ಹೆಸರಿಗಾಗಿ!

 

ಹೆಸರಿಗಾಗಿ!

ನಿಜ ಜೀವನದ ಸತ್ಯ ಘಟನೆಗಳ ಹಾಸ್ಯಮಯ ರೋಚಕ ನಿರೂಪಣೆ

¾ ವಿಶ್ವೇಶ್ವರ ದೀಕ್ಷಿತ

[ . . .  ರಮಿತಾ, ಲಲಿತಾ, ವನಿತಾ, ಶಮಿತಾ, ಸರಿತಾ, ಹಸಿತಾ, ಅಂತ ತಾ ತಾ ಅನ್ನುತ್ತಲೆ ಬದುಕು ಸವೆಸುತ್ತಾರೆ. 
ಜೀವನವೆ ಒಂದು ಪ್ರಾಸಬದ್ಧ ಕವಿತೆ ಎಂದು ತಿಳಿದಿಕೊಂಡಿರುವ ಇವರು, ಕೂಡಲೆ, ಮಕ್ಕಳೊಂದಿಗೆ ಜೀವಂತ ನಾಮಾಯಣ ಮಹಾಕಾವ್ಯ ಬರೆಯತೊಡಗುತ್ತಾರೆ.  ಕೊನೆಗೆ, ತ್ರಿಪದಿ ಆದರೂ ಆಗಲಿ ಎನ್ನುತ್ತ,  ಎರಡು ಸಾಲೂ ಮುಗಿಸದೆ, ಬಿಡಿಸಲಾಗದ ಹಾಯ್ಕುಗಳಾಗಿ ಉಳಿಯುತ್ತಾರೆ. ]

ಮರೆಯಲಾಗದ ಕರೆಗಂಟೆ - ನಾನೂ ಅಪ್ಪ ಆಗುವೆ!

ನೀರವತೆ ತುಂಬಿದ ಆಫೀಸಿನಲ್ಲಿ ಎಳೆಯುತ್ತಿರುವ ಮಧ್ಯಾಹ್ನದ ಒಂದು ವಿದ್ಯುತ್ ಕ್ಷಣ. ಟಿಣ್ ಟಿಣಿಸುತ್ತಿದ್ದ ದೂರವಾಣಿಯನ್ನು ಎತ್ತಿಕೊಂಡೆ. ಅತ್ತ ನನ್ನ ಹೆಂಡತಿ. ಅವಳ ಮಾತು ಕೇಳಿ ಮೂಕನಾದ ನಾನು ಕೆಲಸದ ಮೇಲೆ ಗಮನ ಇಡಲಾರದಾದೆ. ಎಲ್ಲ ಮೀಟಿಂಗುಗಳನ್ನು ರದ್ದುಗೊಳಿಸಿದೆ.  ಹಿಗ್ಗಿನಿಂದ ಎದೆ ಉಬ್ಬಿಸಿ ಗೂಡಿನಿಂದ ಗೂಡಿಗೆ ಹಾರಾಡಿದೆ. ಎಂದಿಗಿಂತ ಹೆಚ್ಚಿನ ನಗುಮೊಗದಿಂದ  ಎದುರು ಬಂದವರೆಲ್ಲರ ಕೈ ಕುಲುಕುತ್ತ ಓಡಾಡಿದೆ.  ನಾನೂ ಅಪ್ಪ ಆಗುವೆ ಎಂದು ಪುಲಕಿತನಾದೆ.

ಸಂಜೆಯ ವೇಳೆಗೆ ಆ ಪುಳಕವೆಲ್ಲ ಮೈ ಇಳಿದು ಪರಿಸ್ಥಿತಿ ಗಂಭೀರವಾಯಿತು. ಹೆಸರು ಬಹಳ ಮಹತ್ವ.  ಹೆಸರೊಂದು ಇಡಿ ಜೀವನದ ಗತಿಯನ್ನೆ  ನಿರ್ಧರಿಸಿ ಬಿಡಬಹುದು. ಕೂಸಿಗೆ ಏನು ಹೆಸರು ಇಡುವುದು ಎನ್ನುವ ಸರಳ ಪ್ರಶ್ನೆ ದಂಗು ಬಡಿಸಿತು. ಈ ವಿಷಯವನ್ನು ತಪ್ಪಿಯೂ ಕಲಿಸಿರದ ಸಾಲೆಗಳಿಗೆ ಕಾಲು ಹೊಸೆದಿದ್ದು ದಂಡ ಎನಿಸಿತು.

ಯೋಜನೆಗಳು

ಹೆಸರಿಗಾಗಿ, ಏನ ಕೇನ ಪ್ರಕಾರೇಣ ಎನ್ನುವಂತೆ, ಒಂದು ಯೋಜನೆ ಹಾಕಿದೆ:  ಹೆಸರುಗಳ ಪುಸ್ತಕಗಳನ್ನು ಓದುವುದು; ಗೆಳೆಯರನ್ನು, ಹಿರಿಯರನ್ನು, ಮತ್ತಿತರ ಹೆಮ್ಮೆಯ ತಾಯಿತಂದೆಯರನ್ನು ಕೇಳುವುದು; ಇಂಟರ್‌ನೆಟ್ ಮೂಲಕ ಸಿಗಬಹುದಾದ ಮಾಹಿತಿಯನ್ನು ಜಾಲಾಡಿಸಿ ಹೆಸರು ಹುಡುಕುವುದು. ಕವಿರಾಜ ಮಾರ್ಗವನ್ನು ಹಿಡಿದು,  ಹರಿಹರನೊಡನೆ ರಗಳೆ ಗೈದು, ನಾಗರಸನನ್ನು ಕೆದಕಿ, ಮುದ್ದಣನೊಡನೆ ಸರಸವಾಡಿ ಸವಿ ಕನ್ನಡ ಹೆಸರೊಂದನ್ನು ಸಂಪಾದಿಸುವುದು. ಒಂದು ಹೆಸರಿಗಾಗಿ, ವಾಗ್ದೇವಿಯ ಭಂಡಾರದ ಮುದ್ರೆಯನೊಡೆದ ಆ ರನ್ನನೊಡನೆ ಗದಾಯುದ್ಧಕ್ಕೆ ಇಳಿಯಲೂ ಸನ್ನದ್ಧನಾದೆ.

 

ಯೋಜನೆ, ಬರಿ ಯೋಜನೆ

ಎಲ್ಲ ಒಳ್ಳೆಯ ಯೋಜನೆಗಳಂತೆ ಇದೂ, ನಿರ್ವಹಿಸದೆ, ಬರಿ ಯೋಜನೆಯಾಗಿಯೆ ಉಳಿಯಿತು.  ತಿಂಗಳುಗಳು ಉರುಳಿ ಹೋಗುತ್ತಿರುವಾಗ, ನನ್ನ ಮುಂದೂಡುವ ಪ್ರವೃತ್ತಿಯನ್ನು ಸಮರ್ಥಿಸಿಕೊಳ್ಳಲು ತಾತ್ವಿಕತೆಯ ಸುಲಭ ಸೋಗೊಂದು ಥಟ್ಟನೆ ಬೇಕಾಯಿತು. ಈಗ, ನನಗೆ ಅನುಕೂಲವಾದದ್ದು ಶೇಕ್ಸ್‌ಪಿಯರನ ನಾಟಕೀಯ ಮಾತು, "ಹೆಸರಿನಲ್ಲೇನಿದೆ? ಯಾವುದನ್ನು ಗುಲಾಬಿ ಎಂದು  ಕರೆಯುತ್ತೇವೆಯೋ ಅದು ಬೇರೆ ಯಾವುದೇ ಹೆಸರಿನಿಂದಲೂ ಅಷ್ಟೇ ಕಂಪು ಬೀರುತ್ತದೆ!" ಮೇಲಾಗಿ, ಇನ್ನೂ ಏಳು ತಿಂಗಳುಗಳು ಇವೆ! ಸದ್ಯಕ್ಕೆ ಸ್ವಲ್ಪ ಚೇತರಿಸಿಕೊಂಡೆ. ಮಗು ಹುಟ್ಟುವ ಮುಂಚೆ ಸಾವಿರ ಹೆಸರುಗಳನ್ನು ಕಂಡು ಹಿಡಿಯುವೆನೆಂಬ ಆತ್ಮ ವಿಶ್ವಾಸ ಒಮ್ಮೆಲೆ ಬಲವಾಯಿತು.

ವಿಶೇಷ ಘಟನೆ ಇಲ್ಲದೆ ಆರು ತಿಂಗಳುಗಳು ಕಳೆದು ಹೋದರೂ ಹೆಸರು ಒಂದೂ ಸಿಕ್ಕಿರಲಿಲ್ಲ. ಯಾವಾಗಲೂ ಹೆಸರಿನ ವಿಚಾರ. ಒಂದು ದಾರಿಯನ್ನೂ ಸರಿಯಾಗಿ ಯೋಚಿಸಿರಲಿಲ್ಲ. 

ಐಡಿಯ ನಂಬರ್‌ ಒನ್

ಒಂದು ಐಡಿಯ  ಹೊಳೆಯಿತು. ಕೂಸು ನನ್ನೊಬ್ಬನದೇ ಅಲ್ಲ. ಮಗು ಆಗುವುದು ನನ್ನ ಹೆಂಡತಿಗೂ ತಾನೆ? ಹೀಗೆ, ಈ ಹೆಸರಿನ ಹೊಣೆಯಿಂದ ನುಸುಳಿಕೊಳ್ಳುವ ಹವಣಿಕೆಯಲ್ಲಿ ಹಗುರವಾಗಿ ಕೇಳಿದೆ, "ಕೂಸಿಗೆ ಹೆಸರು ಏನಾದರು ಹುಡುಕಿರುವೆಯ?"  ಅವಳ ಐಡಿಯ ಬೇರೆಯೆ ಆಗಿತ್ತು.  "ಆರೋಗ್ಯವಾದ ಉತ್ತಮ ಮಗು ಹುಟ್ಟುವಂತೆ ನಾನು ನೋಡಿಕೊಳ್ಳುತ್ತೇನೆ" ಎಂದು ಅಳುಕದೆ ಮುಂದುವರಿಸಿದಳು, "ಕೂಸಿಗೊಂದು ಉತ್ತಮ ಹೆಸರು ನೀವು ನೋಡಿಕೊಳ್ಳಿ." ಈಗ, ಜವಾಬುದಾರಿಯ ಪೆಂಡುಲಂ ಪೂರ್ತಿ ನನ್ನ ಕಡೆಗೆ ವಾಲಿತು. ಗಡಿಯಾಳ ಮಾತ್ರ  ಟಿಕ್‌ಟಿಕ್‌ಗುಟ್ಟುತ್ತಲೆ ಇತ್ತು.

 

ಕೊರೆಯುವ ಸಮಸ್ಯೆ – ತಿವಿಯುವ ಗೆಳೆಯರು

 

ಈಗಂತು, ಮುದ್ದಾದ ಹೆಸರಿಟ್ಟು ಮಕ್ಕಳ ಜೊತೆ ಆಡುತ್ತಿದ್ದ ಗೆಳೆಯರನ್ನು ಕಂಡರೆ ಮನಸ್ಸಿನಲ್ಲಿ ಏನೋ ಕರಕರೆ. ಕಂಡರೂ ಕಾಣದಂತಿದ್ದ ಇವರು ಸಮಸ್ಯೆಯನ್ನು ನೆನಪಿಸುತ್ತ ನನ್ನ ಸುತ್ತ ತಿರುಗುತ್ತಿದ್ದಾರೆ ಎನ್ನಿಸಿತು. 

 

 

ಹೆಸರಿಲ್ಲದೆ ಹೆರದಿರಿ, ಹೆಸರಿಲ್ಲದೆ ಬಸುರಾಗದಿರಿ

ನನ್ನ ಹೆಸರಿನ ಸಮಸ್ಯೆಯನ್ನು ಪ್ರಸ್ತಾಪಿಸಿ ಅದರ ಬೇಕುಬೇಡಗಳನ್ನು ವಿಶ್ಲೇಷಿಸಿ ಎಷ್ಟು ಸಂತೊಷಕೂಟಗಳನ್ನು ಅಂತ್ಯಗೊಳಿಸಿದೆನೋ! ಆಮಂತ್ರಿತ ಮದುವೆಗಳಿಗೆ ಹೋದಾಗ, ವಧೂವರರಿಗೆ ಕಾಣಿಕೆಯೊಂದಿಗೆ "ಕೂಸು ಹುಟ್ಟುವ ಮುಂಚೆ ಕುಲಾವಿ ಎನ್ನುವ ಗಾದೆಯನ್ನು ಮರೆತು ಬಿಡಿ. ಹೆಸರಿಲ್ಲದೆ ಹೆರದಿರಿ, ಹೆಸರಿಲ್ಲದೆ ಬಸುರಾಗದಿರಿ" ಎಂದು ಮೌನವಾಗಿ ಹರಸಿ ಬರುತ್ತಿದ್ದೆ. 


 

 

 ಗಾಂಧಾರಿಯ ಗುಟ್ಟು

ನೂರೊಂದು ಕೌರವರನ್ನು ಯಾರು ಅರಿಯರು? ಒಂದು ನೂರ ಒಂದು ಹೆಸರುಗಳನ್ನು ಆ ಗಾಂಧಾರಿ ಧೃತರಾಷ್ಟ್ರರು  ಹೇಗೆ ಕಂಡು ಹಿಡಿದರು? ಅವರಿಗೇನು ನೂರು ವರ್ಷಗಳ ಸಮಯ ಇರಲಿಲ್ಲ. ಒಮ್ಮೆಲೆ, ಗಾಂಧಾರಿ ಧೃತರಾಷ್ಟ್ರರಿಗಾಗಿ ನನ್ನಲ್ಲಿದ್ದ ಮೆಚ್ಚಿಕೆ ನೂರ್ಮಡಿ ಆಯ್ತು.  
ಕೌರವರನ್ನು ಹೊತ್ತ ಗಾಂಧಾರಿಗೆ ಅವು ಸಂತಾಪರಹಿತ ದಿನಗಳೇನು ಆಗಿರಲಿಲ್ಲ. ಕತೆ ಕೇಳಿ.  ಬೇಗನೆ ಗಂಡು ಮಗು ಆಗಲಿ ಎಂದು ಬೇಡಿಕೊಂಡವಳು ಹೆರಿಗೆಯನ್ನು ಎರಡು ವರ್ಷಗಳ ವರೆಗೆ ತಡೆ ಹಿಡಿದಳು! ಯಾಕೆ ಗೊತ್ತೆ? ಅವಳಿಗೆ ಸರಿಯಾದ ಹೆಸರು ಸಿಕ್ಕಿರಲಿಲ್ಲ! ಬೇಸತ್ತು, ಕೊನೆಗೆ ಭ್ರೂಣವನ್ನೆ ಕಿತ್ತು ಹಾಕಿದಳು ಗಾಂಧಾರಿ!  ನೂರು ಮಕ್ಕಳು ಆಗಲಿ ಎಂದ ವ್ಯಾಸನ ವರ ಅವಳಿಗೆ ನೂರಕ್ಕೆ ನೂರರಷ್ಟು ಶಾಪವಾಗಿದ್ದರಲ್ಲಿ ಸಂಶಯವಿಲ್ಲ. ಮಾತು ಕೊಟ್ಟ ವ್ಯಾಸ ಸುಮ್ಮನೆ ಬಿಡಬೇಕಲ್ಲ.  ಭ್ರೂಣವನ್ನು ನೂರು ತುಂಡುಗಳಲ್ಲಿ ಕತ್ತರಿಸಿ ಮಣ್ಣಿನ ಕುಡಿಕೆಗಳಲ್ಲಿ ಮುಚ್ಚಿ ಇಟ್ಟ.  ಜಾಣ, ಹೆಸರು ಹುಡುಕುವ ಹೆಚ್ಚಿನ ಜವಾಬುದಾರಿಯನ್ನು ಮಾತ್ರ ತಾನು ತೆಗೆದುಕೊಳ್ಳಲಿಲ್ಲ. ಕಣ್ಣು ಕಟ್ಟಿಕೊಂಡ ಗರತಿ ಗಾಂಧಾರಿಗೆ ಎಂತಹ  ಶಿಕ್ಷೆ!

ಗಾಂಧಾರಿ ಧೃತರಾಷ್ಟ್ರರು ಯಾವ ಕುರುತಂತ್ರ ಉಪಯೋಗಿಸಿ ನೂರು ಹೆಸರು ಹುಟ್ಟು ಹಾಕಿದರು?  ಕಡತಗಳನ್ನು ಹರವಿ, ಪುಸ್ತಕಗಳನ್ನು ತಿರುವಿ, ಪಂಡಿತರನ್ನು ಪೀಡಿಸಿ, ಹೇಗಾದರು ಮಾಡಿ ಈ ಗಾಂಧಾರಿಯ ಗುಟ್ಟನ್ನು ರಟ್ಟು ಮಾಡಲೆ ಬೇಕು ಎಂದು ನಿರ್ಣಯಿಸಿದೆ.

ಉತ್ತರ ಬಹಳ ಸುಲಭವಾಗಿತ್ತು.  ಗಾಂಧಾರಿ ಕೆಲವೊಂದು ನಿಯಮಗಳನ್ನು ಹಾಕಿಕೊಂಡಿದ್ದಳು.  ಉದಾಹರಣೆಗೆ, ಕೌರವರ ಅನೇಕ ಹೆಸರುಗಳು ‘ದುಃ’ ಇಂದ ಪ್ರಾರಂಭವಾಗುತ್ತವೆ - ದುರ್ಯೋಧನ, ದುಶ್ಯಾಸನ, ಒಬ್ಬಳೆ ಮಗಳು ದುಶ್ಯಲೆ, ಇತ್ಯಾದಿ.

ಇದು ಈಗಲೂ ಅನೇಕರು ಉಪಯೋಗಿಸುವ ಜನಪ್ರಿಯ ತಂತ್ರ. ಆದಿ ಅಥವ ಅಂತ್ಯ ಅಕ್ಷರ ಒಂದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಹೆಸರು ಹೆಣೆಯುತ್ತಾರೆ.
ಸಮೀರ, ಸಾವಿತ್ರಿ, ಸೀಮಾ, ಸುರಭಿ/ಸುಮನ, ಸೂರ್ಯ, ಸೇವಂತಿ, ಸೋಮ, ಸೌಜನ್ಯ, ಸಂಜನಾ, ಅಂತಲೋ, ಕವಿತಾ, ಗಮಿತಾ, ಚರಿತಾ, ಜಪಿತಾ, ತಪಿತಾ, ದಯಿತಾ, ನಮಿತಾ, ಪವಿತಾ, ಬಬಿತಾ, ಮಮತಾ, ಯಮಿತಾ, ರಮಿತಾ, ಲಲಿತಾ, ವನಿತಾ, ಶಮಿತಾ, ಸರಿತಾ, ಹಸಿತಾ, ಅಂತ ತಾ ತಾ ಅನ್ನುತ್ತಲೆ ಬದುಕು ಸವೆಸುತ್ತಾರೆ.

ಜೀವನವೆ ಒಂದು ಪ್ರಾಸಬದ್ಧ ಕವಿತೆ ಎಂದು ತಿಳಿದಿಕೊಂಡಿರುವ ಇವರು, ಕೂಡಲೆ, ಮಕ್ಕಳೊಂದಿಗೆ ಜೀವಂತ ನಾಮಾಯಣ ಮಹಾಕಾವ್ಯ ಬರೆಯತೊಡಗುತ್ತಾರೆ.  ಕೊನೆಗೆ, ತ್ರಿಪದಿ ಆದರೂ ಆಗಲಿ ಎನ್ನುತ್ತ,  ಎರಡು ಸಾಲೂ ಮುಗಿಸದೆ, ಬಿಡಿಸಲಾಗದ ಹಾಯ್ಕುಗಳಾಗಿ ಉಳಿಯುತ್ತಾರೆ.

ಗಾಂಧಾರಿ ಉಪಯೋಗಿಸಿದ ಆದಿ ವರ್ಣ ‘ದುಃ’, ಅರ್ಥ ಕೆಟ್ಟದ್ದು ಎಂದು. ಕೌರವರೆಲ್ಲ ಹಾಗೆಯೆ ಆದರು. ಅವರ ಶತಕೃತ್ಯಗಳು ಎಲ್ಲರಿಗು ಗೊತ್ತು, ಹೆಸರುಗಳು ಯಾರ ಬಾಯಲ್ಲು ಇಲ್ಲ.  ಇದು, ‘ಹೆಸರಿನಲ್ಲಿ ಏನಿದೆ?’ ಎನ್ನುವ ಮನೋಭಾವ ತಪ್ಪು ಎಂದು ಎತ್ತಿ ತೋರಿಸಿತು.

ಹೆಸರಿಲ್ಲದೆ ಇನ್ನೆರಡು ತಿಂಗಳುಗಳು ಉರುಳಿದವು.  ಇದೊಂದು ಸಾಮಾನ್ಯ ತಂತ್ರ ಎಂದೆನಿಸಿದರೂ, ಪ್ರಾರಂಭದ ಅಕ್ಷರ ಒಂದನ್ನು ನಿಗದಿಸುವ ಯೋಚನೆ ಮಾಡಿದೆ. ಕನ್ನಡ ಅಂಕಲಿಪಿ ತೆಗೆದು ನೋಡಿದರೆ ೫೨ ಅಕ್ಷರಗಳು ಒಮ್ಮೆಲೆ ಕಣ್ಣು ಕುಕ್ಕಿದವು.  ಕಣ್ಣು ಮುಚ್ಚಿದೆ. ಇಷ್ಟೊಂದು ವರ್ಣಗಳನ್ನು ಹೊದ್ದುಕೊಂಡ, ಪರರು ತೊಟ್ಟ ಆಭರಣಗಳನ್ನೆಲ್ಲ ತಾನೂ ತೊಡಲೆ ಬೇಕು ಎನ್ನುವ ಹುಡುಗು ಹಟದ, ಕನ್ನಡತಿಯ ಮೇಲೆ ಮುನಿಸು ಕೂಡ ಬಂದಿತು. 

ಐಡಿಯ ನಂಬರ ಟೂ -  ಅರ್ಧ ಕೆಲಸ ಆದಂತೆ

ಹೊಳೆಯಿತು ಇನ್ನೊಂದು ಐಡಿಯ! ರೋಮನ್ ಅಕ್ಷರ [a-z] ಗಳಲ್ಲಿ ಯಾವುದಾದರು ಒಂದನ್ನು ಹಿಡಿದರೆ ಹೇಗೆ? ಇಂಗ್ಲಿಷಿನಲ್ಲೆ ಹೆಸರು ಹುಡುಕುವುದು ಸುಲಭ. ಇಲ್ಲಿ ಇಪ್ಪತ್ತಾರೆ ಅಕ್ಷರಗಳು, ಅರ್ಧ ಕೆಲಸ ಆದಂತೆಯೆ!

ರೋಮನ್ ಅಕ್ಷರಗಳಲ್ಲಿ [f,q,w,x,y,z] ಗಳನ್ನು ಅನವಶ್ಯಕ ಎಂದು ತೆಗೆದು ಹಾಕಿದೆ.  ಕೈಯಲ್ಲಿ ಇಪ್ಪತ್ತು ಅಕ್ಷರಗಳು ಇದ್ದರೂ, ಹೆಸರು ಒಂದೂ ಇರಲಿಲ್ಲ. ಉಳಿದ ಹತ್ತೊಂಬತ್ತು ಅಕ್ಷರಗಳನ್ನು ಬಿಟ್ಟು, ಒಂದರ ಮೇಲೆ ಪಕ್ಷಪಾತ ಹೇಗೆ ತೋರಿಸಲಿ? ಯಾವ ತರ್ಕದಿಂದ ಒಂದನ್ನು ಆರಿಸಲಿ? ಯಾವ ನಿರ್ಣಯಕ್ಕು ಬಾರದೆ, ಆ ವಿಚಾರ ದಾರಿ ಅಲ್ಲಿಗೇ ಕೊನೆಗೊಂಡಿತು. ಕೂಸು ಹುಟ್ಟುವ ಮುಂಚೆ ಎರಡಾದರು ಹೆಸರು ಹುಡುಕುವೆ ಎನ್ನುವ ಸ್ಥೈರ್ಯ ಸ್ವಲ್ಪ ಅಳುಕಿದಂತಾಯ್ತು.
 

ಐಡಿಯ ನಂಬರ ಥ್ರೀ – Expert System

ಈಗ ಉಳಿದದ್ದು ಮೂರು ವಾರ. ವಿಚಾರ ಚುರುಕಾಯಿತು.  ಕಂಪ್ಯುಟರುಗಳು ಚುರುಕು ತಾನೆ? ಮೆಗಫ್ಲಾಪ್, ಗಿಗಫ್ಲಾಪ್ ಎಂದು ನಾಗಾಲೋಟದಲ್ಲಿ ನೆಗೆಯುವ ಕಂಪ್ಯೂಟರು ಕಣ್ಣು ಪಿಳುಕಿಸುವುದರಲ್ಲಿ ಸಾವಿರ ಹೆಸರು ಕಂಡುಹಿಡಿಯಬಹುದಲ್ಲ? ಅಂತೆ, ಒಂದು ಗಣನ ವಿಧಿ (computer program) ಅಥವ ಪಂಡಿತಾಂಶ (ಪಂಡಿತ ತಂತ್ರಾಂಶ/ಚತುರಾಂಶ  expert system ) ಒಂದನ್ನು ಬರೆಯುವ ನಿರ್ಧಾರ ಕೈಕೊಂಡೆ.

ಗಾಂಧಾರಿಯ ತೆರನ, ಪಂಡಿತಾಂಶ ಕೂಡ ತಜ್ಞರು ತಮ್ಮ ಕ್ಷೇತ್ರದಲ್ಲಿ ಕಠಿನ ಸಮಸ್ಯೆಗಳಿಗೆ ಉತ್ತರ ಕಂಡು ಹಿಡಿಯಲು ಉಪಯೋಗಿಸುವ ವ್ಯಾವಹಾರಿಕ ನಿಯಮಗಳ ಸಂಹಿತೆ. ನನ್ನ ಈ ಚತುರಾಂಶಕ್ಕೆ ‘ಗಾಂಧಾರಿ’ ಎಂದು ಹೆಸರಿಸಲು ಮರು ಯೋಚನೆ ಇಲ್ಲದೆ ನಿರ್ಧರಿಸಿದೆ.

ಅಷ್ಟೋತ್ತರ ಶತ ನಿಯಮಾವಳಿ

ಉನ್ನತ ಮಟ್ಟದ ಕೆಲವು ನಿಯಮಗಳನ್ನು ನಮೂದಿಸಿಕೊಂಡೆ:
೧. ಹೆಸರು ಸರಳವಾಗಿರಬೇಕು. ಕನ್ನಡ ಮತ್ತು ಅಮೆರಿಕನ್ ನಾಲಗೆಗಳಿಗೆ ಉಚ್ಚರಿಸಲು ಸುಲಭವಾಗಿರಬೇಕು. ಅಂದರೆ 
       ಅ) ಮೂರು ಅಕ್ಷರಗಳಿಗಿಂತ ಉದ್ದವಾಗಿರಕೂಡದು. ಉದಾ: ರವಿ, ಸಮೀರ. 
       ಆ) ಮಹಾಪ್ರಾಣಗಳು ವರ್ಜ್ಯ. ಇವುಗಳನ್ನು ಉಚ್ಚರಿಸಲು ಈಗ ಕನ್ನಡಿಗರಿಗೂ ಉಸುರಿಲ್ಲ.  
       ಇ) ಒತ್ತಕ್ಷರಗಳು ನಿಯಮಬಾಹಿರ. ಉದಾ: ಪ್ರದ್ಯುಮ್ನ.
೨. ಅಮೆರಿಕದಲ್ಲಿ ಇಂಗ್ಲಿಷಿನಲ್ಲಿ ವ್ಯವಹಾರ ಅನಿವಾರ್ಯ. ಹಾಗೆ ರೋಮನ್ ಅಕ್ಷರಗಳಲ್ಲಿ ಹೆಸರನ್ನು ಬರೆದರೆ ಉಚ್ಚಾರ ಸಂದಿಗ್ಧವಾಗಬಾರದು. ಅಂದರೆ ಣ,ತ,ದ,  ಗಳು ಇರಕೂಡದು.
೩. ಹೆಸರು, ಮಗು ದೊಡ್ಡದಾದ ಮೇಲೆ, ತಾನೆ ಸಂಕ್ಷಿಪ್ತಗೊಳಿಸಿಕೊಳ್ಳುವಂತೆ ಇರಬಾರದು. ನಿಯಮ ಒಂದರಲ್ಲಿ ಹೇಳಿದ್ದಕ್ಕಿಂತ ಚಿಕ್ಕ ಹೆಸರು ಇಟ್ಟರೂ ಸಾಕು.
೪. ಒಂದು ವೇಳೆ, ಹೆಸರನ್ನು ಸಂಕ್ಷಿಪ್ತಗೊಳಿಸಿದರೆ ಯಾವ ಭಾಷೆಯಲ್ಲು (ಕನ್ನಡ,ಇಂಗ್ಲಿಷು) ಏನೂ ಅರ್ಥ ಬರಬಾರದು, ಏನನ್ನೂ ಸೂಚಿಸಬಾರದು; ಇಂಗ್ಲಿಷ್ ಹೆಸರುಗಳಿಗೆ ಸಹಜ ಹೋಲಿಕೆಯಿಂದ ಮಾರ್ಪಾಟಾಗುವಂತಿರಬಾರದು. ಉದಾ: ಕೃಷ್ಣ -> ಕ್ರಿಸ್, ಲಕ್ಷ್ಮಿ -> ಲಕ್ಕಿ, ಸಮೀರ್‌ -> ಸ್ಯಾಮಿ  ಆದರೆ ಹೆಸರು ಇಟ್ಟಿದ್ದಕ್ಕು ಎನು ಸಾರ್ಥಕ?
೫. ಹೆಸರನ್ನು ಇಂಗ್ಲಿಷಿನಲ್ಲಿ ಬರೆದರೆ ಬೇರೆ ಅರ್ಥ, ವಿಶೇಷವಾಗಿ ಅಪಾರ್ಥ, ಬರಬಾರದು. ಉದಾ: ವನೀಶ್ (Vanish).
೬. ಅದು ಅತಿ ಬಳಕೆಯಲ್ಲಿರುವ ಹೆಸರಾಗಿರಬಾರದು. ಭಾರತದಲ್ಲಿ ‘ರಾಜ’ ‘ರಾಮ’ಇಂತಹವು ಎಂದು ನನ್ನ ಊಹೆ. ಇಷ್ಟು ಸುಲಭವಾಗಿ ಎಲ್ಲರೂ ರಾಜರಾಮರಾದರೆ ಜಗತ್ತಿನಲ್ಲಿ ರಾಮರಾಜ್ಯ ಸ್ವಯಂಸಿದ್ಧ!
 

ಚತುರಾಂಶ 

ನನ್ನ ಗಣಕ ಪ್ರಯತ್ನ ಎರಡು ವಾರ ಸತತವಾಗಿ ನಡೆಯಿತು. ತಿದ್ದಿ ತಿದ್ದಿ ಅಷ್ಟೋತ್ತರ ಶತ ನಿಯಮಾವಳಿಯನ್ನು ಸಿದ್ಧಪಡಿಸಿದೆ.  ಪರೀಕ್ಷೆಯ ಸಮಯ ಬಂದಿತ್ತು. ಸಂತಸದಿಂದಿಂದ ಬೀಗುತ್ತ, ಗುಂಡಿ ಒತ್ತಿ ಒಳ್ಳೆಯ ಹೆಸರುಗಳ ಪಟ್ಟಿಯನ್ನೆ ನಿರೀಕ್ಷಿಸುತ್ತ ಕುಳಿತೆ. ಇಪ್ಪತ್ತು ನಿಮಿಷಗಳ ನಂತರ ಮೂಡಿ ಬಂದದ್ದು  ಮೂರು ಅಕ್ಷರಗಳ ಅರ್ಥ ಇಲ್ಲದ ಸಮೂಹಗಳು ಮಾತ್ರ! [ಅಯ್ಯೋ]

ಮತ್ತೆ ಎರಡು ದಿನ ಶ್ರಮಿಸಿ ಕೊನೆಗೆ ತಿಳಿದದ್ದು ಏನೆಂದರೆ, ನಾನು ಉಪಯೋಗಿಸಿದ ಚತುರಾಂಶ ಕರಟ (expert system shell) ನನ್ನ ಗಣಕದ ಮೇಲೆ ಸಿಂಬಳ ಹುಳಕ್ಕಿಂತ ನಿಧಾನವಾಗಿ ನಡೆದಿತ್ತು. ಈ ಕ್ಲಿಷ್ಟ ವಿಧಿಯನ್ನು  ನಡೆಸಲು ಇಂಟೆಲ್ ಪೆಂಟಿಯಂ ಏಕೆ, ಸೆಂಟಿಯಂ ಕೂಡ ತೆವಳುತ್ತಿತ್ತು. ಈ ವೇಗದಲ್ಲಿ ಐದು ನೂರು ಹೆಸರುಗಳನ್ನು ಹುಟ್ಟಿಸಲು ಒಂದು ವಾರ ಬೇಕು ಎಂದು ಅಂದಾಜಿಸಿದೆ. ಮಗುವಿನ ಆಗಮನದ ನಿಗದಿತ ಮುಹೂರ್ತಕ್ಕೆ ಉಳಿದದ್ದು ಇನ್ನು ಎರಡೆ ದಿನ!  ಪಂಡಿತಾಂಶ ಕರಟವನ್ನು ಕಂಪ್ಯುಟರು ನಿಧಾನವಾಗಿ ಕಡೆಯುತ್ತಿದ್ದರೆ ನಾನು ಬೇರೆ ಉಪಾಯ ಹುಡುಕತೊಡಗಿದೆ.
 

ಐಡಿಯ ನಂಬರ್‌ ಫೋರ್‌ - C ಗಣಕ ನುಡಿ 

ವೇಗಕ್ಕೆ ಹೆಸರಾದ  ಸಿ ಗಣಕ ಭಾಷೆಯಲ್ಲಿ, ಕೆಲವೆ ನಿಯಮಗಳನ್ನು ಅಳವಡಿಸಿ, ಗಣಕ ವಿಧಿ ಒಂದನ್ನು ಬರೆಯಲು ನಿರ್ಧರಿಸಿದೆ. ಸಮಯಾಭಾವದ ಕಾರಣ ಕಷ್ಟದಲ್ಲಿರುವ ನನಗೆ, ಈ ಗಣಕ ವಿಧಿಯನ್ನು ಬರೆಯಲು ತಾಯಿಯಾಗುವವಳು ಸಹಾಯ ಮಾಡಿಯಾಳು ಎಂದುಕೊಂಡಿದ್ದೆ.  ಒಂಬತ್ತು ತಿಂಗಳಿಂದ ನನಗೆ ಹಿಡಿದ ಹೆಸರು ಬೇನೆ, ಈ ತಳಮಳ, ಮೊದಲ ಹೆರಿಗೆ ನೋವು ಕೂಡ ಬಂದಿರದ ಅವಳಿಗೆ ಹೇಗೆ ತಿಳಿಯಬೇಕು? ಅವಳ ನಿಲವು ಆಗಲೆ ಗೊತ್ತಿತ್ತು - ಒಳ್ಳೆಯ ಹೆಸರು ಹುಡುಕುವುದು ನನ್ನ ಕೆಲಸ. ಸಮಸ್ಯೆ ಇದ್ದದ್ದು ಅಲ್ಲೆ!  ‘ಒಳ್ಳೆಯ ಹೆಸರು’ ಅಂದರೆ ಏನು? ಅವಳಿಂದ ವಿವರಣೆ ಕೇಳುವ ಗೋಜಿಗೆ ನಾನು ಹೋಗಲಿಲ್ಲ. ಅದಕ್ಕೆಲ್ಲ ಸಮಯ ಉಂಟೆ?

 ಧೃತಿ ಕೆಡುವ ಮನುಷ್ಯ ನಾನಲ್ಲ. ಕಾಲೇಜಿನಲ್ಲಿ ವೈದ್ಯಕೀಯ ಸಲಕರಣ ಯಂತ್ರಗಳ ಬಗೆಗೆ ಓದಿರುವ ನನಗೆ  ಅವುಗಳ ಮಿತಿ ಚೆನ್ನಾಗಿ ಗೊತ್ತು. ಅವುಗಳ ನಿಖರತೆ ಅಷ್ಟಕ್ಕಷ್ಟೆ!  ಈ ಯಂತ್ರಗಳನ್ನು ಸಂಪೂರ್ಣವಾಗಿ ಅವಲಂಬಿಸಿರುವ ವೈದ್ಯರು, ನನ್ನ ಗಾಂಧಾರಿ ಪಂಡಿತಾಂಶದಂತೆ, ನಿಯಮಗಳ ಪ್ರಕಾರ ಮೂಹೂರ್ತವನ್ನು ಕುಂಡಲಿ ಹಾಕಿ ಹೇಳುವವರೆ. ಇವರೇನು ಬೆರಳೊತ್ತಿ ಗ್ಯಾರಂಟಿ ಕೊಟ್ಟು ಕೂಸು ಹುಟ್ಟುವ ಕಾಲವನ್ನು ಹೇಳುವರೆ? ಇವರು ಹೇಳಿವುದು ವೈದ್ಯವಾಕ್ಯ, ವೇದವಾಕ್ಯವಲ್ಲ. ಈ ರೀತಿ ಆಲೋಚಿಸುತ್ತ, ಕೂಸು ಒಂದೆರಡು ದಿನ ತಡವಾಗಿಯೆ ಹುಟ್ಟಲಿ ಎಂದು ಗುಟ್ಟಾಗಿ ಬಯಸಿದೆ; ಅಂದರೆ ನನಗೆ ಉಸಿರಾಡಲು ಸ್ವಲ್ಪ ಸಮಯ ಸಿಕ್ಕೀತು.
 

C Coding ಕೊಟ್ಟಿದ್ದೇನು?

 

ಇಡಿ ರಾತ್ರಿ ಎಚ್ಚರ ಕುಳಿತು ಸಿ ಗಣಕ ನುಡಿಯಲ್ಲಿ  ಹೆಸರು ಹುಟ್ಟಿಸುವ ಗಣನ ವಿಧಿಯನ್ನು ಬರೆದುದಾಯಿತು. ವೈದ್ಯರು ಹೇಳಿದ ಮುಹೂರ್ತ ಕಳೆದು ಎರಡು ದಿನ ಆಗಿದ್ದರೂ ಹೆಸರಿಲ್ಲದ ಕೂಸು ಇನ್ನೂ ಹೊಟ್ಟೆಯಲ್ಲಿ ಮಲಗಿತ್ತು. ನಾನು ಏನು ಹೇಳದಿದ್ದರೂ ನನ್ನ ಹೆಸರಿನ ತೊಳಲಾಟವನ್ನು ಅರಿತಂತೆ ಕಂಡಿತು ಈ ನವ ಅಭಿಮನ್ಯು. ನನ್ನೊಡನೆ ಸ್ಪಂದಿಸುತ್ತಿರುವ ಇನ್ನೂ ಹುಟ್ಟದ ನನ್ನ ಮಗುವಿನಿಂದ ಸ್ಫೂರ್ತಿಗೊಂಡು, ಹೆಮ್ಮೆಯಿಂದ ಮೀಸೆಯ ಮೇಲೆ ಬೆರಳಾಡಿಸುತ್ತ,  ಮುಂದಿನ ಕೆಲಸಕ್ಕೆ ಗಮನ ಹರಿಸಿದೆ. ಕಂಪ್ಯೂಟರು ಹುಟ್ಟಿಸಿದ ಸಾವಿರಾರು ಹೆಸರುಗಳು ಮತ್ತು ಅರ್ಥಹೀನ ಅಕ್ಷರ ಗಡಣಗಳನ್ನು ಹೆಕ್ಕಿ ನೋಡುವ ಬೃಹತ್ಕಾರ್ಯ ಇನ್ನೂ ಇತ್ತು.

 

ಪುಸಲಾಯಿತಿ ದೂರವಾಣಿ

 

ವೈದ್ಯರು ನಿಗದಿಸಿದ ದಿನ ಹೇಳ ಹೆಸರಿಲ್ಲದೆ ಹೋಗಿ ಮೇಲೆ ಹತ್ತು ದಿನಗಳು ಕಳೆದವು. ಕೂಸು ಹೊತ್ತಿದ್ದ ನನ್ನ ಹೆಂಡತಿಯನ್ನು ತಪಾಸಣೆಗೆ ಆಸ್ಪತ್ರೆಯಲ್ಲಿ ಬಿಟ್ಟು, ಸಮೀಪದ ನನ್ನ ಆಫೀಸಿಗೆ ಹೋದೆ. ಅಲ್ಲಿ, ಒಳ್ಳೆಯ ಹೆಸರಿನ ಬಗೆಗೆ ಪರಾಮರ್ಶಿಸುತ್ತ ತಿರುಗಾಡಿದೆ. ಮುಹೂರ್ತ ಮುಗಿದ ಮೇಲೆ ಬರತೊಡಗಿದ ಗೆಳೆಯರ ಸಲಹೆಗಳ ಇ-ಮೇಲ್‌ಗಳಿಗೆ ಸ್ವಲ್ಪ ಖಾರವಾಗಿಯೆ ಉತ್ತರಿಸಿದೆ. ಮತ್ತೆ ದೂರವಾಣಿ ಟಿಣ್‌ಟಿಣಿಸಿತು. ಮಹತ್ವದ ಕರೆ. ವೈದ್ಯರು, ಔಷಧಿ ಕೊಟ್ಟು,  ಕೂಸನ್ನು ಹೊರ ಬರಲು ಪುಸಲಾಯಿಸುವರಂತೆ! 
ಔಷಧಿ ಏಕೆ, ನನಗೆ ಒಂದೆ ಒಂದು ಹೆಸರು ಸಿಕ್ಕರೆ ನನ್ನ ಮಗು ಈಗಲೆ ಓಡಿ ಬರುವುದು ಎಂದು ಯಾರಿಗೆ ಹೇಳಲಿ?

 


ಕೂಸು ಹುಟ್ಟಿತು!

ಉಸುರು ಬಿಡದೆ ಹೆಸರು ಹುಡುಕುತ್ತ ಆಸ್ಪತ್ರೆಗೆ ಓಡಿದೆ. ಕೂಸು ಹುಟ್ಟಿತು. ನಿಜವಾಗಿ ಆರೋಗ್ಯವಂತ ಸುಂದರ ಮಗು. ಗುಂಡುಗುಂಡಾದ ಗಂಡು ಕೂಸು. ಕಪ್ಪು ಕೂದಲು, ತೀಡಿದ ಹುಬ್ಬು, ಎದ್ದು ಕಾಣುವ ಕಣ್ಣೆವೆ, ತಿದ್ದಿ ಮಾಡಿದ ಗದ್ದ, ತೊಂಡೆ ತುಟಿಗಳ, ಕನಸಲ್ಲೆ ನಗುವ ಮಗುವಿನ ಮುದ್ದು ಮುಖ ನೋಡುತ್ತ ನನ್ನ ಹೆಸರಿನ ಸಮಸ್ಯೆ ಮರೆತು ಹೋಗಿತ್ತು. ಆ ಹಾಳು ನರಸಮ್ಮ ಬಿಡಬೇಕಲ್ಲ! ಆಸ್ಪತ್ರೆಯಿಂದ ಬಿಡುಗಡೆ ಮಾಡುವ ಮುಂಚೆ ಮಗುವಿಗೆ ಹೆಸರು ಕೊಡಲೇ ಬೇಕು ಎಂದು ತಾಕೀತು ಮಾಡಿದಳು. ನನ್ನ ಹೊಸ ಮಗುವಿನ ತಾಯಿ ನಸು ನಕ್ಕಳು. ಹೌದು, ನಗಬಾರದೇಕೆ, ಆರೋಗ್ಯವಂತ ಮಗುವನ್ನು ಹೆತ್ತು, ನಮ್ಮ ಒಪ್ಪಂದದ ತನ್ನ ಅರ್ಧ ಭಾಗವನ್ನು ಪೂರೈಸಿಕೊಂಡಿದ್ದಳು ಅವಳು. ಇನ್ನು ನನ್ನ ನಾಮಾನ್ವೇಷಣೆಗೆ ಇದ್ದದ್ದು ಇಪ್ಪತ್ನಾಲ್ಕು ಗಂಟೆಗಳು ಮಾತ್ರ! ಅದು ಖಚಿತ. ಏಕೆಂದರೆ ವೈದ್ಯರ ಊಹೆಯಲ್ಲ, ಅದು ನರಸಮ್ಮನ ಆದೇಶ.

 

ಗಂಡು ಮಗುವಾದ್ದರಿಂದ ಹುಡುಗಿಯ ಹೆಸರು ಬೇಕಿಲ್ಲ, ಒಂದು ಹೆಸರು ಹುಡುಕಿದರೆ ಸಾಕು ಎಂದು ಕೂಡಲೆ ಸಂತೋಷ ಇಮ್ಮಡಿ ಆಯ್ತು.  ಅರ್ಧ ಕೆಲಸ ಮುಗಿಸಿದ್ದಕ್ಕೆ ನನ್ನನ್ನು ನಾನೆ ಅಭಿನಂದಿಸಿಕೊಂಡೆ.

ನಿಮಿಷಗಳು ಕಳೆದಿರಲಿಲ್ಲ, ಒಂದೂ ಹೆಸರಿಲ್ಲ ಎಂಬ ವಾಸ್ತವಿಕತೆ, ಅಯ್ಯೋ,  ಮಾಘದ (ಡಿಸೆಂಬರಿನ) ಚಳಿಯಂತೆ ಮತ್ತೆ ಕೊರೆಯತೊಡಗಿತು. 
ಪ್ರಾಮಾಣಿಕವಾಗಿ, ಹೊಸ ಅಪ್ಪನೊಬ್ಬನಿಂದ ಅಪೇಕ್ಷಿಸಬಹುದಾದ್ದನ್ನೆಲ್ಲ ನಾನು ಮಾಡಿದ್ದೆ. ಹೆಸರಿಗಾಗಿ ಇನ್ನು ಬೇರೆ ಏನು ಮಾಡಬಹುದು ಎನ್ನುವ ಐಡಿಯ ಕೂಡ ನನಗೆ ಇರಲಿಲ್ಲ. 

 

 

ತಪಸ್ಸು

ಘೋರ ತಪಸ್ಸಿನ ಕೊನೆಗೆ, ಪುರಾಣ ಕತೆಗಳಲ್ಲಿಯಂತೆ ಆಕಾಶವಾಣಿಯೊಂದು ಮೇಲಿನಿಂದ ಹೆಸರೊಂದನ್ನು ಏಕೆ ಘೋಷಿಸಬಾರದು?

[ಸರಿ, ಕಣ್ಮುಚ್ಚಿ ಪದ್ಮಾಸನದಲ್ಲಿ ಕುಳಿತುಕೊಂಡೆ. ದೇವದೇವತೆಗಳನ್ನೆಲ್ಲ ಅಹ್ವಾನಿಸಿದೆ - ಚಾಲೆಂಜ್‌ ಮಾಡಿದೆ ಎಂದುಕೊಳ್ಳಿ. 
ಆಕಾಶವಾಣಿಯನ್ನು ಕೇಳುವ ಆಸೆಯಿಂದ, ಅಂಗೈಗಳನ್ನು ಬೊಗಸೆ ಮಾಡಿಕೊಂಡು ಕಿವಿಗಳ ಮೇಲೆ ಇಟ್ಟುಕೊಂಡೆ. 
ಆಹ, ಕೇಳಿಸಿದ್ದು ಎಲ್ಲೆಡೆ ಪ್ರತಿಧ್ವನಿಸುವ ಬ್ರಹ್ಮಾಂಡದ ಬಿಳಿ ರವ! (white noise)

ಅದರಲ್ಲೆ ಕರಗಿ ಹೋಗುತ್ತಿರುವ ಒಂದು ಮೆಲು ದನಿ. ತಡೆ ತಡೆ. ಎಲ್ಲಿಂದ? ಏನು ಅದು? 

ಅಲ್ಲಿಂದ, ಅದೆ! ಆಕಾಶದಿಂದ ವಾಣಿ!

ಈಗ, ಆಕಾಶನ ಕಿಲ ಕಿಲ ವಾಣಿ ನನ್ನ ಕಿವಿಗಳನ್ನು ತುಂಬಿ ಅವನ ನಗೆ ಮಿಂಚು ನನ್ನ ಕಣ್ಣುಗಳನ್ನು ಬೆಳಗಿಸುತ್ತಿದೆ.

 


Happy Birthday Akash!

ನಮೋ!
ನಿಮ್ಮವನೇ ಆದ,
ವಿಶ್ವೇಶ್ವರ ದೀಕ್ಷಿತ
 

ಆಧಾರ: 

  1. http://kannadadhvani.com/meluku/hesarigaagi.html  December 12 2006 

ಗಮನಿಸಿ: ಎಲ್ಲ ಚಿತ್ರ ಮತ್ತು ಐಕಾನ್‌ಗಳು ಅನಾಮಿಕರಿಂದ CC BY-NC-ND ಅಡಿಯಲ್ಲಿ ಪರವಾನಿಗೆ ಹೊಂದಿವೆ


   ಕನ್ನಡ ಕಲಿ ಬಿತ್ತರಿಕೆ, ಕನ್ನಡದ ಗುಟ್ಟು, ಡಿಸೆಂಬರ್‌ ೩, ೨೦೨೫ 
                                  ಹೆಸರಿಗಾಗಿ! 
ನಿಜ ಜೀವನದ ಸತ್ಯ ಘಟನೆಗಳ ಹಾಸ್ಯಮಯ ರೋಚಕ ನಿರೂಪಣೆ 
ಬರೆಹ-ಓದು:  ವಿಶ್ವೇಶ್ವರ ದೀಕ್ಷಿತ 
ಸಂಪರ್ಕ:        ನಮೋವಿಶ್ ಯ್ಯಾಟ್ ಯಾಹೂ ಡಾಟ್ ಕಾಮ್ 
ಡಿಸೆಂಬರ್‌ ೩, ೨೦೨೫

ಏನಂತೀರಿ?

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.