ಹಳೆ-ಹೊಸ ತಲೆಮಾರುಗಳ ನಡುವೆ ದೀಪಾವಳಿ ಸಂಭ್ರಮ

ಹಳೆ-ಹೊಸ ತಲೆಮಾರುಗಳ ನಡುವೆ ದೀಪಾವಳಿ ಸಂಭ್ರಮ 
*** ವಿವೇಕ ಬೆಟ್ಕುಳಿ


ಆಧುನಿಕತೆ ಬೆಳೆದಂತೆ ನಮ್ಮ ಸಂಪ್ರದಾಯ, ನಂಬಿಕೆ, ಕುಟುಂಬ ವ್ಯವಸ್ಥೆ ಈ ಎಲ್ಲವುಗಳಲ್ಲಿ ಬದಲಾವಣೆಗಳು ಆಗುತ್ತಿವೆ. ಬದಲಾವಣೆಯೂ ಜಾಗತೀಕರಣದ ನಂತರದಲ್ಲಿ ಅತಿವೇಗದಿಂದ ಆಗುತ್ತಿರುವುದನ್ನು ಕಾಣಬಹುದಾಗಿದೆ. ಹಿಗೆಯೆ ಮುಂದುವರೆದರೆ ನಮ್ಮ ಮುಂದಿನ ಪೀಳಿಗೆಗೆ ಇಂದಿನ ಆಚರಣೆಗಳು ಕೇವಲ ಇತಿಹಾಸ ಏನಿಸಿಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಹಳೆ-ಹೊಸ ತಲೆಮಾರುಗಳ ಸಮ್ಮಿಲಿತ ಇಂದಿನ ಸಂದರ್ಭದಲ್ಲಿ ಹಬ್ಬಗಳನ್ನು ನಾವು ಸಂಭ್ರಮಿಸುತ್ತಿರುವುದು ವಿಶೇಷವಾಗಿದೆ.

ಅನಾದಿ ಕಾಲದಿಂದಲ್ಲೂ ನಾವು ಹಲವಾರು ಸಾಂಪ್ರದಾಯಿಕ ಆಚರಣೆಗಳನ್ನು ಮುಂದುವರೆಸಿಕೊಂಡು ಬಂದಿರುವೆವು. ಈ ಆಚರಣೆಗಳ ವೈಜ್ಞಾನಿಕ ಹಿನ್ನಲೆ ಏನು, ದೈವಿಕ ಹಿನ್ನಲೇ ಏನು ಎಂಬುದು ಪಾಲಿಸುವ ಅತಿ ಹೆಚ್ಚಿನ ಜನರಿಗೆ ಗೊತ್ತಿಲ್ಲ. ಇದರಿಂದ ಒಳ್ಳೆಯದಾಗುವುದು ಎಂಬ ನಂಬಿಕೆಯಿಂದಲೋ, ಹಿಂದಿನವರು ಏನೋ ಯೋಚಿಸಿಯೇ ಪ್ರಾರಂಭಿಸಿದ ಆಚರಣೆ ಇರಬಹುದು ಎಂದುಕೊಂಡೋ, ಸುಮ್ಮನೇ ಮುಂದುವರೆಸೋಣ ಎಂಬ ಭಾವನೆಯಿಂದಲೋ, ಅಥವಾ ಆಚರಣೆಯ ಅಡೆತಡೆಯಿಂದ ಏನಾದರೂ ಅನಾಹುತಗಳಾಗಬಹುದು ಎಂಬ ಭಯದಿಂದಲೋ ಒಟ್ಟಾರೆ ಸಂಪ್ರದಾಯದ ಆಚರಣೆ ನಡೆಯುತ್ತಿರುವುದು.

ಸಂಪನ್ಮೂಲದ ಕೊರೆತೆಯಿಂದಲೋ, ಅರ್ಥವಿಲ್ಲದ ಆಚರಣೆ ಎಂಬ ನೆಪದಿಂದಲೋ ಅನಾದಿ ಕಾಲದಿಂದ ಆಚರಿಸ್ಪಡುತ್ತಿದ್ದ ಕೆಲವೊಂದು ಸಂಪ್ರದಾಯಿಕ ಆಚರಣೆಗಳಿಗೆ ನಾವು ತೀಲಾಂಜಲಿ ನೀಡಿರುವೆವು. ಅಥವಾ ನಮಗೆ ಅನೂಕೂಲವಾದಂತೆ ಬದಲಿಸಿಕೊಂಡು ಆಚರಿಸುತ್ತಾ ಇರುವೆವು. ಉದಾಹರಣೆಗೆ, ದೀಪದ ಬೆಳಕಾದ ದೀಪಾವಳಿ ಇಂದು ವಿದ್ಯುತ್ ದೀಪದ ದೀಪಾವಳಿ ಆಗಿ ಪರಿವರ್ತಿತ ಆಗಿರುವುದು. ಶಾಸ್ತ್ರಕ್ಕಾಗಿ ಕೆಲವೊಂದು ಹಣತೆ ಬಳಸುವೆವು. ಆಕಾಶ ಬುಟ್ಟಿ ಸಂಪೂರ್ಣ ವಿದೇಶಿಯಾಗಿರುವುದು. ನೀರು ಕಾಸುವ ಹಂಡೆಗೆ ಪೂಜೆ ಮಾಡಿ ನೀರು ತುಂಬುವುದು, ಹೂವು ಹಿಂಡಲಿಕಾಯಿ ಕಟ್ಟುವುದು, ನೀರಿನಲ್ಲಿ ವಿವಿಧ ಬೇರನ್ನು ಹಾಕಿಡುವುದು, ಅರಿಶಿನ ಏಣ್ಣೆ ಹಚ್ಚಿ ಸ್ನಾನ ಇವೆಲ್ಲ ಆಚರಣೆಗಳು ಇಂದಿಗೂ ಚಾಲ್ತಿಯಲ್ಲಿದೆ. ಆದರೇ ಹಂಡೆ ಇಲ್ಲದ ಕಡೆ ಬಕೇಟ್ ನೀರು, ಬಿಸಿ ನೀರಿಗಾಗಿ ಸೋಲಾರ ಅಥವಾ ಹೀಟರ್, ಇಂತಹ ಕೆಲವೊಂದು ಪರಿವರ್ತನೆಗಳಾಗಿವೆ.

ಇಂದಿಗೂ ಹಳೆ ತಲೆಮಾರಿನ ಜನರಿರುವ ಮನೆಯಲ್ಲಿ ದೀಪಾವಳಿ ಊಟ-ತಿಂಡಿಯ ವಿಷಯದಲ್ಲಿ ಹಿಂದಿನಂತೆ ನಡೆಯುತ್ತಿರುವುದು.  ಹಬ್ಬದ ವೇಳೆ ಕುಡಿಯುವ ಕಹಿಮದ್ದು, ವಿವಿಧ ಬಗೆಯ ಅವಲಕ್ಕಿ, ಮೊಗ್ಗೆಕಾಯಿ ರೊಟ್ಟಿ-ಕಾಯಿ ಹಾಲು, ಕೊಟ್ಟೆ ರೊಟ್ಟಿ, ಪಂಚಕಜ್ಜಾಯ, ಕಜ್ಜಾಯ ಕಡ್ಡಾಯವಾಗಿವೆ. ಈ ಬಗ್ಗೆ ತಿಳಿಯದ ಜನಕ್ಕೆ ಇದೊಂದು ವಿಶೇಷ ಅನುಭವದ ಆಚರಣೆ ಆಗಿರುವುದು.

ವೇಗವಾಗಿ ಸಾಗುತ್ತಿರುವ ಜಗತ್ತಿನಲ್ಲಿ ಕುಟುಂಬ ವ್ಯವಸ್ಥೆಯ ಅಡಿಪಾಯವು ದಿನೇ ದಿನೇ ಸಡಿಲವಾಗುತ್ತಿರುವುದನ್ನು ಕಾಣಬಹುದಾಗಿದೆ. ಹಿಂದೆ ಇದ್ದ ಅವಿಭಕ್ತ ಕುಟುಂಬ ಪದ್ದತಿ ಬಹುತೇಕ ಕೊನೆಯಾಗುವ ಹಂತದಲ್ಲಿದೆ.  ಇದ್ದರೂ ಅದು ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಕಂಡು ಬರುತ್ತಿರುವುದು. ಇಂದಿನ ಮಕ್ಕಳು ಅಜ್ಜ-ಅಜ್ಜಿಯರ ಕಥೆ, ಒಟ್ಟಾಗಿ ಬದುಕುವ ಕಲೆ, ಹಂಚಿ ತಿನ್ನುವ ರೀತಿ ಈ ಎಲ್ಲದರಿಂದ ವಂಚಿತರಾಗುತಿರುವರು. ಮಹಿಳೆಯರು ಸಹಾ ಅವಿಭಕ್ತ ಕುಟುಂಬದಲ್ಲಿ ಇದ್ದು ಒಟ್ಟಾಗಿ ಬದುಕುವ ಕಲೆಯನ್ನು ತಿಳಿದಿರುತ್ತಾ ಇದ್ದರು. ಆದರೇ ಪಟ್ಟಣದ ವ್ಯಾಮೋಹ, ಪ್ರತ್ಯೇಕವಾಗಿ ಬದುಕುವ ಕನಸು. ಅತಿಯಾದ ಆಸೆ ಆಕಾಂಕ್ಷೆ ಈ ಎಲ್ಲಾ ಕಾರಣದಿಂದಾಗಿ ಇಂದು ಚಿಕ್ಕ ಕುಟುಂಬದ ಕಡೆ ಒಲವು ಹೆಚ್ಚಾಗಿದೆ. ಆದರೂ ಸಹಾ ದೀಪಾವಳಿಯಂತಹ ಹಬ್ಬದ ಸಂದರ್ಭದಲ್ಲಿ ತಮ್ಮ ಮೂಲ ಮನೆಗೆ ಎಲ್ಲರೂ ಹೋಗಿ ಒಟ್ಟಾಗಿ ಎಲ್ಲರೂ ಹಬ್ಬ ಆಚರಣೆ ಮಾಡುವುದರಿಂದ ಅವಿಭಕ್ತ ಕುಟುಂಬದ ಒಂದು ಅನುಭವ ಮನೆ ಮಂದಿಗೆಲ್ಲ ಸಿಗುವುದು.

ಹಿಂದೆ ಹೆಚ್ಚಿನ ಶಿಕ್ಷಣ ಇಲ್ಲದೇ ಇದ್ದರೂ ಸಾಂಪ್ರಾಯಿಕ ನೆಲೆಗಟ್ಟು ಚೆನ್ನಾಗಿ ಇತ್ತು. ಕುಟುಂಬ ವ್ಯವಸ್ಥೆಯ ಅಡಿಪಾಯ ಭದ್ರವಾಗಿತ್ತು. ಗಂಡ-ಹೆಂಡಿರ ಸಂಬಂಧ ಸ್ವಲ್ಪವೇ ಹದಗೆಟ್ಟರೂ ಅಪ್ಪ-ಅಮ್ಮ, ಹಿರಿಯರು ಇವರೆಲ್ಲಾ ತಮ್ಮ ಅನುಭವ ಮತ್ತು ಬುದ್ದಿ ಮಾತಿನಿಂದ ಹದಗಡುವ ಸರಿಮಾಡುತ್ತಿದ್ದರು. ಖಂಡಿತ, ಮಹಿಳೆಯರ ಮೇಲೆಯೇ ಸಮಾಜ ಹೆಚ್ಚಿನ ಭಾರವನ್ನು ಹಾಕುತ್ತಿತ್ತು ಎಂಬುದು ಸತ್ಯವಾದರೂ, ಕುಟುಂಬ ಸುಭದ್ರವಾಗಿತ್ತು. ಆದರೇ ಇಂದು ಹೆಚ್ಚು ಶಿಕ್ಷೀತರ ನಡುವೆಯೇ ವಿವಾಹ ವಿಚ್ಛೇದನ ಪ್ರಕರಣಗಳು ಕಂಡುಬುತ್ತಿರುವುದು.  ಮಹಿಳೆಯರ ಆರ್ಥಿಕ ಸಬಲತೆ, ಉದ್ಯೋಗ ಭದ್ರತೆ, ಕಡಿಮೆಯಾಗುತ್ತಿರವ ಸಹನೆ, ಒತ್ತಡದ ಜೀವನ ಹಾಗೇ ಪರುಷರ ದಬ್ಬಾಳಿಕೆ, ಹೆಣ್ಣನ್ನು ಗೌರವಿಸದೇ ಇರುವುದು. ಕೆಲಸದ ಒತ್ತಡ, ಮಹಿಳೆಯರ ಬಗ್ಗೆ ಹಿಂದಿನ ಕಾಲದ ರೀತಿಯ ಯೋಚನೆ, ಹೆಣ್ಣಗೆ ಮುಖ್ಯವಾಗಿ ಬೇಕಾದ ಸಮಯ ನೀಡದೆ ಇರುವುದು. ಈ ಎಲ್ಲಾ ಕಾರಣಗಳು ಗಂಡ ಹೆಂಡಿರ ನಡುವಿನ ಸಂಬಂಧ ಹದೆಗೆಡಲು ಪ್ರಮುಖ ಕಾರಣಗಳಾಗಿವೆ,  ಇಂತಹ ಪರಿಸ್ಥಿತಿಯಲ್ಲಿ ದೀಪಾವಳಿ ಹಬ್ಬದಂತಹ ಆಚರಣೆಗಳಲ್ಲಿ ಅನಿವಾರ್ಯವಾಗಿ ಹಬ್ಬದ ಹೆಸರಿನಲ್ಲಿ ಹಿರಿಯರ ಸಮ್ಮುಖದಲ್ಲಿ ಸೇರುವುದು ಮತ್ತು ಇತರೆ ಕುಟುಂಬಗಳನ್ನು ಗಮನಿಸುವುದರಿಂದ ಗಂಡ ಹೆಂಡಿರ ಮಧ್ಯ ಅನ್ಯೋನ್ಯತೆ ಕಂಡುಕೊಳ್ಳಲು ಸಾಧ್ಯವಾಗುವುದು. ಅಥವಾ ವೈಮನಸ್ಸನ್ನು ಗುರುತಿಸಲು ಸಾಧ್ಯವಾಗುವುದು. ಇದರಿಂದ ಸಂಬಂಧಗಳ ಸುದಾರಣೆಗೆ ಅವಕಾಶ ಇರುವುದು.

ಒಟ್ಟಾರೆಯಾಗಿ ದೀಪಾವಳಿಯಂತಹ  ಹಬ್ಬಗಳ ಆಚರಣೆಯನ್ನು ನಾವುಗಳು ಮುಖ್ಯವಾಗಿ ಸಂಭ್ರಮಿಸುವುದರಿಂದ ಹಳೆಯ ಸಂಪ್ರದಾಯಗಳು ಅಲ್ಪಸ್ವಲ್ಪ ಇಂದಿಗೂ ಉಳಿದುಕೊಂಡಿರುವುದು. ಈ ರೀತಿಯ ಹಬ್ಬದ ಆಚರಣೆಯನ್ನು ಕುಟುಂಬ ಸಮೇತ ಎಲ್ಲರೂ ಆಚರಿಸುವ ಕಾರಣದಿಂದಾಗಿ ಇಂದಿನ ಮಕ್ಕಳಿಗೆ ಹತ್ತಾರು ಗ್ರಾಮೀಣ ಸಂಪ್ರದಾಯಗಳ ದರ್ಶನ ಆಗುತ್ತಿರುವುದು. ವೈಮನಸ್ಸು ದೂರವಾಗುವುದು. ಸಂಬಂಧಗಳಲ್ಲಿ ಅನ್ಯೋನ್ಯತೆ ಬರುವುದು.  ಸಂಪ್ರದಾಯಗಳ ಆಚರಣೆಯ ಚರ್ಚೆ, ದಾಖಲಾತಿ ಎಲ್ಲವಕ್ಕೂ ಸಹಕಾರಿಯಾಗುತ್ತಿರುವುದು. 


        ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು, 
        ಹೊಸಯುಕ್ತಿ ಹಳೆತತ್ವ ದೊಡೆಗೊಡೆ ಧರ್ಮ 
        ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ 
        ಜಸವು ಜನಜೀವನಕೆ-ಮಂಕುತಿಮ್ಮ.


ಅನಾದಿ ಕಾಲದಿಂದ ಬಂದ ನಮ್ಮ ಆಚರಣೆ, ಸಂಪ್ರದಾಯಗಳು ಯಾವುದೋ ಜ್ಞಾನದ ಆಧಾರದ ಮೇಲೆ ಬಂದಿರುವಂತದ್ದು. ಅದೇ ನಮ್ಮ ಸಾಮಾಜಿಕ ಅಸ್ಥಿತ್ವಕ್ಕೆ ಆಧಾರವಾಗಿರುವುದು. ಅದನ್ನು ತೊರೆದರೆ ತಲೆ ತಲಾಂತರದಿಂದ ಬಂದ ವ್ಯವಸ್ಥೆ ದಾರಿತಪ್ಪಿ ಅಧೋಗತಿಗೆ ಹೋಗುವ ಸಾಧ್ಯತೆ ಇದೆ. ಇದನ್ನು ನೆನಪಿಸಿಕೊಳ್ಳುತ್ತಾ ನಾವು ಹಬ್ಬವನ್ನು ಸಂಭ್ರಮಿಸೋಣ.

 

ಪೂರಕ ಓದಿಗೆ:

         ಅವನತಿಯತ್ತ ಭಾವನಾತ್ಮಕ ಸಂಬಂಧ : ಯಾಂತ್ರಿಕವಾಗುತ್ತಿರುವ ದೀಪಾವಳಿ ಆಚರಣೆ

ಮಾನ್ಯರೆ, ಇದು ಬಹಳ ಸಮಯೋಚಿತವಾದ ಲೇಖನ. ಡಿ.ವಿ.ಗುಂಡಪ್ಪನವರ "ಹೊಸ-ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು, ಹೊಸಯುಕ್ತಿ ಹಳೆ ತತ್ವದೊಡಗೂಡೆ ಧರ್ಮ, ಋಷಿ ವಾಕ್ಯದೊಡನೆ, ವಿಜ್ಞಾನ ಕಲೆ ಮೇಳವಿಸೆ, ಜಸವು ಜನ ಜೀವನಕೆ ಮಂಕುತಿಮ್ಮ" ಸೊಗಸಾದ ಮಾತುಗಳನ್ನು ನಮ್ಮ ಮಾನವ ಕುಲ ಅನುಸರಿಸಿದ್ದರೆ , ಜೀವನದಲ್ಲಿ ಯಾವ ಕೊರತೆಗಳೂ ಕಾಣಬರುತ್ತಿರಲಿಲ್ಲ. ಬಹುಶಃ ಜನರು, ಹಳೆಯದಕ್ಕೆ ತಗುಲು ಹಾಕಿಕೊಂಡಿರುವುದೇ ಹೆಚ್ಚು. ಅವರಿಗೆ ಹೊಸತಾದ ಪರಿಕರಗಳು, ವಸ್ತುಗಳು ಬೇಕು. ಇದು ವಿಜ್ಞಾನದ ಕೊಡುಗೆ ಎಂದು ತಿಳಿದಿದ್ದರೂ, ವೈಜ್ಞಾನಿಕ ಆಲೋಚನೆಯನ್ನು ತಿರಸ್ಕರಿಸಿ, ಮೂಢನಂಬಿಕೆ- ಹಳೆ ಸಂಪ್ರದಾಯಗಳಿಗೆ ಜೋತು ಬೀಳುವ ಮನೋಧರ್ಮ ಅನೇಕರಲ್ಲಿ ಇರುವ ಕಾರಣವೆ, ಪ್ರಸಕ್ತ ಸಮಾಜದಲ್ಲಿ ಸಮತೋಲನವಿಲ್ಲ. ನಮ್ಮ ಸಮಾಜ ಕಾಲಕ್ಕೆ ತಕ್ಕಂತೆ ಬದಲಾಯಿಸಿದೆ. ಅದರಲ್ಲಿ ತಪ್ಪೇನು ಇಲ್ಲ. ಆದರೆ ಎಲ್ಲ ರೀತಿಯಲ್ಲೂ ಈ ಬದಲಾವಣೆಗಳಾಗಿವೆ ಮತ್ತು ಅವು ಸರಿಯಾದ ಮಾರ್ಪಾಡುಗಳು ಎನ್ನಲಾಗದು!