ಲಕ್ಷ್ಮಿ ನರಸಿಂಹ ಸ್ತೋತ್ರ
ಸಂಸ್ಕೃತ ಮೂಲ: ಆದಿ ಶಂಕರ
ಕನ್ನಡಕ್ಕೆ : ವಿಶ್ವೇಶ್ವರ ದೀಕ್ಷಿತ
ನರ್ತನ: ಮಾಲತಿ ಅಯ್ಯಂಗಾರ್
ಮತ್ತು ಕಲಾವಿದರು
ಗಾಯನ: ಕಲಾನಿಧಿ ವಿದ್ವಾನ್
ಶ್ರೀ ಆರ್.ಕೆ. ಶ್ರೀಕಂಠನ್
ಪೂರ್ಣ ವಾಚನ:
ಹಾಲ್ ಕಡಲ ನೆಲೆಯವನೆ, ಚಕ್ರವನು ಹಿಡಿದವನೆ,
ಹಾವುರಾಯನ ಹೆಡೆಯ ಮಣಿ ತೊಟ್ಟ ಚೆನ್ನಿಗನೆ,
ಯೋಗಿಗಳ ಎರೆಯ, ಚಿರ, ಜಗ ದಾಂಟಿಸುವ ನಾವೆ,
ಶ್ರೀ ಲಕ್ಷ್ಮಿ ನರಸಿಂಹ, ಕಾಪಾಡು ಕೈ ಹಿಡಿದು. [೧]
ರವಿ, ಬೊಮ್ಮ, ಸುರರರಸು, ಮರುತಾದಿಗಳಗಣಿತ
ಮುಡಿಯೊಡವೆಗಳೊತ್ತಿದ ಅಡಿಕಮಲಗಳ ಹೊಳಪ,
ಲಕುಮಿ ಮೊಲೆಕಮಲಗಳ ಬಳಿ ಸುಳಿವ ಅರಸಂಚೆ,
ಶ್ರೀ ಲಕ್ಷ್ಮಿ ನರಸಿಂಹ, ಕಾಪಾಡು ಕೈ ಹಿಡಿದು. [೨]
ಕೈ ಒಂದರೊಳು ಚಕ್ರ, ಇನ್ನೊಂದರೊಳು ಶಂಖ,
ಕಡಲಣುಗಿ ನಡು ಬಳಸಿ ಎಡಗಡೆಯ ಮತ್ತೊಂದು,
ಅಳುಕಳಿವ ವರ ಈವ ಕಮಲಾಂಕ ಬಲ ಕೈಯ
ಶ್ರೀ ಲಕ್ಷ್ಮಿ ನರಸಿಂಹ, ಕಾಪಾಡು ಕೈ ಹಿಡಿದು. [೩]
ಬಾಳ್ ಕಾಡ ದಟ್ಟದಲಿ ಅಲೆದಾಡುತಿರೆ ನಾನು
ಬಯಕೆ ಮೊಗ ಕೂರ ಮಿಗ ಕಾಡುತಿದೆ ಬೆಂಬತ್ತಿ;
ಕುಸಿದಿರುವೆ, ಸುಡುತಿರಲು ಹೊಟ್ಟೆಯುರಿ ಬಿಸುಗಾಲ;
ಶ್ರೀ ಲಕ್ಷ್ಮಿ ನರಸಿಂಹ, ಕಾಪಾಡು ಕೈ ಹಿಡಿದು. [೪]
ಮಾಯೆ ಮದ್ದಾನೆ ಗುದ್ದಿರೆ ಸೊಂಡಿಲಿಂದೆನ್ನ
ಬಿದ್ದಿರುವೆ ನಾನಿಲ್ಲಿ ಕೈ ಕಾಲು ಮೈ ಮುರಿದು,
ಸಾವ್ ಇರವುಗಳಿಗೆ ಅಳುಕುತ; ಅಳಲನಳಿವವನೆ,
ಶ್ರೀ ಲಕ್ಷ್ಮಿ ನರಸಿಂಹ, ಕಾಪಾಡು ಕೈ ಹಿಡಿದು. [೫]
ಬಾಳ ಕಾಳ್‌ಕಿಚ್ಚಿನಲಿ ಬಳಲಿರುವೆ ನಾ ಬೆಂದು;
ಈ ಉರಿವ ಬೆಂಕಿಯಲಿ ಸುಟ್ಟಿರಲು ಮೈ ನವಿರು
ನಿನ್ನ ಅಡಿ ತಾವರೆಯ ಕೊಳದಿ ತಣಿಯಲು ಬಂದೆ;
ಶ್ರೀ ಲಕ್ಷ್ಮಿ ನರಸಿಂಹ, ಕಾಪಾಡು ಕೈ ಹಿಡಿದು. [೬]
ಕಳ್ಳರೀ ಕರಣಗಳು ಮುತ್ತಿಕ್ಕಿ ನನ್ನನ್ನು,
ಕದ್ದು ಮಾಸಿರಿ ಬುದ್ಧಿ ಕುರುಡನಾಗಿಸಿ ನನ್ನ,
ದೂಕಿಹರು ಕಾರ್‌ಮರುಳ ಆಳ ಬಾವಿಯ ತಳಕೆ;
ಶ್ರೀ ಲಕ್ಷ್ಮಿ ನರಸಿಂಹ, ಕಾಪಾಡು ಕೈ ಹಿಡಿದು. [೭]
ಬಾಳ ಬಾವಿಯ ಆಳ ಅಳುಕು ತಳ ನಾ ಮುಟ್ಟೆ
ಕುಟುಕುತಿವೆ ನನ್ನನ್ನು ಅಳಲಿನಹಿಗಳು ನೂರು;
ದೆಸೆ ಇರದ ದೀನ, ನಾ, ಕಡು ಬಡವ, ಬಡಪಾಯಿ;
ಶ್ರೀ ಲಕ್ಷ್ಮಿ ನರಸಿಂಹ, ಕಾಪಾಡು ಕೈ ಹಿಡಿದು. [೮]
ಬಾಳ್ ಉರಗ ಬಾಯ್ ತೆರೆದು ಹೆದರಿಸುವ ಹಲ್‌ಗಳಲಿ
ತುಂಬಿರುವ ಕಡು ನಂಜು ಸುಡುತಿಹುದು ನನ್ನನ್ನು;
ಹಾವು-ಹಗೆ-ವಾಹನನೆ, ಇಂಗಡಲ ನೆಲೆಯವನೆ,
ಶ್ರೀ ಲಕ್ಷ್ಮಿ ನರಸಿಂಹ, ಕಾಪಾಡು ಕೈ ಹಿಡಿದು. [೯]
ಬಾಳ ಕಡಲಿನಲಿ ಕಡೆಯುತ್ತಿರುವ ಮಾಕಾಲ
ಮೊಸಳೆಗಡಣವು ಹಿಡಿದು ನನ್ನೊಡಲನೊಡೆದಿಹುದು;
ರುಚಿ ಬಯಕೆಗಳಲೆಗಳು ಕೆಡುಹುತಿವೆ ಬಡಿಬಡಿದು ;
ಶ್ರೀ ಲಕ್ಷ್ಮಿ ನರಸಿಂಹ, ಕಾಪಾಡು ಕೈ ಹಿಡಿದು. [೧೦]
ಬಾಳ ಬಲೆಯಲಿ ಬಿದ್ದ ಮರುಳ ಮೀನವು ನಾನು;
ವಿಷಯಗಳ ಮೀನ್‌ಕೊಕ್ಕೆಗಳು ಚುಚ್ಚಿ ಚುಚ್ಚಿ
ಗಾಸಿಗೊಂಡಿಹವು ತಲೆ ಬಾಯಿಗಳು; ಜಗಕೆ ನೆಲೆ,
ಶ್ರೀ ಲಕ್ಷ್ಮಿ ನರಸಿಂಹ, ಕಾಪಾಡು ಕೈ ಹಿಡಿದು. [೧೧]
ಕೆಡಕು ಬೀಜದಿ ಬೆಳೆವ, ಗೆಯ್ಮೆಗಳ ರೆಂಬೆಗಳ,
ಕರಣಗಳೆಲೆ, ಬಯಕೆ ಹೂಗಳ ಬಾಳ ಹೆಮ್ಮರದ
ಅಳಲವಣ್ ತಿನಲೇರಿ, ಬೀಳುತಿಹೆ ನಾ ಕೆಳಗೆ,
ಶ್ರೀ ಲಕ್ಷ್ಮಿ ನರಸಿಂಹ, ಕಾಪಾಡು ಕೈ ಹಿಡಿದು. [೧೨]
ಈ ಜಗದ ಸೆಳೆತಗಳು ನನ್ನನ್ನು ಹೊಸೆದಿರಲು
ಎಳೆಯುವರು ಯಮಭಟರು ಬಿಗಿದು ಕೊರಳಿಗೆ ಉರುಲು;
ಪರವಶನು ನಾ ಒಂಟಿ; ಅಳುಕಿರುವೆ; ಕರುಣಾಳು,
ಶ್ರೀ ಲಕ್ಷ್ಮಿ ನರಸಿಂಹ, ಕಾಪಾಡು ಕೈ ಹಿಡಿದು. [೧೩]
ಸಿರಿಯರಸ, ಸುರರರಸ, ಒಂದಿಸುವ, ನಿಡುನಡೆಯ,
ಕಮಲನಾಭ, ಮಧುಗೊಲಿ, ಕಮಲಕಣ್ಣಿಗ, ಕೃಷ್ಣ,
ವಾಸುದೇವ, ಜನಾರ್ದನ, ಕೇಶವ, ಬ್ರಹ್ಮಣ್ಯ,
ಶ್ರೀ ಲಕ್ಷ್ಮಿ ನರಸಿಂಹ, ಕಾಪಾಡು ಕೈ ಹಿಡಿದು. [೧೪]
ಬಾಳ್ ಕಡಲಿನಲಿ ಮುಳುಗಿ ನಾ ಮರುಳುಗೊಂಡಿರುವೆ;
ಹೀನನೆಡೆ ಕಣ್‌ಬೀರು, ಕರುಣೆಗಡಲಿನ ಎರೆಯ;
ಪ್ರಹ್ಲಾದನಳಲು ನೀ ನೀಗಿಸಲು ಬಂದಂತೆ,
ಶ್ರೀ ಲಕ್ಷ್ಮಿ ನರಸಿಂಹ, ಕಾಪಾಡು ಕೈ ಹಿಡಿದು. [೧೫]
ಪ್ರಹ್ಲಾದ ಪರಾಶರ ಪುಂಡರೀಕ ನಾರದ
ವ್ಯಾಸಾದಿ ವರ ಭಾಗವತರ ಎದೆಯೊಳು ನೆಲೆತ,
ಭಕುತರನು ಕಾಪಿಡುವ ಪಾರಿಜಾತದ ಮರವೆ,
ಶ್ರೀ ಲಕ್ಷ್ಮಿ ನರಸಿಂಹ, ಕಾಪಾಡು ಕೈ ಹಿಡಿದು. [೧೬]
ಲಕುಮಿ ನರಸಿಂಹನಡಿ ಕಮಲಗಳ ಬಂಡುಣುತ
ಶಂನುಡಿಯನಿದನಿಲ್ಲಿ ಉಸುರಿದನು ಶಂಕರನು;
ಹರಿ ಭಕುತಿಯಿಂದ ಮನನಿಸಲು ಮನುಜನು ಇದನು
ಹೊಂದುವನು ಆ ಕಮಲ ಅಡಿಗಳ ಇಡಿ ನೆಲೆಯನು. [೧೭]
ಸಂಸ್ಕೃತ ಮೂಲ: ಆದಿ ಶಂಕರ
ಶ್ರೀಮತ್ಪಯೋನಿಧಿನಿಕೇತನ ಚಕ್ರಪಾಣೇ
ಭೋಗೀಂದ್ರಭೋಗಮಣಿರಂಜಿತ ಪುಣ್ಯಮೂರ್ತೇ
ಯೋಗೀಶ ಶಾಶ್ವತ ಶರಣ್ಯಭವಾಬ್ಧಿಪೋತ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಂ [೧]
ಬ್ರಹ್ಮೇಂದ್ರರುದ್ರಮರುದರ್ಕಕಿರೀಟಕೋಟಿ -
ಸಂಘಟ್ಟಿತಾಂಘ್ರಿಕಮಲಾಮಲಕಾಂತಿಕಾಂತ
ಲಕ್ಷ್ಮೀಲಸತ್ಕುಚಸರೋರುಹರಾಜಹಂಸ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಂ [೨]
ಏಕೇನ ಚಕ್ರಮಪರೇಣ ಕರೇಣ ಶಂಖಮ್-
ಅನ್ಯೇನ ಸಿಂಧುತನಯಾಮವಲಂಬ್ಯ ತಿಷ್ಠನ್
ವಾಮೇತರೇಣ ವರದಾಭಯಪದ್ಮಚಿಹ್ನಂ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಂ [೩]
ಸಂಸಾರಘೋರಗಹನೇ ಚರತೋ ಮುರಾರೇ
ಮಾರೋಗ್ರಭೀಕರಮೃಗಪ್ರವರಾರ್ದಿತಸ್ಯ
ಆರ್ತಸ್ಯ ಮತ್ಸರನಿದಾಘನಿಪೀಡಿತಸ್ಯ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಂ [೪]
ಸಂಸಾರಭೀಕರಕರೀಂದ್ರಕರಾಭಿಘಾತ -
ನಿಷ್ಪೀಡ್ಯಮಾನವಪುಷಃ ಸಕಲಾರ್ತಿನಾಶ
ಪ್ರಾಣಪ್ರಯಾಣಭವಭೀತಿಸಮಾಕುಲಸ್ಯ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಂ [೫]
ಸಂಸಾರದಾವದಹನಾತುರಭೀಕರೋರು-
ಜ್ವಾಲಾವಲೀಭಿರತಿದಗ್ಧತನೂರುಹಸ್ಯ
ತ್ವತ್ಪಾದಪದ್ಮಸರಸೀಂ ಶರಣಾಗತಸ್ಯ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಂ [೬]
ಅಂಧಸ್ಯ ಮೇ ಹೃತವಿವೇಕಮಹಾಧನಸ್ಯ
ಚೋರೈರ್ಮಹಾ ಬಲಿಭಿರಿಂದ್ರಿಯನಾಮಧೇಯೈಃ
ಮೋಹಾಂಧಕೂಪಕುಹರೇ ವಿನಿಪಾತಿತಸ್ಯ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಂ [೭]
ಸಂಸಾರಕೂಪಮತಿಘೋರಮಗಾಧಮೂಲಂ
ಸಂಪ್ರಾಪ್ಯ ದುಃಖಶತಸರ್ಪಸಮಾಕುಲಸ್ಯ
ದೀನಸ್ಯ ದೇವ ಕೃಪಣಾಪದಮಾಗತಸ್ಯ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಂ [೮]
ಸಂಸಾರಸರ್ಪಘನವಕ್ತ್ರಭಯೋಗ್ರತೀವ್ರ-
ದಂಷ್ಟ್ರಾಕರಾಲವಿಷದಗ್ಧವಿನಷ್ಟಮೂರ್ತೇಃ
ನಾಗಾರಿವಾಹನ ಸುಧಾಬ್ಧಿನಿವಾಸ ಶೌರೇ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಂ [೯]
ಸಂಸಾರಸಾಗರವಿಶಾಲಕರಾಲಕಾಲ-
ನಕ್ರಗ್ರಹಗ್ರಸನನಿಗ್ರಹವಿಗ್ರಹಸ್ಯ
ವ್ಯಗ್ರಸ್ಯ ರಾಗರಸನೋರ್ಮಿನಿಪೀಡಿತಸ್ಯ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಂ [೧೦]
ಸಂಸಾರಜಾಲಪತಿತಸ್ಯ ಜಗನ್ನಿವಾಸ
ಸರ್ವೇಂದ್ರಿಯಾರ್ಥವಡಿಶಾಗ್ರಝಷೋಪಮಸ್ಯ
ಪ್ರೋತ್ಖಂಡಿತ ಪ್ರಚುರ ತಾಲುಕಮಸ್ತಕಸ್ಯ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಂ [೧೧]
ಸಂಸಾರವೃಕ್ಷಮಘಬೀಜಮನಂತಕರ್ಮ-
ಶಾಖಾಶತಂ ಕರಣಪತ್ರಮನಂಗಪುಷ್ಪಮ್
ಆರುಹ್ಯ ದುಃಖಫಲಿತಂ ಪತತೋ ದಯಾಲೋ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಂ [೧೨]
ಬದ್ಧ್ವಾ ಗಲೇ ಯಮಭಟಾ ಬಹುತರ್ಜಯಂತಃ
ಕರ್ಷಂತಿ ಯತ್ರ ಭವಪಾಶಶತೈರ್ಯುತಂ ಮಾಂ
ಏಕಾಕಿನಂ ಪರವಶಂ ಚಕಿತಂ ದಯಾಲೋ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಂ [೧೩]
ಲಕ್ಷ್ಮೀಪತೇ ಕಮಲನಾಭ ಸುರೇಶ ವಿಷ್ಣೋ
ವೈಕುಂಠ ಕೃಷ್ಣ ಮಧುಸೂದನ ಪುಷ್ಕರಾಕ್ಷ
ಬ್ರಹ್ಮಣ್ಯ ಕೇಶವ ಜನಾರ್ದನ ವಾಸುದೇವ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಂ [೧೪]
ಸಂಸಾರಸಾಗರನಿಮಜ್ಜನಮುಹ್ಯಮಾನಂ
ದೀನಂ ವಿಲೋಕಯ ವಿಭೋ ಕರುಣಾನಿಧೇ ಮಾಂ
ಪ್ರಹ್ಲಾದಖೇದಪರಿಹಾರಪರಾವತಾರ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಂ [೧೫]
ಪ್ರಹ್ಲಾದನಾರದಪರಾಶರಪುಂಡರೀಕ-
ವ್ಯಾಸಾದಿ ಭಾಗವತಪುಂಗವಹೃನ್ನಿವಾಸ
ಭಕ್ತಾನುರಕ್ತಪರಿಪಾಲನಪಾರಿಜಾತ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಂ [೧೬]
ಲಕ್ಷ್ಮೀನೃಸಿಂಹಚರಣಾಬ್ಜಮಧುವ್ರತೇನ
ಸ್ತೋತ್ರಂ ಕೃತಂ ಶುಭಕರಂ ಭುವಿ ಶಂಕರೇಣ
ಯೇ ತತ್ಪಠಂತಿ ಮನುಜಾ ಹರಿಭಕ್ತಿಯುಕ್ತಾಃ
ತೇ ಯಾಂತಿ ತತ್ಪದಸರೋಜಮಖಂಡರೂಪಂ [೧೭]
ತಾಗುಲಿ : Shankara, Lakshmi, Narasimha, Vishweshwar Dixit