ಶಿಕ್ಷಕರ ದಿನ ಎಂದರೆ ನಿಜವಾಗಿ, ನ್ಯಾಯವಾಗಿ, ಈ ದಿನವೇ!
¾ ಎಸ್. ಜಿ. ಸೀತಾರಾಮ್, ಮೈಸೂರು
[ಪ್ರಿಯ ಕನ್ನಡ ಕಲಿಗಳೆ,
ಬೆಳಿಗ್ಗೆ ಎದ್ದ ಕೂಡಲೆ ಮಿಂಚೆಯಲ್ಲಿ ಕಂಡ ಈ ಪತ್ರವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಮೈಸೂರು ನಿವಾಸಿಗಳಾದ ಶ್ರೀ ಎಸ್.ಜಿ. ಸೀತಾರಾಮ್ ಕಳುಹಿಸಿದ ಈ ಸಮಯೋಚಿತ ಸಂದೇಶ ಕಣ್ ತೆರೆಸುವಂತಿದೆ. &ಸಾವಿತ್ರಿಬಾಯಿ ಫುಲೆ ಅವರಂಥ ಮಹಾನ್ ಶಕ್ತಿಗಳನ್ನು ಸ್ಮರಿಸಿಕೊಳ್ಳುವುದು ಇಂದು ಅಗತ್ಯವಾಗಿದೆ. ದುಷ್ಟರನ್ನು ಶಿಕ್ಷಿಸುವ ದುರ್ಗೆಗಿಂತ ಸಮಾಜ ಮತ್ತು ಸಂಪ್ರದಾಯಗಳ ಕತ್ತಲೆಯಲ್ಲಿ ಬಳಲುತ್ತ ಕೊಳೆಯುತ್ತಿದ್ದವರನ್ನು ಬೆಳಕಿನೆಡೆಗೆ ಒಯ್ಯುವ ಇಂಥ ಭರ್ಗೆಯರು ಬೇಕು. ಕನ್ನಡ ಕಲಿಯ ಎಲ್ಲ ಶಿಕ್ಷಕರಿಗೂ ಈ ದಿನ ಹೆಮ್ಮೆಯ ದಿನ, ಸ್ಫೂರ್ತಿಯ ದಿನ ಎನಿಸುವುದು ಖಂಡಿತ.]
( ಪೂರಕ ಮತ್ತು ಹೆಚ್ಚಿನ ಮಾಹಿತಿಗಾಗಿ ಇದನ್ನು ಓದಿ : ದೀನರಿಗೆ ದಿಕ್ಕಾದ ದಿಗ್ಗಜೆ : ಸಾವಿತ್ರಿಬಾಯಿ ಫುಲೆ
ಆತ್ಮೀಯರೇ:
ಈವೊತ್ತು (ಜನವರಿ ಮೂರು) “ಸಾವಿತ್ರಿಬಾಯಿ ಫುಲೇ” ಅವರ ಜನ್ಮಸ್ಮರಣದಿನ. “ಕೆಲವು ವರ್ಗಗಳು ವಿದ್ಯಾರ್ಜನೆ ಮಾಡುವುದೇ ಮಹಾಪಾಪ” ಎಂಬ ನಂಬಿಕೆಯು ಗಾಢವಾಗಿದ್ದ, ಒಂದೂವರೆ ಶತಮಾನಕ್ಕೂ ಪೂರ್ವದ ಪತನೋನ್ಮುಖ ಕಾಲಮಾನದಲ್ಲಿ, ಕ್ರೂರ ಸಂಪ್ರದಾಯವಾದಿಗಳ ಹಲ್ಲೆ, ಹೀಯಾಳಿಕೆ, ಹೊಡೆತ ಮತ್ತು ಹಲಬಗೆಯ ಕಾಟ-ಕಿರುಕುಳ, ಸವಾಲು-ಸಮಸ್ಯೆಗಳಿಗೆ ಗುಂಡಿಗೆಯೊಡ್ಡಿ, ವಿದ್ಯಾವಂಚಿತರಾಗಿ, ಹೀನಾಯವಾದ ಹೊಡೆಬಾಳನ್ನು ಸಾಗಿಸುತ್ತಿದ್ದ ಶೋಷಿತ ಜನವರ್ಗಗಳಲ್ಲಿ, ಅದರಲ್ಲೂ ಹುಡುಗಿಯರಲ್ಲಿ, “ಬಂಧನದಿಂದ ಮುಕ್ತಿಗೆ ಎರಡಕ್ಕರವೇ ಸಾಕು!” ಎಂಬ ಚೊಕ್ಕ ತಿಳಿವಳಿಕೆಯನ್ನು ಬಿತ್ತಿ, ಹುರಿದುಂಬಿ, ಮೂಲೆಮೂಲೆಗಳಲ್ಲಿ ಮಟ್ಟಮೊದಲ ಪಾಠಶಾಲೆಗಳನ್ನು ತೆರೆದು, ಜ್ಞಾನಜ್ಯೋತಿಯನ್ನು ದೀನದಲಿತರ ಮನೆಮನೆಗಳಲ್ಲೂ ಬೆಳಗಿಸಿ, ಕಲಿಕೆಯ ಬುಡಮಟ್ಟದಲ್ಲಿ ಮೊದಲ ಸಂಚಲನವನ್ನೆಬ್ಬಿಸಿದ “ಸಾವಿತ್ರಿಬಾಯಿ” ಅಲ್ಲವೇ ನಮ್ಮ “ಮೊದಲ ಗುರುವು”?
ದಮನಿತ-ಪೀಡಿತ-ತಿರಸ್ಕೃತ-ಧ್ವನಿವಂಚಿತ ಸಮುದಾಯಗಳನ್ನು ಹೀಗೆ ’ಸಾವಿನಿಂದ ಉಳಿಸಿದ’ ಅವರು “ಸಾವಿತ್ರಿ”ಯಷ್ಟೇ ಅಲ್ಲ, ಸತ್ಪಾತ್ರರಿಗೆ ಉದಾತ್ತ ವಿದ್ಯಾದಾನ ಮಾಡಿದ “ಸರಸ್ವತಿ” ಕೂಡ. ಸೋಲುಂಡಿದ್ದವರಿಗೆ “ಸೊಲ್ಲು” ನೀಡಿದ “ಸೊಲ್ವೆಣ್.” ಹೀಗಾಗಿ, ನಮ್ಮ ಶಿಕ್ಷಣವಲಯದ ಮೊದಲ ಮರ್ಯಾದೆ, ಪ್ರಥಮ ನಮಸ್ಕಾರ-ಪುರಸ್ಕಾರ ಈ “ಸರಸ್ವತಿಬಾಯಿ”ಯವರಿಗಲ್ಲದೇ ಬೇರಾರಿಗೆ ಸಲ್ಲಬೇಕು?
ಇದಲ್ಲದೆ, ಸಮಾಜಸುಧಾರಕರಾಗಿ, ಜಾತೀಯತೆ, ಬಾಲ್ಯವಿವಾಹ, ಶಿಶುಹತ್ಯೆ ಮುಂತಾದ ಘೋರ ಸಾಮಾಜಿಕ ಪಿಡುಗಳ ವಿರುದ್ಧವೂ, ಹೆಣ್ಮಕ್ಕಳ ಹುಟ್ಟುಹಕ್ಕುಗಳ ಪರವೂ, ಮುಂಬರುವವರಿಗೆ ಮಾದರಿಯಾಗುವಂತೆ ಕೆಚ್ಚಿನಿಂದ ಕಾದಾಡಿ, ಕಡೆಗೆ ಜನಸೇವೆಯಲ್ಲೇ (ಪ್ಲೇಗ್-ಪೀಡಿತನೋರ್ವನನ್ನು ಉಳಿಸಲು ಹೋಗಿ) ಮಡಿದ ಸಾವಿತ್ರಿಬಾಯಿಯವರು ಅಪ್ಪಟ “ಹುತಾತ್ಮ”ರು! “ ಮಹಾತ್ಮ ”ಜೋತಿಬಾ ಅವರ ಸಾರ್ಥಕ ಸಂಗಾತಿಯಾದವರು!"
“ಮಾಲಿ” ಎಂಬ "ತೋಟಗಾರ-ಹೂವಾಡಿಗ" ಪರಂಪರೆಯವರಾಗಿದ್ದು, “ಫುಲೇ” ಅರ್ಥಾತ್ “ಹೂವು” ("ಪ್ರಫುಲ್ಲ ಪುಷ್ಪ") ಎಂಬ ಹೆಸರಾಂತಿದ್ದ ಈ ದಂಪತಿಯು, ಮಕ್ಕಳ ಓದಿಗಾಗಿ “ಬಾಲ-ಉದ್ಯಾನ” (“kindergarten”) ಬೆಳೆಸಿದುದು ಸೋಜಿಗವೇ ಸರಿ. ಹಿಸುಕಿ-ಹೊಸಕಿ ಹೋಗುತ್ತಿದ್ದ ಹೂಮೊಗ್ಗುಗಳು ಹೊರಳಿ ಹೊಸತಾಗಿ ಹಿಗ್ಗಿ, ಹಸನಾದ ಹೂಗಂಪನ್ನು ಹೊರಹೊಮ್ಮುವಂತಾಗಿಸಿದ, ಹಾಗೂ ವಿದ್ಯೆಯ ಗಂಧವೇ ತಾಕದಿದ್ದವರಲ್ಲಿ ಅದರ ಪರಿಮಳವನ್ನು ಅರಳಿಸಿದ, ಫುಲೇ! ದಂಪತಿಗಿದೋ, ಹೂಗೊಂಚಲೊಂದಿಗೆ, "ಭಲೇ! ಭಲೇ!" ಜೈಕಾರ.
ಸಾವಿತ್ರಿಬಾಯಿಯವರ ಸ್ಮರಣೆಯಲ್ಲಿ ಈ ದಿನವು ಮಹಾರಾಷ್ಟ್ರದಲ್ಲಿ “ಬಾಲಿಕಾ ದಿನ” ಆಗಿದೆ, ನಿಜ. ಆದರೆ, ಸಾವಿತ್ರಿಬಾಯಿ ಅವರ ದಿವ್ಯ ಸ್ಮರಣೆಯಲ್ಲಿ ಅವರ ಈ ಜನ್ಮದಿನಾಂಕವನ್ನೇ “ಶಿಕ್ಷಕರ ದಿನ-ಅಕ್ಷರದ ದಿನ” ಎಂದು ನ್ಯಾಯಸಮ್ಮತವಾಗಿ, ಆದರಪೂರ್ವಕವಾಗಿ ದೇಶಾದ್ಯಂತ ಮಾನ್ಯಮಾಡಬೇಕು. ಇಡೀ ಭಾರತವು, “ಆ ಮಾತಾಯಿ ನಮ್ಮ ನಡುವೆ ಎದ್ದು ಬಂದು, ಬಿದ್ದು ಬೇನೆಯಲ್ಲಿದ್ದ ಲೆಕ್ಕವಿಲ್ಲದಷ್ಟು ಮಂದಿ ಎದ್ದುಬರುವಂತೆ ಮಾಡಿದಳಲ್ಲ!" ಎಂಬ ಅಭಿಮಾನದಿಂದ, ಧನ್ಯತೆಯಿಂದ ಅವರನ್ನು ಈವೊತ್ತು ನೆನಪಿಸಿಕೊಳ್ಳಬೇಕು.
ಹಾಗಾದರೆ, “ಸೆಪ್ಟೆಂಬರ್ ೫” ಯಾವ ದಿನಾಚರಣೆಯಾಗಬೇಕು? ಅದು “ಪ್ರಾಧ್ಯಾಪಕರ ದಿನ-ಪಂಡಿತರ ದಿನ” ಎಂದಾಗಿ, ಉನ್ನತ ಅಧ್ಯಯನ, ಅಧ್ಯಾಪನ, ಸಂಶೋಧನ, ಪ್ರವಚನ ಇತ್ಯಾದಿ ಕಾರ್ಯಗಳಲ್ಲಿ ನಿರತರಾಗಿರುವವರಿಂದ ಆಚರಿಸಲ್ಪಡಬಹುದು. “ಶಿಕ್ಷಣ” ಎಂಬುದನ್ನು ತಳಹದಿಯಾಗಿ ಒದಗಿಸುವ “ಮೇಷ್ಟ್ರು-ಮೇಡಮ್ಮು”ಗಳ ಹೆಸರಿನಲ್ಲಿ ಈ ದಿನವು “Schoolteachers’ Day” ಎಂದಾಗಿ, ಆ ದಿನವು “Lecturers’ Day, Professors’ Day or Scholars’ Day” ಎಂದಾಗಬಹುದಲ್ಲವೇ?
ಅಕ್ಕರದ ಕಲಿಕೆಯಲಿ ಅಕ್ಕರೆಯೆಂದಿಗೂ ತುಂಬಿರಲಿ!
ಶಿಕ್ಷಣ ಎಂದಾಕ್ಷಣ “ಶಿಕ್ಷೆ”ಯು ಪ್ರತ್ಯಕ್ಷವಾಗದಿರಲಿ!
ನಿಮ್ಮ
ಎಸ್.ಜಿ. ಸೀತಾರಾಮ್
ಕನ್ನಡಕಲಿ, ಬಿತ್ತರಿಕೆ, ಜನವರಿ ೦೩, ೨೦೨೪
ಶಿಕ್ಷಕರ ದಿನ ಎಂದರೆ ನಿಜವಾಗಿ, ನ್ಯಾಯವಾಗಿ, ಈ ದಿನವೇ!
ಲೇಖಕರು: ಎಸ್. ಜಿ. ಸೀತಾರಾಮ್, ಮೈಸೂರು
ತಾಗುಲಿ : Savitribai Phule, Teachers Day, S.G. Seetharam