ಕಲಕಿದ ನೀರು

ಕಲಕಿದ ನೀರು

ವಿಶ್ವೇಶ್ವರ ದೀಕ್ಷಿತ

೧೯೮೬ರಲ್ಲಿ ಬರೆದ ಈ ಕವನ ಅಮೆರಿಕನ್ನಡ ಸಂಚಿಕೆ ೧೫ರಲ್ಲಿ ಪ್ರಕಟವಾಗಿತ್ತು.

ಇಂದಿನ ಕೊರೋನ ಮಾರಿ, ಹಣದ ಉಬ್ಬರ ಅಬ್ಬರ, ಹಸಿವೆಯ ಕೊರೆತ, ಮಾರುಕಟ್ಟೆಯ ಕುಸಿತ, ವಾಣಿಜ್ಯ ವಸಾಹತುಗಳು, ಕಲಹ ಯುದ್ಧಗಳು ಮತ್ತು (ಬದುಕಿ ಉಳಿದರೆ) ಅವುಗಳ ಭೀತಿಯಲ್ಲಿ ಬಾಳು, ಈ ಕವನವನ್ನು ನೆನಪಿಗೆ ತಂದವು, ಮತ್ತೆ. ಕಾಲ ಕಳೆದರೂ, ಮುಂದುವರೆದಂತೆಯೂ, ಪರಿಸ್ಥಿತಿ ಹೊಸತು ಆದರೂ ಭಯ ಭೀತಿಗಳೇ ಮನುಷ್ಯನ ಭವ ಭೂತಿ, ಇರವಿನ ಅರಿವು ಎನ್ನುವ ಸಂಶಯ ಬಾರದೆ ಇರದು.


ಸುಡುವ ಸೂರ್ಯನು ಪಡುವಣದಿ ರಕ್ತ ಕಾರುತಲಿದ್ದ.
ದಾಸವಾಳದ ಕಂಟಿ ಹುಬ್ಬು ಹಾರಿಸುತಲಿತ್ತು.
ಕೊಳದ ನೀರು ಮಾತ್ರ ನಿರ್ಲಿಪ್ತವಾಗಿತ್ತು.
ದಡದ ಬಂಡೆಗಲ್ಲಿನ ಮೇಲೆ
ಏಕಾಂಗಿಯಾಗಿ
ರುದ್ರ ಮೌನದಲಿ ನಾನಿದ್ದೆ.

ವಿಮಾನದ ಶಬ್ದ ದೂರದಿಂದ ಕೇಳಿ ಬರುತ್ತಿತ್ತು.
ಅದರಲ್ಲೆ,
ಹಾಳುಬಿದ್ದ ಪಟ್ಟಣದ ಬೀದಿ ನಾಯಿಗಳ ಕೂಗು,
ಕತ್ತಲೆಯ ಚಳಿಭಾವ,
ಮಧ್ಯಪ್ರಾಚ್ಯದ ನೆಲಬಿರಿವ ಆಘಾತದ ಅಲೆಗಳು,
ಸತ್ತ ವಿಯೆಟ್ ತಾಯಂದಿರ ಬಸಿರಿನುಸುರು,
ದಿಕ್ಕೇಡಿಗಳ ತಾಯ್ನೆಲದ ನೆನವಿನಳು,
ಪೆಣತಿನಿಗಳ ಚೀತ್ಕಾರ,
ಅಫಘನರ ಆಕ್ರೋಶ,
ಹೈಟಿ ಫಿಲಿಪಿನರ ಹಸಿ ಜಯಕಾರ
ಎಲ್ಲವನ್ನೂ ಬಗೆಯುತ್ತಲಿದ್ದೆ.

ಹಾಳು ವಿಮಾನಗಳು ಹಾರುತ್ತಲೇ ಉರುಳಿ ಬೀಳುತ್ತವೆ.
ಶಾಂತಿಯ ಕನಸಿನಾಸೆಗೆ ಕತ್ತಿಯಾಟ, ಶಸ್ತ್ರಗಳ ಮಾರಾಟ.
ಯಾರದೋ ಔದಾರ್ಯದಲಿ ಬದುಕಿರುವ ರಾಷ್ಟ್ರಗಳಿಗೆ
ದುರಭಿಮಾನದ ರಕ್ತರುಚಿ.
ಸೌಭದ್ರ್ಯ ಭಾವದ ಬೇರಿನಲಿ ಹುಳಗಳಾಟ.

ದಂಡನೀತಿಯ ಪಡುವ ಮೂಡಣ ಪುಂಡರು
ಬೃಹತ್ ಶಕ್ತಿಗಳೆಂಬ ಒಣ ಭಾವದಲಿ
ಮೆಯ್ಯ ಸೊಕ್ಕಿಗೆ ಮನವ ಬಲಿ ಕೊಡುವ ಧೀರರು.
ಸಂಕೀರ್ಣ ಮನಸ್ಸಿನ ಪ್ರೇರಣೆ ಪ್ರವೃತ್ತಿಗಳು
ವಿದೇಶ ನೀತಿಯ ರೂಪಕಗಳು.
ಹುಂಜಗಳ ಕಾಲಿಗೆ ಕತ್ತಿ,
ಮೂರನೆಯ ಕೈಗೆ ದೊಣ್ಣೆ,
ಕೋಳಿಯಾಟದ ಕೊನೆಗೆ ರಕ್ತದೋಕುಳಿಯಾಟ,
ಮನೋಭೂತಕ್ಕೆ ಮೂರನೆಯ ತಲೆ ಬಲಿ.

ಮೇಲಿನಿಂದ ಹುಡುಗಿಯೊಂದು ಕಲ್ಲೆಸೆದಳೆಂದು ಕಾಣುತ್ತದೆ -
ನೀರು ಸಿಡಿಯಿತು;
ಕಲಕಿದ ನೀರಿನಲ್ಲಿ ನನ್ನ ಮುಖ ವಿಕಾರವಾಗಿ ಕಾಣುತ್ತಿತ್ತು.

Amerikannada Page 53