ಕಲೆಯ ಕಲಿಕೆ - ಇಂದಿಗೆ ಬೇಕೇ?

*** ಸಂಧ್ಯಾ ಮಹೇಶ್

["ಶಾಸ್ತ್ರೀಯ ಕಲೆಗಳು ಕಲಿಯಲು ಕಷ್ಟ, ಕೆಲವರಿಗಷ್ಟೇ ಸೀಮಿತ, ಈಗಿನ ತಂತ್ರಜ್ಞಾನದ ಯುಗದಲ್ಲಿ ಕೆಲಸಕ್ಕೆ ಬಾರದ್ದು; ಶಾಸ್ತ್ರೀಯ ಸಂಗೀತ ನೃತ್ಯಗಳನ್ನು ನೋಡೋರು ಯಾರು? ಕಲಿಯಲು ಸಮಯ ಎಲ್ಲಿದೆ?" 
ಈ ಎಲ್ಲ ಪ್ರಶ್ನೆಗಳಿಗೆ ಸಮಾಧಾನಕರವಾಗಿ ಉತ್ತರಿಸಿದ್ದಾರೆ; ಕಲೆ ನಮ್ಮ ಬದುಕು, ಅನಿವಾರ್ಯ; ಕಲಿಕೆ ಅವಶ್ಯ ಮತ್ತು ಕರ್ತವ್ಯಎಂದು ತೋರಿಸಿ ಕೊಟ್ಟಿದ್ದಾರೆಸಂಗೀತ-ನೃತ್ಯ ಕಲಾವಿದೆ ಸಂಧ್ಯಾ ಮಹೇಶ್ ]

ನಿರಂತರವಾಗಿ ಸುತ್ತುತ್ತಲೇ ಇರುವ ಭೂಮಿ ಒಂದರೆಕ್ಷಣ ಮೈಕೊಡವಿದರೆ ಆಗುವ ಭೂಕಂಪ ಪ್ರಳಯಗಳ ಅನಾಹುತ ಹೇಳತೀರದು. ಜಗತ್ತಿನಾದ್ಯಂತ ಬೇರೆಯೇ ರೀತಿಯ ಪ್ರಳಯವೆದ್ದು ಮಾನವ ಕುಲವನ್ನು ಅಲುಗಾಡಿಸಿ ಆಹುತಿಯನ್ನು ಪಡೆದಿದೆ. ಇದರಿಂದ ಪೆಟ್ಟು ತಿಂದು ಪಾಠ ಕಲಿತು ಮುಂದೆ ಸಾಗಬೇಕಾಗಿದೆ. ಕಳೆದ ಸುಮಾರು ಎರಡು ವರ್ಷಗಳ ಅವಧಿ ಎಲ್ಲರ ಜೀವನದಲ್ಲಿ ಹಲವು ರೀತಿಯ ಮಾರ್ಪಾಡುಗಳನ್ನು ತಂದಿದೆ. ಅತ್ಯಂತ ಆಶ್ಚರ್ಯದ ಸಂಗತಿ ಎಂದರೆ ಎಂದೂ ಕಾಣದ ಅನೇಕ ಹೊಸ ಹವ್ಯಾಸಗಳು ಹುಟ್ಟಿಕೊಂಡಿವೆ. ಮರೆತು ಮರೆಯಾಗಿದ್ದ ಬಹಳಷ್ಟು ಹಳೆಯ ಆಸಕ್ತಿಗಳು, ವಿಷಯಗಳು ಹೊಸ ಹುರುಪಿನೊಂದಿಗೆ ಮರುಕಳಿಸಿವೆ.

ಸಂಗೀತ, ನೃತ್ಯ, ಕುಂಚಕಲೆ, ವಾದ್ಯ ಸಂಗೀತ, ರಂಗೋಲಿ, ಅಡಿಗೆ, ಯೋಗ, ವ್ಯಾಯಾಮ, ಹೊಲಿಗೆ, ಕರಕುಶಲತೆ, ತೋಟಗಾರಿಕೆ, ಹೂದೋಟ, ಹೊಸ ಭಾಷೆಗಳ ಕಲಿಕೆ, ಹಳೆಯ ಭಾಷೆ ಸಂಪ್ರದಾಯಗಳ ಉಳಿವಿಕೆ, ಹೀಗೆ ವಿಶ್ವದೆಲ್ಲೆಡೆ ಅನೇಕ ಬಗೆಯ ವಿಚಾರಗಳ ಸ್ಫೋಟವೇ ಆಗಿದೆ.

ಶಾಸ್ತ್ರೀಯ ಕಲೆಗಳು ಕಲಿಯಲು ಕಷ್ಟ, ಕೆಲವರಿಗಷ್ಟೇ ಸೀಮಿತ, ಈಗಿನ ವೇಗದ ಯುಗಕ್ಕೆ ಕೆಲಸಕ್ಕೆ ಬಾರದ್ದು, ತಂತ್ರಜ್ಞಾನದ ಯುಗದಲ್ಲಿ ಶಾಸ್ತ್ರೀಯ ಸಂಗೀತ ನೃತ್ಯಗಳನ್ನು ನೋಡೋರು ಯಾರು ಹೀಗೆ ಹಲವಾರು ಮಾತುಗಳು ಸಾಧಾರಣವಾಗಿ ಕೇಳಿಬರುತ್ತಲೇ ಇರುತ್ತವೆ.

ಇದು ವೇಗದ ಯುಗ. ಅಲ್ಲದೇ ಜೀವನದಲ್ಲಿ ತಂತ್ರಜ್ಞಾನದ ಬಳಕೆ ಎಲ್ಲ ರೀತಿಯಲ್ಲೂ ಬೆರೆತು ಹೋಗಿ ನಾವೆಲ್ಲರೂ ಬಹುತೇಕವಾಗಿ ಅದರ ಮೇಲೆ ಅವಲಂಬಿತವಾಗಿದ್ದೇವೆ. ಮಕ್ಕಳಿಗಂತೂ ಆಟ, ಓದು, ಬರಹ, ಕಲಿಕೆ ಎಲ್ಲದಕ್ಕು ಅದು ಖಂಡಿತ ಬೇಕು. ಹೀಗಿರುವಾಗ ಸಾಂಪ್ರದಾಯಿಕ ಹಾಗು ಶಾಸ್ತ್ರೀಯ ಕಲೆಗಳು ಏಕೆ ಬೇಕು? ಕಲಿಯಲು ಸಮಯ ಎಲ್ಲಿದೆ ಎಂದು ಕೇಳುವವರು ಹಲವಾರು. ಅದು ಪ್ರಾಮಾಣಿಕವಾದ ಪ್ರಶ್ನೆ ಕೂಡ ಹೌದು.

ಇಂತಹ ಸಮಯದಲ್ಲಿ ಶಾಸ್ತ್ರೀಯ ಕಲೆಗಳ ಕಲಿಕೆ ಬೇಕೇ ಎನ್ನುವುದು ಸಹಜ ಸಂಶಯ!

ಕಲೆ ವಿಕಾಸದ ಮುಖ 
ಮಾನವನ ಬುದ್ಧಿ ವಿಕಾಸದ ಇನ್ನೊಂದು ಮುಖವೇ ಈ ಕಲೆಗಳು. ಬಾಯಿಂದ ಹೊರಡುವ ಧ್ವನಿ - ಶಬ್ದಗಳಿಗೆ ಸ್ವರಗಳು ಎಂದು; ಆ ಸ್ವರಗಳ ಏರಿಳಿತವನ್ನು ರಾಗಗಳು ಎಂದು ಕರೆದು, ಇಂಪಾದ ಸ್ವರ ಸಂಚಾರವನ್ನು ಜೋಡಿಸಿ ಸಂಗೀತ ಎಂದನು. ಕಣ್ಣಿಗೆ ಕಾಣುವ ಪ್ರಾಣಿ ಪಕ್ಷಿಗಳನ್ನು ಬಂಡೆಗಳ ಮೇಲೆ ಗೀಚಿ ಕುಂಚಕಲೆ ಪ್ರಾರಂಭಿಸಿದ ಮಾನವ ಮೊನಾಲಿಸಾ ಬಿಡಿಸಿ ಇಂದಿಗೂ ಅವಳ ನಗುವಿನ ಬಲೆಯಲ್ಲಿ ಸಿಲುಕಿಸಿದ್ದಾನೆ.

ಆಡುವ ಮಾತುಗಳು ಕವಿತೆಯಾಗಿ, ರಾಮಾಯಣ, ಮಹಾಭಾರತ, ಇಲಿಯಡ್ ಮಹಾಕಾವ್ಯಗಳಾಗಿ ಮೂಡಿತು. ನಿಂತ ಭಂಗಿಗಳು ಕೆತ್ತನೆಯ ಶಿಲ್ಪಗಳಾದವು, ನಡೆಯುವ ಭಾವವೇ ನೃತ್ಯವಾಯಿತು. ಹೀಗೆ ಹೆಜ್ಜೆ ಹೆಜ್ಜೆಗೂ ತನ್ನನ್ನು ತಾನೇ ಪ್ರಶ್ನಿಸಿಕೊಂಡು, ಅರ್ಥೈಸಿಕೊಂಡು, ಕಾಣುವ ಪ್ರಪಂಚ ಹಾಗು ಕಾಣದಿರುವ ವಿಶ್ವದ ಬಗೆಗೆ ಚಿಂತಿಸಿ ಒಂದಲ್ಲ ಒಂದು ಯತ್ನದಲ್ಲಿ ತೊಡುಗುವುದು ಮಾನವನ ಸಹಜ ಗುಣ ಅಲ್ಲದೆ ಮಾನವನಲ್ಲಿ ಮಾತ್ರ ಕಾಣುವ ಗುಣ. ಇಂತಹ ನಮಗಿರುವ, ಈ ಸಹಜವಾದರೂ, ಅಸಾಧಾರಣ ಶಕ್ತಿಯನ್ನು ಸ್ವಲ್ಪವಾದರೂ ಬಳಸಿ ಬೆಳೆಯಿಸಿಕೊಳ್ಳಬೇಕಾದರೆ ಒಂದಾದರೂ ಹವ್ಯಾಸ ಅತ್ಯಂತ ಆವಶ್ಯಕ. 
 
ಕಲೆ ಒಂದು ಸುಂದರ ಪುಷ್ಪಭರಿತ ಕಲ್ಪವೃಕ್ಷ, ಮಹಾವೃಕ್ಷ. ಅದರ ಪ್ರತಿಯೊಂದು ಹೂವು ಒಂದು ರೀತಿಯ ಕಲೆಯೆನ್ನಬಹುದು. ಜಾನಪದ ಕಲೆಯಾಗಲಿ, ಶಾಸ್ತ್ರೀಯ ಕಲೆಗಳಾಗಲಿ ಆನಂದ ಮೂಡಿಸುವ ಚೇತೋಹಾರಿ ಜೀವರಸ.

ಸಂಗೀತ, ನೃತ್ಯ, ಸಾಹಿತ್ಯ, ಕುಂಚಕಲೆ, ಇಂತಹ ಹವ್ಯಾಸಗಳಿಂದ ಮನಸ್ಸಿಗೂ ದೇಹಕ್ಕೂ ನವ ಚೈತನ್ಯ ನೀಡುವುದಲ್ಲದೆ ಬುದ್ದಿ ಶಕ್ತಿಯ ಇನ್ನೊಂದ್ದು ಬಾಗಿಲೇ ತೆರೆಯುತ್ತದೆ. ಇದನ್ನು ವೈಜ್ಞಾನಿಕವಾಗಿ ಸಾಬೀತು ಪಡಿಸಿದ್ದಾರೆ ಕೂಡ. ಉಗ್ಗುವ ತೊಂದರೆ ಇರುವ ಅನೇಕರಿಗೆ ಹಾಡುವುದು ಔಷಧಿಯಂತೆ ಕೆಲಸ ಮಾಡುತ್ತದೆ. ಸಂಗೀತವನ್ನು ಕೇಳುವುದು, ಹಾಡುವುದು ಹಾಗು ಅಭ್ಯಾಸ ಮಾಡುವುದು ಮೆದುಳಿನ ಮೇಲೆ ಅಪಾರ ಪ್ರಭಾವ ಬೀರಿ ಮೆದುಳನ್ನು ಚುರುಕುಗೊಳಿಸುತ್ತದೆ. ಅನೇಕ ವರ್ಷಗಳ ವೈಜ್ಞಾನಿಕ ಸಂಶೋಧನೆಯೂ ಇದನ್ನು ಬೆಂಬಲಿಸುತ್ತದೆ. ಯುದ್ಧದಿಂದ ಮರಳಿರುವ ಸಿಪಾಯಿಗಳ ಚಿಕಿತ್ಸೆಯಲ್ಲಿ ಹಾಗು ಕೆಲವು ಮನೋರೋಗಗಳಿಗೆ, ತಾಳಕ್ಕೆ ತಕ್ಕಂತೆ ಕೈಕಾಲುಗಳ ವ್ಯಾಯಾಮ ಮತ್ತು ಹಾಡುಗಾರಿಕೆ ಅತ್ಯಂತ ಸಮಾಧಾನ ನೀಡುವ ಕ್ರಿಯೆಗಳು. ಇಂತಹ ನವಜೀವನ ತುಂಬುವ ಕಲೆಗಳು ನಮ್ಮ ಸರ್ವತೋಮುಖ ಬೆಳವಣಿಗೆಗೆ ಅಮೃತ.

ಕಲಿಕೆಯ ಕ್ರಮ 
ಪ್ರತಿಯೊಂದು ವಿದ್ಯೆಯು ಪ್ರಾರಂಭಿಕ ಹಂತದಲ್ಲಿ ಕೇಳುವುದು ಸಹನೆಯೊಂದೆ. ಬೀಜದಿಂದ ಮೊಳಕೆಯೊಡೆದು ಗಿಡವಾಗಬೇಕು. ಅದರಲ್ಲಿ ಏನೂ ಪವಾಡವಿಲ್ಲ ಎಂದ ಮೇಲೆ ಯಾವುದಾದರೂ ಕಲೆಯನ್ನು ಕಲಿಯಲು ಹೋಗಿ ನಾಲ್ಕು ದಿನಗಳಲ್ಲಿ ಪರಿಶ್ರಮವಿಲ್ಲದೆ ಫಲ ಬೇಕು ಎನ್ನುವುದು ಹೇಗೆ ಸರಿ?

ಸಣ್ಣ ವಯಸ್ಸಿನಿಂದ ಕಲಿತರೆ, ಅದೂ ಒಂದು ಆಟ ಎಂಬಂತೆ ಕಲಿತು, ಮಕ್ಕಳು ಅದನ್ನು ಮೈಗೂಡಿಸಿಕೊಳ್ಳುತ್ತಾರೆ. ಪೋಷಕರು ಸ್ವಲ್ಪ ನಿಗಾ ವಹಿಸಿ, ಮಕ್ಕಳಿಗೆ ಕಷ್ಟ ಎನಿಸಿದಾಗ, ಪ್ರೋತ್ಸಾಹಿಸಿದರೆ, ಮಕ್ಕಳಿಗೆ ಕಲಿಯಲು ಸಹಾಯವಾಗುತ್ತದೆ. ಎಷ್ಟೋ ಬಾರಿ, ಪೋಷಕರು ಹಾಗು ಕೆಲವು ಗುರುಗಳು ಕೂಡ, ಕಲಿಕೆಯನ್ನು ಪಂದ್ಯದಂತೆ ಮಾಡಿ, ಅಲ್ಪ ಸಮಯದಲ್ಲಿ, ಅತಿ ಶೀಘ್ರವಾಗಿ ಕಲಿಯಬೇಕು ಎಂದು ಒತ್ತಡ ಹೇರುವುದುಂಟು. ಇದರಿಂದ ಕಲಿಕೆಯ ಗುಣಮಟ್ಟ ಇಳಿಯುವುದಲ್ಲದೆ, ಮಕ್ಕಳಿಗೆ ಕೆಲವು ಸಮಯದ ನಂತರ ಬೇಸರ, ನಿರಾಸಕ್ತಿ, ಕೊನೆಗೆ ಜಿಗುಪ್ಸೆಯೇ ಬರುವುದುಂಟು. ಶಾಸ್ತ್ರೀಯ ಕಲೆಗಳು ಹದವಾದ ಅಡಿಗೆಯಂತೆ, ಶೀಘ್ರದಲ್ಲಿ ಆಗುವುದಿಲ್ಲ, ಹಾಗೇನಾದರು ಆದರೆ, ರುಚಿಸುವುದೂ ಇಲ್ಲ. ಹವ್ಯಾಸಗಳು ಮನಸ್ಸಿಗೆ ಮುದ ನೀಡುವುದಲ್ಲದೆ ಸಮಯದ ಸದುಪಯೋಗ ಕಲಿಸುತ್ತವೆ. ದಿನದ ನಾನಾ ಕಾರ್ಯಗಳಲ್ಲಿ ಇದರ ಕಲಿಕೆ, ಅಭ್ಯಾಸ ಜೊತೆಗೂಡಿಸಿದರೆ ಅದು ದಿನಚರಿಯೇ ಆಗುತ್ತದೆ ವಿನಾ ಕಲಿಕೆಯ ಹೊರೆಯಲ್ಲ.

ಕಲಿಕೆಯು ಮೊದಲು ಯಾಂತ್ರಿಕವೇ ಆಗಿರುತ್ತದೆ. ಕೆಲವು ಸಮಯದ ನಂತರ ಮಕ್ಕಳಿಗೆ ಆ ಕಲೆಯ ಉಗಮ, ಬೆಳವಣಿಗೆ, ಯಾವ ಪ್ರಾಂತ್ಯ ಅಥವಾ ದೇಶದ್ದು ಹೀಗೆ ಕಲೆಯ ಹಿನ್ನೆಲೆಯನ್ನು ಕಲಿಸುತ್ತ ಹೋಗುವುದು ಸೂಕ್ತ. ಒಂದು ಗೀತೆ, ಅಥವಾ ಒಂದು ವರ್ಣ ಚಿತ್ರ, ಯಾವುದೇ ಇರಲಿ, ಅದರ ಕರ್ತೃವಿನ ಬಗ್ಗೆ ಮತ್ತು ಅದರ ಹಿನ್ನೆಲೆ ತಿಳಿದರೆ, ಅದರ ಕಲಿಕೆ ಸಾರ್ಥಕ. ಅದರಿಂದಾಗಿ ನಮ್ಮ ವಿಚಾರಧಾರೆಯೂ ವೃದ್ಧಿಸುತ್ತದೆ. ಈ ರೀತಿಯಾಗಿ ಮಕ್ಕಳೊಡನೆ ಹಿರಿಯರು ಕೂಡ ಬಹಳಷ್ಟು ಹೊಸ ವಿಚಾರಗಳನ್ನು ಕಲಿಯುತ್ತಾರೆ.

ಕಲೆ ನಮ್ಮ ಕರ್ತವ್ಯ 
ಕಲೆಯ ಅಪಾರ ಸೆಳತದ ಶಕ್ತಿಗೆ ಲಿಂಗ ಭೇದಗಳ ತಾರತಮ್ಯವಿಲ್ಲ. ಇವುಗಳನ್ನು ಕಲಿಯಲು ವಯಸ್ಸಿನ ಮಿತಿಯೂ ಇಲ್ಲ. ಕೆಲವೊಮ್ಮೆ ದೈಹಿಕ ಮಿತಿಯಿರಬಹುದೇ ಹೊರೆತು ಕಲಿಯಲಿಚ್ಛಿಸುವ ಮನಕೆ ಕಲಾ ಪ್ರಪಂಚ ಅತ್ಯದ್ಭುತ!

ವಿವಿಧ ಪ್ರಾಂತ್ಯದ ಶಾಸ್ತ್ರೀಯ ಕಲೆಗಳು ಅಲ್ಲಿನ ಇತಿಹಾಸ ಮತ್ತು ಪರಂಪರೆಗೆ ಕನ್ನಡಿ. ಗ್ರೀಸ್ ದೇಶದ ಸಾಹಿತ್ಯಕ್ಕೂ ಭಾರತದ ಸಾಹಿತ್ಯಕ್ಕೂ ಎಲ್ಲಿಯ ನಂಟು ಆದರೆ ಅದೇ ದೈವ ಮಾನವ ಸಂಬಂಧಗಳ ಅತ್ಯಂತ ಸುಂದರ ಚಿತ್ರಣ ಎರಡರಲ್ಲೂ ನೋಡಬಹುದು. ಹಾಗೆಯೇ ಆಫ್ರಿಕಾದ ವಿವಿಧ ರೀತಿಯ ತಾಳ ಮದ್ದಳೆಗಳು- ಅವರ ಸೊಮಾಲಿ ಇಗ್ಬೋ ಮಾಸಾಯ್ ಜನಾಂಗಗಳ ನೃತ್ಯ ಕರ್ನಾಟಕದ ಡೊಳ್ಳು ಕುಣಿತಕ್ಕೂ ಅದೆಂತಹ ಸಾಮ್ಯ! ಇವು ಅಚ್ಚರಿಯನ್ನು ಮೂಡಿಸುವ ಜೊತೆಗೆ ಕೂತೂಹಲಕಾರಿ ಕೂಡ. ಸಾವಿರಾರು ಮೈಲಿಗಳ ಅಂತರವಿದ್ದರೂ ದೇಶ ಭಾಷೆಗಳ ಹೊಂದಾಣಿಕೆಯೇ ಇಲ್ಲದಿದ್ದರೂ ಸಂಗೀತ ನೃತ್ಯಗಳು, ಸಾಹಿತ್ಯ ಯೋಚನಾ ಲಹರಿಗಳು ಒಂದೇ ರೀತಿಯಿರುವುದು ಒಂದು ಕ್ಷಣ ಯೋಚಿಸುವಂತೆ ಮಾಡುತ್ತವೆ. ಅಷ್ಟೇಕೆ ನಮ್ಮ ನಮ್ಮ ತವರೂರಿನ ಒಂದೊಂದು ಬಗೆಯ ಉಡುಗೆ, ತೊಡಿಗೆ, ತಿಂಡಿ ತಿನುಸುಗಳು, ಆಡುವ ಹಾಡುವ ಭಾವ ಭಾಷೆಗಳು, ಇವೆಲ್ಲವನ್ನೂ ಪ್ರತಿಬಿಂಬಿಸುವ ಈ ಕಲೆಗಳು ತವರೂರಿನ ಕೊಡುಗೆ. ಕಳೆದ ನೂರಾರು ವರ್ಷಗಳ ಅನೇಕ ಜನಾಂಗಗಳ ಸುಖ ದುಃಖವನ್ನು ಒಳಗೊಂಡು, ಪ್ರತಿಯೊಂದು ಪೀಳಿಗೆಯ ಅನುಭವಗಳನ್ನು ಸೇರಿಸಿಕೊಂಡು ಬೆಳೆಯುತ್ತ ದಾರಿದೀಪದಂತೆ ಕಲೆಗಳು ನಿರಂತರ. ಅರೆ ಘಳಿಗೆ ನಿಂತು ನೋಡಿದರೆ ನಮ್ಮ ಹಿತ್ತಲಲ್ಲೇ ಹತ್ತಾರು ವಿಷಯಗಳು ಕಲಿಯಲಿರುವಾಗ, ಕಲಿಯಬಾರದೇಕೆ, ಕಲಿತು ತನು ಮನಗಳು ಸಮೃದ್ಧಿಯಾಗಬಾರದೇಕೆ? ಮೇಲಾಗಿ ಇದು ನಮ್ಮ ಕರ್ತವ್ಯವಲ್ಲವೇ? ಮುಂದಿನ ಪೀಳಿಗಿಗೆ ನಾವು ಸೇತುವೆಯಂತಿದ್ದು ವಿಷಯ ವಿಚಾರಗಳ ಸರಾಗ ವರ್ಗಾವಣೆ ಕಿಂಚಿತ್ತಾದರೂ ಮಾಡಬೇಕಲ್ಲವೇ?

ಕಲಿಕೆಗೆ ಏನು ಬೇಕು? 
ಅತ್ಯಂತ ಪ್ರಮುಖವಾಗಿ, ಶಿಸ್ತು ಮತ್ತು ಸಂಯಮ. ಕಲಿಯುವ ಮಕ್ಕಳಲ್ಲಿ ಮಾತ್ರ ಅಲ್ಲ, ಕಲಿಸುವ ಪೋಷಕರಲ್ಲೂ ಮತ್ತು ಗುರುಗಳಲ್ಲೂ ಇವೆರಡು ಇರಬೇಕಾದ ಪ್ರಮುಖ ಅಂಶಗಳು. ತಮ್ಮ ಪೂರ್ವಜರ ಬಗ್ಗೆ ತಿಳಿಯುವ ಅವಕಾಶ, ಹೊಸ ಭಾಷೆ ಮತ್ತು ಸಂಸ್ಕೃತಿಯ ಪರಿಚಯ, ಎಲ್ಲಕ್ಕಿಂತ ಹೆಚ್ಚಾಗಿ ಅತ್ಯಂತ ಸುಂದರವಾದ ಒಂದು ಹವ್ಯಾಸ - ಕಲೆಗಳು.

ಇಂದಿನ ಪೀಳಿಗೆ ಒಂದೂರಲ್ಲಿ ಕುಳಿತು ವ್ಯವಹಾರ ಮಾಡುವಂಥವರಲ್ಲ. ಈಗಿನ ಕಾಲಕ್ಕೆ ಅದು ಸಾಧ್ಯವೂ ಅಲ್ಲ. ದೇಶ ಸುತ್ತಿ ನೋಡು ಕೋಶ ಓದಿ ನೋಡು ಎಂಬ ನುಡಿ ಈಗ ಇನ್ನೂ ಪ್ರಾಶಸ್ತ್ಯ ಹೊಂದಿದೆ. ಕಲೆಗಳು ಭಾಷಾತೀತವಾದದ್ದು. ಪ್ರಪಂಚದ ಯಾವ ಮೂಲೆಗೆ ಹೋದರು ಈ ಕಲಾಭಾಷೆಯಿಂದ ಸ್ನೇಹ ಬೆಳೆಸಬಹುದು.

ಈಗ ಲಭ್ಯವಿರುವ ತಂತ್ರಜ್ಞಾನದ ಬಳಕೆಯಿಂದ ಜಗತ್ತಿನ ಮೂಲೆ ಮೂಲೆಯಲ್ಲಿರುವ ವಿದ್ಯೆ ಕಲಿಯಬಹುದು ಮತ್ತು ಕಲಿಸಬಹುದು. ಇಷ್ಟೆಲ್ಲಾ ಸೌಲಭ್ಯಗಳ ಪ್ರಯೋಜನ ಪಡೆದು, ನಿತ್ಯವೂ ನಮ್ಮ ಪ್ರಾಪಂಚಿಕ ಅರಿವು ಬೆಳೆಯಬೇಕು. ಅದು ನಮ್ಮ ಆಂತರಿಕ ಬೆಳವಣಿಗೆಗೂ ಸಹಕಾರಿ.

ಕಲೆ ಪರಿವರ್ತನಕಾರಿ 
ವಿವಿಧ ವಿಚಾರಗಳ ಬಗೆಗೆ ಅರಿವಾದರೂ ಮೂಡಿಸಿಕೊಳ್ಳುವುದು ಖಂಡಿತ ಈಗಿನ ಸಮಯದಲ್ಲಿ ಸಮರ್ಪಕ. ಅರಿವು ಹೆಚ್ಚಾದಂತೆ ಮನಸ್ಸಿನಲ್ಲಿರುವ ಬೇಧ ಭಾವಗಳು ಕರಗುತ್ತವೆ. ತನ್ನದೇ ಭಾಷೆ, ಸಂಸ್ಕೃತಿ ಹೆಚ್ಚು ಮತ್ತ್ಯಾವುದೂ ಸರಿಸಮಾನವಿಲ್ಲ ಎಂದಿರುವ ದೃಷ್ಟಿಕೋಣಕ್ಕೆ ಒಂದು ಹೊಸ ಆಯಾಮ ಕಾಣುತ್ತದೆ.

ಶಾಸ್ತ್ರೀಯ ಕಲೆಗಳಿಗೆ ಕಾಲಕ್ಕೆ ತಕ್ಕಂತೆ ಬದಲಾವಣೆಗಳು ಸೇರಿಕೊಂಡು ಹೊಸ ರಂಗು ಮೂಡುತ್ತದೆ; ಅನೇಕರ ಅನುಭವಗಳ ಸಾರವೇ ಈ ಶಾಸ್ತ್ರ ಸಂಪ್ರದಾಯಗಳು. ದೇಶ ಕಾಲಗಳಿಗೆ ಅನುಗುಣವಾಗಿ ಬೆಳೆಯುತ್ತಲೇ ಇದ್ದು, ಇನ್ನು ವೃದ್ಧಿಯಾಗುತ್ತದೆ ಹೊರತು ಶಾಸ್ತ್ರೀಯ ಪರಂಪರೆ ನಿರಂತರ. ಆದ್ದರಿಂದಲೇ ನೂರಾರು ವರ್ಷಗಳು ಕಳೆದರು ಕರ್ನಾಟಕ ಶಾಸ್ತ್ರೀಯ ಸಂಗೀತವೇ ಆಗಲಿ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತವೇ ಆಗಲಿ, ಇಂದಿಗೂ ಜನ ಮನ ಗೆಲ್ಲುತ್ತಲೇ ಇದೆ.

ಆಧುನಿಕ ಯಾಂತ್ರಿಕ ಜೀವನದಲ್ಲಿ ಬೇಕಾಗಿರುವುದು ಶಾಸ್ತ್ರೀಯತೆಯ ಗಟ್ಟಿ ತಳಹದಿ. ದೇಹ ಮತ್ತು ಮನಸ್ಸಿಗೆ ಸಮಾಧಾನ ನೀಡುವ ಈ ಕಲೆಗಳು ಪ್ರಸಕ್ತ ಸಮಯದಲ್ಲಿ ಎಲ್ಲರಿಗು ಅತ್ಯಾವಶ್ಯಕ.

       ಪೈಪೋಟಿಯೇ ಇರುವ ಜೀವನದಲ್ಲಿ 
        ಕ್ಷಣ ಒಂದಾದರು ನಿಲ್ಲುವುದೆಲ್ಲಿ, 
         ಕಲೆಯ ಬಲೆಗೆ ಸಿಲುಕಿದಾಗ 
          ಮನಕೆ ಸವಿ ಜೇನು ಆಗ. 
             *~*~*~*~*~*


ತಾಗುಲಿ : Learning Arts - Do we need it at this time?, Sandhya Mahesh

No one has restricted any one not to venture, or pursue his liking of any art, and cultural activities. What exactly you want to say ?

ಸೊಗಸಾದ ನಿರೂಪಣೆ ಸಂಧ್ಯಾ ಅವರೇ, ಸರಳ ಸುಂದರವಾಗಿ ವಿಚಾರವನ್ನು ಪ್ರಸ್ತುತಿ ಪಡಿಸಿರುವುದಲ್ಲದೇ ಭಾಷೆಯೊಂದಿಗೆ ಭಾವ ಕಲಾತ್ಮಕವಾಗಿ ಅರಳಿದೆ

ಹೃದಯಪುಷ್ಪಮರಂದವಾತ್ಮಕೆ ನಿಜಾನಂದ ।
ಉದಿಪುದಾ ರಸ ಸುಂದರದ ಕಿರಣ ಸೋಕೆ ॥
ಬದುಕಿನೊಳ್ ಕವಿತೆಯೊಳ್ ಕಲೆಗಳೊಳ್ ಪ್ರಕೃತಿಯೊಳ್ ।
ಪುದಿದಿರ್ಪ ಕಾಂತಿಯದು - ಮಂಕುತಿಮ್ಮ ॥

The heart has the nectar which makes the soul truly happy. When the eyes see a beautiful scene, it fills the heart with that beauty (and satisfaction). That brilliance is present in life, in poetry, in fine arts and nature. - Mankutimma

ಸಂಗೀತಕಲೆಯೊಂದು, ಸಾಹಿತ್ಯಕಲೆಯೊಂದು ।
ಅಂಗಾಂಗ ಭಾವ ರೂಪಣದ ಕಲೆಯೊಂದು ॥
ಸಂಗಳಿಸಲೀ ಕಲೆಗಳನುನಯವು ಚರ್ಯೆಯಲಿ ।
ಮಂಗಳೋನ್ನತ ಕಲೆಯೊ - ಮಂಕುತಿಮ್ಮ ॥

"Music one of the fine arts. Literature is another. There is another which shows off the beauty of expressions and the body – dance and drama. When all these come together in everyday life, then life itself will be an auspicious art." - Mankutimma

Bahala uttamavada baravanige yellarallu jagruti moodisi kalege protsahisabekkaddu yellara kelasa .Hagu ivattinna dinagallalli bareya mobile hididu konde makkalu kalaharana maduvudannu tadegatalu sulabhopaya Manassige santosha,nemmadiyannu koduvanta shastriya sangeetavagali,nrutya vagalli kaliyudu tumba olleyadu yendu nanna anisike .

It's very nice and true, especially music gives mind a very big relief and joy

ಕಲೆ, ಒಂದು ಅನರ್ಘ್ಯ ರತ್ನ. ಅದರಲ್ಲಿ ಮಿಂದು ಎದ್ದ, ಅದರ ಪ್ರೌಢಿಮೆಯ ಕಂಪನ್ನು ದೇಶವಿದೇಶ ಗಳಲ್ಲಿ ಪಸರಿಸುವಂತೆ ಹಬ್ಬಿಸುತ್ತಿರುವ ನಿಮ್ಮ ಹೊಸ ಅಧ್ಯಯನಕ್ಕೆ ನಮ್ಮೆಲ್ಲರ ಹಾರ್ದಿಕ ಶುಭಾಶಯಗಳು.
ನಿಮ್ಮ ಬರವಣಿಗೆ ಶಾಲಾ ಮಾಧ್ಯಮಕ್ಕೆ ಪಠ್ಯ ಪುಸ್ತಕವಾಗಿಡಲು ಅರ್ಹವಾಗಿದೆ.

ಇಂದಿನ ಯಾಂತ್ರಿಕ ಶೈಲಿಯ, ಸುಖದ ಮರೀಚಿಕೆಯನ್ನಟ್ಟಿ ಓಡುವ ಮನುಷ್ಯನ ಮನಸನ್ನು ತಟ್ಟಿ ಕಣ್ತೆರೆಸುವ ಪ್ರಾಮಾಣಿಕ ಲೇಖನ. ಕಲೆಯ ಬಗ್ಗೆ ಒಲವು,ಶ್ರಧ್ಧೆಯನ್ನು
ಬೆಳೆಸಿಕೊಂಡರೆ ಬದುಕಿಗೆ ಸ್ವಾರಸ್ಯ ಎಂಬ ನಿತ್ಯ ಸತ್ಯದ ಚಂದದ ನಿರೂಪಣೆ.
ಕಲಾವಿದರ ಪರಿವಾರದ ಸಂಧ್ಯಾಮಹೇಶ್
ಅವರಿಗೆ ಅಭಿನಂದನೆ-ಶುಭಾಶಯ.🙏