ಬರವಣಿಗೆಯಲ್ಲಿ ಮತ್ತು ಉಚ್ಚಾರದಲ್ಲಿ ಭಾಷಾ ಶುದ್ಧಿಯ ವಿಚಾರ

ಬರವಣಿಗೆಯಲ್ಲಿ ಮತ್ತು ಉಚ್ಚಾರದಲ್ಲಿ ಭಾಷಾ ಶುದ್ಧಿಯ ವಿಚಾರ

ಕೆ.ಟಿ. ಗಟ್ಟಿ

KT Gatti

(ಗಟ್ಟಿ ಅವರ ಪರಿಚಯ ಲೇಖನ ಇಲ್ಲಿ ಓದಿ)

[ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೆಲೆಸಿರುವ ಕೆ.ಟಿ. ಗಟ್ಟಿ ಚಿಂತನಶೀಲ ಬರಹಗಾರರು. ಭಾಷೆಯ ಕಲಿಕೆ, ಉಳಿವು, ಅಳಿವು, ಮತ್ತು ಬೆಳವಣಿಗೆಗಳಲ್ಲಿ ಇವರಿಗೆ ಆಸಕ್ತಿ. ಕನ್ನಡ ಕಲಿಗಾಗಿ ಬರೆದ ಈ ವಿಶೇಷ ಲೇಖನದಲ್ಲಿ ೧೧ ವಿಚಾರಗಳನ್ನು ಹರವಿದ್ದಾರೆ.  ‘ನುರಿತ’ ಬರಹಗಾರರೂ ಸಾಮಾನ್ಯವಾಗಿ ಎಸಗುವ ಈ ಅನೇಕ ಪ್ರಮಾದಗಳನ್ನು ಕನ್ನಡ ಕಲಿಗಳು ಗಮನಿಸುವುದು ಅವಶ್ಯ. ಓದಿ ನೋಡಿ; ನಿಮ್ಮ ವಿಚಾರ ಏನು ಬರೆದು ತಿಳಿಸಿ.]

೧ ಅನ್ಯಭಾಷಾ ಪದಗಳು

ಕನ್ನಡದಲ್ಲಿ ಅನೇಕ ಅನ್ಯಭಾಷಾ ಶಬ್ದಗಳಿವೆ. ಇವುಗಳಲ್ಲಿ ಇಂಗ್ಲಿಷ್ ಶಬ್ದಗಳ ಸಂಖ್ಯೆ ಬಹಳ ದೊಡ್ಡದು. ಬಸ್ಸು, ಕಾರು, ರೈಲು, ಫ಼್ಯಾನು ಮುಂತಾದ ಸಾವಿರಾರು ಶಬ್ದಗಳು ಕನ್ನಡ ಶಬ್ದಗಳೇ ಆಗಿಹೋಗಿವೆ. ಇಂಗ್ಲಿಷ್ ಶಬ್ದಗಳ ಹೃಸ್ವ ರೂಪಗಳು (abbreviations) ಜಗತ್ತಿಡೀ ತುಂಬಿಕೊಂಡಿರುವಂತೆ ಕನ್ನಡದಲ್ಲಿಯೂ ತುಂಬಿಕೊಂಡಿವೆ. ಕನ್ನಡದ ರಾಜಧಾನಿಯಲ್ಲಂತೂ ಮುಕ್ಕಾಲು ಪಾಲು ಸರಕಾರಿ ಮತ್ತು ಸರಕಾರೇತರ ಸಂಸ್ಥಾನಾಮಗಳು ಇಂಗ್ಲಿಷ್ ಭಾಷಾ ಹೃಸ್ವ ರೂಪಗಳೇ ಆಗಿವೆ. ಈ ವಿಚಾರದಲ್ಲಿ ಯಾರೂ ತಕರಾರು ಎತ್ತುವಂತಿಲ್ಲ. ಆದರೆ ಕನ್ನಡ ಭಾಷೆಯ ಪದಗಳನ್ನೇ ನುಂಗಿ ಹಾಕುವ ಬಟ್, ಸೋ, ಯೂಸ್ ಮಾಡು, ಥಿಂಕ್ ಮಾಡು ಮುಂತಾದ ಪ್ರಯೋಗಗಳನ್ನು ಮಕ್ಕಳು ಕೂಡ ಬಳಸುತ್ತಾರೆ. ಕನ್ನಡದಲ್ಲಿ ‘ಆದರೆ’ ಎನ್ನುವ ಪದವಿರುವಾಗ ‘ಬಟ್’ ಎಂಬ ಪದದ ಅಗತ್ಯ ಏನು ಎಂದೇ ತಿಳಿಯುತ್ತಿಲ್ಲ. ಸರಿಯಾದ ಕನ್ನಡ ಪದವನ್ನು ಬಳಸುವ ಮೂಲಕ ಅಕನ್ನಡ ಪದಗಳನ್ನು ತೊಡೆದುಹಾಕಬೇಕಾದ್ದು ಭಾಷೆಯ ಆರೋಗ್ಯಕರವಾದ ಬೆಳವಣಿಗೆಗೆ ಒಳ್ಳೆಯದು.

೨ ಮಹಾಪ್ರಾಣಗಳ ಉಚ್ಚಾರ

ಖ, ಘ, ಛ, ಝ, ಠ, ಢ, ಥ, ಧ, ಫ, ಭ - ಈ ೧೦ ಧ್ವನ್ಯಾಕ್ಷರಗಳಿರುವ ಪದಗಳು ಕನ್ನಡಕ್ಕೆ ಸಂಸ್ಕೃತ ಮತ್ತು ಅನ್ಯದೇಶೀಯ ಭಾಷೆಗಳಿಂದ ಬಂದವುಗಳು. ಸಾಮಾನ್ಯವಾದ ಆಡುಗನ್ನಡದಲ್ಲಿ ಅಥವಾ ಗ್ರಾಮ್ಯ ಕನ್ನಡದಲ್ಲಿ ಈ ಧ್ವನ್ಯಾಕ್ಷರಗಳು ಇಲ್ಲ. ಈ ಕಾರಣದಿಂದಲೇ ಹೆಚ್ಚಿನ ಮಕ್ಕಳಿಗೆ ಮಹಾಪ್ರಾಣವನ್ನು ಉಚ್ಚರಿಸಲು ಸಾಧ್ಯವಾಗುವುದು ಬಹಳ ತಡವಾಗಿ. ಎಷ್ಟೋ ಮಂದಿ, ಸರಿಯಾಗಿ ಕಲಿತುಕೊಳ್ಳದೆ ದೊಡ್ಡವರಾದ ಮೇಲೂ ಮಹಾಪ್ರಾಣಗಳನ್ನು ಮತ್ತು ಅಲ್ಪಪ್ರಾಣಗಳನ್ನು ಒಂದೇ ರೀತಿ ಉಚ್ಚರಿಸುತ್ತಾರೆ. ಆದುದರಿಂದ ಈ ಒಂಬತ್ತು ಅಕ್ಷರಗಳ ಉಚ್ಚಾರವನ್ನು ಮಗುವಿಗೆ ಗಮನವಿಟ್ಟು ಕಲಿಸಬೇಕಾಗುತ್ತದೆ. ಇಂಗ್ಲಿಷಿನಲ್ಲಿ ಮಹಾಪ್ರಾಣವೆನ್ನುವುದಿಲ್ಲ. ಆದುದರಿಂದ ಇಂಗ್ಲಿಷ್ ಮಾಧ್ಯಮದಲ್ಲಿ ಓದುವ ಮಕ್ಕಳಿಗೆ ಮಹಾಪ್ರಾಣದ ಉಚ್ಚಾರ ಕಷ್ಟವೆನಿಸುತ್ತದೆ. ಈ ಧ್ವನಿಯಿರುವ ಪದಗಳು ಮುಖ್ಯವಾಗಿ ಓದಿನಿಂದಲೇ ಬರಬೇಕಾಗಿರುತ್ತದೆ. ಆದ್ದರಿಂದ ಮಗು ಒಂದನೆಯ ತರಗತಿ ಸೇರುವ ಒಂದು ವರ್ಷದ ಮೊದಲು ಕೆಲವು ಪದಗಳ ಮೂಲಕ ಮಹಾಪ್ರಾಣದ ಉಚ್ಚಾರವನ್ನು ಕಲಿಸಬಹುದು. ಉಚ್ಚಾರಕ್ಕಾಗಿಯೇ ಪದಗಳನ್ನು ಕಲಿಸಬೇಕಾದ ಅನಿವಾರ್ಯತೆ ಇರುವುದರಿಂದ ಪದದ ಅರ್ಥವನ್ನು ಹೇಳಿಕೊಡುವ ಅಗತ್ಯವಿದೆ. ಉಚ್ಚಾರದ ಜೊತೆಗೇ ಬರೆಯುವುದನ್ನು ಕೂಡ ಕಲಿಸಬಹುದು.

(ಹಿಂದಿ ಭಾಷಿಕರು ಮಹಾಪ್ರಾಣಗಳನ್ನು ಉಚ್ಚರಿಸುವಾಗ ಸಂಸ್ಕೃತದಲ್ಲಿ ಆಡುವಷ್ಟು ಒತ್ತು ಹಾಕಿ ಉಚ್ಚರಿಸುವುದಿಲ್ಲ. ಹೋಲಿಸಿ: ಹಿಂದಿಯ ‘ಭೂಲ್’ (ಮರೆವು), ಕನ್ನಡದ ‘ಭೂತ’)

ಉದಾಹರಣೆ: ಖಡ್ಗ (ಕತ್ತಿ); ನಖ (ಉಗುರು); ಉತ್ಖನನ (ಅಗೆಯುವುದು); ಘಟನೆ (ಸಂಭವ); ಆಘಾತ (ಪೆಟ್ಟು); ಉದ್ಘಾಟನೆ (ಆರಂಭ). ಛತ್ರಿ (ಕೊಡೆ); ಛಾಯ (ನೆರಳು); ಸ್ವಚ್ಛ (ಕೊಳೆಯಿಲ್ಲದ).  ಝರಿ (ಬೆಟ್ಟದ ತೊರೆ); ಝೇಂಕಾರ (ದುಂಬಿಯ ದನಿ), ವಾಗ್ಝರಿ (ಒತ್ತರದ ಮಾತು) ಠಕ್ಕು (ಮೋಸ); ಪಾಠ (ಪಾಟ); ಶ್ರೇಷ್ಠ (ಉತ್ತಮವಾದ). ಢಕ್ಕೆ (ಇತ್ತಲೆ ತಮಟೆ); ದೃಢ (ಸ್ಥಿರವಾದ; ಬಲಶಾಲಿಯಾದ. ಥಳಥಳಿಸು (ಹೊಳೆಯು); ಪ್ರಥಮ (ಮೊದಲಿನ); ಸ್ಥಿರ (ಅಲುಗಾಡದ) ಧನ (ಹಣ, ಸಂಪತ್ತು); ಶೋಧ(ಹುಡುಕುವಿಕೆ); ಶುದ್ಧ (ಶುಚಿಯಾದ) ಫಲ (ಹಣ್ಣು); ಸಫಲ (ಯಶಸ್ವಿ); ನಿಶ್ಫಲ (ವ್ಯರ್ಥ) ಭೂಮಿ (ಭೂಮಿ) ನಿರ್ಭೀತ (ಭಯವಿಲ್ಲದಿರುವ); ಉದ್ಭವ (ತಲೆದೋರುವಿಕೆ)

ಗಮನಿಸಿ ೧. ಮಹಾಪ್ರಾಣವಿರುವ ಅನೇಕ ಪದಗಳು ಮಹಾಪ್ರಾಣಕ್ಕೆ ಸಂವಾದಿಯಾದ ಅಲ್ಪಪ್ರಾಣದ ಬಳಕೆಯಿಂದಲೂ ರೂಢಿಯಲ್ಲಿವೆ.
ಉದಾಹರಣೆ,
     ಸಂಸ್ಕೃತ : ಝರಿ, ಹಠ, ಛತ್ರಿ, ಜಂಭ, ಛಿದ್ರ, ಠಿಕಾಣಿ, ಡಂಭ.
     ಕನ್ನಡ : ಜರಿ, ಹಟ, ಚತ್ರಿ, ಜಂಬ, ಚಿದ್ರ, ಟಿಕಾಣಿ, ಡಂಬ(ದಂಬ).

ಗಮನಿಸಿ ೨. ಖ, ಝ, ಢ-ಇವುಗಳ ಒತ್ತಕ್ಷರ ರೂಪವನ್ನು ಕಲಿಯಬೇಕಾದ ಅಗತ್ಯ ಇಲ್ಲ.
ಹಿಂದೆ ಲೆಕ್ಖ, ಜರ್ಝರಿತ, ಇತ್ಯಾದಿ ಪದಗಳು ಬಳಕೆಯಲ್ಲಿದ್ದವು. ಅದರ ಜೊತೆಗೆ ಲೆಕ್ಕ, ಜರ್ಜರಿತ ಎಂಬ ರೂಪಗಳು ಕೂಡ ಬಳಕೆಯಲ್ಲಿದ್ದುವು. ಆಧುನಿಕ ಕನ್ನಡದಲ್ಲಿ ಖ, ಝ ಮತ್ತು ಢ ಅಕ್ಷರಗಳ ಒತ್ತುಗಳ ಬಳಕೆ ಇಲ್ಲ)

ಗಮನಿಸಿ ೩. ಅನೇಕ ಸಂಸ್ಕೃತ ಪದಗಳ ಕನ್ನಡ ರೂಪಗಳು ಕನ್ನಡದಲ್ಲಿ ಬಳಕೆಯಲ್ಲಿವೆ.

ಉದಾಹರಣೆಗೆ,
       ಸಂಸ್ಕೃತ : ಶೂನ್ಯ, ಪಕ್ಷಿ, ಮುಖ, ತುಷ್ಟಿ, ಪಕ್ಷ, ಯಕ್ಷಿಣಿ
       ಕನ್ನಡ : ಸೊನ್ನೆ, ಹಕ್ಕಿ (ಪಕ್ಕಿ), ಮೊಗ, ತುಟ್ಟಿ, ಪಕ್ಕ, ಜಕ್ಕಿಣಿ

ಗಮನಿಸಿ ೪. ತಟ್ಟನೆ, ದಾಳಿ, ದಾಂಡಿಗ, ತರತರದ, ಬಾವಿ, ಪಕ್ಕನೆ ಮುಂತಾದ ಪಕ್ಕಾ ಕನ್ನಡ ಪದಗಳನ್ನು ಪರಿಣಾಮ(effect)ಕ್ಕಾಗಿ ಥಟ್ಟನೆ, ಧಾಳಿ, ಧಾಂಡಿಗ, ಥರಥರದ, ಭಾವಿ, ಫಕ್ಕನೆ  ಎಂದು ಬಳಸಲಾಗುತ್ತದೆ. ಆದರೆ ಇದು ಭಾಷಿಕ ಅಗತ್ಯವಲ್ಲ.

ಗಮನಿಸಿ ೫. ಕೆಲವು ಕನ್ನಡ ಮತ್ತು ಕನ್ನಡೀಕೃತ ಪದಗಳನ್ನು ಸಂಸ್ಕೃತದಂತೆ ಕಾಣಿಸುವ ತಪ್ಪು ಬಹಳ ವ್ಯಾಪಕವಾಗಿದೆ.

ಉದಾಹರಣೆ:
      ತಪ್ಪು: ಹಾರ್ಧಿಕ, ಮರ್ಧನ, ಜನಾರ್ಧನ, ಗಧೆ, ನಾಗರಭಾವಿ
      ಸರಿ  : ಹಾರ್ದಿಕ, ಮರ್ದನ, ಜನಾರ್ದನ, ಗದೆ, ನಾಗರಬಾವಿ;

೩ ಋ

ಅಕ್ಷರಮಾಲೆಯಲ್ಲಿ ಸ್ವರಗಳ ಸಾಲಿನಲ್ಲಿ ಬರುವ ಈ ಶಬ್ದ ‘ರ್’ ಉಚ್ಚಾರಕ್ಕಿಂತ ಭಿನ್ನವಾಗಿದೆ ಎನ್ನುವುದನ್ನು ಗಮನಿಸಬೇಕು. ಇದರ ಉಚ್ಚಾರ ಬಹುತೇಕ ಇಂಗ್ಲಿಷಿನ single trilled ‘r’ ನಂತೆ. ಕನ್ನಡದ ‘ರ’ ಮಲ್ಟಿ ಟ್ರಿಲ್ಡ್ ಅರ್ಥಾತ್ ನಾಲಿಗೆಯಲ್ಲಿ ಒಂದಕ್ಕಿಂತ ಹೆಚ್ಚು ಸಲ ಕಂಪನವನ್ನುಂಟು ಮಾಡುವಂಥದು. ‘ಋ’ ವನ್ನು ಸರಿಯಾಗಿ ಉಚ್ಚರಿಸಲು ಕಲಿತುಕೊಳ್ಳದಿರುವುದರಿಂದ ಮಾತಿನಲ್ಲಿ ಮತ್ತು ಬರೆಯುವುದರಲ್ಲಿ ತಪ್ಪು ಪ್ರಯೋಗಗಳು ತೀರಾ ಸಾಮಾನ್ಯವೆನಿಸಿದೆ.

ಉದಾಹರಣೆ ಬರವಣಿಗೆಯಲ್ಲಿ:
     ಸರಿ : ಶ್ರುತಿ, ಶೃಂಗ, ಶ್ರದ್ಧೆ, ನೇತೃತ್ವ
     ತಪ್ಪು: ಶೃತಿ, ಶ್ರಂಗ, ಶೃದ್ಧೆ, ನೇತ್ರತ್ವ
ಉದಾಹರಣೆ ಉಚ್ಚಾರದಲ್ಲಿ:
    ಸರಿ : ಋಷಿ, ಋತು, ಕೃಷಿ, ಕೃಷ್ಣ, ಕೃತಕ, ಭ್ರಷ್ಟ
    ತಪ್ಪು: ಕ್ರುಷಿ, ರುತು, ಕ್ರುಷಿ, ಕ್ರುಷ್ಣ, ಕ್ರುತಕ, ಭೃಷ್ಟ

೪ ಙ - ಅನುನಾಸಿಕ

ಙ’- ಈ ಅಕ್ಷರ  ಮತ್ತು ಶಬ್ದ (sound) ಈಗ ಕನ್ನಡದಲ್ಲಿ ಬಳಕೆಯಲ್ಲಿ ಇಲ್ಲ. ಆದರೆ ಕೆಲವು ಪುಸ್ತಕಗಳಲ್ಲಿ ವಾಙ್ಮಯ, ದಿಙ್ಮೂಢ ಇತ್ಯಾದಿ ನಾಲ್ಕೈದು ಶಬ್ದಗಳು ಕಾಣಿಸುತ್ತವೆ.

೫ ಞ - ಅನುನಾಸಿಕ

‘ಞ’ ಅನುನಾಸಿಕವು ಕನ್ನಡದಲ್ಲಿ ಪೂರ್ಣಾಕ್ಷರವಾಗಿ ಬಳಕೆಯಲ್ಲಿಲ್ಲ. ಇದರ ಉಚ್ಚಾರವನ್ನು ಸರಿಯಾಗಿ ಕಲಿತುಕೊಳ್ಳದಿರುವುದರಿಂದ ಇದರ ಉಚ್ಚಾರದಲ್ಲಿ ಎರಡು ಬಗೆಯ ತಪ್ಪುಗಳು ಕಾಣಿಸಿಕೊಳ್ಳುತ್ತವೆ.

ಉದಾಹರಣೆ: ಜ್ಞಾನ, ಅಜ್ಞಾನ, ವಿಜ್ಞಾನ, ಸರ್ವಜ್ಞ, ಕೃತಜ್ಞ, ಇತ್ಯಾದಿ.
    ತಪ್ಪು ಉಚ್ಚಾರ ೧: ಗ್ನಾನ, ವಿಗ್ನಾನ, ಅಗ್ನಾನ ಕ್ರುತಗ್ನ ಇತ್ಯಾದಿ
    ತಪ್ಪು ಉಚ್ಚಾರ ೨: ಗ್ಯಾನ, ವಿಗ್ಯಾನ ಅಗ್ಯಾನ ಇತ್ಯಾದಿ

[‘ಞ’ ಮತ್ತು ‘ಙ’ ಮಲೆಯಾಳ ಭಾಷೆಯಲ್ಲಿ ವಿಪುಲವಾಗಿ ಬಳಕೆಯಲ್ಲಿರುವ ಅಕ್ಷರವಾಗಿದೆ. ಮಲೆಯಾಳ ಭಾಷೆ ಕನ್ನಡಕ್ಕಿಂತ ಹೆಚ್ಚು ಸಂಸ್ಕೃತ ಭಾಷಾಲಕ್ಷಣವನ್ನು ಹೊಂದಿರುವುದರಿಂದ ಸಂಸ್ಕೃತ ಭಾಷಾ ಮೂಲದ ಪದಗಳನ್ನು ಮಲೆಯಾಳ ಭಾಷಿಕರು ಸರಿಯಾಗಿ ಉಚ್ಚರಿಸುತ್ತಾರೆ]

೬ ಫ ಮತ್ತು ಫ಼

‘ಪ’ದ ಮಹಾಪ್ರಾಣ ರೂಪವಾಗಿರುವ ‘ಫ’ ವನ್ನು ತಪ್ಪಾಗಿ ಉಚ್ಚರಿಸದಿರುವವರು ವಿರಳ. ಇದಕ್ಕೆ ಕಾರಣ ಇಂಗ್ಲಿಷ್ ಭಾಷೆಯ ಪ್ರಭಾವ. ‘ಫ್’ನ್ನು ಇಂಗ್ಲಿಷಿನ ‘f’ ಆಗಿ ಉಚ್ಚರಿಸಲಾಗುತ್ತದೆ. ಹಿಂದಿಯಲ್ಲಿ ಉರ್ದು ಮೂಲದಿಂದ ಬಂದಿರುವ ‘ಫ಼್’ ಮತ್ತು ಇಂಗ್ಲಿಷಿನ ‘f’ ಒಂದೇ ಶಬ್ದ (‘sound’). ಇದನ್ನು ಕೆಳ ತುಟಿ ಮತ್ತು ಮೇಲಿನ ಹಲ್ಲು ಸಾಲುಗಳಿಂದ ಹೊರಡಿಸಬೇಕು. ಹಿಂದಿಯ ಶಬ್ದ ಮತ್ತು ಇಂಗ್ಲಿಷಿನ ಶಬ್ದೋಚ್ಚಾರವನ್ನು ಸೂಚಿಸಲು ಹೀಗೆ ಫ಼ ಬರೆಯಲಾಗುತ್ತದೆ. ‘ಫ’ವನ್ನು ಎರಡೂ ತುಟಿಗಳ ಮಧ್ಯದಿಂದ ಹೊರಡಿಸಬೇಕು.

ಉದಾಹರಣೆಗೆ,
    ಕನ್ನಡ ಮತ್ತು ಹಿಂದಿ ಮಹಾಪ್ರಾಣ:
             ಕನ್ನಡ: ಫಲ, ಸಫಲ, ವಿಫಲ, ಸತ್ಫಲ, ಸ್ಫೂರ್ತಿ, ಸ್ಫಟಿಕ, ಸ್ಫೋಟ ಇತ್ಯಾದಿ
         ಹಿಂದಿ: ಫಲ್ (ಫಲ), ಫೂಲ್ (ಹೂವು), ಫಕಡ್ (ಹಿಡಿಯು), ಫನಸ್(ಹಲಸು), ಫಜಲ್ (ದಯೆ, ಅನುಗ್ರಹ), ಫಟಾ (ಹರಿದ), ಫಟ್ಟಾ (ಬಿದಿರು) ಇತ್ಯಾದಿ

     ಇಂಗ್ಲಿಷ್ ಮತ್ತು ಹಿಂದಿಯ ‘ಫ಼’
           Fan, leaf, refer, suffer, fine
           ಫ಼ರಕ್, ಫ಼ರಾರ್, ಫಿರಂಗಿ, ಸಫ಼ೇದ್, ಸಫ಼ಾಯಿ, ಫ಼್ಯಾಷನ್, ಫ಼್ಯಾನು, ಫ಼ಿಸು, ಫ಼ಿರ್ಯಾದು, ಫ಼ಿರ್ಕಾ

........(ಮುಂದುವರೆದುದು) ....

೭ ಜ಼

ಜ ಮತ್ತು ‘z’ ನ ಉಚ್ಚಾರದಲ್ಲಿನ ವ್ಯತ್ಯಾಸವನ್ನು ತೋರಿಸುವುದಕ್ಕಾಗಿ ಕನ್ನಡದಲ್ಲಿ ಈ ಕೆಳಗಿನಂತೆ ಬರೆಯಲಾಗುತ್ತದೆ. (‘z’ ನ ಉಚ್ಚಾರವನ್ನು ಸೂಚಿಸಲು ‘ಝ’ ವನ್ನು ಬಳಸುವುದು ಸೂಕ್ತವಲ್ಲ).
          ಇಂಗ್ಲಿಷ್ ಪದಗಳು: ಜ಼ೂ, ರೇಜ಼ರ್, ಜೆರಾಕ್ಸ್
          ಹಿಂದಿ ಪದಗಳು: ಕಾಗಜ಼್, ಆವಾಜ಼್

೮ ಶ, ಷ, ಮತ್ತು ಸ

’ ಮತ್ತು ‘’ ಶಬ್ದಗಳನ್ನು ಭಿನ್ನವಾಗಿ ಉಚ್ಚರಿಸದೆ ಒಂದೇ ರೀತಿಯಾಗಿ ಉಚ್ಚರಿಸುವವರೇ ಹೆಚ್ಚು. ‘’ ನಾಲಿಗೆಯ ಮುಂದಿನ ಭಾಗದಿಂದ ಹೊರಡುತ್ತದೆ. ‘ಶ’ ಅದಕ್ಕಿಂತ ಸುಮಾರು ಒಂದು ಇಂಚು ಹಿಂದಿನಿಂದ ಮತ್ತು ‘ಷ’ ಅದಕ್ಕಿಂತ ಒಂದಿಂಚು ಹಿಂದಿನಿಂದ ಹೊರಡುತ್ತದೆ. ಸಂಸ್ಕೃತ ಮೂಲದ್ದಾಗಿರುವ ‘ಶ’ ಮತ್ತು ‘ಷ’ಗಳನ್ನು ಕನ್ನಡ ಕನ್ನಡ ಬರವಣಿಗೆಯಲ್ಲಿ ಸರಿಯಾಗಿಯೇ ಬರೆಯಲಾಗುತ್ತದೆ. ಉದಾ: ವಿಶೇಷ, ವಿಶಿಷ್ಟ, ಪ್ರತಿಷ್ಠಿತ, ವಿಷ, ವಿಷಾದ, ವಿಶದ, ಶ್ರೇಷ್ಠ, ಶೋಷಣೆ, ಶ್ಮಶಾನ (ಸ್ಮಶಾನ), ಶ್ಲೇಷೆ.

ಕೆಲವು ವಸ್ತುಗಳ, ಊರುಗಳ, ವ್ಯಕ್ತಿಗಳ ಹೆಸರುಗಳಾಗಿರುವ ಪದಗಳಾಗಿರುವಾಗ ಎರಡು ಬಗೆಯ ಪ್ರಯೋಗಗಳು ಬಳಕೆಯಲ್ಲಿವೆ.

ಉದಾಹರಣೆಗೆ, ರೇಶ್ಮೆ (ರೇಶಿಮೆ), ರೇಷ್ಮೆ; ರಶ್ಯ, ರಷ್ಯ; ಶೇಕ್ಸ್‌ಪಿಯರ್, ಷೇಕ್ಸ್‌ಪಿಯರ್, ಷಹಾಜಹಾನ್, ಶಹಾಜಹಾನ್, ಶಹರು, ಷಹರು ಇತ್ಯಾದಿ. ಈ ಎರಡೂ ಬಗೆಯ ಪ್ರಯೋಗಗಳು ಸರಿ.

೯ ವಿಸರ್ಗ [ಃ]

‘ದುಃಖ’ ಎನ್ನುವ ಪದವನ್ನು ದು+ಹ್+ಖ ಎಂದು ಉಚ್ಚರಿಸಬೇಕು. ಆದರೆ ‘ಹ್’ ಬಹಳ ಕ್ಷೀಣ ಧ್ವನಿಯಾಗಿರಬೇಕು. ‘ದುಕ್ಕ’ ಕನ್ನಡೀಕರಣಗೊಂಡ ರೂಪವಾಗಿದೆ. ಇದು ಸ್ವೀಕಾರಾರ್ಹ. ‘ಧುಕ್ಕ’ ಎಂಬ ತಪ್ಪು ಉಚ್ಚಾರವನ್ನು ಆರಂಭದಲ್ಲೇ ಸರಿಪಡಿಸಬೇಕು. ಪುನಃ, ಬಹುಶಃ, ಪ್ರಾಯಶಃ, ಅಂತಃಕರಣ, ಅಂತಃಕಲಹ, ಅಂತಃಪುರ ಮುಂತಾದ ಶಬ್ದಗಳಲ್ಲಿ ಇದು ತುಸು ಪ್ರತಿಬಂಧಿತ ‘ಹ’ ವಾಗಿ (ಬಾಯನ್ನು ‘ಹ’ ಪೂರ್ಣಧ್ವನಿಗೆ ತೆರೆಯಬೇಕಾದಷ್ಟು ಅಗಲಕ್ಕೆ ತೆರೆಯದೆ) ಉಚ್ಚರಿಸಲ್ಪಡುತ್ತದೆ.

೧೦ ಅನುನಾಸಿಕ ಂ (ಮ್ ಅಥವಾ ನ್)

‘ಂ’ ದ ನಂತರ ಬರುವ ವರ್ಗ, ವರ್ಗ, ವರ್ಗ ಮತ್ತು ವರ್ಗದ ವ್ಯಂಜನಗಳಲ್ಲಿ ಇದು ‘ನ್’ ಅನುನಾಸಿಕವಾಗಿರುತ್ತದೆ. ವರ್ಗದ ವ್ಯಂಜನಗಳಲ್ಲಿ ‘ಮ್’ ಆಗಿರುತ್ತದೆ.

ಉದಾಹರಣೆ:
    ‘ನ್’: ಅಂಕ, ಶಂಖಿತ, ಮಂಗ, ಅಂಘ್ರಿ;
           ಮಿಂಚು, ನಂಜು, ಜಂಝಾನಿಲ;
           ಅಂತ, ಪಂಥ, ಮಂದ, ಅಂಧ;
           ಅಂಟು, ಕಂಠ, ದಂಡ;
   ‘ಮ್’: ಕಂಪನ, ಸಂಬಳ, ಸಂಭವ

ಅವರ್ಗೀಯ ವ್ಯಂಜನಗಳಾದ ಯ, ರ, ಲ, ವ, ಶ, ಸ ಮತ್ತು ಹ ಗಳಿಗೆ ಪೂರ್ವ ಧ್ವನಿಯಾಗಿ ಬರುವಾಗ ‘ಮ್’ ಆಗಿರುತ್ತದೆ:

       ಸಂಯಮ, ಸಂಯೋಗ, ಸಂಯುಕ್ತ  ಸಂರಕ್ಷಣೆ, ಸಂಲಗ್ನ,
       ಸಂವಾದ, ಸ್ವಯಂವರ, ಸಂವಹನ,
       ಅಂಶ, ಸಂಶಯ, ವಂಶ, ಸಂಶೋಧನೆ,
       ಕಂಸ, ಧ್ವಂಸ, ಸಂಸ್ಕೃತ, ಸಂಸ್ಕೃತಿ, ಸಂಸದ, ಸಂಸಾರ, ಹಂಸ,
       ಸಿಂಹ, ಸಂಹಾರ ಸಂಹಿತೆ, ಸಿಂಹಾಸನ

೧೧ ಹ್+ನ, ಹ್+ವ, ಹ್+ಲ

ಪೂರ್ವಾಹ್ನ, ಅಪರಾಹ್ನ, ಮಧ್ಯಾಹ್ನ, ಚಿಹ್ನೆ, ವಿಹ್ವಲ, ಆಹ್ವಾನ, ಆಹ್ಲಾದ ಮುಂತಾದ ಕೆಲವೇ ಶಬ್ದಗಳಲ್ಲಿ ಬರುವ ಈ ಸಂಯುಕ್ತ ಧ್ವನಿಯನ್ನು (Diphthong) ಅನೇಕ ಮಂದಿ ‘ಹ್’ಗೆ ಹೆಚ್ಚು ಒತ್ತು ಹಾಕಿ ಉಚ್ಚರಿಸುತ್ತಾರೆ. ಇದು ಸರಿಯುಚ್ಚಾರಕ್ಕೆ ಹತ್ತಿರವಾದರೂ ‘ಸರಿ’ ಅಲ್ಲ; ‘ಹ್’ ಬಹಳ ಕ್ಷೀಣವಾಗಿದ್ದರೆ ಸಾಕು. ಆದರೆ ಮಧ್ಯಾಹನ್ನ, ಆವ್ಹಾನಿತ ಎಂದು ಮುಂತಾಗಿ ಹೇಳುವುದು ಖಂಡಿತ ಕ್ಷಮಾರ್ಹವಲ್ಲ.

೧೨ ಇಂಗ್ಲಿಷ್ ಅಕ್ಷರದ ಉಚ್ಚಾರ

ಕನ್ನಡ ಮತ್ತು ಇಂಗ್ಲಿಷ್ ಅಕ್ಷರಗಳನ್ನು ಬಳಸಿ ಇಂಗ್ಲಿಷ್ ಅಕ್ಷರಗಳ ಉಚ್ಚಾರವನ್ನು ಸೂಚಿಸಬಹುದು. (:) ದೀರ್ಘವನ್ನು ಸೂಚಿಸುತ್ತದೆ.

a [ei]     b [bi:]   c [si:]   d [di:]     e [i:]   f  [ef]    
g [ji:]    h [ಎಚ್]  i [ai]    j [jei]     k [kei]  l [el]   
m [em]     n [en]    o [ou]    p [pi:]     q [ಕ್ಯೂ]  
r [a:]     s [es]    t [t:]    u [ಯೂ]    v [v:]    
w [ಡಬ್ಲ್ಯೂ] x [eks]   y [ವೈ]    z [zed/zee]

ಗಮನಿಸಿ: ಇಂಗ್ಲಿಷ್ ಅಕ್ಷರಗಳ ಉಚ್ಚಾರವನ್ನು ಸರಿಯಾಗಿ ಕಲಿತುಕೊಳ್ಳದಿರುವುದರಿಂದ ಆಗುವ ಉಚ್ಚಾರದಲ್ಲಿ ಮತ್ತು ಬರವಣಿಗೆಯಲ್ಲಿ ಆಗುವ ತಪ್ಪುಗಳು: 
ತಪ್ಪು: It’s an year old chair. He lost a ear in the scuffle. He is a M.P. It is an unique flower. He is an European. This is an one time chance to win. It was a honest attempt to win his favour. It is a open secret. She is a Egyptian author. 
ಸರಿ : It’s a year old chair. He lost an ear in the scuffle. He is an M.P. It is a unique flower. He is a European. This is a one time chance to win. It was an honest attempt to win his favour. It is an open secret. She is an Egyptian author.  

13    ಕೆಲವು ವಿಶೇಷ ಶಬ್ದಗಳು

ಮಾತು(ಉಚ್ಚಾರ), ಓದು,  ಮತ್ತು  ಬರಹದಲ್ಲಿ ವಿಶೇಷವಾಗಿ ಗಮನಿಸಬೇಕಾದ ಕೆಲವು ಶಬ್ದಗಳು:

  • ಅತಿ, ಇತಿ, ಅಸ್ಥಿ, ಅಸ್ತಿತ್ವ, ಅನನುಕೂಲ, ಅಧ್ವಾನ, ಅಸಹಾಯಕತೆ, ಅನೂಚಾನ
  • ಅಸಾಂಪ್ರದಾಯಿಕ, ಅಂತಾರಾಷ್ಟ್ರೀಯ, ಅಧ್ಯಾತ್ಮ, ಅಧ್ಯಾತ್ಮಿಕ, ಸಾಹಿತ್ಯಿಕ, ಅವಾಂತರ, ಅತಿಥಿ, ಆತಿಥ್ಯ, ಅಚ್ಚ, ಅಚ್ಚೆ
  • ಅನನಾಸು, ಅವಾಕ್ಕಾಗಿ, ಅಸ್ಪೃಶ್ಯ, ಅದ್ಧೂರಿ(ಅದ್ದೂರಿ), ಅವಾಕ್ಕಾಗಿ, ಅಂಗಡಿ ಮುಂಗಟ್ಟು
  • ಆಧ್ಯಾತ್ಮಿಕ, ಆವಶ್ಯಕ, ಆಜೀವ, ಆವಶ್ಯಕತೆ, ಆಪ್ಯಾಯಮನ, ಆಂತರ್ಯ, ಆಭಾರಿ, ಆಗಂತುಕ, ಆನುವಂಶ, ಆನುವಂಶಿಕ, ಆಕ್ರಂದನ, ಆತಿಥೇಯ, ಆಪಾದಮಸ್ತಕ, ಆಚಂದ್ರಾರ್ಕ, ಆಬಾಲವೃದ್ಧ , ಆಸ್ವಾದಿಸು, ಆವೃತ
  • ಇಳುವರಿ
  • ಉಚ್ಚ, ಉಚ್ಚಾರ, ಉಚ್ಚಾಟಿಸು, ಉಪದ್ವಾಪ
  • ಉಚ್ಛ್ವಾ, ಉಪಾಹಾರ, ಸಸ್ಯಾಹಾರ, ಉಪಚಾರ, ಉದ್ದೇಶ, ಉಪಗ್ರಹ, ಉಭಯ, ಉದ್ದಾಮ
  • ಉಪಹಾರ=ಕಾಣಿಕೆ, (ನೈವೇದ್ಯ, ಬಲಿ, ಪೂಜೆ, ಅರ್ಚನೆ)
  • ಕಸಬು, ಕವಯಿತ್ರಿ, ಕಿರುಚು, ಕುಲುಮೆ, ಕೃತಜ್ಞ, ಕೃತಘ್ನ, ಕಲ್ಮಶ, ಕಶ್ಮಲ (ಕಷ್ಮಲ), ಕೂಲಂಕಷ, ಕೂಡ, ಕ್ಲುಪ್ತ, ಕೋಟ್ಯಂತರ
  • ಖಂಡಿತ
  • ಗೂಢಚಾರ, ಗೃಹಪ್ರವೇಶ, ಗ್ರಹಚಾರ, ಗುಚ್ಛ
  • ಚಾತಕ ಪಕ್ಷಿ
  • ಜಲಾನಯನ, ಜನಾರ್ದನ, ಜರಗು, ಜಾತ್ಯತೀತ, ಜಾತ್ಯಾಧಾರಿತ, ಜಿಗುಪ್ಸೆ
  • ತಲಪು (ತಲುಪು), ತಿರುಚು, ತಿಳಿವಳಿಕೆ
  • ದಂಡ, ಕಿರುಚು, ದುರಾಡಳಿತ, ದುರಬಿsಮನ, ದುರದೃಷ್ಟ, ದುಂಧನ, ದೃಢತೆ, ದಾರ್ಢ್ಯ
  • ಧಾರಣೆ, ಧೂಮಪಾನ, ಧಾಷ್ಟ
  • ನಡುಗಡ್ಡೆ, ನಾಗರಿಕ, ನಿಷ್ಠೆ, ನಿಷ್ಠುರ, ನಿಕೃಷ್ಟ, ನಿಗದಿತ, ನಿರ್ದೇಶನ, ನಿಚ್ಚಳ, ನಿಶ್ಶಬ್ದ, ನಿಶ್ಶರ್ತ, ನೇತ್ರ, ನೇತೃತ್ವ, ನ್ಯೂನತೆ
  • ಪರಿಣತ, ಪರಿಣತಿ, ಪಾದಚಾರಿ, ಪ್ರತಿಕಾರ, ಪಿತೃತ್ವ, ಪಿತ್ರಾರ್ಜಿತ, ಶ್ರುತಿ, ಪಿತೃತ್ವ, ನೇತೃತ್ವ, ಪ್ರಬಂಧ, ಪ್ರಾರಬ್ಧ, ಪ್ರಸಾಧನ, ಪ್ರತಿ, ಪ್ರತಿ ದಿನ, ಶ್ರೋತೃ (ಕೇಳುಗ, ಆಲಿಸುವವನು), ಶ್ರೋತ್ರ (ಕೇಳು ಅಂಗ, ಕಿವಿ) ಹಾರ್ದಿಕ, ಸೌಹಾರ್ದ, ಪ್ರಸಾಧನ, ವಾರ್ಧಕ್ಯ
  • ಬ್ರಹ್ಮಚಾರಿ, ಬೃಹಸ್ಪತಿ, ಬೀಭತ್ಸ, ಬಾಧೆ, ಬಾದಿsಸು, ಬಾಧ್ಯತೆ, ಬೋಧನೆ
  • ಭೇದ, ಭೇದಿ, ಭಂಡಾರ, ಭ್ರಷ್ಟ , ಭೃತ್ಯ, ಭ್ರಾತೃತ್ವ, ಬಾವಿ-(ನೀರಿನ ಬಾವಿ)
  • ಮಗುಚು, ಮರಮುಟ್ಟು, ಮಂಸಾಹಾರ, ಮೇಲದಿsಕಾರಿ, ಮದ್ಯಪಾನ, ಮುತ್ಸದ್ದಿ, ಮರ್ದನ, ಮರ್ದಿನಿ, ಮರ್ದಿಸು, ಮರ್ಗೋಪಾಯ, ಮುರುಕಲು
  • ರಾದ್ಧಾಂತ, ರೋದನ, ರೋದಿಸು, ರುದಿsರ
  • ವಿದ್ಯೆ, ವಿಶೇಷ, ವಿದ್ಯಮನ, ವಿಷಾದ, ವಿಶದ, ವ್ರತ, ವಿಧ್ಯುಕ್ತ
  • ಶಾಖಾಹಾರ, ಶ್ರುತಿ, ಶ್ರದ್ಧೆ, ಶುಭಾಶಯ, ರೇಶ್ಮೆ(ರೇಷ್ಮೆ), ಶ್ವಾಸೋಚ್ಛಾಸ
  • ಸದ್ಯ, ವಿದ್ಯಮಾನ, ಸಹ, ಸುಪರ್ದಿ, ಸ್ಪರ್ಧೆ, ನಿರ್ದೇಶನ, ಸ್ಫೋಟ, ಸಂಬೋಧನೆ, ಸಂಬಂಧ, ಸಶೇಷ, ಸಾಮಗ್ರಿ, ಸಂಚಕಾರ, ಸಮನಾಂತರ, ಸಮುಚ್ಚಯ, ಸ್ತಬ್ಧ, ಸೃಷ್ಟ್ಯಾತ್ಮಕ, ಸ್ಪರ್ಶ, ಸೃಜನಶೀಲ (ಸರ್ಜನಶೀಲ), ಸ್ವರ್ಗೀಯ, ಸುಭಾಷಿತ, ಸ್ಮಶಾನ (ಶ್ಮಶಾನ), ಸ್ವಚ್ಛ.

ಪ್ರಾಥಮಿಕ ಶಾಲೆಯ ಮಕ್ಕಳಿಗೆ ಕಲಿಸಬೇಕಾದ ಈ ಮೂಲಭೂತ ನಿಯಮಗಳ ತಿಳುವಳಿಕೆ ಇಲ್ಲದ ಪಿಎಚ್‌ಡಿಗಳೂ ನಮ್ಮಲ್ಲಿರುವುದು ಕನ್ನಡ ನಾಡಿನ ಪುಣ್ಯವಿಶೇಷ.

ನಮಸ್ಕಾರ,
ಬಹಳ ಸೊಗಸಾದ ಆಳವಾದ ವಿಶ್ಲೇಷಣೆ!

ಲೇಖನದಲ್ಲಿ ಕೆಲವು ಸಣ್ಣ-ಪುಟ್ಟ ದೋಷಗಳು ಕಂಡ ಹಾಗಿವೆ. ನನ್ನ ತಪ್ಪಿರಬಹುದು. ಈ ಅಂಶಗಳಿಗೆ ನಿಮ್ಮ ಗಮನ ಸೆಳೆಯುವುದಷ್ಟೇ ನನ್ನ ಉದ್ದೇಶ. ನನ್ನ ತಪ್ಪು ಕಲ್ಪನೆಯಿದ್ದಲ್ಲಿ ಕ್ಷಮಿಸಿ, ಯಾವುದು ಸರಿ ಎಂದು ತಿಳಿಸಿರಿ..

ಮಹಾಪ್ರಾಣಗಳು ಒಂಬತ್ತು ಅಲ್ಲ, ಹತ್ತು.

ಉದ್ಘಾಟನೆ: ಇದು ಸರಿಯಾಗಿ ಅಚ್ಚು ಆಗಿಲ್ಲ.

ಠಕ್ಕು, ಢಕ್ಕೆ , ಛಿದ್ರ, ಠಿಕಾಣಿ, ಡಂಭ... ಇವು ಸಂಸ್ಕೃತ ಪದಗಳು ಅಲ್ಲವೇನೋ ಎನಿಸುತ್ತದೆ.

ಹಾರ್ದಿಕ, ಮರ್ದನ, ಜನಾರ್ದನ, ಗದೆ... ಇವೆಲ್ಲವೂ ಸಂಸ್ಕೃತ ಪದಗಳಲ್ಲವೇ? ಸಂಸ್ಕೃತದಲ್ಲೂ ಇದೇ ರೂಪದಲ್ಲಿವೆ ಅಲ್ಲವೇ..?

‘ಙ’ ಅಕ್ಷರ ಕನ್ನಡದಲ್ಲಿ ಬಳಕೆಯಲ್ಲಿ ಇಲ್ಲ ಎಂದರೇನು? ಸಂಸ್ಕೃತದಿಂದ ಕನ್ನಡಕ್ಕೆ ಬಂದ ನೀವೇ ಹೇಳಿದ ಉದಾಹರಣೆಗಳು ಇವೆಯಲ್ಲ.. (ವಾಙ್ಮಯ, ದಿಙ್ಮೂಢ). 'ಈಗ' ಇಲ್ಲ ಎಂದರೇನು? ಶಾಲೆಗಳಲ್ಲಿ ಕಲಿಸುವುದಿಲ್ಲವೇ?

ಫಲ್ (ಫಲ), ಫೂಲ್ (ಹೂವು), ಫಕಡ್ ಹಿಡಿಯು), ಫನಸ್(ಹಲಸು), ಫಜಲ್ (ದಯೆ, ಅನುಗ್ರಹ) ಫಟಾ (ಹರಿದ) ಫಟ್ಟಾ (ಬಿದಿರು)ಇತ್ಯಾದಿ... ಈ ಸಾಲಿನಲ್ಲಿ ಅನೇಕ ಉಟ್ಟಂಕಣ ದೋಷಗಳು ಇರುವ ಹಾಗಿದೆ. ಎಲ್ಲೆಡೆ ಫ಼ ಬರೆಯುವ ಬದಲು ಫ ಬರೆದಿದೆ. ಕೆಲವೆಡೆ bracket ಇರಬೇಕಾದಲ್ಲಿ ಇಲ್ಲ, ಕೆಲವೆಡೆ ಅಂತರ (space) ಇರಬೇಕಾದಲ್ಲಿ ಇಲ್ಲ. 'ಫ಼ಕಡ್' ಅಲ್ಲ 'ಪಕಡ್'. ಮಿಕ್ಕ ಕೆಲವು ಪದಗಳು ನಗಾಗೇ ಪರಿಚಿತವಿಲ್ಲ, ಹಾಗಾಗಿ ಅವುಗಳ ಅರ್ಥ ಸರಿಯಾಗಿವೆಯೇ ಎಂದು ದಯವಿಟ್ಟು ಪರೀಕ್ಷಿಸಿ..

ಧನ್ಯವಾದಗಳು!

We send our children to English schools and extol the virtues of Kannada. Whom are we fooling?

೧೦ ಅನುನಾಸಿಕ ಂ

‘ಂ’ ದ ನಂತರ ಬರುವ
ಕವರ್ಗ : ಙ
(ನನ್ನ ಕೀ ಬೋರ್ಡನಲ್ಲಿಲ್ಲ)
ಅಙ್ಕ ,ಶಙ್ಖಿತ ( ಶಙ್ಕಿತ )
ಮಙ್ಗ, ಅಙ್ಘ್ರಿ

ಚವರ್ಗ: ಞ್, ಮಿಞ್ಚು, ನಞ್ಜು

ಟವರ್ಗ :ಣ್, ಅಣ್ಟು , ಕಣ್ಠ, ದಣ್ಡ

ತವರ್ಗ : ನ್’ ಕನ್ಪನ,

ಪವರ್ಗ : ‘ಮ್’ ಸಮ್ಬಳ,ಸಮ್ಭವ

ಆಯಾ ವರ್ಗದ ವ್ಯಂಜನಗಳ ಅಕ್ಷರಗಳ ಪದಗಳ ಹಿಣದೆ ಬರುವ ‘ ಂ ‘ ಆಯಾ ವರ್ಗದ ಅನುನಾಸಿಕ ಬಳಸಿದಲ್ಲಿ ಉಚ್ಛಾರ ಸ್ಪಷ್ಟತೆ ಸರಿಯಾಗಿರುತ್ತದೆ.

ಕನ್ನಡ ಪದಗಳನ್ನು ಸರಿಯಾಗಿ ಉಪಯೋಗಿಸುವ ಉತ್ತಮ ಮಾರ್ಗದರ್ಶನ ನೀಡುವ ಲೇಖನ.
ಇಂಗ್ಲಿಷ್ ವ್ಯಾಮೋಹ ಬಿಟ್ಟು, ನಮ್ಮ ಪ್ರಾಥಮಿಕ ತರಗತಿಗಳಲ್ಲಿ ಕನ್ನಡವನ್ನು ಪ್ರಥಮ ಭಾಷೆಯಾಗಿ ಕಡ್ಡಾಯವಾಗಿ ಕಲಿಸಬೇಕು