ಪವಿತ್ರ❤️ಪ್ರೇಮ ಕವನ ಮತ್ತು ಹಿಂದಿನ ಕತೆ

ಏನು ಚತುರರೊ ಸಂಸ್ಕೃತ ಕವಿಗಳು!

ದಾದದೋ ದುದ್ದ ದುದ್ದಾದೀ ದಾದದೋ ದೂದದೀ ದದೋಃ |
ದುದ್ದಾದಂ ದದದೇ ದುದ್ದೇ ದಾದಾ ದದ ದದೋಽ ದದಃ ||

ಏನಿದು! ಗದ್ಗದ ಕಂಠದ ಅಸಂಬದ್ಧ ಪ್ರಲಾಪ?! ಖಂಡಿತ ಅಲ್ಲ.

ಇದು ೭ನೇ ಶತಮಾನದ ಮಾಘ ಕವಿಯ ಶಿಶುಪಾಲ ವಧೆಯಲ್ಲಿ ಬರುವ ದ-ಕಾರ ಮಾತ್ರ ಉಳ್ಳ ಈ ನುಡಿ ಸಂಸ್ಕೃತ ಕವಿಗಳ ಚಾತುರ್ಯಕ್ಕೆ ಒಂದು ಉದಾಹರಣೆ.

ಇದರ ಅರ್ಥ:
ವರಗಳನ್ನು ಕೊಡುವ, ದುರ್ಮತಿಗಳನ್ನು ಶಿಕ್ಷಿಸುವ, ಪಾವನಗೊಳಿಸುವ, ಪೀಡಕ ದುರುಳರನ್ನು ಸಂಹರಿಸುವ (ಶ್ರೀ ಕೃಷ್ಣನು) ತನ್ನ ಆಯುಧವನ್ನು ಶತ್ರುವಿನ ಮೇಲೆ ಪ್ರಯೋಗಿಸಲು ಎತ್ತಿದನು

ಸುಂದರ ಹೃದಯಂಗಮ ಕಾವ್ಯಗಳನ್ನು ಸೃಷ್ಟಿಸುವಲ್ಲಿ ಸಂಸ್ಕೃತ ಕವಿಗಳು ಎಷ್ಟು ನಿಷ್ಣಾತರೋ ಅವರು, ಈ ತರಹ, ಪದ್ಯ ಪದ ಅಕ್ಷರಗಳೊಂದಿಗೆ ಚೆಲ್ಲಾಟ ಆಡುವಲ್ಲಿಯೂ ಅಷ್ಟೇ ಚತುರರು. ಒಂದೇ ವ್ಯಂಜನ ಉಪಯೋಗಿಸಿದ ಶ್ಲೋಕ ಇರಬಹುದು. ಎಡದಿಂದ ಬಲಕ್ಕೆ ಅಥವಾ ಬಲದಿಂದ ಎಡಕ್ಕೆ ಓದಿದರೂ ಒಂದೇ (palindrome ಅಥವ ಗತಪ್ರತ್ಯಾಗತ) ಇರಬಹುದು. ಅಥವಾ ಹಿಂದು ಮುಂದು ಓದಿದರೆ ಬೇರೆ ಬೇರೆ ಅರ್ಥ ನೀಡುವ ಪದ್ಯ ಇರಬಹುದು. ಒಂದೇ ಶ್ಲೋಕದಲ್ಲಿ ಇಡೀ ಕತೆಯನ್ನೇ ಹೇಳುವ ಪದ್ಯ (ಕಾವ್ಯ) ಇರಬಹದು. ನಾನು ಹೇಳುತ್ತಾ ಇರುವುದು ಏಕಶ್ಲೋಕೀ ರಾಮಾಯಣ ಅಲ್ಲ. ಇಂತಹ ಚಮತ್ಕಾರಕ ಪದ್ಯ ರಚನೆಯ ಭವ್ಯ ಪರಂಪರೆಯೇ ಸಂಸ್ಕೃತದಲ್ಲಿ ಇದೆ. ಏನು ಚತುರರೋ ಸಂಸ್ಕೃತ ಕವಿಗಳು!

ಚಮತ್ಕಾವ್ಯ ಪರಂಪರೆ

ಇಂಥ "ಚಮತ್ಕಾವ್ಯ" ಪರಂಪರೆ ಇನ್ನೂ ಮುಂದುವರೆಯುತ್ತಲೆ ಇದೆ. ಉದಾಹರಣೆ. ಇತ್ತೀಚಿನ, ಅಂದರೆ ೧೯ನೆ ಶತಮಾನದ, ಕಾಂಚಿ ಪುರದ ಕೃಷ್ಣಮೂರ್ತಿ ಅನ್ನುವ ಸಂಸ್ಕ್ರತ ಮೇಧಾವಿ ರಚಿಸಿದ ಅದ್ಭುತ ಶ್ಲೋಕ

ನೇತಾದೇವಾಲೀನಾಮಾಶಾ ಧಾನಾಧೀನಾನೇಕಾಲೋಕೀ
ಮಾಸ್ಯಾನಂಭಾಖ್ಯಾಯೋಗೀಶಂ ಪಾಯಾದೇತಂ ರಾಮೇರಾಜಾ

ಇದು ಒಂದು ಕಾವ್ಯ ಅನ್ನಬಹುದು. ಅದು ಹೇಗೆ? ಒಂದು ಶ್ಲೋಕ ಹೇಗೆ ಕಾವ್ಯವಾಗಬಲ್ಲುದು?

ಕಂಕಣ ಬಂಧ

ಈ ರಚನೆಗೆ ಸಂಸ್ಕೃತದಲ್ಲಿ ಕಂಕಣ ಬಂಧ ಎಂದು ಹೆಸರು. ನಿಮಗೆ ಗೊತ್ತಿರುವಂತೆ, ಒಂದು ಶ್ಲೋಕದಲ್ಲಿ ಎರಡು ಸಾಲುಗಳು. ಒಂದೊಂದು ಸಾಲಿನಲ್ಲಿಯೂ ೧೬ ಅಕ್ಷರಗಳು. ಒಟ್ಟು ೩೨ ಅಕ್ಷರಗಳು. ಈ ಶ್ಲೋಕವನ್ನು ಒಂದು ಬಳೆ (ಕಂಕಣ) ಆಕಾರದಲ್ಲಿ ಹೊಂದಿಸೋಣ. ಅಂದರೆ ವರ್ತುಲದ ಸುತ್ತ ಪ್ರದಕ್ಷಿಣವಾಗಿ (clockwise) ೩೨ ಅಕ್ಷರಗಳನ್ನು ಬರೆಯೋಣ.

ಈಗ ಎರಡನೇ ಶ್ಲೋಕವನ್ನು ರಚಿಸಲು, ೨ನೆ ಅಕ್ಷರದಿಂದ ಪ್ರಾರಂಭಿಸಿ, ೩, ೪, ... ೩೨, ನಂತರ ೧ನೆ ಅಕ್ಷರವನ್ನು ಕ್ರಮವಾಗಿ ಬರೆದರೆ ಆಯಿತು. ೩ನೆ ಅಕ್ಷರದಿಂದ ಪ್ರಾರಂಭಿಸಿ, ೪, ೫, ... ೩೨, ೧, ೨ ಅಕ್ಷರ ಜೋಡಿಸಿದರೆ ೩ನೆ ಶ್ಲೋಕ. ಹೀಗೆ ೩೨ ಶ್ಲೋಕಗಳನ್ನು ಹೊರಡಿಸಬಹುದು.

ಅಷ್ಟೇ ಅಲ್ಲ. ಇದೇ ರೀತಿ ಅಪ್ರದಕ್ಷಿಣವಾಗಿ ತಿರುಗುತ್ತ, ಅಂದರೆ ೩೨, ೩೧, ೩೦, ಕೊನೆಗೆ ೧ನೇ ಅಕ್ಷರ ಬರೆಯುವುದು. ಹೀಗೆ ಮತ್ತೆ ೩೨ ಶ್ಲೋಕಗಳನ್ನು ರಚಿಸಿದರೆ ಒಟ್ಟು ೬೪ ಶ್ಲೋಕಗಳು ಸಿದ್ಧ!

ಇವುಗಳಲ್ಲಿ ಯಾವುದೂ ಅಸಂಬದ್ಧ ಅಕ್ಷರಗಳ ರಾಶಿ ಅಲ್ಲ. ಒಂದೊಂದು ಶ್ಲೋಕವೂ ವ್ಯಾಕರಣ ಬದ್ಧ ಮತ್ತು ಅರ್ಥಪೂರ್ಣ ಆಗಿದೆ! ಸರಿ, ಒಂದೊಂದಕ್ಕೂ ಅರ್ಥ ಇದ್ದರೂ , ಇವೆಲ್ಲ ಕೂಡಿ, ೬೪ ಅಸಂಬಂಧಿತ ಶ್ಲೋಕಗಳ ರಾಶಿ ಅಂದುಕೊಂಡಿರಾ? ಬದಲಾಗಿ, ನಿಮ್ಮ ಮುಂದೆ ಇರುವುದು ಇಡೀ ರಾಮಾಯಣವನ್ನೆ ಹೇಳುವ ಅಡಕ ಕಾವ್ಯ!. ಕೃಷ್ಣಮೂರ್ತಿ ಅವರ ಇಂಥ ಅಪ್ರತಿಮ ಸಾಧನೆಗೆ, ಅವರ ಭಾಷಾ ಪರಿಣತಿಗೆ, ಸಂಸ್ಕೃತದ ಕಸುವಿಗೆ, ಸತ್ವಕ್ಕೆ ತಲೆ ತೂಗುತ್ತಲೇ ಇರಬಹುದು.

ಸಂಸ್ಕೃತದ ಇಂಥ ಹರವನ್ನು ಚರ್ಚಿಸಲು ಎಷ್ಟು ಸಮಯವೂ ಸಾಲದು. ಸರಿ, ಇದು ಪೀಠಿಕೆ ಅಷ್ಟೆ; ಇಲ್ಲಿಗೆ ಸಾಕು. ಇನ್ನು ಕನ್ನಡ ವಿಷಯಕ್ಕೆ ಬರೋಣವೆ?

ಪ್ರಶ್ನೆಗಳು

ಉದ್ದ ಪೀಠಿಕೆಯ ನಂತರ ಉಳಿದದ್ದು ಮೂರು ಪ್ರಶ್ನೆಗಳು:

  1. ಕನ್ನಡದಲ್ಲಿ ಇಂಥ ಚಮತ್ಕಾವ್ಯಗಳು/ರಚನೆಗಳು ಇವೆಯೆ?
  2. ಇಂಥ ಪರಂಪರೆ ಇದೆಯೆ?
  3. ಎಲ್ಲಿದೆ ನನ್ನ ಪವಿತ್ರ ಪ್ರೇಮ ಕವನ? ಏನು ಸಂಬಂಧ?

ಕನ್ನಡದ ಮೇಲೆ ಸಂಸ್ಕೃತ ಅಗಾಧ ಪ್ರಭಾವ ಬೀರಿದೆ. ಕನ್ನಡ ವ್ಯಾಕರಣ, ಸಾಹಿತ್ಯ, ಶಾಸ್ತ್ರ ಬರಹ ಅಲ್ಲದೆ ಆಡು ಮಾತುಗಳಲ್ಲೂ ಹಾಸು ಹೊಕ್ಕಾಗಿ ಬೆರೆತುಕೊಂಡಿದೆ. ಹಾಗಿರುವಾಗ ಸಂಸ್ಕೃತದಲ್ಲಿಯಂಥ ಚಮತ್ಕಾರಕ ಪದ್ಯ ರಚನೆಗಳು ಕನ್ನಡಲ್ಲೂ ಇರಲೇಬೇಕಲ್ಲ.

ದುಷ್ಕರ ಕಾವ್ಯ

ಬನ್ನಿ ನೋಡೋಣ, ಕನ್ನಡದಲ್ಲಿ ಲಭ್ಯ ಇರುವ ಮೊದಲ ಗ್ರಂಥ - ಶ್ರೀವಿಜಯ ಬರೆದಿರುವ ಕವಿರಾಜಮಾರ್ಗ. ಅದೂ , ಕಾವ್ಯ ಲಕ್ಷಣ ಗ್ರಂಥ. ಅಂದ ಮೇಲೆ ಅದರಲ್ಲಿ ಒಂದಾದರೂ ಉದಾಹರಣೆ ಇರಲೇಬೇಕಲ್ಲ! ಇವೆ. ಇವುಗಳನ್ನು "ದುಷ್ಕರ ಕಾವ್ಯಬಂಧಗಳು" ಎಂದು ಗುರುತಿಸಿದ್ದಾನೆ. ಗೋಮೂತ್ರಿಕ, ಯಮಕ, ಗೋಪಿತಕ್ರಿಯಾ, ಅರ್ಧಭ್ರಮ, ಚಕ್ರಬಂಧ, ಮುರಜಬಂಧ ಹೀಗೆ ಒಂದಲ್ಲ ಹತ್ತಕ್ಕೂ ಹೆಚ್ಚು ತರಹದ ಚಮತ್ಕೃತಿಗಳನ್ನು ಹೆಸರಿಸಿದ್ದಾನೆ.

ಗತಪ್ರತ್ಯಾಗತಕ್ಕೆ (palindrome) ಉದಾಹರಣೆ :

ನಾನಮಾನಮಸೇನಾಸೇಸೇನಾಸೇ ಮನ ಮಾನನಾ

ದ್ವ್ಯಕ್ಷರಕ್ಕೆ ಉದಾಹರಣೆ (ಎರಡೇ ಅಕ್ಷರಗಳನ್ನು ಉಪಯೋಗಿಸಿದ್ದು ಮ ಮತ್ತು ನ) :

ಮಾನಿನೀ ಮುನ್ನಮಾಂ ನೀನೆ ನೀನಾನಿಂನನುಮಾನಮೇಂ
ಮಾನಮಾನಾನೆ ಮುಂನಂನೈ ಮಾನಮಾನನಮುಂನಿನಾ

ದುರದೃಷ್ಟ ಅಂದರೆ ಇವುಗಳ ಅರ್ಥವೇ ಸರಿಯಾಗಿ ಗೊತ್ತಿಲ್ಲ. ಗೊತ್ತಿದ್ದವರು ಶತಮಾನಗಳ ಹಿಂದೆಯೇ ಮರೆಯಾಗಿದ್ದಾರೆ. ಆ ಕಾರಣದಿಂದಲೇ, ಸಿಕ್ಕ ಹಸ್ತಪ್ರತಿಗಳಲ್ಲಿ ಅನೇಕ ಭೇದಗಳಿದ್ದು, ಯಾವುದು ಸರಿ ಯಾವುದು ತಪ್ಪು ಎಂದು ನಿರ್ಣಯಿಸುವುದೂ ಕಷ್ಟ.

ಕವಿರಾಜಮಾರ್ಗದಲ್ಲಿ ಹೇಳಿದ ಈ ದುಷ್ಕರ ಕಾವ್ಯಬಂಧಗಳನ್ನು ಬಿಟ್ಟರೆ, ಬೇರೆ, ವಿಶೇಷವಾಗಿ ಇತ್ತೀಚಿಗೆ ರಚಿತವಾದ ಬಂಧಗಳು ನನ್ನ ಸೀಮಿತ ಗಮನಕ್ಕೆ ಬಂದಿಲ್ಲ. ನಿಮಗೆ ಗೊತ್ತಿದ್ದರೆ ದಯವಿಟ್ಟು ತಿಳಿಸಿ.

ಇದೇ ಎರಡನೇ ಪ್ರಶ್ನೆಗೆ ಉತ್ತರ. ಅಂದರೆ, ಕನ್ನಡದಲ್ಲಿ ದುಷ್ಕರ ಕಾವ್ಯ ಪರಂಪರೆ ಇದ್ದರೂ ಅದು ಒಂಬತ್ತನೆಯ ಶತಮಾನದ ಶ್ರೀವಿಜಯನ ನಂತರ ಮುಂದುವರೆದಂತೆ ಕಾಣುವುದಿಲ್ಲ.

ಕನ್ನಡದಲ್ಲಿ ಶ್ಲೇಷೆ ಅಲಂಕಾರ

ಶ್ರೀವಿಜಯನ ನಂತರ ಬಂದ ರನ್ನ ಕವಿಯ ಸಾಹಸಭೀಮ ವಿಜಯ ಅಥವಾ ಜನಪ್ರಿಯವಾಗಿ ಗದಾಯುದ್ಧ ಎಂದು ಕರೆಯಲ್ಪಡುವ ಮಹಾಕಾವ್ಯದಲ್ಲಿನ ಮೊದಲ ಪದ್ಯ:

ಶ್ರೀಯುವತಿಪ್ರಿಯಂ ಬಲಯುತಂ ಬಲಿದರ್ಪಹರಂ ಜಿತಾರಿದೈ-
ತೇಯನನಂತಭೋಗನಿಲಯಂ ಪ್ರತಿಫಲಿತಧರ್ಮಚಕ್ರನ-
ಬ್ಜಾಯತನೇತ್ರನಾದಿಪುರುಷಂ ಪುರುಷೋತ್ತಮನೀ ಚಳುಕ್ಯನಾ-
ರಾಯಣದೇವನೀಗೆಮಗೆ ಮಂಗಲಕಾರಣಮುತ್ಸವಂಗಳಂ

ಇಲ್ಲಿ ಶ್ಲೇಷೆ ಅಲಂಕಾರದ ಬಳಕೆ ಸಮರ್ಥವಾಗಿದೆ. ಅಂದರೆ ಒಂದೇ ಪದ್ಯ ಎರಡು ಅರ್ಥ ಬರುವಂತೆ ಹೆಣೆಯಲಾಗಿದೆ. ಒಂದು ಅರ್ಥದಲ್ಲಿ, ಶ್ರೀಮನ್ ನಾರಾಯಣನಿಗೂ, ಇನ್ನೊಂದು ಅರ್ಥದಲ್ಲಿ ಕವಿಗೆ ಆಶ್ರಯದಾತನಾದ ಚಾಲುಕ್ಯ ದೊರೆ ಸತ್ಯಾಶ್ರಯನಿಗೂ ಅನ್ವಯಿಸಬಲ್ಲುದು. ಇಂಥ ರಚನೆಗಳು ಕನ್ನಡದಲ್ಲಿ ವಿಪುಲವಾಗಿವೆ.

ಹಾಗಾದರೆ ಇಲ್ಲಿಗೆ ಮುಗಿಯಿತೆ ಈ ಬಿತ್ತರಿಕೆ?

ಐಡಿಯ

ಕೊನೆಗೆ, ನಾನೇ ಒಂದು ಪದ್ಯ ಏಕೆ ಬರೆಯಬಾರದು ಅನ್ನುವ ಯೋಚನೆ ಬಂತು. ಎಂಥ ಪದ್ಯ? ಎಷ್ಟು ಉದ್ದ? ಕಂದ, ಸುನೀತಾ, ರಗಳೆ? ರಮ್ಯ ಕವನ? ನವ್ಯ ಕವನ? ಯಾವ ವಿಷಯ? ಇತ್ಯಾದಿ ಯೋಚನೆಗಳು ಮಿಂಚಿನಂತೆ ಸುಳಿದು ಹೋದವು. ಇದೆಷ್ಟು ಕಠಿನ ಎನ್ನುವುದು ಕೂಡಲೇ ಮನವರಿಕೆ ಆಯಿತು. ಕೈಯಲ್ಲಿ ಪೆನ್ನು ಹಿಡಿದು ಕುಳಿತರೆ, ಅದರಲ್ಲಿನ ಇಂಕು ಒಣಗಿ ಹೋದರೂ ಒಂದು ಸಾಲೂ ಬರೆಯಲು ಆಗದು ಅನಿಸಿತು.
ಹೋಗಲಿ, ಒಂದು ಪ್ಯಾರ ಗದ್ಯವನ್ನಾದರೂ ಬರೆಯೋಣ ಅಂದುಕೊಂಡೆ. ಕೊನೆಗೆ ಒಂದು ವಾಕ್ಯವನ್ನಾದರೂ ರಚಿಸಿದರೆ ಸಾಕು ಅನ್ನುವ ಮಟ್ಟಕ್ಕೆ ಬಂದೆ. ಅದೂ ದುಸ್ಸಾಧ್ಯವೇ ಅನ್ನಿಸಿತು.

ಅಂತೂ ಒಂದೆರಡು ವಾಕ್ಯಗಳನ್ನು ರಚಿಸಿದೆ:

ಮೊದಲ ಯತ್ನ

ಅಜನ ಜಗಜನನ,
ಕಮಲನಯನನ ಜಗಭರಣ,
ಹರನ ಜಗಹರಣ :
ಅನವರತ ಸಮಯದ ಚಲನ!

[ ಬ್ರಹ್ಮನಿಂದ ಜಗತ್ತಿನ ಸೃಷ್ಟಿ, ವಿಷ್ಣುವಿನಿಂದ ಅದರ ಪೋಷಣೆ, ಮತ್ತೆ ಈಶ್ವರನಿಂದ ಲಯ. ಇದು ಕಾಲದ ನಿರಂತರ ಚಲನ!
(There is) Brahma's creation of the Universe, Vishnu's sustenance of the universe, and Ishwara's destruction of it. Continuous (is) the time's movement! ]

ಇದರಲ್ಲಿ ಏನಿದೆ ಅಂಥ ವಿಶೇಷ? ಈ ವಾಕ್ಯದಲ್ಲಿ ಕಟ್ಟುಪಾಡುಗಳು ಅಂದರೆ ಅನುಸರಿಸಿದ ನಿಯಮ ನಿರ್ಬಂಧಗಳು ಯಾವವು? ಇಲ್ಲಿ ಅ-ಕಾರ ಸ್ವರ ಮಾತ್ರ ಉಪಯೋಗಿಸಿದೆ. ಕಾಗುಣಿತಗಳು ಇಲ್ಲ. ಒತ್ತಕ್ಷರಗಳೂ ಇಲ್ಲ.

ಆಹಾ! ಈ ನಿರ್ಬಂಧಗಳನ್ನು ಮೊದಲು ಹೇರಿಕೊಂಡು ಆಮೇಲೆ ಬರೆಯಲು ಪ್ರಾರಂಭಿಸಿದೆನೊ, ಅಥವಾ ಬರೆದ ಮೇಲೆ, ಬರೆದದ್ದನ್ನು ಗಮನಿಸಿ, ನಿರ್ಬಂಧಗಳನ್ನು ಹುಟ್ಟು ಹಾಕಿ ಜಯಘೋಷ ಮಾಡಿದೆನೊ?

ಹ್ಙೂ, ಏಕೋ, ಸಮಯದ ಚಲನ ನಿಂತ ಹಾಗೆ ಅನಿಸುತ್ತ ಇದೆ ಅಲ್ಲ.

ಯತ್ನ ಎರಡು

ಜಯಘೋಷ ಸಾರಿದ್ದಾಯಿತು. ಆದರೂ ಏನೋ ಅಸಮಾಧಾನ. ಇದರಲ್ಲಿ, ಸಮಯ ನಿರಂತರ ಅಂತ ಹೇಳಿದರೂ ಕಾಲ ಚಕ್ರ, ಅನಂತ ಅನ್ನುವ ಅರ್ಥ ಬಂದಿಲ್ಲ. ಅದಕ್ಕೆ ಇದನ್ನು ಹೀಗೆ ಸ್ವಲ್ಪ ತಿದ್ದಿದೆ ಮತ್ತು ಇನ್ನೊಂದು ನಿರ್ಬಂಧ ಸೇರಿಸಿದೆ: ಎಲ್ಲ ಸ್ವರಗಳು ಮತ್ತು ಎಲ್ಲ ಅಚ್ಚ ಕನ್ನಡ ವ್ಯಂಜನಗಳು ಇರಬೇಕು (ಙ, ಞ, ಷ , ಮತ್ತು ಮಹಾಪ್ರಾಣಗಳನ್ನು ಬಿಡಬಹುದು) ಅಂತ.

ಅಜನ ಜಗಜನನ;
ನರನ ಪಲ ಪಸ, ಬಣ, ಅಹಮಘಘಟನ;
ಕಡಲ ಶಯನನ ಅವತರಣ, ಜಗಭರಣ;
ಹರನ ಜಗಹರಣ :
ಸಮಯದ ಚಲನ ವಳಯ ಅಗಲ, ಅನವರತ, ಅಮರ!

[ ಬ್ರಹ್ಮನಿಂದ ಜಗತ್ತಿನ ಸೃಷ್ಟಿ; ಮನುಷ್ಯನ ಹಲವು ಬಯಕೆಗಳು, ಪಂಗಡಗಳು, ಮತ್ತು ಒಣ ಹಮ್ಮಿನಿಂದ ಕೇಡು ಉಂಟಾಗುವುದು; ವಿಷ್ಣುವಿನ ಅವತಾರ, ಮತ್ತು ಜಗತ್ತನ್ನು ರಕ್ಷಿಸಿ ಪಾಲಿಸುವುದು ಮತ್ತುಅದರ ಪೋಷಣೆ; ಮತ್ತೆ ಈಶ್ವರನಿಂದ ಲಯ. (ಈ) ಕಾಲಚಕ್ರ ವಿಸ್ತಾರವಾದುದು ಮತ್ತು (ಅದರ ತಿರುಗುವಿಕೆ) ನಿರಂತರ, ಮತ್ತು ಮುಗಿಯದುದು!
(There is) Brahma's creation of the universe;
Man's many desires, divisions, and empty ego bringing about sin; Vishnu's incarnation and sustenance of the universe; and Ishwar's destruction of it. The movement Time Circle is huge, continuous, and infinite! ]

ಪವಿತ್ರ ಪ್ರೇಮ ಕವನ

ಈಗ, ಇಷ್ಟೆಲ್ಲ ಕಸರತ್ತು ಮಾಡಿ, ಮೆದುಳಿಗೆ ಸ್ವಲ್ಪ ಕಸವು ತುಂಬಿಕೊಂಡಿತ್ತು. ಇನ್ನೊಂದು ಏನಾದರು ಬರೆಯುವ ಹುರುಪು ಮೂಡಿತ್ತು. ಮರಳಿ ನೋಡಿದರೆ, ಬರೆದದ್ದೆಲ್ಲ ತುಂಬಾ ಸುಲಭ ಅನಿಸಿತು. ಅಂದರೆ ಇನ್ನೂ ಹೆಚ್ಚಿನ ಕಟ್ಟುಪಾಡುಗಳನ್ನು ಹೇರಿಕೊಳ್ಳಬೇಕು! ಒಂದೇ ವ್ಯಂಜನ ಇರುವ ಪದ್ಯವನ್ನು ರಚಿಸಲು ಏಕೆ ಪ್ರಯತ್ನಿಸಬಾರದು?
ಸಾಧ್ಯವೆ ಇಲ್ಲ. ಇಲ್ಲ ಇಲ್ಲ ಇಲ್ಲ ಅನ್ನುತ್ತಲೇ ಈ ದುಸ್ಸಾಹಸಕ್ಕೆ ಕೈ ಹಾಕಿದೆ. ಇಲ್ಲ ಅಂದರೆ ನಕಾರ. ಹೇಗಿದೆ ನೋಡಿ ಲಕ್ಕು! ಅಲ್ಲಿಂದಲೇ ಶುರು ಆಯಿತು ಬರಿ ನ-ಕಾರ ಉಳ್ಳ ಈ ಪವಿತ್ರ ಪ್ರೇಮ ಕವನ.

ನಾನೊ ನಿನ್ನೈನ, ನೀ? ನನ್ನಾನನೋ!
ನಿನ್ನಾನೆ ನನ್ನಿ ನನ್ನನ್ನಿ ನೌ, ನು.
ನನ್ನ ನಿನ್ನ ನನ್ನಿ ನನು ನನ್ನಿ ನನೆ.
ನಾ ನೀನೆನೆ ನೀನೂ ನಾನೇ ನೆನೆ.
ನಾನೂನ ನೀನು ನೀನೂನ ನಾನೂ
ನಾ ನಾನು, ನೀ ನೀನಿನ್ನು ನಿನ್ನೆ.
ನಿನ್ನ ನನ್ನ ನನ್ನಿ ನನ್ನಿ ನನ್ನಿ, ನನ್ನಿ ನನ್ನಿ.

ಬಿಡಿಸಿ ಬರೆದಾಗ:

ನಾನೊ ನಿನ್ನ ಇನ, ನೀ? ನನ್ನ ಆನನ, ಓ!.
ನಿನ್ನ ಆನೆ ನನ್ನಿ ನನ್ನ ನನ್ನಿ ನೌ, ನು.
ನನ್ನ ನಿನ್ನ ನನ್ನಿ ನನು ನನ್ನಿ ನನೆ.
ನಾ ನೀನು ಎನೆ ನೀನೂ ನಾನೇ, ನೆನೆ.
ನಾನು ಊನ ನೀನು, ನೀನು ಊನ ನಾನೂ
‘ನಾ ನಾನು, ನೀ ನೀನು’ ಇನ್ನು ನಿನ್ನೆ.
ನಿನ್ನ ನನ್ನ ನನ್ನಿ ನನ್ನಿ ನನ್ನಿ, ನನ್ನಿ ನನ್ನಿ.

ನಾನೊ ನಿನ್ನ ಸೂರ್ಯ. ನೀ? ನನ್ನ ಮುಖ, ಓ! (ಜಗತ್ತನ್ನು ಒಟ್ಟಿಗೆ ನೋಡಿ ನಲಿಯುತ್ತೇವೆ)
ನಿನ್ನ ಬೃಹತ್ ಪ್ರೇಮವೆ ನನಗೆ ನಿಜವಾದ (ಸಂಸಾರ ಸಾಗರವನ್ನು ದಾಟಿಸುವ) ನೌಕೆ, ಖಂಡಿತ.
ನಮ್ಮ (ಈ) ಪ್ರೇಮ (ಪವಿತ್ರ) ಒಳ್ಳೆಯ (ಅರಳಲು ಅಂತಸ್ಸತ್ವವುಳ್ಳ) ಮೊಗ್ಗು.
ನಾನು ನೀ ಆದರೆ ನೀನು ಕೂಡ ನಾನೆ, ನೆನಪಿರಲಿ.
ನಾನು ಇಲ್ಲದ ನೀನು, ನೀನು ಇಲ್ಲದ ನಾನು ಮತ್ತು
'ನಾ ನಾನು - ನೀ ನೀನು' (ಪ್ರತ್ಯೇಕ ಭಾವ) ಇನ್ನು ಮೇಲೆ ನಿನ್ನೆಯವು.
ನಮ್ಮ (ಈ) ಪ್ರೇಮವೇ ಪವಿತ್ರ ಪ್ರೇಮ, ನಿಜವಾದ ಪ್ರೇಮ.

I am your sun, and O! you? (are) my face (= together we see the world);
Your (eplephant) huge love is my true ship (to cross the ocean of sorrow, duhkh sagara taraNa) indeed.
(This) love of ours (Yours and mine) is indeed a good/sacred flower bud(indicating potential growth).
If I am you, you too are me only, remember.
You without me and I too without you
Or saying "I am I " or "you are you" (separate feelings) now on are yesterday(bygones)
(This) love of ours(yours and mine), is the sacred love the true love.

ಇಲ್ಲಿ ಕೂಡ, ಕನ್ನಡದ ಎಲ್ಲ ಸ್ವರಗಳೂ (ಋ ಮತ್ತು ಅಃ ಹೊರತುಪಡಿಸಿ) ಇದರಲ್ಲಿ ಇವೆ.
ಇದನ್ನು ನಿಮ್ಮ ಸಂಗಾತಿಗೆ ನೀವು ಹೇಳಬಹುದು; ನಿಮ್ಮ ಸಂಗಾತಿ ನಿಮಗೆ ಹೇಳಬಹುದು. ಹಾಗೆಯೆ, ನಾನು ಮತ್ತು ನೀನು ಗಳನ್ನೂ ಬದಲಾಯಿಸಿದರೂ ಅರ್ಥದಲ್ಲಿ ವ್ಯತ್ಯಾಸ ಇಲ್ಲ.

ಏನಿದು? ಪದ್ಯವೋ, ಗದ್ಯವೋ? ಹೃದ್ಯವೋ, ವಧ್ಯವೋ ? ನೀವೇ ಹೇಳಬೇಕು. ಸಂಸ್ಕೃತದ ಮಟ್ಟಕ್ಕಂತೂ ಬಾರದು. ಆದರೂ ವ್ಯಾಲೆಂಟೈನ್ ಕಾರ್ಡ್ ನಲ್ಲಿ ಬರೆಯಲು ತಕ್ಕುದು; ನಿಮ್ಮ ಸಂಗಾತಿಯನ್ನು ರಂಜಿಸಿ ಒಲಿಸುವುದು ಗ್ಯಾರಂಟಿ! ಇಷ್ಟವಾದರೆ, ನಿಮ್ಮ ವಿವಾಹ ಶಪಥಗಳನ್ನು ಈ ಸಪ್ತಪದಿ (ಏಳು ಸಾಲಿನ ಪದ್ಯ) ಯೊಂದಿಗೆ ನವೀಕರಿಸಿಕೊಳ್ಳಬಹುದು!

"ತಿಣುಕಿದನು ಫಣಿರಾಯ" ಅನ್ನುವ ಪರಿಸ್ಥಿತಿಯಲ್ಲಿ ಸಿಕ್ಕು ಹಾಕೊಂಡಿದ್ದ ನಾನು ಹೇಗೋ ಪಾರಾದದ್ದು, ಇಷ್ಟು ಸಾಕು. ಇದು ನಿಮಗೆ ಮುಂದುವರೆದು ಸಂಶೋಧನೆ ಮಾಡಲು, ನಿಮ್ಮದೇ ಗದ್ಯ ಪದ್ಯಗಳನ್ನು ರಚಿಸಲು ಸ್ವಲ್ಪ ಸ್ಫೂರ್ತಿಗೂ ಕಾರಣ ಆದರೆ ತುಂಬಾ ಸಂತೋಷ. ಇಲ್ಲಿಗೆ, ಈ ನನ್ನ ಪ್ರಯತ್ನಕ್ಕೆ ಪೂರ್ಣವಿರಾಮ, ಇಂಥ ಪ್ರಯತ್ನಗಳಿಂದ ನನಗೆ ಸಂಪೂರ್ಣ ವಿರಾಮ.

ನಿಮ್ಮವನೆ ಆದ
ವಿಶ್ವೇಶ್ವರ ದೀಕ್ಷಿತ

ಸಂಗೀತ : ಆಕಾಶ

ಕನ್ನಡ ಕಲಿ, ಕನ್ನಡದ ಗುಟ್ಟು
ಬಿತ್ತರಿಕೆ ೭, ಕಾಲ ೨೦೨೧, ಸಂಖ್ಯೆ ೨
ಬಿಕಾಸ ೭-೨೦೨೧-೨

Episode 7, Year 2021 No 2, Feb 2021
kannada kali, kannada guttu, bittarike 7, varsha 2021 sankhye 2

bikaasa 7-2021-2: bi - bittarike 7 kaa - kaala 2021 sa - sankhye 2

ಸಂಸ್ಕೃತ ಚಮತ್ಕಾವ್ಯಕ್ಕೆ ಕೆಲವು ಜಾಲ ಆಕರಗಳು:
  1. http://www.pragyata.com/mag/pleasures-of-sanskrit
  2. https://sreenivasaraos.com/2012/10/10/chitrakavya-chitrabandha/
  3. https://sreenivasaraos.com/tag/knights-tour-problem/
  4. https://meeravis.wordpress.com/2012/03/11/the-knights-tour-problem/
  5. https://www.hinduismtoday.com/modules/smartsection/item.php?itemid=5288
  6. Clever Sanskrit Poetry https://www.rasikas.org/forums/viewtopic.php?t=20261


ತಾಗುಲಿ : Sacred Love Poem, clever Sanskrit poetry, Vishweshwar Dixit