ಮಹಾಲಕ್ಷ್ಮಿಯ ಮೇಲೊಂದು ಮಹಾ ಅಪವಾದ
*** ವಿಶ್ವೇಶ್ವರ ದೀಕ್ಷಿತ
ಸಂಗೀತ : ಆಕಾಶ ದೀಕ್ಷಿತ
ಮಹಾಲಕ್ಷ್ಮಿ ಆದಿ ದೇವತೆ; ಮಾತೆ. ಧನ-ಧಾನ್ಯ, ಸಂತಾನ, ಗೆಲುವು ಚೆಲುವು, ಧೈರ್ಯ-ಶೌರ್ಯ, ಸುಖ-ಸಂಪತ್ತುಗಳನ್ನು ಕೊಡುವವಳು. ಇವಳೇ ಸೌಭಾಗ್ಯದ ಲಕ್ಷ್ಮಿ. ಸಕ್ಕರೆ ತುಪ್ಪದ ಕಾಲುವೆ ಹರಿಸುವವಳು ಕನಕ ವೃಷ್ಟಿಯನ್ನು ಕರೆಯುವವಳು, ಅಂತ ದಾಸರೇ ಹೇಳಿದ್ದಾರೆ.
ಆದ್ದರಿಂದ ಎಲ್ಲರೂ ಇವಳನ್ನು ಪೂಜಿಸುವುದು ಸಹಜ ಅಷ್ಟ ಐಶ್ವರ್ಯ ಕ್ಕಾಗಿ ಬೇಡಿಕೊಳ್ಳುವುದು ಸಾಮಾನ್ಯ. ಲಕ್ಷ್ಮಿ ಅಂದರೆ ಎಲ್ಲರೂ ಅರ್ಥೈಸುವುದು ದುಡ್ಡು ಅಂತಲೇ. ದುಡ್ಡಿದ್ರೆ ಎಲ್ಲಾ ಐಶ್ವರ್ಯಗಳನ್ನು ಗಳಿಸಬಹುದು! ನೇಮ್ ಫೇಮ್ ಸಕ್ಸಸ್ ಬಿರುದು ಬಾವಲಿ ತಾವಾಗಿಯೇ ಒಲಿದು ಬರುತ್ತವೆ! ಅದಕ್ಕೆ ಅಲ್ಲವೇ ದುಡ್ಡೇ ದೊಡ್ಡಪ್ಪ ಅನ್ನುವುದು?
ಹೀಗಿದ್ದಾಗ, ಏನಪ್ಪಾ ಇವಳ ಮೇಲೆ ಮಹಾ ಅಪವಾದ? ಲಕ್ಷ್ಮಿಯನ್ನು ದೂರುವ ಧೈರ್ಯ ಯಾರಿಗಿದೆ? ಯಾರು ಈ ದುರ್ಮತಿ?
ಲಕ್ಷ್ಮಿ ಚಂಚಲೆ. ಇಂದಿನ ಸಂಪತ್ತು ನಾಳೆ ಇರಲಿಕ್ಕಿಲ್ಲ; ಇಂದಿನ ಶಕ್ತಿ ನಾಳೆ ಕುಂದುತ್ತದೆ; ಸೌಂದರ್ಯ ಮಾಯವಾಗುತ್ತದೆ. stock ಮಾರ್ಕೆಟ್ಟು ಎದ್ದರೆ ಈತ ಕೋಟಿ ಡಾಲರುಗಳ ಅಧಿಕಾರಿ; ಮಾರ್ಕೆಟ್ಟು ಬಿದ್ದರೆ? ಬೀದಿಯ ಭಿಕಾರಿ. ಇಂದಿನ ಸುಖ-ಶೋಕಿ ನಾಳೆ ಶೋಕ ಆಗಬಹುದು.
ನೀವೆಷ್ಟು ಪ್ರಯತ್ನಪಟ್ಟರೂ ಲಕ್ಷ್ಮಿ ಒಲೆಯಲಿಕ್ಕಿಲ್ಲ. ಇನ್ನು ಕೆಲವರು ಪ್ರಯತ್ನಪಡದೆ ಸಿರಿವಂತರಾಗಬಹುದು. ಅದು ಅದೃಷ್ಟ just being lucky. ಅದಕ್ಕೇ ಕನ್ನಡಿಗರೆಲ್ಲ ಲಕುಮಿ ಲಕುಮಿ luck to me luck to me ಅಂತ ಓಡಾಡುತ್ತಾ ಇರೋದು.
ಲಕ್ಷ್ಮಿ ಚಂಚಲೆ ಅದೃಷ್ಟ ಅನ್ನುವ ಸಾಮಾನ್ಯ ತಿಳುವಳಿಕೆಯ ಜೊತೆಗೆ, ದಡ್ಡರು ಹೈಸ್ಕೂಲು ಡ್ರಾಪ್ ಔಟ್‌ಗಳು ಬಿಲಿಯನೇರ್ ಆಗ್ತಾರೆ; ಆದರೆ ಬ್ರಿಲಿಯಂಟ್ ವಿದ್ಯಾವಂತರು ಇವರ ಕೈಕೆಳಗೆ ಕೆಲಸ ಮಾಡ್ತಾರೆ ಅನ್ನುವುದೂ ಇದೆ.
ಇಂಥ ಸಾಮಾನ್ಯ ಅನುಭವಗಳು ಒಂದು ತರಹದ ಕ್ಲೀಷೆ ಅನ್ನಬಹುದು. ಇವುಗಳನ್ನು ಉಪಯೋಗಿಸಿಕೊಳ್ಳುವಲ್ಲಿ ಕವಿಗಳು ಬಹಳ ಚತುರರು. ಈಗ ಕೇಳಿ: ಪಂಡಿತನೊಬ್ಬ - ಒಬ್ಬ ಸಾಹಿತಿ-ಕಲಾವಿದ ಅಂದುಕೊಳ್ಳಿ - ಲಕ್ಷ್ಮಿಯ ಮೇಲೆ ಒಂದು ದೊಡ್ಡ ಆಪಾದನೆಯನ್ನು ಹೊರಿಸಿಯೇ ಬಿಟ್ಟ.
ಹೇಗಿದ್ದರೂ ಬಡವ. ಮನೆಯಲ್ಲಿ ಹಸಿವಿನ ಭೂತ ಕುಣಿಯುತ್ತಿದೆ . ತನ್ನಲ್ಲಿರುವ ಪಾಂಡಿತ್ಯವನ್ನು ಮಕ್ಕಳಿಗೆ ತಿನ್ನಲಿಕ್ಕೆ ಕೊಡಲು ಆಗುವುದಿಲ್ಲವಲ್ಲ! ಇದಕ್ಕಿಂತ ಹೆಚ್ಚು ದರಿದ್ರ ಆಗಲು ಸಾಧ್ಯವಿಲ್ಲ. what do I have to lose ಅನ್ನುವ ಭಂಡ ಧೈರ್ಯದಿಂದ ಲಕ್ಷ್ಮಿಯನ್ನು ನೇರವಾಗಿ ಕೇಳಿಯೂ ಬಿಟ್ಟ!
ಪದ್ಮೇ, ಮೂಢಜನೇ ದದಾಸಿ ವಿಭವಂ
ವಿದ್ವತ್ಸು ಕಿಮ್ ಮತ್ಸರಃ ?
ಎಲೈ ಕಮಲೆ, ಮೂರ್ಖರಿಗೆ ದಡ್ಡರಿಗೆ ಎಷ್ಟೊಂದು ಸಂಪತ್ತನ್ನು ಕೊಡುತ್ತೀಯಲ್ಲ, ಪಂಡಿತರನ್ನು ಯಾಕೆ ದ್ವೇಷಿಸುತ್ತೀಯಾ? ಸರಸ್ವತಿಗೂ ನಿನಗೂ ಆಗುವುದಿಲ್ಲ ಅಂತ ಸರಸ್ವತಿ ಪುತ್ರರ ಮೇಲೆ ಯಾಕೆ ನಿನಗೆ ಮತ್ಸರ?
ಅದಕ್ಕೆ ಅವಳು ಹೇಳುತ್ತಾಳೆ:
ನಾಹಂ ಮತ್ಸರಿಣೀ ನ ಚಾಪಿ ಚಪಲಾ
ನೈವಾಸ್ತಿ ಮೂರ್ಖೇ ರತಿಃ
ನೋಡಪ್ಪ, ನಾನು ದ್ವೇಷ ಸಾಧಿಸುವವಳಲ್ಲ. ಮೂರ್ಖರನ್ನು ಪ್ರೀತಿಸುವವಳೂ ಅಲ್ಲ.
ಮೂರ್ಖೇಭ್ಯೋ ದ್ರವಿಣಂ ದದಾಮಿ ನಿತರಾಂ
ತತ್ಕಾರಣಂ ಶ್ರೂಯತಾಂ
ಆದರೆ ದಡ್ಡರಿಗೆ ಹೇರಳವಾಗಿ ಸಂಪತ್ತನ್ನು ದಯಪಾಲಿಸುತ್ತೇನೆ. ಅದಕ್ಕೆ ಕಾರಣ ಕೇಳು. Once for all ಹೇಳಿ ಬಿಡುತ್ತೇನೆ.
ವಿದ್ವಾನ್ ಸರ್ವಜನೇಷು ಪೂಜಿತತನುಃ
ಮೂರ್ಖಸ್ಯ ನಾನ್ಯಾ ಗತಿಃ
ವಿದ್ವಾಂಸನಾದವನು ಎಲ್ಲೆಲ್ಲೂ ಎಲ್ಲರಿಂದಲೂ ಮರ್ಯಾದೆಯನ್ನು ಗಳಿಸುತ್ತಾನೆ. ಆದರೆ ದಡ್ಡನಿಗೆ ಬೇರೆ ಗತಿಯೇ ಇಲ್ಲವಲ್ಲ!
ಪದ್ಮೇ, ಮೂಢಜನೇ ದದಾಸಿ ವಿಭವಂ
ವಿದ್ವತ್ಸು ಕಿಮ್ ಮತ್ಸರಃ ?
ನಾಹಂ ಮತ್ಸರಿಣೀ ನ ಚಾಪಿ ಚಪಲಾ
ನೈವಾಸ್ತಿ ಮೂರ್ಖೇ ರತಿಃ
ಮೂರ್ಖೇಭ್ಯೋ ದ್ರವಿಣಂ ದದಾಮಿ ನಿತರಾಂ
ತತ್ಕಾರಣಂ ಶ್ರೂಯತಾಂ
ವಿದ್ವಾನ್ ಸರ್ವಜನೇಷು ಪೂಜಿತತನುಃ
ಮೂರ್ಖಸ್ಯ ನಾನ್ಯಾ ಗತಿಃ
ಅಪ್ಪಯ್ಯ ದೀಕ್ಷಿತರ ಕುವಲಯಾನಂದ ಗ್ರಂಥದಲ್ಲಿನ ಈ ಪದ್ಯದ ಕನ್ನಡ ಅನುವಾದ:
ಪೆದ್ದರಿಗೆ ಬಹುಧನವನೀಯುತ್ತ, ಕಮಲೆ,
ಕಲಿತವರ ಹೊಟ್ಟೆ ಉರಿಸುತ್-ತಿರುವೆಯಲ್ಲ!
ಹೊಟ್ಟೆ ಉರಿಸುವಳಲ್ಲ, ಚಂಚಲೆಯು ಅಲ್ಲ,
ಪೆದ್ದರಲಿ ನಾ ಒಲವು ತೋರುವಳು ಅಲ್ಲ.
ಪೆದ್ದರಿಗೆ ನೀಡುವೆನು ರಾಶಿ ಧನವನ್ನು
ಕಾರಣವು ಇಷ್ಟೆ, ನೀ ಕಿವಿಗೊಟ್ಟು ಕೇಳು:
ಕಲಿತವಗೆ ಗುಣ ನೂರು, ಮನ್ನಿತನು ಜಗದಿ;
ಪೆದ್ದನಿಗೆ ಹಣ ಒಂದೆ, ಗತಿ ಬೇರೆ ಇಲ್ಲ!
ವರ ಮಹಾ ಲಕ್ಷ್ಮಿಯ ಕೃಪಾ ಕಟಾಕ್ಷ ಎಲ್ಲರ ಮೇಲೂ ಇರಲಿ ಅಂತ ಬೇಡುವ,
ನಿಮ್ಮವನೇ ಅದ
ವಿಶ್ವೇಶ್ವರ ದೀಕ್ಷಿತ
ಸಂಗೀತ : ಆಕಾಶ ದೀಕ್ಷಿತ
ಕನ್ನಡ ಕಲಿ, ಬಿತ್ತರಿಕೆ ಅಗಸ್ಟ ೧, ೨೦೨೦
ತಾಗುಲಿ : Maha lakshmi, sanskrit poetry, appayya dikshita
We should view Lakshmi as abundance, not just material wealth. Just a seed can grow into a big forest. Many times, injustice in society is justified by divine stories to keep people pliant and quiet.
We should view Lakshmi as…