ಕನ್ನಡ ಪದ್ಯ ಪಾಠ
ಕ್ಲಿಕ್ ಕ್ಲಿಕ್ ಗಣಕಪ್ಪ
ಇನ್ನೇನು ಬೇಸಿಗೆ ರಜೆ ಮುಗಿಯುತ್ತ ಬಂತು. ಶಾಲೆಯ ಹೊಸ ವರ್ಷ ಆರಂಭ. ಎಲ್ಲರಿಗೂ ಹಿಗ್ಗೋ ಹಿಗ್ಗು! ಮತ್ತೆ ಮೆಚ್ಚಿನ ಟೀಚರರ ಪಾಠ, ಹಳೆ ಗೆಳೆಯರ ಜೊತೆ ಆಟ; ಹೊಸ ಗೆಳೆಯರು, ಹೊಸ ಪುಸ್ತಕಗಳು, ಹೊಸ ಬಟ್ಟೆಗಳು ಎಲ್ಲಕ್ಕೂ ಹೊಸ ಹುರುಪು. ಈಗಂತೂ, ಹೊಸ ತರಗತಿಗೆ, ಹೊಸ ಗಣಕವನ್ನು ಕೊಳ್ಳುವುದು ಸಾಮಾನ್ಯ ಆಗಿದೆ. ಗಣಕ ಅಂದರೆ ಕಂಪ್ಯೂಟರು, ಲ್ಯಾಪ್ ಟಾಪು, ಅಥವ ಟ್ಯಾಬ್ಲೆಟ್ಟು; ಎಷ್ಟೋ ಅಪ್ ಗಳನ್ನು ಅಳವಡಿಸಿಕೊಳ್ಳಬಹುದಾದ ಮೊಬೈಲ್ ಫೋನು ಕೂಡ ಆಗಬಹುದು. ಹೀಗೆ ಒಂದು ಗಣಕವನ್ನು ನಮ್ಮ ಪುಟ್ಟುವಿಗೆ ಅಪ್ಪ ಅಮ್ಮ ಕೊಡಿಸಿದಾಗ ಏನಾಯ್ತು? ಅವನು ಕಲಿತ ಪಾಠ ಏನು?
ಕ್ಲಿಕ್ ಕ್ಲಿಕ್ ಗಣಕಪ್ಪ
ಗಣಕಪ್ಪ ಬಂದ!
ಬಿಟ್ಟೂ ಬೈಟೂ ತಿಂದ!
ಗಣಕಪ್ಪ ಬಂದ!
ಬಿಟ್ಟೂ ಬೈಟೂ ತಿಂದ!
ಹಿಗ್ಗಿದ ಪುಟ್ಟು ಹೀರೇ ಕಾಯಿ.
ಕುಳಿತನು ಮುಂದೆ ಅಗಲಿಸಿ ಬಾಯಿ.
ಮೋಡೆಂ ಒತ್ತಿ, ರೌಟರ್ ಸುತ್ತಿ,
ಕೆಯ್ಮಣೆ ಕುಟ್ಟಿ, ಇಲಿ ಬೆನ್ಹತ್ತಿ,
ಐ-ಟ್ಯೂನ್ ಹಚ್ಚಿ, ಮೋಝಿಲ ಬಿಚ್ಚಿ
ಹತ್ತಿದ ಪುಟ್ಟು ಇಂಟರ ನೆಟ್ಟು.
ಕ್ಲಿಕ್ ಕ್ಲಿಕ್! ಕ್ಲಿಕ್ ಕ್ಲಿಕ್! [೧]
ಗಣಕಪ್ಪ ಬಂದ!
ಬಿಟ್ಟೂ ಬೈಟೂ ತಿಂದ!
ಕ್ಲಿಕ್ ಕ್ಲಿಕ್! ಕ್ಲಿಕ್ ಕ್ಲಿಕ್!
ಅಂತರ್ ಜಾಲ ಮಾಯಾ ಲೋಕ,
ಕ್ವಾರ್ಕು ಪಾರ್ಕು ಸೊನ್ನೆಯ ತೂಕ.
ಸಿಕ್ಕಿತು ಮೋಜು ದಕ್ಕಿತು ಮಾಹಿತಿ.
ಕಾಣಲೆ ಇಲ್ಲ ಅದಕ್ಕೆ ಇತಿಮಿತಿ.
ಆಟಗಳೆಷ್ಟು, ಅದೊ, ಅಬ್ಬಬ್ಬ!
ಪುಟ್ಟುವಿಗಾಯ್ತು ಮುಗಿಯದ ಹಬ್ಬ.
ಆಡಲು ಯಾರೂ ಗೆಳೆಯರು ಬೇಡ,
ಓದಲು ಒಂದೂ ಪುಸ್ತಕ ಬೇಡ.
ಊಟಕೆ ಇಲ್ಲ ಎನಿತೂ ಹೊತ್ತು
ಶಾಲೆಗೆ ಬಂತು ತೀರದ ಕುತ್ತು.
ಕ್ಲಿಕ್ ಕ್ಲಿಕ್! ಕ್ಲಿಕ್ ಕ್ಲಿಕ್! [೨]
ಗಣಕಪ್ಪ ಬಂದ!
ಬಿಟ್ಟೂ ಬೈಟೂ ತಿಂದ!
ಕ್ಲಿಕ್ ಕ್ಲಿಕ್! ಕ್ಲಿಕ್ ಕ್ಲಿಕ್!
ಜೊಂಡಿಗ ಜಿರಲೆ, ಜಿಗಣೇ ಜಂತು,
ವೈರಸ್ ವೊರ್ಮು ಹಿಂಡೇ ಬಂತು.
ತಲೆಯೊಳು ಹೊಕ್ಕು ಹುಪ್ಪಡಿ ಹುಳ,
ಡಿಸ್ಕಿಗೆ ಇಲ್ಲ ತಕ್ಕಡಿ ತಾಳ.
ಮೆಮೊರಿಯ ಮರೆತ,ಮತಿಯಲಿ ಕೊರೆತ,
ಪ್ರೊಸೆಸರ ಮಿಡಿತ, ಮನದಲಿ ತುಡಿತ.
ನರಳಲು ಸಾಕು ಬಂದಿತು ಬೇನೆ.
ವೈದ್ಯರು ಬೇಕು ಬೇಗನೆ ತಾನೆ?
ಯಾಹೂ ಹುಡುಕು, ಬಾಯ್ದೂ ಬೆದಕು;
ಗೂಗಲ್ ತಡಕು, ಕೇರೋ ಕೆದಕು.
ಕ್ಲಿಕ್ ಕ್ಲಿಕ್! ಕ್ಲಿಕ್ ಕ್ಲಿಕ್! [೩]
ಗಣಕಪ್ಪ ಬಂದ!
ಬಿಟ್ಟೂ ಬೈಟೂ ತಿಂದ!
ಕ್ಲಿಕ್ ಕ್ಲಿಕ್! ಕ್ಲಿಕ್ ಕ್ಲಿಕ್!
"ಡಾಕ್ಟರು" ಎಂದು ಕೀಲಿಸೆ, ನೋಡಿ,
ಮೂಡಿತು ಒಂದು ಹಾವಿನ ಜೋಡಿ!
ಹಾರಿತು ಹೆದರಿ ಚಿಲಿಪಿಲಿ ಇಲಿ,
ಜಾರಿತು ಗಣಕ ಗುಡುಗುಡು ಉರುಳಿ!
ಹೊಟ್ಟೆಯು ಒಡೆದು ಹೂರಣ ಬಿತ್ತು -
ಊಡಿದ ಕಬಳ, ಬಿಟ್ಟೂ ಬೈಟು
ಊಡುವ ಆಸೆ ಯಾರಿಗೆ ಇಲ್ಲ?
ತುರುಕಿದ ಹೆಕ್ಕಿ ಒಳಗಡೆ ಎಲ್ಲ.
ಸೊಂಟಕೆ ಬಿಗಿದ ಹಾವಿನ ಜೋಡಿ
ಕಾಯಲು ಅದುವೆ ಬೆಂಕಿಯ ಗೋಡೆ!
ಕ್ಲಿಕ್ ಕ್ಲಿಕ್! ಕ್ಲಿಕ್ ಕ್ಲಿಕ್! [೪]
ಗಣಕಪ್ಪ ಬಂದ!
ಬಿಟ್ಟೂ ಬೈಟೂ ತಿಂದ!
ಕ್ಲಿಕ್ ಕ್ಲಿಕ್! ಕ್ಲಿಕ್ ಕ್ಲಿಕ್!
---------
ನಿಮ್ಮವನೆ ಆದ,
ವಿಶ್ವೇಶ್ವರ ದೀಕ್ಷಿತ
ಕನ್ನಡ ಕಲಿ, ಬಿತ್ತರಿಕೆ ಸಪ್ಟಂಬರ್ ೧೫, ೨೦೨೨
ಕನ್ನಡ ಪದ್ಯ ಪಾಠ, ಕ್ಲಿಕ್ ಕ್ಲಿಕ್ ಗಣಕಪ್ಪ
ಸಂಪರ್ಕ: [email protected]
ಅಭ್ಯಾಸಗಳು
ಈ ಪದಗಳ ಅರ್ಥ ಅರಿತು ವಾಕ್ಯಗಳನ್ನು ರಚಿಸಿರಿ:
ಮೋಡೆಂ, ರೌಟರ್, ಕೆಯ್ಮಣೆ, ಇಲಿ, ಮೆಮೊರಿ, ಪ್ರೊಸೆಸರು, ಡಿಸ್ಕು, ಬಿಟ್ಟು, ಬೈಟು, ಇಂಟರನೆಟ್ಟು, ಕ್ವಾರ್ಕು, ವೈರಸ್ಸು, ತಡಕು, ಕೆದಕು, ಬೆದಕು, ಬೆಂಕಿಯ ಗೋಡೆ
ಹೊಂದಿಸಿ ಬರೆಯಿರಿ:
(ಅ) ಸಿಕ್ಕಿತು (ಕ) ಹಾವಿನ ಜೋಡಿ
(ಆ) ದಕ್ಕಿತು (ಗ) ಹುಡುಕು
(ಇ) ಯಾಹೂ (ಚ) ಹಾವಿನ ಜೋಡಿ
(ಈ) ಆಡಲು ಯಾರೂ (ಜ) ಹೂರಣ ಬಿತ್ತು
(ಉ) ಮೂಡಿತು ಒಂದು (ಟ) ಮಾಹಿತಿ
(ಊ) ಹೊಟ್ಟೆಯು ಒಡೆದು (ಡ) ಮೋಜು
(ಎ) ಸೊಂಟಕೆ ಬಿಗಿದ (ತ) ಗೆಳೆಯರು ಬೇಡ
ಪ್ರಶ್ನೆಗಳು:
- ಗಣಕಪ್ಪನ ಅಂಗಾಂಗಗಳನ್ನು ಹೆಸರಿಸಿ
- ಇಲ್ಲಿ ಹೇಳಿದ ಕೆಲವು ತಂತ್ರಾಂಶಗಳು ಯಾವವು?
- ಇಲ್ಲಿ ಹೆಸರಿಸಿದ ಹುಡುಕು ತಾಣಗಳು ಯಾವವು?
- ಗಣಕಪ್ಪ ಏನು ತಿನ್ನುತ್ತಾನೆ?
- ಪುಟ್ಟು ಏಕೆ ಹಿಗ್ಗಿದ?
- ಅಂತರ್ಜಾಲದಲ್ಲಿ ಪುಟ್ಟು ಏನು ಮಾಡಿದ?
- ಗಣಕಕ್ಕೆ ವೈರಸ್ಸು ಹೇಗೆ ತಗುಲಿತು?
- ಗಣಕದ ಮೇಲೆ ವೈರಸ್ಸಿನ ಪರಿಣಾಮ ಏನು?
- ವೈರಸ್ಸು ಮತ್ತೆ ಬರದಂತೆ ತಡೆಯಲು ಏನು ಮಾಡಲಾಯಿತು?
ತಾಗುಲಿ : ganaka, computer, mouse, ganesha, modem, router, yahoo, baidu, disk, virus, quark, memory