ಮನ್ವಂತರದ ಮನುಜೆ: ಮೇರಿ ಕ್ಯೂರಿ

ಮನ್ವಂತರದ ಮನುಜೆ: ಮೇರಿ ಕ್ಯೂರಿ

ಎಸ್. ಜಿ. ಸೀತಾರಾಮ್

ನುಡಿ ನಮನ

ಭೂಮಿ ಎನ್ನುವ ಅಂತರಿಕ್ಷ ನೌಕೆಯಲ್ಲಿ ತೇಲಿ ಹೋದ, ಶ್ರೇಷ್ಠ ಚಕ್ರವರ್ತಿಗಳು, ಪ್ರವಾದಿಗಳು, ಭೂಮ್ಯತೀತ ಪ್ರತಿಭೆಗಳು, ಕ್ರಾಂತಿಕಾರಿಗಳು, ಮುಂತಾದ, ಕೋಟಿ ಕೋಟಿ ಮರ್ತ್ಯ ಮನುಜರ ನಡುವೆ, ಮೇರಿ ಕ್ಯೂರಿಯ ಹೆಸರು ಮಿನುಗುತ್ತದೆ; ಸುರಲೋಕದ ಖಜಾನೆಗಳಲ್ಲಿನ ವಜ್ರಗಳಂತೆ, ಬಹುತೇಕ, ಏಕಾಂಗಿಯಾಗಿ ಹೊಳೆಯುತ್ತದೆ. "ಚಾಲೆಂಜರ್ ಆಳದಿಂದ ಗೌರೀಶಂಕರ ಶಿಖರದ ತುದಿಗೆ" ಅವಳ ಏರಿಕೆಯು ಮಾನವ ಇತಿಹಾಸದಲ್ಲಿ, ಮೀರಿಸಲು ಅಸಾಧ್ಯವಾದ, ಅಸಮಾನ, ಅಪ್ರತಿಮ,  ಸಾಧನೆಯ ಸಂಕೇತ. ಜಗತ್ತು ಇರುವವರೆಗೆ, ತನ್ನ ಸಣ್ಣ ಅಸ್ಥಿರ ಶರೀರದಲ್ಲಿ ಮತ್ತು  ಅಲ್ಪಾವಧಿಯ ಜೀವಮಾನದಲ್ಲಿ ಅವಳು ಹುದುಗಿಸಿದ ಸೃಜನಶೀಲ ಶಕ್ತಿಯನ್ನು ಮನುಕುಲವು ವಿಸ್ಮಯದಿಂದ ನೋಡುತ್ತದೆ;  ಮಾನವನ ತಿಳಿವು ಮತ್ತು ವಿಕಾಸದ ಮೇರೆಗಳನ್ನು ಏಕಾಂಗಿಯಾಗಿ ವಿಸ್ತರಿಸಿದ ಅವಳ ಕೆಚ್ಚೆದೆಯ ಬದುಕಿನಿಂದ ನಿರಂತರವಾಗಿ ಚೈತನ್ಯವನ್ನು ಪಡೆಯುತ್ತಿರುತ್ತದೆ.

Marie Curie - year1903

ಮೇರಿಯ ಮಹಿಮೆ
ಜಗತ್ತಿನಲ್ಲಿ, ಮೇರಿ ಕ್ಯೂರಿಯ  ಹೆಸರನ್ನು ಕೇಳಿಲ್ಲದವರು ಬಹಳ ವಿರಳ. ಪೋಲಂಡ್ ದೇಶದ ವಾರ್ಸಾ ನಗರದಲ್ಲಿ ೧೮೬೭ ರ ನವಂಬರ ೭ ರಂದು ಜನನ. ೧೯೩೪ರಲ್ಲಿ ೬೬ನೆ ವಯಸ್ಸಿನಲ್ಲಿ, ಇನ್ನೆಷ್ಟೋ ಸಾಧಿಸಬೇಕಾಗಿದ್ದ ಮೇರಿ ಕ್ಯೂರಿ, ತನ್ನದೆ ವೈಜ್ಞಾನಿಕ ಆವಿಷ್ಕಾರದ ವಿಕಿರಣಗಳಿಗೆ ಎಡೆಯಾಗಿ, ನಿಧನಳಾದಳು.   ವಿಕಿರಣ ಕ್ರಿಯಾಶಕ್ತಿಯ ಸಂಶೋಧನೆಗಾಗಿ ೧೯೦೩ರಲ್ಲಿ ಭೌತವಿಜ್ಞಾನ, ಮತ್ತೂ, ರೇಡಿಯಂ ಪೋಲೋನಿಯಂಗಳ ಸಂಶೋಧನೆಗಾಗಿ ೧೯೧೧ರಲ್ಲಿ ರಸಾಯನವಿಜ್ಞಾನ ಎರಡರಲ್ಲೂ ನೊಬೆಲ್ ಬಹುಮಾನ ಪಡೆದು, ಮೊತ್ತ ಮೊದಲ ನೊಬೆಲ್ ಮಹಿಳೆ ಎಂದು ಯಶೋವಂತಳಾದಳು. ನೊಬೆಲ್ ಬಿರುದಿಗೇ ಒಂದು ವಿಶಿಷ್ಟ, ವಿಶ್ವವ್ಯಾಪಿ ಪ್ರತಿಷ್ಠೆಯನ್ನು ತಂದು ಕೊಟ್ಟು, ಇತಿಹಾಸದಲ್ಲಿ ಅಮರಳಾಗಿ ನಿಂತ ಮೇರಿ ಕ್ಯೂರಿಯ ಜೀವನ್ಮಹಿಮೆಯು, ವಿಜ್ಞಾನಿಗಳಷ್ಟೇ ಅಲ್ಲ, ಸರ್ವರೂ, ಸರ್ವದಾ ಮೆಲುಕು ಹಾಕಬೇಕಾದಂಥ ಮಹಾರ್ಥಕ ಚರಿತೆ; “ಮಾನವನಾಗಿ ಹುಟ್ಟಿದ್ಮೇಲೆ ಏನೇನ್ ಓದ್ದೀ?” ಎಂದರೆ “ಮೇರಿ ಕ್ಯೂರಿ ಕತೆ ಓದಿದೆ!” ಎಂಬ ಹರ್ಷೋದ್ಗಾರವನ್ನು ಹೊರಪಡಿಸುವ, ಹುರಿಯುಕ್ಕಿಸುವಂಥ ವಿಷಯ.

ಮೇರಿ ಕ್ಯೂರಿಯು ಕ್ಯಾನ್ಸರ್-ನಿಯಂತ್ರಕ ವಿಕಿರಣ ಚಿಕಿತ್ಸೆಯನ್ನು ಮೊತ್ತಮೊದಲ ಬಾರಿಗೆ ಬಳಕೆಗೆ ತಂದಳೆಂಬುದನ್ನೂ, ಪ್ರಥಮ ಮಹಾಯುದ್ಧದಲ್ಲಿ ಸಂಚಾರಿ ಎಕ್ಸ್-ರೇ ವಾಹನ ಎಂಬ ಯಂತ್ರವನ್ನು ಆವಿಷ್ಕರಿಸಿ, ಲಕ್ಷಾಂತರ ಸೈನಿಕರ ಪ್ರಾಣ ಮತ್ತು ಅಂಗಾಂಗಗಳನ್ನು ಉಳಿಸಿದಳೆಂಬುದನ್ನೂ ಗುರುತಿಸಿದರೆ, ಆಕೆಗೆ ನಿಜಕ್ಕೂ ವೈದ್ಯಕೀಯ ಹಾಗೂ ಶಾಂತಿಸೇವಾ ಸಾಧನೆಗಳಿಗಾಗಿಯೂ ಒಂದೊಂದು ’ನೊಬೆಲ್ ಸಮ್ಮಾನ’ ಸಲ್ಲಬೇಕಿತ್ತು ಎನಿಸದಿರದು; ಆ ಪರಿಯ ಲೋಕಾಧಿಕ ಚೇತನ, ಮೇರಿ ಕ್ಯೂರಿ.

ಹಿರಿಮೆಯ ಗಣಿ
ಮೇರಿ ಕ್ಯೂರಿಯು ತಾನಷ್ಟೇ ನೊಬೆಲ್ ಪುರಸ್ಕಾರ ಗಳಿಸಲಿಲ್ಲ; ತನ್ನ ಇಡೀ ಕುಟುಂಬವನ್ನೇ ಒಂದು ಅಪೂರ್ವ, ಆದರ್ಶ ನೊಬೆಲ್ ಗಣಿ ಮಾದರಿ ಬೆಳೆಸಿದಳು. ಒಂದೆಡೆ ಆಕೆಯ ಪತಿ ಪಿಯರ್ ಕ್ಯೂರಿಯು ಆಕೆಯೊಡನೆ ೧೯೦೩ರ ಭೌತವಿಜ್ಞಾನ ನೊಬೆಲ್ ಬಹುಮಾನವನ್ನು ಹಂಚಿಕೊಂಡಂತೆ, ಇನ್ನೊಂದೆಡೆ ಆಕೆಯ ಹಿರಿಯ ಮಗಳು ಐರೀನ್ ಮತ್ತು ಅಳಿಯ ಫ಼್ರೆಡರಿಕ್ ತಮ್ಮ ನಡುವೆ ೧೯೩೫ರ ರಸಾಯನವಿಜ್ಞಾನ ನೊಬೆಲ್ ಪಾರಿತೋಷಿಕವನ್ನು ಹಂಚಿಕೊಂಡರು. ಇಷ್ಟು ಸಾಲದಾಯಿತೆಂಬಂತೆ, ಆಕೆಯ ಕಿರಿಯ ಮಗಳು ’ಈವ್’ಳ ಪತಿ ಹೆನ್ರಿಯು ’ಯೂನಿಸೆಫ಼್’ನ ಪರವಾಗಿ ೧೯೬೫ರ ಶಾಂತಿ ಸೇವಾ ನೊಬೆಲ್ ಪಾರಿತೋಷಿಕವನ್ನು ಸ್ವೀಕರಿಸಿದನು. (ಉತ್ತಮ ಲೇಖಕಿ ಮತ್ತು ಪಿಯಾನೋ ವಾದ್ಯಗಾರ್ತಿ ಆಗಿ, ೨೦೦೭ರವರೆಗೂ, ತನ್ನ ೧೦೩ನೆಯ ವರ್ಷದ ಹತ್ತಿರಕ್ಕೂ ಜೀವಿಸಿದ್ದ ’ಈವ್’, ತನ್ನ ತಾಯಿ ಮೇರಿ ಕ್ಯೂರಿಯ ಅನನ್ಯ ಜೀವನಚರಿತ್ರೆಯನ್ನು ಬರೆದು ಮಹದುಪಕಾರ ಮಾಡಿದಳು.)

ಸಾಧನೆಗಳಿಂದ ಅಮರತ್ವ
ನೊಬೆಲ್ ಅಲ್ಲದೆ, ಇನ್ನೂ ಹತ್ತು ಹಲವು ಪ್ರತಿಷ್ಠಾಪೂರ್ಣ ಪ್ರಶಸ್ತಿ, ಪ್ರಶಂಸೆಗಳಿಂದ ಮೇರಿ ಕ್ಯೂರಿಯು ಅಲಂಕರಿಸಲ್ಪಟ್ಟಿದ್ದಳು, ಮತ್ತು ಕ್ಯೂರಿಯಂ, ಕ್ಯೂರೈಟ್, ಕ್ಯೂರಿ (Ci ಸಂಕೇತದ ವಿಕಿರಣದ ಮಾಪನಾಂಕ ಕ್ಯೂರಿ,) ಇತ್ಯಾದಿ ವಿವಿಧ ನಾಮಕರಣಗಳ ಮೂಲಕ ಆಕೆಯ ಸಾಧನೆಗಳನ್ನು ಚಿರಸ್ಥಾಯಿಯಾಗಿಸಲಾಯಿತು. ಚಂದ್ರನ ಮೇಲಿನ ಕುಳಿಯೊಂದಕ್ಕೆ, ಅಂತೆಯೇ ಮಂಗಳಗ್ರಹದ ಮೇಲೆ ಅಡ್ಡಾಡುವ ಸಂಶೋಧಕವಾಹನವೊಂದಕ್ಕೆ ’ಮೇರಿ ಕ್ಯೂರಿ’ಯ ಹೆಸರನ್ನು ಇಡಲಾಯಿತು. ಪ್ರಸಿದ್ಧ ’ಪ್ಯಾರಿಸ್ ಪ್ಯಾನ್ತಿಯನ್’ ಆವರಣದಲ್ಲಿ ಆಕೆಯ ಪಾರ್ಥಿವ ಅವಶೇಷಕ್ಕೆ ಸ್ಮಾರಕವನ್ನು ಅರ್ಪಿಸಲಾಯಿತು. ಇಷ್ಟೇ ಅಲ್ಲದೆ, ಫ಼್ರ್ಯಾನ್ಸ್‌ನಲ್ಲಿ ಒಂದು ವಿಶ್ವವಿದ್ಯಾಲಯ ಹಾಗೂ ಅಗ್ರಮಾನ್ಯ ಜೀವವೈದ್ಯವಿಜ್ಞಾನ ಸಂಶೋಧನ ಕೇಂದ್ರ, ಹಾಗೆಯೇ ಆಕೆಯ ತಾಯ್ನಾಡಾದ ಪೋಲೆಂಡ್‌ನಲ್ಲೂ ಒಂದು ವಿಶ್ವವಿದ್ಯಾಲಯ ಹಾಗೂ ಪ್ರಮುಖ ಕ್ಯಾನ್ಸರ್ ಸಂಶೋಧನ ಕೇಂದ್ರ, ಆಕೆಯ ನೆನಪಿನಲ್ಲಿ ನೆಲೆಗೊಂಡಿವೆ.

ಜೀವನದಲ್ಲಿ ಬೆಂದಳು - ವಿಜ್ಞಾನಕ್ಕೆ ಅತ್ಮಾಹುತಿ ಕೊಟ್ಟಳು
ಇಂಥ ’ಗಗನಸದೃಶ’ ವ್ಯಕ್ತಿಯು ನಿಜವಾಗಿಯೂ, ಇತ್ತೀಚೆಯವರೆಗೂ ನಮ್ಮ ನಡುವೆಯೇ ಇದ್ದಳೇ ಎಂದು ಅಚ್ಚರಿಪಡುವಾಗ, ಮೇರಿ ಕ್ಯೂರಿಯು ತನ್ನ ಬದುಕಿನಲ್ಲಿ ಎದುರಿಸಬೇಕಾಗಿ ಬಂದ ಸವಾಲುಗಳನ್ನೂ, ದುರಂತಗಳನ್ನೂ, ತಾರತಮ್ಯಗಳನ್ನೂ, ಅಪನಿಂದೆ-ಅಪಮಾನಗಳನ್ನೂ ಪರಿಗಣಿಸಬೇಕಾಗುತ್ತದೆ. ಆಕೆಯು ಒಬ್ಬ ಬಡ ಶಾಲಾಮಾಸ್ತರನ ಕುಟುಂಬದಲ್ಲಿ ಹುಟ್ಟಿದ್ದಳು; ಪರಕೀಯರಿಂದ ತುಳಿಯಲ್ಪಟ್ಟ, ಇಂಗ್ಲಿಶ್ ಮಾತನಾಡದ, ಹಿಂದುಳಿದ ದೇಶವೊಂದರಿಂದ (ಪೋಲೆಂಡ್) ವಲಸೆ ಹೋಗಿದ್ದಳು; ೧೦ನೇ ವಯಸ್ಸಿನಲ್ಲೇ ತಾಯಿಯನ್ನೂ, ಮತ್ತು ನಡುಹರೆಯದಲ್ಲೇ, ಭೀಕರ ಅಪಘಾತವೊಂದರಲ್ಲಿ, ತನ್ನ ಪ್ರಿಯ ಪತಿ-ಸಹಯೋಗಿ ’ಪಿಯರ್’ನನ್ನೂ ಕಳೆದುಕೊಂಡಿದ್ದಳು; ಬಾಳಿನುದ್ದಕ್ಕೂ ತೀವ್ರ ದೇಹಬಾಧೆಗಳಿಂದ ಪೀಡಿತಳಾಗಿದ್ದಳು (ಕಡೆಗೆ, ಮೇರಿ ಮತ್ತು ಮಗಳು ’ಐರೀನ್’, ವಿಕಿರಣ ವಿಷಕ್ಕೆ ತುತ್ತಾಗಿ, ವಿಜ್ಞಾನಕ್ಕೆ ಹುತಾತ್ಮರಾದರು); ಮತ್ತು ಎಲ್ಲಕ್ಕೂ ಮೇಲಾಗಿ, ’ಹೆಣ್ಣು’ ಎಂಬ ಒಂದೇ ಕಾರಣದಿಂದಾಗಿ, ವಿಜ್ಞಾನಿವಲಯದಲ್ಲಿ ತೀವ್ರ ಅನ್ಯಾಯಕ್ಕೂ ಈಡಾಗಿದ್ದಳು. ಆದರೆ, ಇವೆಲ್ಲ ಅಡೆತಡೆಗಳನ್ನೂ ಆಕೆಯು ತನ್ನ ಸರಳತೆ-ನಮ್ರತೆ, ಧೈರ್ಯ-ಸಾಹಸ, ಶಿಸ್ತು-ನಿಷ್ಠೆ ಮುಂತಾದ ಗುಣವೈಶಿಷ್ಟ್ಯಗಳ ತೇಜಸ್ಸಿನಿಂದಲೂ, ತನ್ನ ಅಪ್ರತಿಮ ಜ್ಞಾನಪ್ರೇಮ-ವಿಜ್ಞಾನತಪಸ್ಸಿನ ಪ್ರತಾಪದಿಂದಲೂ ಮೆಟ್ಟಿ ಮೇಲೇರಿದಳು. ಸ್ತ್ರೀಯರ ಅಭಿವೃದ್ಧಿಯ ವಿರುದ್ಧ ಒಡ್ಡಿದ್ದ ಎಲ್ಲ ಕೃತಕ, ಕೃತ್ರಿಮ ಮೇರೆಗಳನ್ನೂ, ಕೇವಲ ತನ್ನ ಆಂತರಿಕ ಸತ್ತ್ವದ ಮಹಾಸ್ಫೋಟದಿಂದ ಭೇದಿಸಿ ಮುನ್ನಡೆದಳು.
ಇನ್ನು ’ತ್ಯಾಗ’ದ ವಿಷಯದಲ್ಲಂತೂ, ಇಂದು ಶತಕೋಟಿ ಡಾಲರ್‌ಗಳಿಗೂ ಮಿಗಿಲಾಗಿ ಬೆಲೆಬಾಳುವ, ತನ್ನ ಹಾಗೂ ಪತಿ ಪಿಯರ್‌ನ ’ಪೇಟೆಂಟ್ ಹಕ್ಕು’ಗಳನ್ನು ಮಾನವಜನಾಂಗಕ್ಕೆ ಕೊಡುಗೆಯಾಗಿತ್ತು, ಐಷಾರಾಮವನ್ನು ಧಿಕ್ಕರಿಸಿ, ಒಂದು ಕ್ರಾಂತಿಕರ ಮೇಲ್ಪಂಕ್ತಿಯನ್ನೇ ಆಕೆಯು ಹಾಕಿಕೊಟ್ಟಳು. ವಿಜ್ಞಾನಯೋಗಿ ಮೇರಿ ಕ್ಯೂರಿಯು, ವ್ಯಕ್ತಿವಿಕಾಸವು ಎಂಥ ರೋಮಾಂಚಕ ಆಯಾಮಗಳನ್ನು ಪಡೆದುಕೊಳ್ಳಬಹುದೆಂಬುದನ್ನು ಅದ್ಭುತ-ಅಭೂತಪೂರ್ವ ರೀತಿಯಲ್ಲಿ ನಿದರ್ಶಿಸಿ ಮಿನುಗಿದಳು.

ಮನುಕುಲಕ್ಕೆ ಮೇರು ತಾರೆ ಆದಳು
ಮೇರಿ ಕ್ಯೂರಿಯ ಅನುಪಮ ಸಾಧನೆಗಳ ಹಿನ್ನೆಲೆಯಲ್ಲಿ, ೨೦೦೮ರಲ್ಲಿ ಆಕೆಯನ್ನು ಜಗತ್ತಿನ ಮಹೋನ್ನತ ಮಹಿಳಾ ವಿಜ್ಞಾನಿ ಎಂದು ಇಂಗ್ಲೆಂಡ್‌ನ ಪ್ರಖ್ಯಾತ ನ್ಯೂ ಸಯನ್ಟಿಸ್ಟ್ ಪತ್ರಿಕೆಯು ಘೋಷಿಸಿ, ಆದರಿಸಿತು. ಮೇರಿ ಕ್ಯೂರಿಯು ’ಕೆಮಿಸ್ಟ್ರಿ ನೊಬೆಲ್’ ಪಡೆದ ಶತಾಬ್ದಿ ಸ್ಮರಣಾರ್ಥ, ೨೦೧೧ ಸಾಲನ್ನು, ಅಂತಾರಾಷ್ಟ್ರೀಯ ರಸಾಯನವಿಜ್ಞಾನ ವರ್ಷ ಎಂದು ಆಚರಿಸಲಾಯಿತು. ವಾಸ್ತವವಾಗಿ, ೨೦ನೇ ಶತಮಾನದ ವೈಜ್ಞಾನಿಕ ಕ್ರಾಂತಿಯ ಮೇಲೆ ಆಕೆಯು ಬೀರಿದ ಬೃಹತ್ ಪರಿಣಾಮವನ್ನು ಗಮನಿಸಿ, ಮಹಿಳಾ ಎಂಬ ವಿಶೇಷಣವನ್ನು ತೊರೆದು, ಇತಿಹಾಸದ ಸರ್ವೋಚ್ಚ ವಿಜ್ಞಾನಿ ಎಂದೇ ಆಕೆಯನ್ನು ಗೌರವಿಸಬೇಕಿತ್ತು.

ಅಷ್ಟೇ ಏಕೆ, ವಿಜ್ಞಾನವೊಂದೇ ಅಲ್ಲದೆ, ಮಾನವೀಯ ಸೇವೆಯಲ್ಲೂ ಆಕೆಯು ಹತ್ತಿದ ಉತ್ತುಂಗ ಶಿಖರಗಳಿಗೂ, ಆಕೆ ಸಾಧಿಸಿದ ಅಸಂಖ್ಯಾತ ಪ್ರಥಮಗಳಿಗೂ ಅಭಿವಂದಿಸಿ, ಆಕೆಗೆ ಮನ್ವಂತರದ ಮನುಜೆಯೆಂದೇ ಮನ್ನಣೆ ನೀಡುವುದು ಅತ್ಯಂತ ಯಥಾರ್ಥವಾಗಿದೆ. ಈ ’ಮೇರು ತಾರೆ’ಯಿಂದ ಹೊಮ್ಮುತ್ತಲೇ ಇರುವ ಜ್ಞಾನ ವಿಕಿರಣತೆಯ ಪ್ರಸರಣವನ್ನು ಚುರುಕಾಗಿಸಿ, ಇಂದಿನ ಯುವಜನರು ಆಕೆಯ ಎತ್ತರಕ್ಕೇರುವ ಪ್ರಯತ್ನವನ್ನು ಮಾಡುವಂತೆ ಪ್ರೇರಿಸುವ ಸಮಾಜೋಪಕಾರಿ ಕಾರ್ಯಕ್ಕೆ ಆದ್ಯತೆಯೀಯುವುದು ಈಗ ಅವಶ್ಯವಾಗಿದೆ.


ಕನ್ನಡ ಕಲಿ ಬಿತ್ತರಿಕೆ, ಜುಲೈ ೨೨, ೨೦೨೨
ಮನ್ವಂತರದ ಮನುಜೆ: ಮೇರಿ ಕ್ಯೂರಿ
ಬರೆಹ: ಎಸ್. ಜಿ. ಸೀತಾರಾಮ್

ಓದು  : ಶ್ರುತಿ ಅರವಿಂದ

ಚಿತ್ರಗಳು: ವಿಕಿ ಮೀಡಿಯ ಕೃಪೆ

Manvantarada manuje: mēri kyūri
Author: Es. Ji. Sītārām
Read by: Śruti aravinda

Very precise narration of Curie’s life and her gifts to mankind.
Pleasure to read good Kannada

ಜಗತ್ತಿನ ಅಪ್ರತಿಮ ವಿಜ್ಞಾನಿ ಮೇರಿ ಕ್ಯೂರಿಯ ಜೀವನ ಚಿತ್ರಣ ಅತ್ಯಂತ ಪ್ರಭಾವಶಾಲಿಯಾಗಿ ಮೂಡಿಬಂದಿದೆ. ಕನ್ನಡ ಭಾಷೆಯ ಸೊಗಡೂ ಲೇಖನದ ಮೌಲ್ಯವನ್ನು ವೃದ್ಧಿಸಿದೆ.