ಕನ್ನಡ ಕಲಿಗೆ ಹತ್ತು! ಕನ್ನಡ ಕಲಿ ದಿನ ೨೦೧೦


    ಕನ್ನಡ ಕಲಿಗೆ ಹತ್ತು ...

ಕನ್ನಡ ಕಲಿ ದಿನ ೨೦೧೦

*** ವಿಶ್ವೇಶ್ವರ ದೀಕ್ಷಿತ

ಕನ್ನಡ ಕಲಿ ದಿನಾಚರಣೆ ವರ್ಷಕ್ಕೊಮ್ಮೆ ನಡೆಯುವ, ಎಲ್ಲಾ ಕನ್ನಡ ಕಲಿ ಶಾಖೆಗಳ ಮಕ್ಕಳ ಕನ್ನಡ ಜ್ಞಾನ, ಪ್ರತಿಭೆಯನ್ನು ಪ್ರದರ್ಶಿಸುವ ಕಾರ್ಯಕ್ರಮ. ಕನ್ನಡ ಕಲಿಯ ಹತ್ತನೆಯ ವರ್ಷ ಎಂದ ಮೇಲೆ ಇದಕ್ಕೆ ವಿಶೇಷ ಮೆರಗು.


ಶನಿವಾರ ಮಾರ್ಚ್ ೨೦, ೨೦೧೦
ಸಂಪ್ರದಾಯ ವನದ ಸಮುದಾಯ ಭವನ
ಅರ್ವೈನ್, ಕ್ಯಲಿಫೊರ್ನಿಯ


ಸ್ಮರಣ ಸಂಚಿಕೆ ಬಿಡುಗಡೆ

kannada Kali 2010 Graduates
ಕನ್ನಡ ಕಲಿ ಪದವೀಧರರು

Kannada KaliTeachers
ಕನ್ನಡ ಕಲಿ ಶಿಕ್ಷಕರು

ಭಾಗವಹಿಸುತ್ತಿರುವ ಶಾಖೆಗಳು

ಅರ್ವೈನ್:
Coordinator: Geetha Nirand
  Contact: Vish Dixit
  Contact: Pratibha Bhagwat
  Number of Students: 24
Tippu
Obavva

ಸೆರಿಟೋಸ್:
  Coordinator: Shantharam Keshava
  Contact: Satish
  Number of Students: 14

Sharana

ವ್ಯಾಲಿ:
Coordinator: Shivakumar Gowder
  Contact:Arun Madhav
  Number of Students: 26
Kannada Kali Valley

Mallige Student

ಹೆಚ್ಚಿನ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ:
Studio Nirand

ನ್ನಡ ಕಲಿಗಳು ಹತ್ತನೆಯ ವರ್ಷದ ಸಂಭ್ರಮದಲ್ಲಿದ್ದಾರೆ. ಮಾರ್ಚ್ ೨೦, ೨೦೧೦ ಒಂದು ವಿಶೇಷ ದಿನ; ಕನ್ನಡ ಕಲಿಗಳಿಗೆ ಸಡಗರದ ದಿನ. ದಕ್ಷಿಣ ಕ್ಯಲಿಫೊರ್ನಿಯದ ಕನ್ನಡಿಗರಿಗೆ ಹೆಮ್ಮೆಯ ದಿನ. ವಾರ್ಷಿಕ ಕನ್ನಡ ಕಲಿ ದಿನಾಚರಣೆಯೊಂದಿಗೆ ಹತ್ತನೆಯ ವರ್ಷದ ಹಬ್ಬ ಅರ್ವೈನ್ ನಗರದ ಸಂಪ್ರದಾಯ ವನದ ಸಮುದಾಯ ಭವನದಲ್ಲಿ ವಿಜೃಂಭಣೆಯೊಂದಿಗೆ ಜರುಗಿತು.
ಸಪ್ಟಂಬರ ೨೪, ೨೦೦೦ ದಂದು ಮೊದಲ ಕನ್ನಡ ಕಲಿ ತರಗತಿ ಕರ್ನಾಟಕ ಸಾಂಸ್ಕೃತಿಕ ಸಂಘದ ಮುಂದಾಲೋಚನೆಯಿಂದ ಅರ್ವೈನ್ ನಗರದಲ್ಲಿ ಪ್ರಾರಂಭವಾಯ್ತು. ಕನ್ನಡಿಗರ ಮನದಲ್ಲಿದ್ದ ಅದಮ್ಯ ಆಸೆಗೆ ಅಭಿವ್ಯಕ್ತಿ ನೀಡಿತು. ಕೂಡಲೆ ಡೈಮಂಡ್ ಬಾರ್, ಸರಿಟೊಸ್, ಅನಹೈಮ್ ಹಿಲ್ಸ್, ಸಾನ್ ಫರ್ನಾಂಡೊ ವ್ಯಾಲಿ, ಮತ್ತು ಪಾಮ್ಡೇಲ್ ಗಳಲ್ಲಿ ಕನ್ನಡ ಕಲಿ ಶಾಖೆಗಳು ಚಿಗುರೊಡೆದವು. ಕನ್ನಡ ಕಲಿಸುತ್ತ ಕನ್ನಡದ ಕಂಪನ್ನು ತೆಂಕಣ ನಾಡಿನ ಉದ್ದಗಲಕ್ಕೂ ಹರಡತೊಡಗಿದವು. ಸದ್ಯ, ಅರ್ವೈನ್, ಸರಿಟೊಸ್, ಮತ್ತು ವ್ಯಾಲಿ ಶಾಖೆಗಳು ಮಾತ್ರ ಕ್ರಿಯಾಶೀಲವಾಗಿದ್ದರೂ ಎಂದಿಗಿಂತ ಹೆಚ್ಚು ವಿದ್ಯಾರ್ಥಿಗಳು ಇಂದು ಕನ್ನಡ ಕಲಿಯುತ್ತಿದ್ದಾರೆ; ಹೆಚ್ಚು ಶಿಕ್ಷಕರು ಪಾಠ ಹೇಳುತ್ತಿದ್ದಾರೆ; ಹೆಚ್ಚು ಸಹಾಯಕರು ಕಾರ್ಯಕ್ರಮಗಳನ್ನು ಯೋಜಿಸುತ್ತಿದ್ದಾರೆ.
ಮಾತು ಓದು ಬರೆಹಗಳನ್ನು ವಿದ್ಯಾರ್ಥಿಗಳು ಸಮರ್ಪಕವಾಗಿ ಕಲಿಯುತ್ತಿದ್ದಾರೆ. ಕೆ.ಸಿ.ಎ.ದ ವೇದಿಕೆಯ ಮೇಲೆ ಕನ್ನಡ ಮಾತನಾಡಿ ಕಾರ್ಯಕ್ರಮಗಳನ್ನು ನಡೆಸಿಕೊಡುವಷ್ಟು ಮುಂದುವರೆದಿದ್ದಾರೆ. ಕೆಲ ವಿದ್ಯಾರ್ಥಿಗಳು ಮೊದಲ ದಿನದಿಂದ ಹತ್ತು ವರ್ಷಗಳೂ ಕನ್ನಡ ಕಲಿಯ ಕಟ್ಟೆ ಹತ್ತಿದ್ದಾರೆ. ಓದು ಬರೆಹಗಳಲ್ಲಿ ಪರಿಣತಿ ಸಾಧಿಸಿದ್ದಾರೆ. ಜೊತೆಗೆ ಕನ್ನಡ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಕಾಲೇಜಿಗೆ ತೆರಳುತ್ತಿದ್ದಾರೆ. ಇದು ಕನ್ನಡ ಕಲಿಯ ಉದ್ದೇಶ ಮತ್ತು ಮಹತ್ವದ ಸಾಧನೆ. ಇವರಿಗೆ ಕನ್ನಡ ಕಲಿ ಪದವಿ ಪ್ರದಾನ ಸಮಾರಂಭವೂ ಹತ್ತನೆಯ ವರ್ಷದ ಹಬ್ಬದ ಒಂದು ವಿಶೇಷ. ಆಕಾಶ ದೀಕ್ಷಿತ, ಶಿಲ್ಪಾ ಜಗನ್ನಾಥ, ಶೃತಿ ಶಾಂತಾರಾಮ್ ಮತ್ತು ಅರಿಂಜಯ ಮಾಧವ ತಮ್ಮ ಪದವಿ ಸ್ವೀಕಾರ ಭಾಷಣವನ್ನು ಕನ್ನಡದಲ್ಲಿ ನೀಡಿದರು. ಕನ್ನಡ ಸಂಸ್ಕೃತಿ ಕನ್ನಡ ಐಡೆಂಟಿಟಿಗಳೊಂದಿಗೆ ತಮ್ಮ ವ್ಯಕ್ತಿತ್ವಗಳನ್ನು ಕನ್ನಡ ಕಲಿ ಹೇಗೆ ರೂಪಿಸಿದೆ ಎಂದು ವಿವರಿಸಿದರು. ತಾವು ಸೇರುತ್ತಿರುವ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಕ್ಯಾಂಪಸ್ ಕ್ಲಬ್ ಗಳನ್ನು ಇವರು ಆರಂಭಿಸಲಿ ಎನ್ನುವುದು ನಮ್ಮ ಎಂದಿನ ಆಸೆ; ಆರಂಭಿಸುತ್ತಾರೆ ಎಂಬ ಭರವಸೆ ಇದೆ.
ಹತ್ತು ವರ್ಷಗಳಲ್ಲಿ ಕನ್ನಡ ಸಂಸ್ಕೃತಿಯನ್ನು ಸ್ಥಳೀಯರಿಗೆ ಪರಿಚಯಿಸುವ ಅನೇಕ ಕಾರ್ಯಕ್ರಮಗಳನ್ನು ಕನ್ನಡ ಕಲಿ ಯೋಜಿಸಿದೆ. ಅರ್ವೈನ್ ಜಾಗತಿಕ ಹಳ್ಳಿ ಹಬ್ಬದಲ್ಲಿ ಕನ್ನಡ ಕಲಿ ಅನೇಕ ವರ್ಷಗಳಿಂದ ಭಾಗವಹಿಸಿ ಕನ್ನಡದ ಅರಿವನ್ನು ಮೂಡಿಸುತ್ತಿದೆ. ಕಳೆದ ವರ್ಷ ಕರ್ನಾಟಕದ ರೇಷ್ಮೆ ಸಂಪ್ರದಾಯ ಎನ್ನುವ ಕಾರ್ಯಕ್ರಮ ನೀಡಿತ್ತು. ಕನ್ನಡ ಮಳಿಗೆಯೊಂದರಲ್ಲಿ ವಸ್ತುಗಳ ಪ್ರದರ್ಶನ, ಕನ್ನಡ ಕಲಿ ಮಾಹಿತಿ, ಮತ್ತು ತಿನಿಸುಗಳ ಮಾರಾಟ ಏರ್ಪಡಿಸಿತ್ತು. “ಮಂಡಲ ಕಲೆ” ಎನ್ನುವ ಉಪನ್ಯಾಸವನ್ನು ಪ್ರಾಚೀನ ಕಲಾ ಸಂಶೋಧನೆ ಪ್ರಾಧ್ಯಾಪಕರಾದ ಡಾ. ನಲಿನಿ ರಾವ್, ಅರ್ವೈನ್ ಕಲಾ ಕೇಂದ್ರದ ಸಹಯೋಗದಲ್ಲಿ, ನೀಡಿದರು.
೨೦೦೬ರಲ್ಲಿ ಅರ್ವೈನ್ ನಗರದ ಹಾರ್ವಾರ್ಡ ಪಾರ್ಕ್ ಭವನದಲ್ಲಿ ನಡೆದ ಕನ್ನಡ ಕಮ್ಮಟದಲ್ಲಿ ಸಾಮಾನ್ಯ ಪಠ್ಯಕ್ರಮ ಮತ್ತು ಕಲಿಕಾ ವಿಧಾನಗಳ ವಿಚಾರ ವಿನಿಮಯ ನಡೆಯಿತು. ವ್ಯಾಲಿ ಮತ್ತು ಅರ್ವೈನ್ ಗಳಲ್ಲಿ ಕನ್ನಡ ಗೀತೆಗಳ ಕಾರ್ಯಕ್ರಮಗಳಾದವು. ಶಂಕರ ಶಾನುಭಾಗ ಅವರು ಅತಿಥಿ ಶಿಕ್ಷಕರಾಗಿ ಕನ್ನಡ ಹಾಡುಗಳನ್ನು ಕಲಿಸಿದರು. ೨೦೦೮ರಲ್ಲಿ ಎಮ್.ಎಸ್. ರಾಮಣ್ಣ ಮೇಷ್ಟ್ರು ಮತ್ತು ಇತರ ನುರಿತ ಅತಿಥಿ ಶಿಕ್ಷಕರಿಂದ ಭಾಷಣ ಮತ್ತು ಕನ್ನಡ ಕಲಿ ಶಿಕ್ಷಕರ ತರಬೇತಿ ನಡೆದಿವೆ.
ಕನ್ನಡ ಕಲಿ ವಿದ್ಯಾರ್ಥಿಗಳು ಕರ್ನಾಟಕ ಸಾಂಸ್ಕೃತಿಕ ಸಂಘದ ಕಾರ್ಯಕ್ರಮಗಳಲ್ಲಿ ಸದಾ ಮಿಂಚುತ್ತಿದ್ದಾರೆ. ನಾಟಕ, ನೃತ್ಯ, ಹಾಡುಗಳಲ್ಲಿ ನಿಸ್ಸೀಮರಾಗಿದ್ದಾರೆ. ೨೦೦೬ರಲ್ಲಿ ಓದು ಬರೆಹಗಳೊಂದಿಗೆ “ಕನ್ನಡ ಹಾಡು” ತರಗತಿಯನ್ನು ಪ್ರಾರಂಭಿಸಲಾಯಿತು. ಕವಿತೆ ಹಾಡುಗಳ ಮೂಲಕ ಕನ್ನಡ ಕಲಿಸುವ ಈ ಪ್ರಯತ್ನ ಇಂದು ಎಲ್ಲರಿಗೂ ಪ್ರಿಯವಾಗಿದೆ. ಇಲ್ಲಿ ಕಲಿತ ಹಾಡುಗಳು ಮಕ್ಕಳಿಗೆ ಬಾಯಿಪಾಠವಾಗಿದ್ದು ಅವರು ಹಾಡಲು ಸದಾಸಿದ್ಧರು. ಕನ್ನಡ ಕಲಿ ಕೊಯರ್ ಪ್ರಸಿದ್ಧವಾಗಿದ್ದು ಎಲ್ಲ ಕಾರ್ಯಕ್ರಮಗಳ ಒಂದು ಅವಶ್ಯಕ ಅಂಗವಾಗಿದೆ.
ಶೀಲಾ ಭಟ್, ಶಿಲ್ಪಾ ಜಗನ್ನಾಥ, ನೀಲ ಕೊಟ್ರಪ್ಪ, ಆಕಾಶ ದೀಕ್ಷಿತ, ಮತ್ತು ವಿವಹ್ನಿ ಶಾಸ್ತ್ರಿ (ಕರ್ನಾಟಕ ಸಂಸ್ಕೃತಿಕ ಸಂಘದ ) ಕರ್ನಾಟಕ ಸಾಂಸ್ಕೃತಿಕ ಪ್ರಜ್ಞೆ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಶಿಲ್ಪಾ ಬರೆದ “ನನ್ನ ಮೇಲೆ ಕನ್ನಡ ಸಂಸ್ಕೃತಿಯ ಪ್ರಭಾವ” ಎಂಬ ಲೇಖನಕ್ಕೆ ೨೦೦೮ರಲ್ಲಿ ಅಕ್ಕ (ಅಮೆರಿಕದ ಕನ್ನಡ ಕೂಟಗಳ ಆಗರ)ದ ಸ್ಕಾಲರ್ಶಿಪ್ ಬಂದಿದೆ.
ಮೂರು ತಿಂಗಳಿಗೊಮ್ಮೆ ಲೇಖನ, ಸುದ್ದಿ, ಶಿಕ್ಷಕರಿಗೆ ಕುಡಿನುಡಿ, ಕನ್ನಡ ಪಾಠಗಳನ್ನುಳ್ಳ ಮ್ಯಗಝಿನ್ ಒಂದನ್ನು ಹೊರತರುತ್ತಿದ್ದೇವೆ.
ಇನ್ನೂ ಹೆಚ್ಚಿನ ಸಂತಸದ ಸಂಗತಿ ಎಂದರೆ, ಈ ಮೂಲಕ, ಅಮೆರಿಕದ ಉದ್ದಗಲಕ್ಕೂ ಕನ್ನಡ ಕಲಿಯ ಅರಿವು ಮೂಡಿದ್ದು, ಅನೇಕ ಕನ್ನಡ ಕೂಟಗಳು ಮತ್ತು ಅಭಿಮಾನಿ ವ್ಯಕ್ತಿಗಳು ಕನ್ನಡ ಕಲಿ ತರಗತಿಗಳನ್ನು ಪ್ರಾರಂಭಿಸಿದ್ದಾರೆ. ಇಂಥ ಪ್ರಯತ್ನಗಳಿಗೆ ಕನ್ನಡ ಕಲಿಯ ಸಹಕಾರ ಸದಾ ಇದೆ.
ಕನ್ನಡ ಕಲಿಯ ಯಶಸ್ಸಿನಷ್ಟೆ ಅದರ ಕಾರಣವೂ ಸಹಜವಾಗಿದೆ. ಕನ್ನಡ ಕಲಿಸಬೇಕು, ಇಲ್ಲಿ ಕನ್ನಡ ವಾತಾವರಣ ಸೃಷ್ಟಿಸಬೇಕು ಎನ್ನುವ ನಿಮ್ಮಲ್ಲಿರುವ ಅದಮ್ಯ ಆಸೆ; ಸ್ವಯಂಪ್ರೇರಣೆಯಿಂದ ಅದನ್ನು ಕಾರ್ಯಗತಗೊಳಿಸುತ್ತಿರುವ ಕನ್ನಡಿಗರು. ಕಟ್ಟಳೆ ಇಲ್ಲದೆ ಉರುಳುತ್ತಿರುವ ಈ ಕನ್ನಡ ಕಲಿ ತೇರಿಗೆ ಶಿಕ್ಷಕರ ನಿಷ್ಠೆ ಮತ್ತು ತಂದೆ ತಾಯಿಯರ ಹೆಮ್ಮೆಗಳೆ ಗಾಲಿಗಳು, ವಿದ್ಯಾರ್ಥಿಗಳ ಅತ್ಯಾಸಕ್ತಿಯೆ ಸಾರಥಿ, ಇವರೆಲ್ಲರ ಹುರುಪು ಹುಮ್ಮಸ್ಸುಗಳೆ ಕುದುರೆಗಳು. ಹುರಿದುಂಬಿಸಲು ನಾವು ನೀವು! “ಆರಂಕುಸಮಿಟ್ಟೊಡಂ ನೆನೆವುದೆನ್ನ ಮನಂ” ಎನ್ನುವಂತಾದ ಇವರನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ.

ಇಂದಿನ ಹತ್ತನೆ ವರ್ಷದ ಹಬ್ಬಕ್ಕೆ ಕನ್ನಡ- ಪ್ರಾಚೀನತೆಯಿಂದ ನವ್ಯತೆಗೆ ಎನ್ನುವ ಥೀಮ್ ಇಟ್ಟುಕೊಳ್ಳಲಾಗಿತ್ತು. ಸುಮಾರು ೨೦೦೦ ವರ್ಷಗಳ ಇತಿಹಾಸವುಳ್ಳ ಕನ್ನಡ ನುಡಿ ಶ್ರೀಮಂತವಾಗಿ ಬೆಳೆದಿದೆ. ಅನೇಕ ಅರಸುಮನೆತನಗಳು, ಸಾಹಿತಿಗಳು, ಸಾಮಾಜಿಕ ಮತ್ತು ಧಾರ್ಮಿಕ ಕ್ರಾಂತಿಕಾರರು, ಕಲಾವಿದರು, ಕನ್ನಡ ನೆಲದಲ್ಲಿ ಹುಟ್ಟಿ ಬೆಳಗಿದ್ದಾರೆ. ಇಂದು ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತಿದೆ. ಈ ದಿನದ ಕಾರ್ಯಕ್ರಮಗಳು ಕನ್ನಡದ ಸರ್ವತೋಮುಖ ಬೆಳವಣಿಗೆಯನ್ನು ಸ್ಥೂಲವಾಗಿ ಬಿಂಬಿಸುವಲ್ಲಿ ಸಫಲವಾದವು.


ತಾಗುಲಿ : kannada kali day 2010

Every child away from Karnataka must learn kannada and every parent holds resposibility. God bless them all.