ವರ್ಷ ೨೦೦೦ದಲ್ಲಿ ಹುಟ್ಟು ಹಾಕಿದ ಕನ್ನಡ ಕಲಿಯ ಅಭಿಯಾನ ಫಲಪ್ರದವಾಗಿ ಮುಂದುವರೆಯುತ್ತಿದೆ. ವಿದೇಶಗಳಲ್ಲಿ ಕನ್ನಡ ಶಾಲೆಗಳು ಹುಟ್ಟುತ್ತಿದ್ದು ಕನ್ನಡ ಕಲಿಕೆ ಹೆಚ್ಚುತ್ತಿರುವುದು ಸ್ವಾಗತಾರ್ಹ. ಇದರಲ್ಲಿ ಕೇವಲ ಕನ್ನಡ ಪ್ರೀತಿ ಅಭಿಮಾನಗಳಿಂದ, ಮಕ್ಕಳನ್ನು ಕನ್ನಡ ಸಂಸ್ಕೃತಿಯಲ್ಲಿ ಬೆಳೆಸುವ ಹಂಬಲದಿಂದ ತಮ್ಮನ್ನು ಈ ಅಭಿಯಾನದಲ್ಲಿ ತೊಡಗಿಸಿಕೊಳ್ಳುತ್ತಿರುವ ತಂದೆ ತಾಯಂದಿರು ಸ್ತುತ್ಯಾರ್ಹರು. ಕನ್ನಡ ಕಾಯಕದ ಅಡಿಯಲ್ಲಿ, ಕರ್ನಾಟಕದಲ್ಲಿನ ಸರಕಾರಿ ಸಂಸ್ಥೆಗಳು ಮತ್ತು ಮಾಧ್ಯಮಗಳು ವಿದೇಶಗಳಲ್ಲಿನ ಕನ್ನಡದತ್ತ ತಮ್ಮ ದೃಷ್ಟಿಯನ್ನು ಕೇಂದ್ರೀಕರಿಸಿದ್ದಾರೆ. ಆದರೆ ಕರ್ನಾಟಕದಲ್ಲೇ ಕನ್ನಡದ ಸ್ಥಿತಿ ಚಿಂತನೀಯವಾಗಿರುವಾಗ, ಇದು ಬೇರಿಗೆ ಹುಳ ಹತ್ತಿರುವಾಗ ಹೂಗಳನ್ನು ಅರಳಿಸುವ ಅಥವಾ ಕೆಳಗೆ ತೂಗಾಡುತ್ತಿರುವ ಹಣ್ಣುಗಳನ್ನು ಬಾಚಿಕೊಳ್ಳುವ ಯತ್ನ ಎನ್ನಿಸುವುದು ಸಹಜ. ಹಾಗಾಗದಿರಲು, ಕರ್ನಾಟಕದಲ್ಲಿ ಕನ್ನಡದ ಅಭಿವೃದ್ಧಿ ಏಕೆ ಕುಂಠಿತವಾಗಿದೆ, ಅದಕ್ಕೆ ತೊಡಕಾಗಿರುವ ಅಂಶಗಳು ಯಾವವು, ಇವುಗಳನ್ನು ತಿಳಿದುಕೊಂಡರೆ ಸರಿಯಾದ ಪರಿಹಾರಗಳನ್ನು ರೂಪಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಶ್ರೀಯುತ ವಿವೇಕ ಅವರ ಲೇಖನ ಕಣ್ಣು ತೆರೆಸುವಂತಿದೆ.