ಭಾಷೆ ಕಲಿಸಬೇಕಾದ್ದು ಹೇಗೆ?

[ ಜುಲೈ ೨೨, ೧೯೩೮ರಂದು ಜನಿಸಿ, ಅದ್ವಿತೀಯ ಕಾದಂಬರಿಕಾರ, ನಾಟಕಕಾರ, ಕವಿ, ಭಾಷಾತಜ್ಞ, ಶಿಕ್ಷಕ ಮತ್ತು ಕೃಷಿಕ ಆಗಿದ್ದ , ಕಾಸರಗೋಡಿನ ಕನ್ನಡಿಗ ಕೆ.ಟಿ.ಗಟ್ಟಿ ಅವರು ಫೆಬ್ರುವರಿ ೧೯, ೨೦೨೪ರಂದು ತಮ್ಮ ೮೫ನೆ ವಯಸ್ಸಿನಲ್ಲಿ ಮಂಗಳೂರಿನಲ್ಲಿ ನಿಧನರಾದರು. ಈ ಲೇಖನ ಜೂನ್ ೨೦೦೮ರ‌ ಕನ್ನಡ ಕಲಿ ಮ್ಯಗ್‌ಝೀನ್‌ನಲ್ಲಿ ಪ್ರಕಟವಾಗಿತ್ತು. ಕನ್ನಡ ಕಲಿಗಳಿಗೆ ಇದು ಇಂದೂ ಮಾರ್ಗದರ್ಶಿಯಾಗಿದೆ. ಗಟ್ಟಿ ಅವರ ಹೆಚ್ಚಿನ ಪರಿಚಯಕ್ಕಾಗಿ  ಕನ್ನಡ ಕಲಿ ಜಾಲತಾಣದಲ್ಲಿರುವ   
ಕೆ.ಟಿ. ಗಟ್ಟಿ - ಕನ್ನಡದ ಬಂಗಾರ ಗಟ್ಟಿ ಅನ್ನುವ ಲೇಖನ ಓದಿ.   
ಅವರು ಬರೆದ   
    "ಬರವಣಿಗೆಯಲ್ಲಿ ಮತ್ತು ಉಚ್ಚಾರದಲ್ಲಿ ಭಾಷಾ ಶುದ್ಧಿಯ ವಿಚಾರ   
ಅನ್ನುವ ಲೇಖನ ಕೂಡ ನಿಮ್ಮ ಓದಿಗಾಗಿ ಅಲ್ಲೇ ಇದೆ. -ಸಂ]


ಭಾಷೆ ಕಲಿಸಬೇಕಾದ್ದು ಹೇಗೆ?   
How a Language Ought to be Taught  
ಕೆ.ಟಿ. ಗಟ್ಟಿ

[ಕೆ.ಟಿ. ಗಟ್ಟಿ ಅವರು ಈ ಲೇಖನದಲ್ಲಿ ಹೇಳುವ ಮಾತುಗಳು, ಕರ್ನಾಟಕದಲ್ಲಿ ಕನ್ನಡ ಮಕ್ಕಳಿಗೆ ಇಂಗ್ಲೀಷ್‌ ಕಲಿಸುವ ಕುರಿತು ಹೇಳಿದಂತೆ ಅನಿಸಬಹುದು. ಆದರೆ ಅವೆಲ್ಲ ವಿದೇಶದಲ್ಲಿ ಹುಟ್ಟಿ ಬೆಳೆಯುತ್ತಿರುವ ಕನ್ನಡ ಮಕ್ಕಳಿಗೆ ಕನ್ನಡ ಕಲಿಸುದಕ್ಕೂ ಸಂಪೂರ್ಣವಾಗಿ ಅನ್ವಯಿಸುತ್ತವೆ  ಎನ್ನುವುದನ್ನು ನಾವು ವಿಶೇಷವಾಗಿ ಗಮನದಲ್ಲಿ ಇಡಬೇಕು - ಸಂ]

01:17.5 ಭಾಷೆಯ ಆರಂಭ  
ಕನ್ನಡದ ತಾಯಿ ತೊಟ್ಟಿಲ ಮಗುವಿಗೆ ಅಆಇಈ ಎಂದು ಜೋಗುಳ ಹಾಡುವುದಿಲ್ಲ. ಬ್ರಿಟಿಷ್ ತಾಯಿ ಎಬಿಸಿಡಿ ಎಂದು ಜೋಗುಳ ಹಾಡುವುದಿಲ್ಲ. 

ಭಾಷೆ ಮಾತಿನಿಂದ ಆರಂಭವಾಗುತ್ತದೆ. ‘ಅಕ್ಷರ ಓದುವಿಕೆ ಮತ್ತು ಬರೆಯುವಿಕೆ’ಯಿಂದ ಅಲ್ಲ. ಶಾಲೆಯನ್ನು ಪ್ರವೇಶಿಸುವ ಮೊದಲೇ ಕನ್ನಡದ ಮಗು ಚೆನ್ನಾಗಿ ಕನ್ನಡವನ್ನು ಆಡಲು ಕಲಿತುಕೊಂಡಿರುತ್ತದೆ. ಅದಕ್ಕೆ ‘ಕಷ್ಟ ಶಬ್ದ’ ‘ಸುಲಭ ಶಬ್ದ’ ಎಂಬ ವ್ಯತ್ಯಾಸವೇನೂ ಕಾಣಿಸುವುದಿಲ್ಲ. ಅರ್ಥವಾಗುವ ಮತ್ತು ಉಚ್ಚರಿಸಲಾಗುವ ಎಲ್ಲಾ ಶಬ್ದಗಳೂ ಸುಲಭ ಶಬ್ದಗಳೇ. ಮನೆಯಲ್ಲಿ ಅಪ್ಪ ಅಮ್ಮ ಅಕ್ಕ ಅಣ್ಣ ಆಡಿದ ಮಾತುಗಳೆಲ್ಲವನ್ನೂ ಅದು ಆಡುತ್ತದೆ. ಅವೆಲ್ಲವೂ ಮಗುವಿಗೆ ಅರ್ಥವಾಗುವ ವಾಕ್ಯಗಳೇ.   

02:08.5 ಮೊದಲ ಪಠ್ಯ ಪುಸ್ತಕ ಹೇಗಿರಬೇಕು  
ಮಗುವಿನ ಮೊದಲನೆಯ ಪಠ್ಯಪುಸ್ತಕದ ಪಾಠಗಳಲ್ಲಿ ಆ ವಾಕ್ಯಗಳು ಮತ್ತು ಅಂಥ ವಾಕ್ಯಗಳೇ ಇರಬೇಕು. ‘ಅವನು ಬಸವ ಇವಳು ಕನಕ’ ಇತ್ಯಾದಿ ಅರ್ಥಹೀನ ವಾಕ್ಯಗಳು ಇರಬಾರದು. ಮನುಷ್ಯ (ಮಗು) ಭಾಷೆಯನ್ನು ಮಾತಾಡಲು ಆರಂಭಿಸುವುದು ಅಆಇಈ ಬರುವ ಶಬ್ದಗಳಿಂದಲ್ಲ. ತಾನು ಅನುಕರಣೆಯಿಂದ ಪಡೆದುಕೊಂಡ ತನಗೆ ಅರ್ಥವಾಗುವಂಥ ಮಾತುಗಳಿಂದ ಮಾತು ಆರಂಭವಾಗುತ್ತದೆ. ಇಂಗ್ಲೆಂಡಿನಲ್ಲಿ ಇಂಗ್ಲಿಷ್ ಮಗು ಭಾಷಾರ್ಜನೆ ಮಾಡುವುದು ಕೂಡ ಹೀಗೆಯೇ. ಅಕ್ಷರಾಭ್ಯಾಸವಿಲ್ಲದ ಜನರು ಕೂಡ ಚಲೋದಾಗಿ ಮಾತಾಡುವುದಿಲ್ಲವೆ? ಅವರು ಹೇಗೆ ಭಾಷೆಯನ್ನು ಕಲಿತುಕೊಳ್ಳುತ್ತಾರೆ? ಅದೇ ರೀತಿ ಮಗು ಕೂಡ ಐದನೇ ವರ್ಷ ಪ್ರಾಯಕ್ಕೆ ಬಂದಾಗ ಒಂದಷ್ಟು ಭಾಷೆಯನ್ನು ಪಡೆದುಕೊಂಡಿರುತ್ತದೆ. ಅಂಥ ಮಗುವಿಗೆ ಅರಸ, ಇಣಚಿ ಮುಂತಾದ ಶಬ್ದಗಳಿಂದ, ಕ್ರಿಯಾಪದವಿಲ್ಲದ ವಾಕ್ಯಗಳಿಂದ ಭಾಷಾಭ್ಯಾಸ ಆರಂಭಿಸಬೇಕಾದ ಅಗತ್ಯವೇನು?

03:10.5 ಮಾತು-ಗರುತು-ಓದು-ಬರೆ ವಿಧಾನ   
ನಾವು ಇಂಗ್ಲಿಷ್ ಕಲಿಸುವಲ್ಲಿ ಕೂಡ ಈ ರೀತಿ ನೈಸರ್ಗಿಕವಾಗಿ ಮಗು ತನ್ನ ಮಾತೃಭಾಷೆಯನ್ನು ಹೇಗೆ ಪಡೆಯುತ್ತದೆಯೋ ಹಾಗೆ ಪಡೆಯುವ ವಿಧಾನದಲ್ಲಿಯೇ ಕಲಿಸಬೇಕು. ಕನ್ನಡ ಮಗುವಿನ ಮಾತೃಭಾಷೆಯಾದ್ದರಿಂದ, ಒಂದನೇ ತರಗತಿಯಲ್ಲೇ ಓದು ಮತ್ತು ಬರೆಯುವಿಕೆ ವಾಕ್ಯಗಳಿಂದಲೇ ಆರಂಭಿಸಬಹುದು. ಮಗು ಅಕ್ಷರಗಳನ್ನು ನೋಡಿ ಶಬ್ದಗಳನ್ನು ಗುರುತಿಸಿಕೊಂಡು ಚೆನ್ನಾಗಿ ಓದಲು ಕಲಿತುಕೊಂಡ ಬಳಿಕ, ಶಬ್ದಗಳನ್ನು ಬರೆದು ಓದಿ ತೋರಿಸಬೇಕು. ಈ ಓದಿನ ಮೂಲಕ ಮಗುವಿಗೆ ಎಲ್ಲಾ ಅಕ್ಷರ ಪರಿಚಯ, ಅವುಗಳು ಮಾತಿನಲ್ಲಿ ಹೇಗೆ ಬರುತ್ತವೆಯೋ ಹಾಗೆ ಪರಿಪೂರ್ಣವಾಗಿ ಆಗುತ್ತದೆ. ಅನಂತರ ಶಬ್ದಗಳನ್ನು ಓದುತ್ತಾ ಇಡೀ ವಾಕ್ಯವನ್ನು ಬರೆಯಲು ಕಲಿಸಬೇಕು. ಹೀಗೆ ಕಲಿಸಿದರೆ, ಪರಂಪರಾಗತ ಅಆಇಈ ಅಕ್ಷರಗಳ ಮೂಲಕ ಕಲಿಯುವುದಕ್ಕಿಂತ ಚಲೋದಾಗಿ, ಸ್ಪಷ್ಟವಾಗಿ, ಅರ್ಥಪೂರ್ಣವಾಗಿ ಮತ್ತು ಆಶ್ಚರ್ಯಕರವೆನಿಸುವಷ್ಟು ವೇಗವಾಗಿ ಮಗು ಓದಲು ಬರೆಯಲು ಕಲಿತುಬಿಡುತ್ತದೆ. ಒಂದನೆಯ ದರ್ಜೆಯ ಪುಸ್ತಕ ಮೂರು ತಿಂಗಳಲ್ಲಿ ಮುಗಿದು ಹೋಗುತ್ತದೆ. ಮಗುವಿಗೆ ಓದಲು ಅಧ್ಯಾಪಕ ಮತ್ತು ತಾಯಿತಂದೆ ಬೇರೆ ಪುಸ್ತಕ ಹುಡುಕಬೇಕಾಗುತ್ತದೆ!  

‘ಅ’ದಿಂದ ‘ಹ’ದ ವರೆಗೆ ಹೇಳಿಸುವುದು, ಓದಿಸುವುದು, ಬರೆಸುವುದು ಮಗುವಿಗೆ ನರಕ; ಮಗುವಿನ ಅಮೂಲ್ಯವಾದ ಕಲಿಯುವ ಸಮಯ ಪೋಲು! ಇಂಗ್ಲಿಷ್ ನಮ್ಮ ಮಗುವಿನ ಮಾತೃಭಾಷೆಯಲ್ಲವಾದ್ದರಿಂದ ಅದಕ್ಕೆ ಮೊದಲು ಮಾತಿನ ಮೂಲಕ ಇಂಗ್ಲಿಷ್ ಭಾಷೆಯ ಪರಿಚಯ ಆಗಬೇಕು. ಅಂದರೆ ಇಂಗ್ಲಿಷ್ ಕೂಡ ತನ್ನ ಮಾತೃಭಾಷೆಯಂತೆಯೇ ಒಂದು ಭಾಷೆ ಎಂಬ ಭಾವನೆ ಮಗುವಿಗೆ ಆಗಬೇಕು. ಅದಕ್ಕಾಗಿ ಇಂಗ್ಲಿಷಿನಲ್ಲಿ ಒಂದು ಅಥವಾ ಎರಡು ವರ್ಷ ಸಂಭಾಷಣೆ ಮಾತ್ರ ನಡೆಯಬೇಕು. ಮಕ್ಕಳನ್ನು ತರಗತಿ ಕೋಣೆಯಿಂದ ಹೊರಗೆ ಕರೆದುಕೊಂಡು ಹೋಗಿ ನಿಸರ್ಗದಲ್ಲಿರುವ ನೂರಾರು ವಸ್ತುಗಳನ್ನು ತೋರಿಸಿ ಅವುಗಳನ್ನು ಹೆಸರಿಸಿ ಅವುಗಳ ಬಗ್ಗೆ ಮಾತಾಡಬೇಕು.

04:29.5 ಕಲಿಯಲು ಪರಿಸರ ಬೇಕು  
ನಗರದ ಮುಕ್ಕಾಲು ಪಾಲು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ‘ಆಂಗ್ಲ’ ಪರಿಸರವೂ ಇಲ್ಲ, ಭಾರತೀಯ ಪರಿಸರವೂ ಇಲ್ಲ. ಆಕಾಶ ಕೂಡ ಕಾಣಿಸದ ಕೋಣೆಯಲ್ಲಿ ಕುಳಿತು ಎಲ್ಲವನ್ನೂ ಪುಸ್ತಕದಲ್ಲೇ ಹುಡುಕಬೇಕು. ಗ್ರಾಮೀಣ ಶಾಲೆಗಳ ಪರಿಸರದ ನಿಸರ್ಗ ಶ್ರೀಮಂತವಾಗಿದೆ. ಮಾತಾಡಲು ಬೇಕಾದಷ್ಟು ವಿಷಯಗಳು ಸಿಗುತ್ತವೆ. ನಿಸರ್ಗಕ್ಕೆ ಸಂಬಂಧಿಸಿ ದೈನಂದಿನ ಜೀವನದ ಕುರಿತು, ಅನುಭವಗಳ ಕುರಿತು ಸರಳ ವಾಕ್ಯಗಳಲ್ಲಿ ಮಾತಾಡಬೇಕು. ಮಗು ಪಂಚೇಂದ್ರಿಗಳಿಂದ ಪಡೆಯುವ ಅನುಭವಗಳ ಬಗ್ಗೆ ಮಾತಾಡಬೇಕು. ಮಗುವಿಗೆ ಬಣ್ಣ, ವಾಸನೆ, ಶಬ್ದ, ಆಕಾರ, ಗಾತ್ರ ಮುಂತಾದವುಗಳಿಗೆ ಬಳಸುವ ಶಬ್ದಗಳು ವಸ್ತುಗಳ ಮೂಲಕ ನೇರವಾಗಿ ಮಗುವಿಗೆ ಆಗುವುದರಿಂದ ಅವು ಮರೆತು ಹೋಗುವುದಿಲ್ಲ. ಆದ್ದರಿಂದ ಉರುಹೊಡೆಯುವ ಪ್ರಮೇಯ ಉಂಟಾಗುವುದಿಲ್ಲ.

06:06.5 ಅಕ್ಷರಮಾಲೆ ಅನವಶ್ಯಕ  
ಅಕ್ಷರಮಾಲೆಯನ್ನು ಹೇಳುವುದು, ಓದುವುದು ಮತ್ತು ಬರೆಯುವುದು ಇರಲೇ ಬಾರದು. ಅದಕ್ಕೂ ಭಾಷೆಯ ಕಲಿಕೆಗೂ ಯಾವ ಸಂಬಂಧವೂ ಇಲ್ಲ. ಅದು ಬರೀ ಹಿಂಸೆ ಎಂಬುದನ್ನು ತಾಯಿತಂದೆ ಮತ್ತು ಶಿಕ್ಷಕರು ತಿಳಿದುಕೊಳ್ಳಬೇಕು. ಮಗು ಒಂದಷ್ಟು ಇಂಗ್ಲಿಷ್ ವಾಕ್ಯಗಳನ್ನು ಅರ್ಥಮಾಡಿಕೊಂಡು ಮಾತಾಡಲು ಕಲಿತುಕೊಂಡ ಬಳಿಕ ಕನ್ನಡವನ್ನು ಕಲಿಸಿದ ವಿಧಾನದಲ್ಲಿಯೇ ಇಂಗ್ಲಿಷನ್ನು ಕೂಡ ಕಲಿಸಬೇಕು: ಮೊದಲು ಮಾತಾಡಿದ ವಾಕ್ಯವನ್ನೇ ಶಿಕ್ಷಕ ಬರೆದು ಮಕ್ಕಳಿಂದ ಓದಿಸುವುದು; ಅನಂತರ ಆ ವಾಕ್ಯಗಳಲ್ಲಿನ ಶಬ್ದಗಳನ್ನು ಓದುತ್ತಾ ಮಕ್ಕಳು ಬರೆಯುವುದು. ಕೆಲವೇ ವಾಕ್ಯಗಳನ್ನು ಓದುವಷ್ಟರಲ್ಲಿ ಹೆಚ್ಚಿನ ಅಕ್ಷರಗಳ ಪರಿಚಯ, ಶಬ್ದಗಳಲ್ಲಿ ಅವುಗಳ ಉಚ್ಚಾರ ಸಹಿತ ಆಗುತ್ತದೆ. ಹಲವು ವಾಕ್ಯಗಳನ್ನು ಬರೆದಾದ ಬಳಿಕ ಮಗುವಿಗೆ ಅಕ್ಷರಮಾಲೆಯಲ್ಲಿರುವ ಇತರ ಶಬ್ದಗಳ ಪರಿಚಯವನ್ನು ಸೂಕ್ತವಾದ ಶಬ್ದಗಳ ಮೂಲಕ ಮಾಡಿಸಬಹುದು. ಓದುವುದರೊಂದಿಗೇ ನೇರವಾಗಿ ಶಬ್ದಗಳನ್ನು ಮತ್ತು ವಾಕ್ಯಗಳನ್ನು ಬರೆಯುವುದನ್ನು ಮಗು ಕಲಿತುಕೊಳ್ಳುವುದರಿಂದ ಮಗು ಬೇಗನೆ ಇತರ ಪುಸ್ತಕಗಳನ್ನು ಓದುವ ಸಾಮರ್ಥ್ಯವನ್ನು ಪಡೆಯುತ್ತ್ತದೆ. ಇದು ಭಾಷೆಯನ್ನು ವೈಜ್ಞಾನಿಕವಾಗಿಯೂ ನಿಸರ್ಗಸಹಜವಾಗಿಯೂ ಪಡೆಯುವ ರೀತಿ. ನಾವೆಲ್ಲ ಒಂದು ಎರಡು ಅಥವಾ ಮೂರು ಭಾಷೆಗಳನ್ನು ಪಡೆಯುವುದು ಹೀಗೆಯೇ. ಇದೇ ಕ್ರಮವನ್ನು ಇನ್ನಷ್ಟು ಪರಿಷ್ಕೃತ ರೂಪದಲ್ಲಿ ಮಗುವಿಗೆ ನೀಡಿದರೆ ಅದರ ಓದಿನ ವೇಗ, ಗ್ರಹಣ ಶಕ್ತಿಯ ವೇಗ ಮತ್ತು ಅಭಿವ್ಯಕ್ತಿ ಸಾಮರ್ಥ್ಯವನ್ನು ಕಂಡು ಬೆರಗಾಗುವ ಖುಷಿ ನಮ್ಮದಾದೀತು.

07:44.0 ನಾಟಕ ಅತ್ಯಂತ ಪರಿಣಾಮಕಾರಿ  
ಭಾಷೆ ಕಲಿಸಲು ನಾಟಕದ ಬಳಕೆ ಭಾಷೆಯನ್ನು ಕಲಿಸಲು ನಾಟಕಗಳಷ್ಟು ಪರಾಣಾಮಕಾರಿಯಾದ ಸಾಧನ ಇನ್ನೊಂದಿಲ್ಲ. ತರಗತಿಯಲ್ಲಿ ಒಂದು ನಾಟಕವನ್ನು ಮಕ್ಕಳಿಂದ ಆಡಿಸಿದರೆ ಅಥವಾ ಆಡುವ ರೀತಿಯಲ್ಲಿ ಮಕ್ಕಳಿಂದ ಓದಿಸಿದರೆ, ಒಂದು ಪ್ರಬಂಧವನ್ನು ಓದಿ ಕಲಿಸುವುದಕ್ಕಿಂತ ನಾಲ್ಕು ಪಟ್ಟು ಉತ್ತಮವಾಗಿ ಮತ್ತು ಪರಿಣಾಮಕಾರಿಯಾಗಿ ಭಾಷೆಯನ್ನು ಕಲಿಸಬಹುದು. ಒಂದು ಮಕ್ಕಳ ನಾಟಕವನ್ನು ಶಾಲೆಯ ರಂಗದ ಮೇಲೆ ಪ್ರದರ್ಶಿಸಿದರೆ, ಇಡೀ ಶಾಲೆಗೆ ಒಂದು ಅದ್ಭುತವಾದ ಭಾಷಾಪಾಠ ಆಗುತ್ತದೆ. ತರಗತಿಯಲ್ಲಿ ಇಂಗ್ಲಿಷನ್ನು ಈ ವರೆಗಿನ ಕಲಿಕೆಯ ರೂಢಿಯಲ್ಲಿ ಕಲಿಸುವ ಬದಲು ನಾಟಕಗಳ ಮೂಲಕ ಪ್ರಾಥಮಿಕ ತರಗತಿಗಳಿಂದಲೇ ಕಲಿಸಬಹುದು. ‘ಕಲಿಸದೆ ಕಲಿಸುವ’ ಈ ವಿಧಾನದಿಂದ ಮಕ್ಕಳು ತಮ್ಮ ಸ್ವಂತ ಭಾಷೆಯನ್ನು ಮಾತಾಡುವಂತೆ ಇಂಗ್ಲಿಷ್ ಭಾಷೆಯಲ್ಲಿ ಮಾತಾಡಲು ಕಲಿತುಕೊಳ್ಳುತ್ತಾರೆ.

ಆಡಿದ ನಾಟಕವನ್ನೇ ಪುನ: ಪುನ: ಆಡಬೇಕು. ಒಂದೇ ನಾಟಕವನ್ನು ಎಲ್ಲಾ ತರಗತಿಯವರೂ ಆಡಬೇಕು. ಆ ನೆಲೆಯಲ್ಲಿ ನಾಟಕ ಸ್ಪರ್ಧೆ ನಡೆಸಬೇಕು. ಇಂಗ್ಲಿಷ್ ಭಾಷೆಯ ನಾಟಕದಲ್ಲಿ, ಉಚ್ಚಾರ, ಆಕ್ಸೆಂಟ್ ಮತ್ತು ಇಂಟೊನೇಷನಿಗೆ ಪ್ರತ್ಯೇಕ ಗಮನ ನೀಡಬೇಕು. ಮಕ್ಕಳಿಂದಲೇ ಚಿಕ್ಕ ಚಿಕ್ಕ ನಾಟಕ ಬರೆಸಬೇಕು. ಅದಕ್ಕೆ ಬೇಕಾದ ಕತೆಯನ್ನು, ಸನ್ನಿವೇಶಗಳನ್ನು ಮಕ್ಕಳು ಮತ್ತು ಶಿಕ್ಷಕರು ಸೇರಿ ಹೆಣೆಯಬಹುದು. ಜಾನಪದ ಕತೆಗಳು ಮತ್ತು ಅಪ್ಸರ ಕತೆಗಳನ್ನು (ಫೇರಿ ಟೇಲ್ಸ್)ಬಹಳ ಸುಲಭವಾಗಿ ನಾಟಕವಾಗಿ ಪರಿವರ್ತಿಸಬಹುದು. ತರಗತಿಯಲ್ಲಿ ನಾಟಕವನ್ನು ಆಡುವಾಗ ಮಕ್ಕಳು ಪಾತ್ರದ ಮಾತುಗಳನ್ನು ಕಂಠಪಾಠ ಮಾಡಲೇ ಬೇಕೆಂದಿಲ್ಲ. ಮಾಡಿದರೆ ಒಳ್ಳೆಯದು. ಇಂಗ್ಲಿಷ್ ನಾಟಕವಾದರೆ, ಕಂಠಪಾಠ ಮಾಡುವುದರಿಂದ ಹೆಚ್ಚು ಪ್ರಯೋಜನವಿದೆ. ಆದರೆ ಮಾತುಗಳ ಅರ್ಥ ಮಕ್ಕಳಿಗೆ ತಿಳಿದಿರಬೇಕು.  

ಒಂದು ತರಗತಿಯವರು ಕನ್ನಡದಲ್ಲಿ ಆಡಿದ್ದನ್ನೇ ಇನ್ನೊಂದು ತರಗತಿಯವರು ಇಂಗ್ಲಿಷಿನಲ್ಲಿ ಆಡಿದರೆ ಇಂಗ್ಲಿಷ್ ಕಲಿಕೆಯಲ್ಲಿ ಒಂದು ಕ್ರಾಂತಿಯೇ ಆರಂಭವಾಗುತ್ತದೆ. ಸಿನಿಮಾ ನೋಡಿ, ಟೀವೀ ನೋಡಿ ಮಕ್ಕಳು ಇಂಗ್ಲಿಷ್ ಮತ್ತು ಹಿಂದಿ ಕಲಿತಿರುವುದು ಇದೇ ವಿಧಾನದಲ್ಲಿ. ತನ್ನ ಮನೆಯ ಪರಿಸರದಲ್ಲಿ ಜನರಾಡುವ ಬೇರೆ ಭಾಷೆಗಳನ್ನು ಮಕ್ಕಳು ಬಹಳ ಸುಲಭದಲ್ಲಿ ಕಲಿತುಕೊಳ್ಳುವುದು ಇದೇ ರೀತಿಯಲ್ಲಿ.   

ನಾಟಕಾಭಿನಯದ ಮೂಲಕ ಮಗುವಿನಲ್ಲಿ ಆತ್ಮವಿಶ್ವಾಸ ತಾನಾಗಿಯೇ ಬೆಳೆಯುತ್ತದೆ. ಸಭಾಕಂಪನ ಎಂಬುದು ಒಂದಿದೆ. ಅದನ್ನು ಗೆಲ್ಲುವುದು ಹೇಗೆ ಎಂದು ಹೇಳಿಕೊಡಬೇಕಾದ್ದೇ ಇಲ್ಲ. ಅಂಥದ್ದನ್ನೆಲ್ಲಾ ನೇರವಾಗಿ ಗೆಲ್ಲುವ ವಿಧಾನವೇ ತಪ್ಪು. ಮನಸ್ಸು ಬೇರೆ ಕ್ರಿಯೆಯಲ್ಲಿ ತೊಡಗಿದಾಗ ಉಂಟಾಗುವ ಮೈಮರವೆಯಲ್ಲಿ ‘ಸೆಲ್ಫ್ಫ್ ಕಾನ್ಶಸ್‌ನೆಸ್’ ಎಂಬುದು ತಾನಾಗಿ ಅದೃಶ್ಯವಾಗುತ್ತದೆ. ಆ ಮಾರ್ಗವನ್ನು ಅನುಸರಿಸಬೇಕು.

10:25.5 ಕಲಿಕೆ = ಬಳಕೆ  
ಭಾಷೆಯನ್ನು ಕಲಿಯುವುದು ಬಳಕೆಯ ಮೂಲಕ; ಮಾತು, ಓದು ಮತ್ತು ಬರವಣಿಗೆಯ ಮೂಲಕ. ಪ್ರಬಂಧ, ಕತೆ, ಕವಿತೆಗಳನ್ನು ಓದಿ ‘ಕಠಿಣ’ ಪದಗಳ ಅರ್ಥ ಕೊಟ್ಟು, ವ್ಯಾಕರಣ ಕಲಿಸಿ, ಪ್ರಶ್ನೆಗಳನ್ನು ಕೊಟ್ಟು ಅವುಗಳಿಗೆ ಉತ್ತರ ಬರೆಸಿ, ಅಂಕಗಳನ್ನು ಹಾಕಿ ಪಾಸು ಫೈಲು ಮಾಡುವ ರೂಢಿಯಲ್ಲಿ ಮಗುವಿಗೆ ಬೇಕಾದಷ್ಟು ಭಾಷೆ ಬರುವುದಿಲ್ಲ ಎನ್ನುವುದನ್ನು ನಾವು ತಿಳಿದುಕೊಂಡಾಗಿದೆ. ನಾಟಕವನ್ನು ಆಡಿದ ಬಳಿಕ ಮಕ್ಕಳು ಅದರ ಕುರಿತು ಮಾತಾಡಬೇಕು, ಚರ್ಚಿಸಬೇಕು, ವಿಮರ್ಶಿಸಬೇಕು. ಇದು ಇಂಗ್ಲಿಷ್ ಮತ್ತು ಕನ್ನಡ ಎರಡೂ ಭಾಷೆಯಲ್ಲಿ ಜೊತೆಜೊತೆಯಾಗಿಯೇ ನಡೆಯಬಹುದು. ಅದು ನಿಜವಾದ ಪಾಠ.

11:07.5 ಅನುಭವವೆ ಉತ್ತೀರ್ಣತೆ  
ಮಗುವಿನ ಪ್ರತಿದಿನದ ತರಗತಿಯ ಓದು ಅನುಭವವಾಗುವುದಿಲ್ಲ. ಅನುಭವವಾಗದ್ದು ಪೂರ್ಣವಾಗಿ ನೆನಪಿನಲ್ಲಿ ಉಳಿಯುವುದಿಲ್ಲ. ನೆನಪಿನಲ್ಲಿಡಲು ಪ್ರತ್ಯೇಕವಾಗಿ ಶ್ರಮಪಡಬೇಕಾಗುತ್ತದೆ. ಆದರೆ ಪ್ರತಿಯೊಂದು ನಾಟಕಾನುಭವವೂ ಮಕ್ಕಳ ನೆನಪಿನಲ್ಲಿ ಉಳಿಯುತ್ತದೆ. ಕಾರಣ, ಅದು ಅನುಭವ. ಅದು ಮಾನಸಿಕ ಕ್ರಿಯೆ ಮತ್ತು ಶಾರೀರಿಕ ಚಟುವಟಿಕೆ ಎರಡೂ ಸೇರಿದ ಅನುಭವ. ನಾಟಕದಲ್ಲಿನ ಮಾತುಗಳು ಪಠ್ಯ ಪುಸ್ತಕದ ಪಾಠಗಳ ಮಾತುಗಳಂತೆ ಇರದೆ, ನಾವು ಬದುಕಿನಲ್ಲಿ ಆಡುವ ಮಾತುಗಳಂತೆ ಇರುವುದರಿಂದ ಮಕ್ಕಳಿಗೆ ಆತ್ಮೀಯವಾಗುತ್ತವೆ.

11:44.5 ಆತ್ಮೀಯವಾದದ್ದು ಮರೆತುಹೋಗುವುದಿಲ್ಲ.   
(ಕೃಪೆ: ಕನ್ನಡಧ್ವನಿ.ಕಾಂ)

________________________________________

ಕನ್ನಡ ಕಲಿ ಬಿತ್ತರಿಕೆ,  ಕನ್ನಡದ ಗುಟ್ಟು,  ಅಗಸ್ಟ್‌ ೨೩, ೨೦೨೪   
How a Language Ought to be Taught  
ಲೇಖನ: ಕೆಟಿ ಗಟ್ಟಿ  
ಓದು: ವಿಶ್ವೇಶ್ವರ ದೀಕ್ಷಿತ  
ಸಂಗೀತ: ಆಕಾಶ ದೀಕ್ಷಿತ  
ಪಠ್ಯದಿಂದ ಉಲಿಗೆ: ನೀರಜಾ ಗೂಗ್ಲೇ ಮತ್ತು ನಾನು, ಸಪ್ನಾ ಗೂಗ್ಲೇ   
ಸಂಪರ್ಕ,  ನಮೋವಿಶ್ ಯ್ಯಾಟ್ ಯಾಹೂ ಡಾಟ್ ಕಾಮ್   
ಬಿತ್ತರಿಕೆ ೧೫, ಕಾಲ ೨೦೨೪, ಸಂಖ್ಯೆ ೩, ಬಿಕಾಸ ೧೫-೨೦೨೪-೩  
Episode 15, Year 2024, Number 3, Bikaasa 15-2024-3


ತಾಗುಲಿ: ಕೆ.ಟಿ. ಗಟ್ಟಿ, K.T. Gatti, how tach a language