ಜಾಗತಿಕ ಭಾಷೆಯ ಪಟ್ಟದಿಂದ ಇಂಗ್ಲಿಷಿನ ಅಧಃಪತನ ಖಚಿತ – ತಜ್ಞರ ಅಭಿಪ್ರಾಯ

ಬ್ರಿಟಿಶ್ ಭಾಷಾತಜ್ಞ ನಿಕೊಲಸ್ ಓಸ್ತ್ಲರ್ ಪ್ರಕಾರ, ಜಾಗತಿಕ ಮಾಧ್ಯಮ ಭಾಷೆಯಾಗಿ ಇಂಗ್ಲಿಷ್ ಮುಂದುವರೆಯುವ ದಿನಗಳ ಎಣಿಕೆ ಆರಂಭವಾಗಿದೆ. ಒಂದಾನೊಂದು ಕಾಲದಲ್ಲಿ ಅಂತಾರಾಷ್ಟ್ರೀಯ ಭಾಷೆಗಳಾದ ಅರಮೇಯಿಕ್, ಫಿನೀಷಿಯನ್, ಮತ್ತು ಪರ್ಷಿಯನ್ ಗಳಂತೆ ಇಂಗ್ಲಿಷ್ ಕೂಡ ಇತಿಹಾಸದ ಪುಟಗಳಲ್ಲಿ ಸೇರಲಿದೆ.


ಜಾಗತಿಕ ಭಾಷೆಯ ಪಟ್ಟದಿಂದ ಇಂಗ್ಲಿಷಿನ ಅಧಃಪತನ ಖಚಿತ – ತಜ್ಞರ ಅಭಿಪ್ರಾಯ

ಜಗತ್ತಿನಲ್ಲಿ ಇಂಗ್ಲಿಷ್ ಅತ್ಯಂತ ಪ್ರಭಾವಿ ಭಾಷೆ. ಬೇರೆ ಬೇರೆ ಭಾಷಿಕರ ಮಧ್ಯೆ ವ್ಯವಹಾರ ನಡೆಯುವುದು ಇಂಗ್ಲಿಷಿನಲ್ಲೆ. ಭಾರತದಲ್ಲಿ ರಾಜ್ಯಗಳ ಮತ್ತು ರಾಜ್ಯ-ಕೇಂದ್ರಗಳ ನಡುವಣ ವ್ಯವಹಾರ ಇಂಗ್ಲಿಷಿನಲ್ಲೆ. ಆದಾಗಿಯೂ, ಬ್ರಿಟಿಶ್ ಭಾಷಾತಜ್ಞ ನಿಕೊಲಸ್ ಓಸ್ತ್ಲರ್ ಪ್ರಕಾರ, ಜಾಗತಿಕ ಮಾಧ್ಯಮ ಭಾಷೆಯಾಗಿ ಇಂಗ್ಲಿಷ್ ಮುಂದುವರೆಯುವ ದಿನಗಳ ಎಣಿಕೆ ಆರಂಭವಾಗಿದೆ. ಒಂದಾನೊಂದು ಕಾಲದಲ್ಲಿ ಅಂತಾರಾಷ್ಟ್ರೀಯ ಭಾಷೆಗಳಾದ ಅರಮೇಯಿಕ್, ಫಿನೀಷಿಯನ್, ಮತ್ತು ಪರ್ಷಿಯನ್ ಗಳಂತೆ ಇಂಗ್ಲಿಷ್ ಕೂಡ ಇತಿಹಾಸದ ಪುಟಗಳಲ್ಲಿ ಸೇರಲಿದೆ.

ಆಕ್ಸ್ ಫರ್ಡ್‍ನಲ್ಲಿ ಲ್ಯಾಟಿನ್ ಮತ್ತು ಎಮ್.ಆಯ್.ಟಿ.ಯಲ್ಲಿ ಸಂಸ್ಕೃತ ಓದಿರುವ ಓಸ್ತ್ಲರ್ ಕೊಡುವ ಕಾರಣಗಳು – ಅಧೋಗತಿ, ಅವನತಿ, ಮತ್ತು ನಿರ್ಲಕ್ಷ್ಯ. ಉದಾಹರಣೆಗೆ, ಬಲಾಢ್ಯವಾದ ಸೋವಿಯತ್ ಸಾಮ್ರಾಜ್ಯ ಒಡೆದು ಹೋದ ನಂತರ ಮಧ್ಯ ಏಷಿಯದಲ್ಲಿ ರಷಿಯನ್ ಮಾತಾಡುವವರ ಸಂಖ್ಯೆಯೂ ಇಳಿದು ಹೋಯಿತು. ಅಂತೆ, ಕುಂದುತ್ತಿರುವ ಅಮೆರಿಕ ಮತ್ತು ಬ್ರಿಟಿಶ್ ಪ್ರಭಾವ ಇಂಗ್ಲಿಷ್ ಭಾಷೆಯನ್ನು ಮುಂಚೂಣಿಯಲ್ಲಿ ಉಳಿಸಿಕೊಳ್ಳಲು ಅಸಮರ್ಥವಾಗುವುದು.

ಜಗತ್ತಿನ ೭ ಬಿಲಿಯನ್ ಜನರಲ್ಲಿ ೩೦೦ ಮಿಲಿಯನ್ ಇಂಗ್ಲಿಷ್ ತಮ್ಮ ಮುಖ್ಯ ಭಾಷೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ಈಗಾಗಲೆ ಶ್ರೀಲಂಕಾ ಮತ್ತು ತಾಂಝಾನಿಯ ಇಂಗ್ಲಿಷನ್ನು ಅಧಿಕೃತ ಭಾಷೆಗಳಿಂದ ತೆಗೆದು ಹಾಕಿವೆ. ಕಳೆದ ಮೂರ್ನಾಲ್ಕು ಶತಮಾನಗಳಲ್ಲಿ ಇಂಗ್ಲಿಷ್ ಮಾತಾಡುವ ದೇಶಗಳ ವಾಣಿಜ್ಯ ಶಕ್ತಿಯೆ ಇಂಗ್ಲಿಷಿನ ಬೆಳವಣಿಗೆಗೆ ಕಾರಣವಾಗಿತ್ತು. ಅದು ಈಗ ಅಳಿಯುತ್ತಿದೆ. ಚೀನ, ಬ್ರಸಿಲ್, ರಷಿಯಗಳ ಆರ್ಥಿಕ ಉನ್ನತಿಯಿಂದ ಬರಿ ಇಂಗ್ಲಿಷ್ ಸಾಲದು ಎನ್ನುವಂತಾಗಿದೆ. ಹೀಗೆ ಮುಂದುವರೆದರೆ ಇಂಗ್ಲಿಷ್ ಬೇಕೇ ಇಲ್ಲವಾಗುವುದು ಖಚಿತ.

ಇನ್ನು ಸಮಾಜಶಾಸ್ತ್ರದ ದೃಷ್ಟಿಯಿಂದ, ಮುದ್ರಣ ತಂತ್ರ ಹುಟ್ಟಿದಾಗ ಲ್ಯಾಟಿನ್ ಯಾವ ಗತಿಗೆ ಇಳಿಯಿತೊ ಅದೇ ಗತಿಗೆ ಅಂತರ್ಜಾಲ ಯುಗವು ಇಂಗ್ಲಿಷನ್ನು ಕಳಿಸುತ್ತಿದೆ. ಮುದ್ರಣ ತಂತ್ರದಿಂದ, ಸ್ಥಳೀಯ ಭಾಷೆಗಳ ಪುಸ್ತಕಗಳಿಗೆ ಭಾರೀ ಬೇಡಿಕೆ ಉಂಟಾಯಿತು. ಅಂತರ್ಜಾಲದಿಂದ ಜಗತ್ತಿನ ಇಂಗ್ಲಿಷೇತರ ಭಾಷೆಗಳ ಉಪಯೋಗ ಬೃಹತ್ಪ್ರಮಾಣದಲ್ಲಿ ಹೆಚ್ಚಿದೆ. ಕನ್ನಡದ ಅಂತರ್ಜಾಲ ಪತ್ರಿಕೆ, ಬ್ಲಾಗು, ಮತ್ತು ಓದುಗರ ಸಂಖ್ಯೆ ದಿನೇ ದಿನೇ ಏರುವುದನ್ನು ನೀವು ಆಗಲೆ ಗಮನಿಸಿದ್ದೀರಿ.

ಓಸ್ತ್ಲರ್ ಪ್ರಕಾರ ವಿದೇಶ ಭಾಷೆಯಾಗಿ ಇಂಗ್ಲಿಷ್ ಕಲಿಯುವುದು ನಿಂತು ಹೋಗುತ್ತದೆ; ಧ್ವನಿಗ್ರಹಣ ಮತ್ತು ತ್ವರಿತ ಭಾಷಾಂತರ ತಂತ್ರಾಂಶಗಳು ಬೆಳೆದಂತೆ, ಬೇರೆ ಭಾಷೆಯನ್ನು ಕಲಿಯುವ ಅವಶ್ಯಕತೆಯೂ ಇಲ್ಲವಾಗುತ್ತದೆ.

ಕನ್ನಡ ಉಳಿಸಲು ಮತ್ತು ಬೆಳೆಸಲು ಇದರಿಂದ ನಾವು ಕಲಿಯುವುದು ಇದೆಯೆ?

ಆಧಾರ: English Doomed as Global Language, Academic Says, Chosun.com December 28, 2010

             English's Bleak Future, By Nicholas Ostler, Forbes.com, Feb 21, 2008

 

ಸುಮಾರು ಹತ್ತು ವರ್ಷಗಳ ಹಿಂದೆ, ತರಂಗ ದಲ್ಲಿ ಕನ್ನಡ ಜಾಗತಿಕ ಬಾಷೆ ಆಗಲು ಸಾದ್ಯವೇ ಎಂಬ ಲೇಕನ ನೆನೆಪಿಗೆ ಬರುತ್ತದೆ.

ಶಿವು

ಕನ್ನಡ ಜಾಗತಿಕ ನುಡಿ ಆಗುವುದು ಅಸಾದ್ಯ.ಕನಸು ಕಾಣುವುದರಲ್ಲಿ ಯಾವ ತಪ್ಪೂ ಇಲ್ಲ.