ಯುಗಾದಿಯ ಚೇತನ : ಬೆಂದರೆ ಬೇಂದ್ರೆ

ಯುಗಾದಿಯ ಚೇತನ
ಬೆಂದರೆ ಬೇಂದ್ರೆ

Bendre

*** ವಿಶ್ವೇಶ್ವರ ದೀಕ್ಷಿತ

’ರಸವೆ ಜನನ, ವಿರಸ ಮರಣ, ಸಮರಸವೆ ಜೀವನ’ ಇದು ಜೀವನದ ಕಷ್ಟ-ಸುಖಗಳನ್ನು ಎಲ್ಲ ಸ್ತರಗಳಲ್ಲೂ ಅನುಭವಿಸಿ, ಜೀವನದ ಕುದಿಯಲ್ಲಿ ಬೆಂದ ಬೇಂದ್ರೆ ತತ್ವ. ’ಬೆಂದರೆ ಬೇಂದ್ರೆ’ ಎನ್ನುವುದು ಈಗ ಕನ್ನಡ ಪಡೆನುಡಿ.  ಅದಕ್ಕೆ, ಅವರು ಕಾಲ ಕಳೆದಂತೆ ಇನ್ನೂ ರೆಲೆವಂಟ್ ಆಗುತ್ತ ಹೋಗುತ್ತಾರೆ; ಬೇಂದ್ರೆ ಅಜ್ಜ ಬಹಳ ಹತ್ತಿರವಾಗುತ್ತಾನೆ. ಬಂಡಾಯದ ಬಿಸಿ ಆರಿದರೂ, ನವ್ಯದ ಪ್ರತಿಮೆಗಳು ಮಾಸಿದರೂ ಬೇಂದ್ರೆ ಬಾಳಗೀತೆ ಮತ್ತೆ ಮತ್ತೆ ನವ ಉದಯವನ್ನು ತಳೆಯುತ್ತದೆ. ಒಮ್ಮೆ ಭಾವಗೀತೆಯಾಗಿ ಮನ ಸೂರೆಗೊಳ್ಳುತ್ತದೆ; ಇನ್ನೊಮ್ಮೆ ಭಕ್ತಿಗೀತೆಯಾಗಿ ಬೆಳಕು ತೋರುತ್ತದೆ. ಮತ್ತೊಮ್ಮೆ ಜಾನಪದವಾಗಿ ಮಣ್ಣಿನ ವಾಸನೆ ಬೀರುತ್ತದೆ. ಕೆಲವೊಮ್ಮೆ ’ಆನ ತಾನನ’ ಎಂದು ಸುಲಭವಾಗಿ ಕಂಡರೂ, ಮಾಂತ್ರಿಕನ ಮುಷ್ಟಿಯಲ್ಲಿನ ಬಟ್ಟೆಯಂತೆ ಎಳೆದಷ್ಟೂ ಉದ್ದವಾಗಿ ಹರಿಯುತ್ತದೆ. ಇದೆ ಈ ಗಾರುಡಿಗನ ಗಮ್ಮತ್ತು.

೧೮೯೬ ಜನವರಿ ೩೧ರಂದು ಧಾರವಾಡದಲ್ಲಿ ಬೇಂದ್ರೆ ಜನನ. ಬಡತನ, ಕಷ್ಟ, ಹಲವು ಪಾಡುಗಳ ಬದುಕು. ಬೇಂದ್ರೆಯ ಮೊದಲ ಕೃತಿ ’ಕೃಷ್ಣ ಕುಮಾರಿ’ ಎನ್ನುವ ಕವನ ಸಂಕಲನ. ಬೇಂದ್ರೆ ಕೈ ಆಡಿಸದ ಸಾಹಿತ್ಯ ಪ್ರಕಾರವಿಲ್ಲ - ಕಾವ್ಯ, ಪ್ರಬಂಧ, ಕತೆ, ನಾಟಕ, ವಿಮರ್ಶೆ, ಭಾಷಾಂತರ, ಇತ್ಯಾದಿ. ’ಬೇಂದ್ರೆ ಓದದ ಪುಸ್ತಕವಿಲ್ಲ ಚರ್ಚಿಸದ ವಿಷಯವಿಲ್ಲ’ ಎನ್ನುವ ಪ್ರಸಿದ್ಧಿ.  ಅವರು ಓದಿ ಬಿಟ್ಟು ಹೋದ ಪುಸ್ತಕಗಳು ಈಗ ಸಾಧನಕೆರೆಯ “ಶ್ರೀಮಾತೆ”ಯ ಮಡಿಲಲ್ಲಿ ಒಂದು ಬೃಹತ್ ಗ್ರಂಥಾಲಯವನ್ನು ತುಂಬಿವೆ. ಬೇಂದ್ರೆ ಕೃತಿಗಳು ಹೀಗಿವೆ:  ಹದಿನಾಲ್ಕು ನಾಟಕಗಳು, ಕಥಾ ಸಂಕಲನ, ೨೯ ಕವನ ಸಂಕಲನಗಳು, ೯ ವಿಮರ್ಶಾ ಲೇಖನಗಳು, ೨ ಭಾಷಣಗಳು, ೫ ಮರಾಠಿ ಗ್ರಂಥಗಳು, ಇಂಗ್ಲಿಷ್ ಲೇಖನಗಳ ಸಂಗ್ರಹ, ೭ ಅನುವಾದಿತ ಕೃತಿಗಳು. ಬೇಂದ್ರೆಯ ’ನಾಕು ತಂತಿ’ ಕವನ ಸಂಕಲನಕ್ಕೆ ೧೯೭೪ರಲ್ಲಿ ಜ್ಞಾನಪೀಠ ಪ್ರಶಸ್ತಿ. ನಂತರ ಪದ್ಮಶ್ರೀ. ಶಿವಮೊಗ್ಗೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ. 

ಬೆಳಗಾಂವಿಯ ಸಾಹಿತ್ಯ ಸಮ್ಮೇಳನದಲ್ಲಿ (೧೯೨೯) ಹಾರಲು ಬಿಟ್ಟ “ಹಕ್ಕಿಯು” ಇನ್ನೂ  “ಹಾರುತಿದೆ”, “ನೋಡಿದಿರಾ?” ಬೇಂದ್ರೆ ಕಾವ್ಯ ಶಕ್ತಿಯನ್ನು ಅರಿಯಲು “ನರಬಲಿ” ಸಾಕು.  ೧೯೩೨ರಲ್ಲಿ ಬರೆದ ಈ ಒಂದು ಪುಟ್ಟ ಕವಿತೆ ಬ್ರಿಟಿಷ್‌ ಸಾಮ್ರಾಜ್ಯವನ್ನೆ ಅಲ್ಲಾಡಿಸಿತು. ಇದನ್ನು ರಾಜದ್ರೋಹಿ ಕವಿತೆ ಎಂದು ಘೋಷಿಸಿ ಬೇಂದ್ರೆಯನ್ನು ಜೇಲಿಗೆ ಹಾಕಿತು. ಅಲ್ಲದೆ, ಮುಂದೆ ಎಂಟು ವರ್ಷಗಳ ಕಾಲ ಯಾರೂ ಬೇಂದ್ರೆಗೆ ಉದ್ಯೋಗ ನೀಡಕೂಡದೆಂದು ಆಜ್ಞೆ ಹೊರಡಿಸಿತು. ಬೇಂದ್ರೆಯ ಹೊಟ್ಟೆಪಾಡಿಗೆ ಕಲ್ಲು ಹಾಕಿ ತನ್ನ ಕಲ್ಲು ಎದೆಯನ್ನು ತಟ್ಟಿಕೊಂಡಿತು!

ಜೀವನದ ಕೊನೆಯಲ್ಲಿ ಬೇಂದ್ರೆ ಸಂಖ್ಯೆಗಳಲ್ಲಿ ಮುಳುಗಿದ್ದರು. ಅಮೂರ್ತ ಸಂಖ್ಯೆಗಳಲ್ಲಿ ಜೀವನದ ರಹಸ್ಯ ಸಾಕಾರವಾಗಿದೆ ಎನ್ನುವ ನಂಬಿಕೆ. ಬೇಂದ್ರೆಯ ಮಹಾಕಾವ್ಯ ’೮೮೧+೪೪೧’ ಅನ್ನು ಅರ್ಥೈಸುವ ವಿಮರ್ಶಕ ಇನ್ನೂ ಹುಟ್ಟಿಲ್ಲ!

ಈ ಮಹಾನ್ ವ್ಯಕ್ತಿತ್ವ ೧೯೮೧ರಲ್ಲಿ ನಮ್ಮಿಂದ ಕಣ್ಮರೆಯಾದರೂ ಯುಗ ಯುಗಾದಿಗೂ ನಮ್ಮ ಅಂತರಾಳದಲ್ಲಿ ಚಿಗುರುವ ಹೊಸತನದ ಚೇತನವೆ ಬೇಂದ್ರೆ.

ಕೆಲವು ಬೇಂದ್ರೆ ಕೃತಿಗಳು

ಕಾವ್ಯ
  ಕೃಷ್ಣಕುಮಾರಿ (೧೯೨೨),
  ಗರಿ (೧೯೩೨),
  ಉಯ್ಯಾಲೆ (೧೯೩೮),
  ಗಂಗಾವತರಣ (೧೯೫೧),
  ಅರಳು ಮರಳು (೧೯೫೭),
  ನಾಕು ತಂತಿ (೧೯೬೪),
  ಮತ್ತೆ ಶ್ರಾವಣ ಬಂತು (೧೯೭೩),
  ತಾ ಲೆಕ್ಕಣಿಕೆ ತಾ ದೌತಿ (೧೯೮೩),
  ಶತಮಾನ (೧೯೯೦).

ನಾಟಕ
  ತಿರುಕರ ಪಿಡುಗು (೧೯೩೦),
  ಹುಚ್ಚಾಟಗಳು (೧೯೩೫).

ಸಣ್ಣ ಕತೆ
  ನಿರಾಭರಣ ಸುಂದರಿ (೧೯೪೦).

ವಿಮರ್ಶೆ
  ಸಾಹಿತ್ಯ ಮತ್ತು ವಿಮರ್ಶೆ (೧೯೩೭),
  ಸಾಹಿತ್ಯಸಂಶೋಧನ (೧೯೪೦),
  ಸಾಹಿತ್ಯದ ವಿರಾಟ್‌ ಸ್ವರೂಪ (೧೯೭೪).
 

_______________________________
ಕನ್ನಡ ಕಲಿ ಬಿತ್ತರಿಕೆ ಮಾರ್ಚ ೩೧, ೨೦೨೨
ಯುಗಾದಿಯ ಚೇತನ, ಬೆಂದರೆ ಬೇಂದ್ರೆ

[ ಆಧಾರ ಲೇಖನ: ತುತ್ತೂರಿ(ಕನ್ನಡ ಕಲಿ) ಸಂ.೨ ಸಂ.೧ ಮಾರ್ಚ ೨೦೦೭ ]


ತಾಗುಲಿ: ಬೇಂದ್ರೆ, ಯುಗಾದಿ, Bendre, Yugadi

ವರಕವಿ ಬೇಂದ್ರೆಯವರ ಸೂಕ್ಷ್ಮ ಪರೀಕ್ಷೆಯ ಚೆನ್ನಾಗಿ ಮಾಡಿದ್ದೀರ. ಅವರ ಸಾಹಿತ್ಯ ಕೃಷಿ ಮತ್ತು ವ್ಯಕ್ತಿತ್ವ ಎಂಥವರನ್ನು ಬೆರಗುಗೊಳಿಸುವಂತಹುದು. ನಿಮ್ಮ ಲೇಖನ ಓದಿದ ಮೇಲೆ ಅವರ ಕೃತಿಗಳನ್ನು ಕೂಲಂಕಷವಾಗಿ ಅಭ್ಯಾಸ ಮಾಡಬೇಕೆನಿಸುತ್ತದೆ.