದೆ" ಎಂದೆ ಸಾಮಾನ್ಯವಾಗಿ ಎಲ್ಲ ಕಚೇರಿಗಳಲ್ಲೂ ರಂಗಪ್ರವೇಶಗಳಲ್ಲೂ (ಅರಂಗೇಟ್ರ) ಕೇಳಿದ್ದೇನೆ. ಇದರಿಂದ ಮೂಗು ಮುಚ್ಚುವಂತಹ ಅಪಾರ್ಥವಾಗದಿದ್ದರೂ ತಪ್ಪು.

ಣ --> ನ:                           
ಸಂದೇಹಿಸಲುಬೇಡ ಪುರಂದರ ವಿಠಲ                           
ಕಂದರ್ಪ ಜನಕ ಉಡುಪಿಯ ಕೃಷ್ಣನಾಣೆ                           
(ಏನು ಬರೆದೆಯೋ ಬ್ರಹ್ಮ - ಪುರಂದರ ದಾಸ)

ಇಲ್ಲಿ "ಉಡುಪಿಯ ಕೃಷ್ಣ ನಾನೆ" ಎಂದು ಹಾಡಿದರೆ ಇದು ಪುರಂದರ ದಾಸರ ಅದ್ವೈತ ಘೋಷಣೆಯೋ ದೈವ ನಿಂದನೆಯೋ ನೀವೇ ಹೇಳಿ.

ಡ --> ದ:                           
ಕೊಂಡೊಯ್ದು ಬಡಿಯುವರ ಕೊಂಡಾಡುತಿರಬೇಕು                           
ಕಂಡು ಸಹಿಸದವರ ಕರೆಯಬೇಕು                           
ಪುಂಡರೀಕಾಕ್ಷ ಪುರಂದರ ವಿಠಲನ                           
ಕೊಂಡಾಡಿ ತಾ ಧನ್ಯನಾಗಬೇಕು                           
(ಧರ್ಮವೇ ಜಯವೆಂಬ ದಿವ್ಯಮಂತ್ರ - ಪುರಂದರ ದಾಸ)

ಇಲ್ಲಿ ಆಯಕಟ್ಟಿನ ಸ್ಥಾನಗಳಲ್ಲಿ ಡಕಾರಕ್ಕೆ ದಕಾರ ಹಾಕಿದರೆ (ಕೊಂಡಾಡು  ಕೊಂದಾಡು) ಆಯ್ತಲ್ಲ ದಾಸರ ಪುನರ್ಜನ್ಮಕ್ಕೆ ದಿವ್ಯ ಮಾರ್ಗ!;

ಎಲೆ ಮನ ಮುರಾರಿಯನು ಕೊಂಡಾಡು,                           
ಸಾಧನಕಿದು ಉಪಾಯ ನೋಡು                           
(ವಿಜಯ ದಾಸ )

ಇದನ್ನು ತಿರುಚಿ ಮುರಾರಿಯನ್ನೇ ಮುಗಿಸಿ ಬಿಡುವ ಮನಕ್ಕೆ ಯಾವ ಉಪಾಯ ಏನು ಮಾಡೀತು?

೨ ಲಳಯೋರಭೇದ                           
ಲ ಮತ್ತು ಳಕಾರಗಳಲ್ಲಿ ಭೇದವಿಲ್ಲ ಎನ್ನುವುದು ಸಂಸ್ಕೃತದ ಒಂದು ಸೂತ್ರ. ಅದು ಕನ್ನಡಕ್ಕೆ ಎರವಲು ಬಂದ ಸಂಸ್ಕೃತ ಪದಗಳಿಗೆ ಸರಿ ಎನಿಸಿದರೂ ಕನ್ನಡ ಪದಗಳಿಗೆ ಸಲ್ಲ. ಕನ್ನಡದ ಪದಗಳಲ್ಲಿ ಲ-ಳಕಾರಗಳನ್ನು ಬದಲಾಯಿಸಿದರೆ ಅಪಾರ್ಥ ಕಾಯ್ದಿಟ್ಟದ್ದು. ದಕ್ಷಿಣ ಭಾರತೀಯ ಭಾಷೆಗಳಲ್ಲಿನ ಳಕಾರ ಇಂಗ್ಲಿಷ್ ಅಥವಾ ಸಂಸ್ಕೃತ ಜನ್ಯ ಉತ್ತರ ಭಾಷಾ ವಾತಾವರಣದಲ್ಲಿ ಬೆಳೆದವರ ನಾಲಗೆಗೆ ಕಬ್ಬಿಣದ ಕಡಲೆ. ಇದನ್ನು ಗಮನವಿಟ್ಟು ಉಚ್ಚರಿಸುವುದು ಒಳಿತು.

ಳ <--> ಲ:                           
ಕಲ್ಲುಸಕ್ಕರೆ ಕೊಳ್ಳಿರೋ ನೀವೆಲ್ಲರು                           
ಕಲ್ಲುಸಕ್ಕರೆ ಕೊಳ್ಳಿರೋ                           
(ಪುರಂದರ ದಾಸ)


ಇಲ್ಲಿ “ಕಲ್ಲುಸಕ್ಕರೆ ಕೊಲ್ಲಿರೋ” ಎಂಬ ತೊದಲು ನುಡಿಗೆ ನಕ್ಕು ಬಿಡಬಹುದು. ಆದರೆ, “ಕಳ್ಳು ಸಕ್ಕರೆ ಕೊಳ್ಳಿರೋ” ಎಂದಾಗ ದಾಸರು ಬೆಳಿಗ್ಗೆ ಎದ್ದು ಯಾವ ರಸಾಯನವನ್ನು ತಂಬೂರಿಯಲ್ಲಿ ತುಂಬಿಕೊಂಡು ಮಾರುತ್ತಿದ್ದಾರೆ ಎನ್ನುವ ವಿಚಾರದಲ್ಲೆ ಮೈಮರೆಯಬಹುದು!

೩ ಕೂಡಿಸಿ ಕೆಟ್ಟ

ಶಬ್ದಗಳನ್ನು ಕೂಡಿಸಿದಾಗ ಅಪಾರ್ಥ ಹುಟ್ಟದಂತೆ ಎಚ್ಚರ ವಹಿಸಬೇಕು.

ಉದ್ಯೋಗ ವ್ಯವಹಾರ ನೃಪಸೇವೆ;                           
(ಪುರಂದರ ದಾಸ - ಯಾರು ಹಿತವರು ನಿನಗೆ)

ಇಲ್ಲಿ, “ಉದ್ಯೋಗವ್ಯವಹಾರ ನೃಪಸೇವೆ” ಎಂದು ಪದಗಳನ್ನು ಕೂಡಿಸಿ, ಗಕಾರದ ಮೇಲೆ ತುಸು ಒತ್ತು ಕೊಟ್ಟು, ಹಾಡಿದರೆ "ಉದ್ಯೋಗ ಅವ್ಯವಹಾರ" ಎಂದಾಗಬಹುದು.                           
ಅದರಂತೆ, ಪದವೊಂದನ್ನು ಒಡೆದರೆ ಕೂಡ ತಪ್ಪು ಅರ್ಥ ಬರಬಹುದು:

ಕರುಣ ಕವಚವೆನ್ನ ಹರಣಕ್ಕೆ ತೊಡಿಸೊ                           
ಚರಣ ಸೇವೆ ಎನಗೆ ಕೊಡಿಸೊ;                           
(ಪುರಂದರ ದಾಸ - ದಾಸನ ಮಾಡಿಕೊ ಎನ್ನ)

ಇದನ್ನು “ಚರಣ ಸೇವೆಯ ನಗೆ ಕೊಡಿಸೊ” ಎಂದು ಹಾಡಿದರೆ ನಗಬೇಕೋ ಅಳಬೇಕೊ?                           
ರಾಮದಾಸರ ಕೆಳಗಿನ ಕೃತಿಯಲ್ಲಿ ಕೇಶವ ಪದವನ್ನುಒಡೆದು (‘ಈಶಕೇ ಶವ’ ಎಂದು) ಹೇಳಿದರೆ ಈಶ್ವರನ ವಾಸ ಮಸಣದಲ್ಲೇಕೆ ಎಂದು ಯೋಚಿಸಲು ಸಾಕು!

ಈಶ ಕೇಶವ ಶ್ರೀಶ ಈಶ ಕೇಶವ                           
ದೋಷನಾಶ ಜಗದೀಶ ಪೋಷನುತ                           
    (ರಾಮದಾಸ)

೪ ಎಲ್ಲರೂ ಭಂಡರೆ!                           
ಮಹಾಪ್ರಾಣವನ್ನು ಇಲ್ಲದಲ್ಲಿ ಸೇರಿಸುವುದು ಇದ್ದದ್ದನ್ನು ಕೈಬಿಡುವುದು ಎರಡೂ ತರವಲ್ಲ:

ಉರಗ ಶಯನ ಬಂದ, ಗರುಡ ಗಮನ ಬಂದ                           
ನರಗೊಲಿದವ ಬಂದ, ನಾರಾಯಣ ಬಂದ                           
 (ಪುರಂದರ ದಾಸ - ದೇವ ಬಂದ)

ಇಲ್ಲಿ “ಬಂದ” ಬದಲಾಗಿ “ಭಂಡ” ಎಂದಾದರೆ ನಾರಾಯಣನಿಗೇ ಇಲ್ಲದ ಲಜ್ಜೆ ನರರಿಗೇಕೆ ಬೇಕು!

ಆರು ಹಿತವರು ನಿನಗೆ ಈ ಮೂವರೊಳು                           
ನಾರಿಯೊ ಧಾರುಣಿಯೊ ಬಲು ಧನದ ಸಿರಿಯೊ?                           
(ಪುರಂದರ ದಾಸ)

ಇಲ್ಲಿ, ಹಿತವಾಗಬಲ್ಲ ಕ್ರೂರ ನಿರ್ದಯಿ ಹೆಂಗಸು (ದಾರುಣಿ) ಯಾರು? ಹಸು ಸಂಪತ್ತಿನ (ದನದ ಸಿರಿ) ಬಗ್ಗೆ ಹೇಳಿದ್ದಾರೆಯೆ?                           
ಇನ್ನು “ದರ” (=ನಾಶಕ) ಮತ್ತು “ಧರ” (=ಧರಿಸಿದವ) ಬೇರೆ ಅಥವ ವಿರುದ್ಧ ಅರ್ಥಗಳನ್ನು ಕೊಡುವುದನ್ನು ಗಮನಿಸಿ.

ಅರಿತವರಿರಬೇಕು ಹರುಷ ಹೆಚ್ಚಲಿ ಬೇಕು                           
ಪುರಂದರ ವಿಠಲನೆ ಪರದೈವವೆನಬೇಕು                           
    (ತಾಳ ಬೇಕು ತಕ್ಕ ಮೇಳ ಬೇಕು)

ಇದನ್ನು “ಪುರಂಧರ ವಿಟಳನೆ ಪರದೈವವೆನಬೇಕು” ಎಂದು ಬಾಯ್ತಪ್ಪಿದರೆ, ಹರುಷ ಹೆಚ್ಚಿಸುತ್ತ ಊರನ್ನೆ ತನ್ನ ಅಂಗೈಯಲ್ಲಿ ಆಡಿಸುವ ಈ ಜಾರೆಯನ್ನೆ ಊರವರೆಲ್ಲ ಪರದೈವ ಎಂದು ತಿಳಿದಿದ್ದರೆ ತಪ್ಪೆ?!

೫ ಹಾರುವ ಹಕಾರ                           
ಹಕಾರ ಮತ್ತು ಮಹಾಪ್ರಾಣಗಳು ಸಂಸ್ಕೃತ ಪದಗಳಲ್ಲಿ ಸಾಮಾನ್ಯ. ಕನ್ನಡದ ನಾಲಗೆಗೆ ಅವು ಒಗ್ಗುವುದು ಅಷ್ಟಕ್ಕಷ್ಟೆ. ಹೀಗೆಂದು ಅರಿತ ಕೆಲವರು ಮಹಾಪ್ರಾಣ ಮತ್ತು ಹಕಾರಗಳನ್ನು ಪಂಡಿತರಿಗೆ ಸಮ್ಮತಿಯಾಗುವಂತೆ ಉಚ್ಚರಿಸುವ ಅತ್ಯಾತುರದಲ್ಲಿ, ಒತ್ತು ಕೊಟ್ಟು, ಸ್ಥಾನ ಪಲ್ಲಟ ಮಾಡಿ ಮುಂಚಿತವಾಗಿಯೆ ಹೇಳಿ ಬಿಡುವುದುಂಟು.

ಜೀವರಿಗೆ ಪದುಮನಾಭನು ಸರ್ವ ರಸ ಉಂಡುಣಿಸಿ ಸಂರಕ್ಷಿಸುವ                           
ಜಾಹ್ನವಿ ಜನಕ ಜನ್ಮಾದಿ ಅಖಿಳ ದೋಷ ವಿದೂರ ಗಂಭೀರ                           
(ಜಗನ್ನಾಥ ದಾಸ - ಹರಿಕಥಾಮೃತಸಾರ, ಶ್ವಾಸ ಸಂಧಿ)

ಇದು, "ಝಾನ್ನವಿ ಜನಕ ಜನ್ಮದಿ ಅಖಿಳ ದೋಷ ವಿಧುರ ಘಂಬೀರ" ಎಂದು ಮಾರ್ಪಾಟಾಗಬಹುದು.                           
ಹಕಾರಕ್ಕೆ ಲಕಾರ, ಮಕಾರ ಮತ್ತಿತರ ಒತ್ತು ಹೊಂದಿರುವ ಕೆಲವು ಅಪರೂಪದ ಪದಗಳು ಸಂಸ್ಕೃತದಲ್ಲುಂಟು. ಉದಾಹರಣೆಗೆ, ಪ್ರಹ್ಲಾದ ಮತ್ತು ಬ್ರಹ್ಮ. ಇವು ಪ್ರಲ್ಹಾದ, ಬ್ರಮ್ಹ ಅಥವಾ ಭ್ರಮ್ಮ ಎಂದು ತಿರುಚಿಕೊಳ್ಳಬಹುದು:

ತರಳ ಪ್ರಹ್ಲಾದ ಹರಿ ವಿಶ್ವಮಯನೆಂದು                           
ಭರದೊದೆಯಲವನಪಿತ ಕೋಪದಿಂದ                           
(ಪುರಂದರ ದಾಸ - ಎಲ್ಲಿರುವನೋ ರಂಗ)                           
ನಿರ್ಮಲಾಚಾರವ ಚರಿಸಿ ಪರ                           
ಬ್ರಹ್ಮ ಮೂರುತಿ ಪಾದಕಮಲವ ಭಜಿಸಿ                           
(ಪುರಂದರ ದಾಸ - ಮನವ ಶೋಧಿಸಬೇಕೋ ನಿಚ್ಚ)

ಇಂಥ ಪದಗಳಿಗೆ ಕನ್ನಡಕ್ಕೆ ಒಗ್ಗುವ ತದ್ಭವಗಳು ಇವೆ. ಆದರೆ ದಾಸನಿಷ್ಠನಾಗಿ ಹಾಡಬೇಕೆಂದರೆ ಸರಿಯಾಗಿ ಅಭ್ಯಸಿಸಬೇಕು. ಹ-ಸ್ಥಾನ ಪಲ್ಲಟವೂ ಉಚ್ಚಾರಕ್ಕೆ ಸುಲಭ. ಇದರಿಂದ ಘನ ಘೋರ ಗಂಭೀರ ಆಭಾಸವೇನಾಗದಿದ್ದರೂ ಗಮನದಲ್ಲಿರಿಸಬೇಕು.

೬ ಹಗರಣ                           
ಹಕಾರ ಇಲ್ಲದ ಕೆಲ ಭಾಷಿಕರು ಹಕಾರವನ್ನು ಗಕಾರದಂತೆ ಉಚ್ಚರಿಸುವ ವಾಡಿಕೆಯುಂಟು (ಮೋಹನ --> ಮೋಗನ).

ಹಂಬಲಿಸಿ ಹಾಳು ಹರಟೆ ಹೊಡೆವುದಕಿಂತ                           
ನಂಬಿ ಹರಿದಾಸರೊಳು ಹೊಂದಿ ಹಾಡುವುದೆ ಲೇಸು                           
(ಪುರಂದರ ದಾಸ - ಅಜ್ಞಾನಿಗಳ ಕೂಡೆ ಅಧಿಕ ಸ್ನೇಹಕ್ಕಿಂತ)

ಇದನ್ನು

ಗಂಬಲಿಸಿ ಗಾಳು ಗರಟೆ ಗೊಡೆವುದಕಿಂತ                           
ನಂಬಿ ಗರಿದಾಸರೊಳು ಗೊಂದಿ ಗಾಡುವುದೆ ಲೇಸು

ಎಂದು ಹಾಡಿದರೆ ಯಾರಿಗೆ ಅರ್ಥವಾದೀತು?

೭ ಆಸನ-ಹಾಸನ                           
ಪದದ ಪ್ರಾರಂಭಿಕ ಸ್ವರಕ್ಕೆ ಹಕಾರವನ್ನು ಸೇರಿಸಿದಾಗ ಅಥವಾ ಪದದ ಆರಂಭಿಕ ಹಕಾರವನ್ನು ಬಿಟ್ಟಾಗ ಆಗುವ ಎಡವಟ್ಟುಗಳು ಎಲ್ಲರಿಗೂ ಪರಿಚಿತ. ಅನೇಕರು ಇವುಗಳನ್ನು ಹಾಸ್ಯ ನಾಟಕ ನಿಲ್ಗಾಕಾಮಿಡಿಗಳಲ್ಲಿ (standup comedy) ಸಮರ್ಥವಾಗಿ ಬಳಸಿಕೊಂಡಿದ್ದಾರೆ; ಇನ್ನು ಕೆಲೆವೆಡೆ ಅತಿಯಾಗಿ “ಅಳಸಿದ ಹನ್ನ” ಆಗಿದೆ.

ಹ --> ಅ                           
ಹರಿ ಹರಿ ಹರಿ ಹರಿ ಹರಿಯೆನಬೇಕು                           
ಹರಿ ಸ್ಮರಣೆಯೋಳನುದಿನವಿರಬೇಕು                           
(ಕಾಖಂಡಕಿ ಶ್ರೀ ಮಹಿಪತಿರಾಯ)

ಇದನ್ನು “ಅರಿ ಅರಿ ಅರಿ ಅರಿ ಅರಿಯೆನಬೇಕು” ಎಂದು ಹಾಡಿದರೆ “keep your enemies closer” ಅನ್ನುವ ಅರ್ಥವೆ?                           
ಮತ್ತೊಮ್ಮೆ, ಸಂಗೀತ ಶಿಕ್ಷಕರೊಬ್ಬರು "ಹರಿಯನು ಕೊಂಡಾಡುವೆ" ಎನ್ನುವಲ್ಲಿ ದ-ಡಕಾರಗಳನ್ನು ಮುತುವರ್ಜಿಯಿಂದ ಕಲಿಸಿ ಕೊಟ್ಟಿದ್ದರು. ವಿದ್ಯಾರ್ಥಿನಿಯೋರ್ವಳು, "ಕೊಂ-ಡಾ -ಡು -ವೆ" ಎಂದು ಗಮಕದೊಂದಿಗೆ ನಿಧಾನವಾಗಿ ಜಾಗರೂಕತೆಯಿಂದ ಹಾಡಿದಳು. ಆದರೆ, ಹರಿಯ ಹಕಾರವನ್ನು ಹಾರಿಸಿ "ಅರಿಯನು ಕೊಂಡಾಡುವೆ" ಎನ್ನುತ್ತ ಮುಗ್ಧ ಭಕ್ತಿಯಿಂದ ಕಣ್ಣು ಮುಚ್ಚಿದ್ದಳು.

ಕೊನೆಯಲ್ಲಿ, ದಾಸರ ಪದಗಳನ್ನು ಹೇಗೆ ಹಾಡಬೇಕು (ಮತ್ತು ಕೇಳಬೇಕು) ಎಂದು ದಾಸರೆ ಹೇಳಿದ್ದಾರೆ:

ತಾಳ ಬೇಕು ತಕ್ಕ ಮೇಳ ಬೇಕು ಶಾಂತ                           
ವೇಳೆ ಬೇಕು ಗಾನವನ್ನು ಕೇಳಬೇಕೆಂಬುವರಿಗೆ

ಯತಿಪ್ರಾಸವಿರಬೇಕು ಗತಿಗೆ ನಿಲ್ಲಿಸಬೇಕು                           
ರತಿಪತಿಪಿತನೊಳು ಅತಿ ಪ್ರೇಮವಿರಬೇಕು

ಗಳ ಶುದ್ಧವಿರಬೇಕು ತಿಳಿದು ಪೇಳಲು ಬೇಕು                           
ಕಳವಳ ಬಿಡಬೇಕು ಕಳೆಮುಖವಿರಬೇಕು

ಅರಿತವರಿರಬೇಕು ಹರುಷ ಹೆಚ್ಚಲಿ ಬೇಕು                           
ಪುರಂದರವಿಠಲನೆ ಪರದೈವವೆನಬೇಕು

ಬೇರೆ ಭಾಷಿಕರು, ಕನ್ನಡ ಕಲಿಯುತ್ತಿರುವವರು, ಅಥವ ಮಕ್ಕಳು ಎಂದು ಕ್ಷಮಿಸಬಹುದಾದರೂ ಆದ ಆಭಾಸದಿಂದ ಚೇತರಿಕೊಳ್ಳುವುದು ಸುಲಭವಲ್ಲ. ರಸಭಂಗವನ್ನು ಸರಸದಲ್ಲಿ ಮರೆಸಬಹುದೆ? ಅಸಹ್ಯ ಅಶ್ಲೀಲ ಅರ್ಥಗಳುಂಟಾದರೆ ಕೇಳುವುದನ್ನು ಮುಂದುವರೆಸಬಹುದೆ? ಇದಕ್ಕಿಂತ ಬರಿ ಆಲಾಪ, ಆಕಾರ, ಗಮಕಗಳಲ್ಲೆ ಸಂಗೀತ ಸವಿಯುವುದು ಒಳ್ಳೆಯದು.                           
ಕನ್ನಡಿಗರು ತಮ್ಮ ಮಕ್ಕಳಿಗೆ ಸಂಗೀತ ಕಲಿಸುವಾಗ ಗಮನವಿಟ್ಟು ಉಚ್ಚಾರಗಳನ್ನು ತಿದ್ದಬೇಕು. ಸಂಗೀತ ಶಿಕ್ಷಕರು ಇತರ ಭಾಷಿಕರಾಗಿದ್ದರೆ ಕನ್ನಡಿಗರು ಅವರಿಗೆ ಉಚ್ಚರಿಸಲು ಸಹಾಯ ನೀಡಬೇಕು. ಉತ್ತಮ ಸಂಗೀತಗಾರರಾರೂ ನಿಮ್ಮ ಸಹಾಯವನ್ನು ನಿರಾಕರಿಸುವುದಿಲ್ಲ. ಕನ್ನಡಿಗರೇ ಸಂಗೀತ ಶಿಕ್ಷಕರಾಗಿದ್ದರೆ ಈ ನಿಟ್ಟಿನಲ್ಲಿ ಅವರ ಹೊಣೆ ಇಮ್ಮಡಿ ಎಂದು ಭಾವಿಸುತ್ತೇನೆ.                           
ನಮ್ಮ ತಾಯ್ನುಡಿಯನ್ನು ನಾವೇ ಕೊಲ್ಲುವಂತಾಗಬಾರದು ಎಂದಿದ್ದರೆ ಇಂತಹ ಸಾಮಾನ್ಯ ನುಡಿಭ್ರಂಶಗಳನ್ನು ಗಮನದಲ್ಲಿರಿಸಿ ಸರಿಯಾಗಿ ಒತ್ತು, ಬಿಗಿ, ವಿರಾಮಗಳೊಂದಿಗೆ ಉಚ್ಚರಿಸುವುದು ಅವಶ್ಯ. ಇಂಥ ಅರಿವನ್ನು ದಾಸರ ಪದಗಳಿಗೆ ಅಥವ ಸಂಗೀತಕ್ಕಷ್ಟೆ ಸೀಮಿತಗೊಳಿಸದೆ ನಿತ್ಯ ಮಾತಿನಲ್ಲೂ ಬೆಳೆಸಿಕೊಳ್ಳುವುದು ಅತ್ಯವಶ್ಯ.


ಕನ್ನಡ ಕಲಿ, ಕನ್ನಡದ ಗುಟ್ಟು                           
ಹುಚ್ಚರಣೆ                           
ದಾಸರನ್ನು ಆಡಿ ಕೊಲ್ಲಿರೋ! ಮತ್ತು, ಕನ್ನಡದ ಏಳು ಅಪಸ್ವರಗಳು                           
ಲೇಖನ: ವಿಶ್ವೇಶ್ವರ ದೀಕ್ಷಿತ                           
ಗಾಯನ: ಸ್ಫೂರ್ತಿ ಉಗ್ರಪ್ಪ                           
ಬಿತ್ತರಿಕೆ ೧೩ ಕಾಲ ೨೦೨೪, ಸಂಖ್ಯೆ ೦೧: ಬಿಕಾಸ ೧೩-೨೦೨೪-೦೧                           
Episode 13, Year 2024 No. 01 : BIKASA 13-2024-01

 

09:55 ಸಪ್ತ ಅಪಸ್ವರಗಳು                           
‌12:45 ೧ ಪಾಯಸದಲ್ಲಿ ನೊಣ : ನ ↔ ಣ                           
12:46    ದಡಬಡ ತಟಪಟ:     ಡ ↔ ದ                           
17:12  ೨ ಲಳಯೋರಭೇದ :   ಳ ↔ ಲ                           
19:45 ೩ ಕೂಡಿಸಿ ಕೆಟ್ಟ  :         ಶಬ್ದಗಳನ್ನು ಕೂಡಿಸಿ/ಬಿಡಿಸಿದಾಗ ಅಪಾರ್ಥ                           
23:44 ೪ ಎಲ್ಲರೂ ಭಂಡರೆ :    ಮಹಾಪ್ರಾಣವನ್ನು ಇಲ್ಲದಲ್ಲಿ ಸೇರಿಸುವುದು ಇದ್ದದ್ದನ್ನು ಕೈಬಿಡುವುದು                           
28:13 ೫ ಹಾರುವ ಹಕಾರ :     ವರ್ಣ ಪಲ್ಲಟ                           
31:44 ೬ ಹಗರಣ  :                 ವರ್ಣ ಆದೇಶ,                           
33:00 ೭ ಆಸನ-ಹಾಸನ :        ವರ್ಣ ಲೋಪ ಮತ್ತು ವರ್ಣ ಆಗಮ                           
35:06 ೮ ದಾಸರ ಪದ ಹೇಗೆ ಹಾಡಬೇಕು

ತಾಗುಲಿ : Kannada Pronunciation, Purandara Dasa