ಪ್ರಜಾಪ್ರಭುತ್ವದಲ್ಲಿ ದೃಢವಿಶ್ವಾಸವುಳ್ಳ ಭಾರತದ ಪೌರರಾದ ನಾವು, ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಮತ್ತು ಮುಕ್ತ ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿ ಹಿಡಿಯುತ್ತೇವೆಂದೂ, ಪ್ರತಿಯೊಂದು ಚುನಾವಣೆಯಲ್ಲಿ ನಿಭೀ೯ತರಾಗಿ ಮತ್ತು ಧರ್ಮ,ಜನಾಂಗ,ಜಾತಿ,ಮತ,ಭಾಷೆ ಅಥವಾ ಯಾವುದೇ ಪ್ರೇರೇಪಣೆ ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೆ ಮತ ಚಲಾಯಿಸುತ್ತೇವೆಂದೂ ಈ ಮೂಲಕ ಪ್ರತಿಜ್ಞೆ ಸ್ವೀಕರಿಸುತ್ತೇವೆ.
ರಾಷ್ಟ್ರೀಯ ಮತದಾರರ ದಿನ
*** ವಿವೇಕ್ ಬೆಟ್ಕುಳಿ. ಕುಮಟಾ
1950 ಜನವರಿ 25 ರಂದು ಬಾರತದ ಚುನಾವಣಾ ಆಯೋಗ ಅಸ್ಥಿತ್ವಕ್ಕೆ ಬಂದಿತ್ತು. ಆ ದಿನವನ್ನೇ 2011 ರಿಂದ ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸಲಾಗುತ್ತಿದೆ.
ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಪ್ರಜಾಪ್ರಭುತ್ವದ ಘನತೆಯನ್ನು ಎತ್ತಿ ಹಿಡಿಯಲು ಮತದಾರರ ಪಾತ್ರ ಬಹು ಮುಖ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಕಲುಷಿತಗೊಂಡಿರುವ ರಾಜಕೀಯ ವ್ಯವಸ್ಥೆಯಿಂದ ಬೇಸತ್ತ ಮತದಾರರು ಮತದಾನದಿಂದ ದೂರ ಉಳಿಯುತ್ತಿರುವುದನ್ನು ಕಾಣಬಹುದಾಗಿದೆ. ಹೆಚ್ಚಾಗಿ ಸಾಕ್ಷರರು ಸಹಾ ಮತದಾನದಿಂದ ದೂರವಿರುತ್ತಿರುವುದು ವಿಷಾದನೀಯ. ಮತದಾರರ ಈ ರೀತಿಯ ನಡುವಳಿಕೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ.
ಪ್ರತಿವರ್ಷ ಭಾರತದಲ್ಲಿ ಲಕ್ಷಾಂತರ ಜನರು ಹೊಸದಾಗಿ ಮತದಾನದ ಹಕ್ಕನು ಹೊಂದುವರು. ಅಂತಹ ಮತದಾರರಿಗೆ ಮತದಾನದ ಪ್ರಾಮುಖ್ಯತೆಯ ಬಗ್ಗೆ ತಿಳಿಸುವ ಅಗತ್ಯವಿದೆ. ಮತದಾನದಲ್ಲಿ ಹೆಚ್ಚು ಜನರು ಭಾಗವಹಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸದೃಢಗೊಳಿಸುವ ಅತ್ಯವಿದೆ. ಚುನಾವಣೆ ಬಂದಾಗ ಮತದಾರರನ್ನು ಜಾಗ್ರತಗೊಳಿಸುವುದು ಜೊತೆಗೆ ನಿರಂತರವಾಗಿ ಈ ಕಾರ್ಯ ಆಗಬೇಕು.. ಯುವ ಮತದಾರರು ಹೆಚ್ಚು ಇರುವ ಕಾಲೇಜು, ವಿದ್ಯಾಸಂಸ್ಥೆಗಳಲ್ಲಿ ಈ ಬಗ್ಗೆ ಹೆಚ್ಚಿನ ಪ್ರಚಾರ ಬಹು ಸೂಕ್ತ.
ಪ್ರಜಾಪ್ರಭುತ್ವದಲ್ಲಿ ದೃಢವಿಶ್ವಾಸವುಳ್ಳ ಭಾರತದ ಪೌರರಾದ ನಾವು, ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಮತ್ತು ಮುಕ್ತ ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿ ಹಿಡಿಯುತ್ತೇವೆಂದೂ, ಮತ್ತು ಪ್ರತಿಯೊಂದು ಚುನಾವಣೆಯಲ್ಲಿ ನಿಭೀ೯ತರಾಗಿ ಮತ್ತು ಧರ್ಮ,ಜನಾಂಗ,ಜಾತಿ,ಮತ,ಭಾಷೆ ಅಥವಾ ಯಾವುದೇ ಪ್ರೇರೇಪಣೆ ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೆ ಮತ ಚಲಾಯಿಸುತ್ತೇವೆಂದೂ ಈ ಮೂಲಕ ಪ್ರತಿಜ್ಞೆ ಸ್ವೀಕರಿಸುತ್ತೇವೆ.
ಇದು ಮತದಾರರ ದಿನದಂದು ಸ್ವೀಕರಿಸಬೇಕಾದ ಪ್ರತಿಜ್ಞೆಯಾಗಿದೆ. ಎಲ್ಲರೂ ಮತದಾನದಲ್ಲಿ ಭಾಗವಹಿಸುವುದು ಮತ್ತು ಯಾವುದೇ ಆಮಿಷ, ಜಾತಿಯ, ಪ್ರಭಾವಕ್ಕೆ ಒಳಗಾಗದೇ ನಿರ್ಭಿಡೆಯಿಂದ ಮತ ಚಲಾಯಿಸಿ ಪ್ರಜಾಪ್ರಭುತ್ವದ ನೈಜ ಅರ್ಥವನ್ನು ಸಾರ್ಥಕಗೊಳಿಸಿ ನಮ್ಮನ್ನು ಆಳುವ ಪ್ರಭುವನ್ನು ಆಯ್ಕೆ ಮಾಡುವ ಹೊಣೆ ನಮ್ಮದಾಗಿದೆ. ಈ ಎಲ್ಲ ಹಿನ್ನಲೆಯಲ್ಲಿ ಈ ಬಾರಿಯ ರಾಷ್ಟ್ರೀಯ ಮತದಾರರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿ ಈ ದಿನದ ಹಿಂದನ ಉದ್ದೇಶವನ್ನು ಸಾರ್ಥಕಗೊಳಿಸೋಣ.
ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರಜೆಗಳಾಗಲು ನಾವು ಅರ್ಹರೇ?
ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಗುರುತಿಸಲ್ಪಡುವ ನಮ್ಮ ದೇಶ ಈಗ 61ನೇ ಪ್ರಜಾರಾಜೋತ್ಸವದ ಹೊಸ್ತಿಲಲ್ಲಿ ನಿಂತಿರುವುದು. ಈ ಸಂದರ್ಭದಲ್ಲಿ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ನಾವು ಪ್ರಜೆಗಳಾಗಲು ಅರ್ಹರೇ ಎಂಬ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳಬೇಕಾಗಿರುವುದು ವಿಪಯಯಾ೯ಸವೆನಿಸಿದರೂ, ಅಗತ್ಯವಿದೆ.
1947 ಅಗಷ್ಟ 15 ಭಾರತಕ್ಕೆ ಸ್ವತಂತ್ರ ಸಿಕ್ಕಿತು. ನಮ್ಮನ್ನು ನಾವು ಆಳುವ ಅವಕಾಶ ಬಂತು. ನಮ್ಮ ಆಡಳಿತದಲ್ಲಿ ಯಾವ ರೀತಿ ನೀತಿ ನಿಯಮ ಇರಬೇಕು, ನಮ್ಮ ಆಡಳಿತ ಪದ್ಧತಿ ಹೇಗಿರಬೇಕು, ಈ ಎಲ್ಲವುಗಳ ಸ್ಪಷ್ಟ ರೂಪುರೇಷೆ ಆ ಸಂದರ್ಭದಲ್ಲಿ ಇರಲಿಲ್ಲ. ಅದಕ್ಕಾಗಿ ಸ್ವತಂತ್ರ ಭಾರತದ ಸಂವಿಧಾನ ರಚಿಸಲು ನಿರ್ಧರಿಸಿ ಆ ಕಾರ್ಯವನ್ನು ಕರಡು ಸಮಿತಿಗೆ ಒಪ್ಪಿಸಲಾಯಿತು. ಕರಡು ಸಮಿತಿಯ ಅಧ್ಯಕ್ಷರನ್ನಾಗಿ ಅಂಬೇಡ್ಕರರನ್ನು ಆಯ್ಕೆ ಮಾಡಲಾಯಿತು.
ಸ್ವತಂತ್ರ ಭಾರತಕ್ಕೆಂದು ರಚಿಸಲ್ಪಟ್ಟ ಸಂವಿಧಾನವನ್ನು 1950 ಜನವರಿ 26 ರಂದು ಅಧಿಕೃತವಾಗಿ ಸ್ವೀಕರಿಸಲಾಯ್ತು. ಅಂದಿನಿಂದ ಜನವರಿ 26ನ್ನು ಪ್ರಜಾರಾಜ್ಯೋತ್ಸವ/ಗಣರಾಜ್ಯೋತ್ಸವವನ್ನಾಗಿ ದೇಶದಲ್ಲೆಡೆ ಸಂಭ್ರಮಿಸಲಾಗುವುದು. ಈ ಸಂಭ್ರಮಕ್ಕೆ ಇಂದಿಗೆ 61 ರ ಹರೆಯ. ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಇರುವ ವ್ಯವಸ್ಥೆ ಪ್ರಜಾಪ್ರಭುತ್ವವಾಗಿದೆ. ಇದೇ ವ್ಯವಸ್ಥೆ ನಮ್ಮಲ್ಲಿಯೂ ಇದೆ ಎಂದು ನಾವು ಹೇಳುತ್ತಿರುವೆವು. ಆದರೇ ವಾಸ್ತವದಲ್ಲಿ ಆರು ದಶಕಗಳ ಅವಧಿಯಲ್ಲಿ ಆಗಿರುವು ಏನು? ನಾವು ಬಯಸಿದ್ದು ಏನು?
ನಾವು ನಮ್ಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಲು ಅರ್ಹರೇ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕಾದ ಸ್ಥಿತಿಗೆ ನಾವು ತಲುಪಿರುವೆವು. ದುಡ್ಡು ಮತ್ತು ಜಾತಿಗಾಗಿ ದುಡ್ಡು ಮತ್ತು ಜಾತಿಗೋಸ್ಕರ ದುಡ್ಡು ಮತ್ತು ಜಾತಿಯ ಬೆಂಬಲದಿಂದಲೇಇರುವ ವ್ಯವಸ್ಥೆಯಾಗಿ ಮಾರ್ಪಟ್ಟಿದೆ ನಮ್ಮ ರಾಜಕೀಯ ವ್ಯವಸ್ಥೆ. ದಲಿತ ಹಿಂದುಳಿದವರ ಏಳ್ಗೆಗೆಂದು ಜಾರಿಯಾದ ಮೀಸಲಾತಿ ವ್ಯವಸ್ಥೆ ಇಂದು ರಾಜಕೀಯ ಪಕ್ಷಗಳ ಪ್ರಮುಖ ರಾಜಕೀಯ ವಿಷಯವಾಗಿದೆ. ದಲಿತ ಹಿಂದುಳಿದವರ ಪರಿಸ್ಥಿತಿ ದೇಶದಲ್ಲಿ ಇನ್ನೂ ಸುಧಾರಿಸಿಲ್ಲ. ಸಮಾನತೆಯನ್ನು ಹುಡುಕಬೇಕಾಗಿದೆ. ಶೈಕ್ಷಣಿಕ ಮಟ್ಟ ಸುಧಾರಿಸಿದೆ ಎಂದು ಹೇಳಿಕೊಂಡರೂ ಶಿಕ್ಷಣ ದುಡ್ಡಿದ್ದವರ ಸ್ವತ್ತಾಗಿದೆ.
ರಾಜಕೀಯ ಪಕ್ಷಗಳ ನೈತಿಕ ಮೌಲ್ಯ ಎನ್ನುವುದು ಕೇವಲ ಹೇಳಿಕೆಯಾಗಿd. ಅಧಿಕಾರ, ಹಣ, ಜಾತಿ ಧರ್ಮದ ಬಲ ಯಾರಿಗೆ ಇದೆಯೋ ಅವರು ಮಾತ್ರ ರಾಜಕೀಯ ಮಾಡುವ ಸ್ಥಿತಿಯಲ್ಲಿ ಇರುವರು. ಎಲ್ಲಾ ರಾಜಕೀಯ ಪಕ್ಷಗಳು ಮತದಾರರನ್ನು ಕೊಂಡುಕೊಳ್ಳುವ ಸಾಮಗ್ರಿಯಂತೆ ಯೋಚಿಸುವರು. ಆಳುವ ಜನಪ್ರತಿನಿಧಿಗಳು ಮಾವನ ಮನೆಗೆ ಹೋಗಿ ಬರುವಂತೆ ಜೈಲಿಗೆ ಹೋಗಿಬರುವುದು, ಅಂತಹ ಜನಪ್ರತಿನಿಧಿಗಳನ್ನು ಸ್ವಾತಂತ್ರ್ಯಹೋರಾಟ ಮಾಡಿ ಬಂದವರಂತೆ ಬಿಂಬಿಸುವುದು ಈ ಎಲ್ಲವು ನಮ್ಮ ವ್ಯವಸ್ಥೆಯ ಭಾಗವಾಗಿದೆ. ಚುನಾವಣೆಯಲ್ಲಿ ಸರಾಸರಿ 50% ರಷ್ಟು ಮಾತ್ರ ಮತದಾನವಾಗುವುದು ಸಾಮಾನ್ಯವಾಗಿದೆ. ಅಂದರೆ ವ್ಯವಸ್ಥೆಯ ಒಂದು ಭಾಗ ಮತದಾನದಲ್ಲಿ ಭಾಗವಹಿಸುತ್ತಿಲ್ಲ. ಇದನ್ನು ನಾವು ಪ್ರಜಾಪ್ರಭುತ್ವ ಎಂದು ಹೇಳಲು ಸಾಧ್ಯವೇ? ಇತ್ತೀಚಿನ ದಿನಗಳಲ್ಲಿ ಹೆಚ್ಚು ಅಕ್ಷರ ಜ್ಞಾನ ಇರುವವರು ಸಹಾ ಮತದಾನದಲ್ಲಿ ಭಾಗವಹಿಸುತ್ತಿಲ್ಲ. ಪ್ರಭುವನ್ನು ಆಯ್ಕೆ ಮಾಡುವ ಪ್ರಜೆಗಳಿಗೆ ಚುನಾವಣೆಯಿಂದ ಚುನಾವಣೆಗೆ ಮತದಾನ ಮಾಡುವ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ.
60 ವರ್ಷಕ್ಕೂ ಅಧಿಕ ಪ್ರಜಾಪ್ರಭುತ್ವ ಆಡಳಿತದ ನಮ್ಮ ದೇಶದಲ್ಲಿ ಮೊದಲು ಭೃಷ್ಟ, ಕ್ರಿಮಿನಲ್ ಜನಪ್ರತಿನಿಧಿಗಳ ಸಂಖ್ಯೆ ಬೆರಳಣಿಕೆಯಷ್ಟು ಇತ್ತು, ಇಂದು ಉತ್ತಮ ಜನಪ್ರತಿನಿಧಿಗಳನ್ನು ಬೆರಳಣಿಕೆಯಲ್ಲಿ ಎಣಿಸಬೇಕಾಗಿದೆ. ಕೇವಲ ಒಂದೆರಡು ಉತ್ತಮ ಉದಾಹರಣೆಯಿಂದ ಪ್ರಜಾಪ್ರಭುತ್ವದ ಏಳ್ಗೆ ಸಾಧ್ಯವಿಲ್ಲ ಬದಲಾಗಿ ಸಧೃಢ ಪ್ರಜಾಪ್ರಭುತ್ವವನ್ನು ರೂಪಿಸಬೇಕಾದ ನಾವು ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಾಗಲು ಅರ್ಹರೆ ಎಂದು ಪ್ರಶ್ನಿಸಿಕೊಳ್ಳುವ ಸಮಯ ಬಂದಿದೆ.
ನೀವೇನಂತೀರಿ?
ತಾಗುಲಿ : Vivek Betkuli, Democracy, National Voters Day