ಸಮಾನತೆಯ ಹೆಸರಿನಲ್ಲಿ ಮಹಿಳೆ ಪುರುಷನಾಗುವುದು ಸೂಕ್ತವೇ?

ಸಮಾನತೆಯ ಹೆಸರಿನಲ್ಲಿ ಮಹಿಳೆ ಪುರುಷನಾಗುವುದು ಸೂಕ್ತವೇ?

*** ವಿವೇಕ ಬೆಟ್ಕುಳಿ

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು ೭೫ ವರ್ಷ ಕಳೆದರೂ ಮಹಿಳೆಗೆ ಸಮಾನತೆ ಎಂಬುದು ಬಂದಿಲ್ಲ. ದೇಶದಲ್ಲಿ ಅರ್ಧದಷ್ಟು ಜನಸಂಖ್ಯೆ ಇದ್ದರೂ ಮಹಿಳಾ ಜನಪ್ರತಿನಿಧಿಗಳ ಸಂಖ್ಯೆ ಮಾತ್ರ ಬೆರಳಣಿಕೆಯಷ್ಟು. ಅದೂ ಸಹ ಮೀಸಲಾತಿ ಕಾರಣದಿಂದಾಗಿ ಮಾತ್ರ ಸ್ಥಳೀಯ ಸಂಸ್ಥೆಗಳಲ್ಲಿ ಹೆಚ್ಚು ಮಹಿಳೆಯರು ಕಾಣುವರು. ಆದರೆ ಉದ್ಯೋಗದ ವಿಚಾರದಲ್ಲಿ,ಆರೋಗ್ಯ, ಶೈಕ್ಷಣಿಕ, ಆಡಳಿತಾತ್ಮಕ ಮತ್ತು ಇತರೆ ಕ್ಷೇತ್ರಗಳಲ್ಲಿ, ಮಹಿಳೆಯರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದು ಆಶಾದಾಯಕ ಸಂಗತಿಯಾಗಿದೆ. ಮಹಿಳೆಗೆ ಸಮಾನವಾದ ಅವಕಾಶ ಸಿಗಬೇಕು. ಗೌರವ ಸಿಗಬೇಕು, ಆರ್ಥಿಕವಾಗಿ ಸಬಲರಾಗಬೇಕು ಈ ಎಲ್ಲಾ ವಿಚಾರಗಳನ್ನು ಖಂಡಿತವಾಗಿ ಮಾಡಲೇ ಬೇಕಾಗಿದೆ. ಆ ಪ್ರಯತ್ನಗಳೂ ತಕ್ಕ ಮಟ್ಟಿಗೆ ಆಗಿವೆ. ಅವುಗಳ ಪರಿಣಾಮವನ್ನು ಸಹ ಸುತ್ತಮುತ್ತ ಕಾಣುತ್ತಿರುವೆವು.

ನಗರ ಪ್ರದೇಶಗಳಲ್ಲಿ ಮಹಿಳಾ ಸ್ವಾತಂತ್ಯ, ಸಮಾನತೆಯನ್ನು ಪುರುಷರಿಗಿಂತ ನಾವೇನು ಕಡಿಮೆ ಎಂಬ ಹೋರಾಟದ ರೀತಿ ನೋಡುವ ಮನಸ್ಥಿತಿ ಬರುತ್ತಿರುವುದು. ಈ ಕಾರಣದಿಂದ, ಸಮಾನತೆಯ ಹೆಸರಿನಲ್ಲಿ ಮಹಿಳೆ “ಪುರುಷ”ನಾಗುವುದು ಸೂಕ್ತವೇ ಎಂಬುದರ ಬಗ್ಗೆ ಚರ್ಚಿಸುವ ಅಗತ್ಯ ಉಂಟಾಗಿದೆ

ಇತ್ತೀಚೀನ ದಿನಗಳಲ್ಲಿ ಕೆಲವು ಮಹಿಳೆಯರು ಕೆಲವು ವಿಚಾರಗಳಲ್ಲಿ ಜಿದ್ದಿಗೆ ಬಿದ್ದವರಂತೆ ಪುರುಷರಿಗೆ ಸಮಾನವಾಗುವ ರೀತಿಯಲ್ಲಿ ಮುನ್ನಡೆಯುತ್ತಿರುವರು. ಧೂಮಪಾನ, ಮಧ್ಯಪಾನಗಳಲ್ಲಿ ನಗರ ಪ್ರದೇಶದಲ್ಲಿ ಅತಿ ಹೆಚ್ಚು ಶಿಕ್ಷಿತ ಮಹಿಳಾ ಸಮುದಾಯ ಪುರುಷರಿಗೆ ಸಮಾನವಾಗಿ ಮುಂದೆ ಬರುತ್ತಿರುವುದು. ಬೆಂಗಳೂರಿನಂತಹ ಮೆಟ್ರೋ ನಗರಗಳಲ್ಲಿ ಉದ್ಯೋಗ, ಶಿಕ್ಷಣದ ಕಾರಣಕ್ಕಾಗಿ ಬರುವ ಸಾವಿರಾರು ಮಹಿಳೆಯರು ಮೋಜು ಮಸ್ತಿಯ ಹೆಸರಿನಲ್ಲಿ ಹೆಂಡದ ಹೊಳೆ ಹರಿಯುವ ರೇವ್ ಪಾರ್ಟಿಗಳಲ್ಲಿ, ಪಬ್ ಗಳಲ್ಲಿ, ಕಛೇರಿಯ ಪಾರ್ಟಿಗಳಲ್ಲಿ ಪುರುಷರಿಗೆ ಸರಿಸಮಾನವಾಗಿ ಧೂಮಪಾನ ಮಧ್ಯಪಾನ ಹಾಗೂ ಡ್ರಗ್ಸ್ ಸೇವನೆಗಳಲ್ಲಿ ತೊಡಗಿರುವುದು ನಿಜಕ್ಕೂ ಆಂತಕದ ಸಂಗತಿ. ಈ ಹವ್ಯಾಸಗಳು ಯಾರಿಗೂ ಒಳ್ಳೆಯದಲ್ಲ. ಜೀವವನ್ನು ಸೃಷ್ಟಿಸುವ ಸಾಮರ್ಥ್ಯವಿರುವ ಮಹಿಳೆಯರೆ ಈ ಚಟಗಳಿಗೆ ಒಳಗಾದರೆ ತಾಯಿ ಹಾಗೂ ಮಗು ಎರಡಕ್ಕೂ ಅಪಾಯ. ಈ ಸತ್ಯವನ್ನು ಒಪ್ಪಿ ನಿರ್ಧಾರ ಮಾಡುವ ಅಗತ್ಯವಿದೆ.

ಸಹನೆಗೆ ಇನ್ನೊಂದು ಹೆಸರೇ ಮಹಿಳೆ. ಆ ಕಾರಣದಿಂದಲ್ಲೇ ಹೆಚ್ಚಾಗಿ ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಇನ್ನೂ ಸಂವೇದನಾ ಶೀಲತೆ ಇರುವುದು ಎಂದರೆ ತಪ್ಪಾಗಲಾರದು. ಮದುವೆಯಾಗಿ ಹೋದ ಗಂಡನ ಮನೆಯಲ್ಲಿ ಒಂದು ಹೆಣ್ಣಾಗಿ ಆ ಮನೆಯ ಮಗಳಾಗಿ ಜೀವನ ಸಾಗಿಸುವುದು ಹಿಂದಿನಿಂದ ನಡೆದು ಬಂದ ಪದ್ದತಿಯಾಗಿದೆ. ಮಹಿಳೆಗೆ ಆ ಸಹನೆ ಇರುವ ಕಾರಣದಿಂದಲ್ಲೇ ಎಷ್ಟೋ ಮದುವೆಯಾದ ಗಂಡಸರು ಸರಿದಾರಿಗೆ ಬಂದು ಜೀವನ ಸಾಗಿಸುತ್ತಿರುವುದನ್ನು ನಾವು ಕಾಣುವೆವು. ಆದರೆ ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡ, ಯಂತ್ರಗಳ ಬಳಕೆ, ಮಾನಸಿಕ ದ್ವಂದ, ಗಂಡ-ಗಂಡನ ಮನೆಯವರಿಂದ ಸಿಗದ ಅಪೆಕ್ಷೀತ ಪ್ರೀತಿ ಈ ಕಾರಣಗಳಿಂದ ಮಹಿಳೆ ಸಹನತೆಯನ್ನು ಕಳೆದುಕೊಳ್ಳುತ್ತಿರುವಳು. ಅದರ ಪರಿಣಾಮ ನೇರವಾಗಿ ತನ್ನದೇ ಮಕ್ಕಳ ಮೇಲೆ ಆಗುತ್ತಿರುವುದು ಸಹಜ. ಈ ಸಂದರ್ಭದಲ್ಲಿಯೂ ಮಗುವನ್ನು ಸಾಕುವದರ ಬಗ್ಗೆಯೂ ಸಮಾನತೆ ಪ್ರಶ್ನೆ ಬರುತ್ತಿರುವದು. ಕಾರಣ ನೈಸರ್ಗಿಕವಾಗಿ ಮಹಿಳೆಗೆ ಇರುವ ಸಹನತೆ ಗಂಡಸರಲ್ಲಿ ಹೆಚ್ಚಾಗಿ ಇರುವುದಿಲ್ಲ.

ಇಂದಿನ ಮಕ್ಕಳು ತಾಯಿಯ ಪ್ರೀತಿ, ಅಜ್ಜಿಯ ಮಮತೆಯಿಂದ ದೂರವಾಗುತ್ತಿರುವರು. ನಗರ ಮಹಾನಗರದಲ್ಲಿ ಹೆಚ್ಚಿನ ಮಹಿಳೆಯರನ್ನು ನೋಡಿಕೊಳ್ಳಲು ಹಳ್ಳಿಗಳಿಂದ ಬಂದ ಕೆಲಸದವರು ಇರುವರು. ಚಿಕ್ಕ ಮಕ್ಕಳೊಂದಿಗೆ ಅಗತ್ಯ ಸಮಯವನ್ನು ತಾಯಿಯಾದವಳು ಕಳೆಯುತ್ತಿಲ್ಲ. ಆ ಬಗ್ಗೆ ಚರ್ಚೆ ಆದರೇ ಗಂಡು-ಹೆಣ್ಣಿನ ಸಮಾನತೆಯ ಬಗ್ಗೆ ಚರ್ಚೆ ಆಗುವದು. ಪರಿಣಾಮವಾಗಿ ತಾಯಿಗೆ ತನ್ನ ಮಗೂವನ್ನು ನೋಡಿಕೊಳ್ಳಲು ಟೈಮ ಇಲ್ಲ. ಆದರೆ ಮನೆಯಲ್ಲಿನ ನಾಯಿಯನ್ನು ವಾಕಿಂಗ್ ಕರೆದುಕೊಂಡು ಹೋಗಲು ಗಂಡ-ಹೆಂಡತಿ ವೇಳೆಯನ್ನು ನಿಗದಿ ಮಾಡಿಕೊಂಡಿರುವುದು ವಿಪರ್ಯಾಸವಾಗಿದೆ. ಮೇಲೆ ತಿಳಿಸಿದ ಮೂರು ಸಂದರ್ಭವನ್ನು ಹೊರತು ಪಡಿಸಿ ಇಂತಹ ಹತ್ತಾರು ವಿಚಾರಗಳಲ್ಲಿ ಸಮಾನತೆ. ಸ್ವಾತಂತ್ಯ ಈ ವಿಚಾರಗಳನ್ನು ಇಟ್ಟು ಸಾಧಕ-ಬಾಧಕಗಳ ಬಗ್ಗೆ ಯೋಚಿಸುವ ಅಗತ್ಯವಿದೆ.

ಇಂದು ಮಹಿಳಾ ದಿನಾಚರಣೆ. ಹಿಂದಿನಿಂದಲೂ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆ ಸಾಕಷ್ಟು ನೋವು ಅನುಭವಿಸಿರುವಳು. ಇಂದಿಗೂ ಸಹಾ ಹಳ್ಳಿಗಳಲ್ಲಿ ಮಹಿಳೆಗೆ ಸಂಪೂರ್ಣವಾದ ಸ್ವಾತಂತ್ಯ ಸಿಕ್ಕಿರುವುದಿಲ್ಲ. ನಗರಗಳಲ್ಲಿ ಒಂದು ಹೆಜ್ಜೆ ಮುಂದೆ ಹೋಗಿರುವೆವು. ಮಹಿಳೆಯ ಸಮಸ್ಯೆಯನ್ನು ಅರ್ಥಮಾಡಿಕೊಂಡು ಅವಳೊಂದಿಗೆ ಸಂವೇದನಾ ಶೀಲರಾಗಿ ವರ್ತಿಸುವದನ್ನು ಪುರುಷ ಸಮಾಜ ರೂಢಿಸಿಕೊಳ್ಳುವ ಅಗತ್ಯವಿದೆ. ದೈಹಿಕವಾಗಿ ಮಹಿಳೆ ಪುರುಷನಾಗಲು ಸಾಧ್ಯವಿಲ್ಲ. ಪುರುಷ ಮಹಿಳೆ ಆಗಲು ಸಾಧ್ಯವಿಲ್ಲ. ಆದರೆ ಎಲ್ಲರೂ ಇನ್ನೂ ಪರಸ್ಪರ ಸಂವೇದನಾ ಶೀಲರಾಗವುದು ಖಂಡಿತ ಸಾಧ್ಯವಿದೆ.

ತಾಗುಲಿ: Vivek BetkuLi, Womens equality, International Womens Day

ವಿಚಾರ ಮಾಡತಕ್ಕ ವಿಷಯ. ಮಹಿಳೆ ಎಷ್ಟೇ ಪ್ರಯತ್ನ ಪಟ್ಟರು ಪುರುಷರ ಸಮಾನ ಆಗಲಾರಳು, ಅವಳದು ಯಾವಾಗಲೂ ಒಂದು ಮೈಲುಗೈ. ಆದ್ದರಿಂದ ಈ ಸಮಾನತೆಯ ಒಣ ಪ್ರಯತ್ನವನ್ನು ಅವಳು ಬಿಡಬೇಕು.

ಮಹಿಳೆಯು ಸಾಮಾಜಿಕ ಮತ್ತು ಕೌಟುಂಬಿಕ ಸ್ಥಿರತೆಯ ಅಡಿಪಾಯವಾಗಿ ನಿಸ್ವಾರ್ಥ ಮತ್ತು ತಾಳ್ನೆಯಿಂದ ಸದಾ ಶ್ರಮಿಸುತ್ತಾಳೆ. ಮಹಿಳೆಯ ಈ ಮಹತ್ತರ ಕೊಡಿಗೆಯನ್ನು ಪುರುಷರು ಸ್ಪಷ್ಟವಾಗಿ ಗುರುತಿಸಿ, ಮಹಿಳೆಯರನ್ನು ಹೆಚ್ಚು ಗೌರವದಿಂದ ಕಾಣುವುದನ್ನು ರೂಢಿಸಿಕೊಳ್ಳಬೇಕು..