ಹತ್ತು ಶ್ಲೋಕಗಳಲ್ಲಿ ಗೀತೆ

ಹತ್ತು ಶ್ಲೋಕಗಳಲ್ಲಿ ಗೀತೆ
ಸಂಸ್ಕೃತ ಮೂಲ: ವೇದವ್ಯಾಸ
(ಕನ್ನಡಕ್ಕೆ: ವಿಶ್ವೇಶ್ವರ ದೀಕ್ಷಿತ)


ಪುಣ್ಯ ಸೆಲೆಯ ನೆಲ ಕುರುತಲದಿ
    ಕಾಳಗಕೆ ನೆರೆದ ನನ್ನವರು
ಪಾಂಡುವಿನ ಮಕ್ಕಳೊಡಗೂಡಿ
   ಏನು ಮಾಡಿದರು, ಸಂಜಯನೆ? 	[೧.೧]

ಅಣಿಯು ನೀನಾಗು ಕಾರ್ಯಕ್ಕೆ
   ಋಣಿಯು ನೀ ದೊರೆತ ಫಲಿತಕ್ಕೆ;
ಫಲ ನಿನಗೆ ಗುರಿಯಾಗದಿರಲಿ;
   ಅಂತೆ ಬಿಡದಿರು ಕಾರ್ಯವನ್ನೆ. 	[೨.೪೭]

ಮಾಡುವುದನೆಲ್ಲ ನನಗಿರಿಸಿ,
   ನೆಲಸಿ ಮನವನ್ನಾತ್ಮದಲ್ಲಿ,
ಆಸೆ ಅಹಮಿಕೆಗಳನು ಕಳೆದು
   ಹೊಣರು ನೀ ರಣದಲಿ ಮರುಗದೆ. 	[೩.೩೦]

ಕೆಡಕು ಕೊಸುರಾಗಿ, ಕೌಂತೇಯ,
   ಒಳಿತು ಇಳಿತಾಯವಾಗಿರಲು,
ಬಿಡದೆ ನನ್ನನು ನಾನು ಆಗ
   ಹೊಡಕರಿಸುವೆನು ತಡಪಡಿಸದೆ. 	[೪.೭]

ಎತ್ತಿ ಉಳಿಸಲು ಸರಳರನ್ನು,
   ಒತ್ತಿ ಅಳಿಸಲು ದುರುಳರನ್ನು,
ಬಿತ್ತಿ ಬೆಳೆಸಲು ಧರ್ಮವನ್ನು
   ಮರುಕೊಳಿಸುವೆನು ಯುಗಯುಗದಲಿ. 	[೪.೮]

ಅಂತೆ, ಎದೆಯನ್ನು ಹೊಕ್ಕಿರುವ
   ತಿಳಿವಿರದ ಆತ್ಮಶಂಕೆಯನು
ತಿಳಿವಲಗಿನಿಂದ ಕತ್ತರಿಸಿ
   ಯೋಗದಲಿ ತೊಡಗು ಎದ್ದೇಳು. 	[೪.೪೨]

ಎಲ್ಲದರ ಮೂಲ, ನೆಲೆ ನಾನು;
   ಅಲುಗುವುದು ನನ್ನಿಂದಲೆಲ್ಲ.
ಇಂತರಿದು ನೆನೆವರೆನ್ನನ್ನು
   ಒಲು ಮನದ ಕಡು ಜಾಣರೆಲ್ಲ. 	[೧೦.೮]

ಕೊನೆ ಮೊದಲು ನಡುಗಳಿಲ್ಲ, ಅಪಾರ ಶಕ್ತಿ,
   ಎನಿತೊ ಕೈಗಳು, ಕಂಗಳಾ ತಿಂಗಳಿನರು,
ಉರಿವ ಕೆಂಡದ ಬಾಯಿ, ಜಗ ಸುಡುವ ತೇಜ,
   ಇಂತು ಕಾಣುವೆ ನಿನ್ನ ರೂಪ ಸಿರಿಯನ್ನು. [೧೧.೧೯]

ಸಹಜಗುಣ ಮತ ನಿಯಮಗಳನು
   ತೊರೆದು ಶರಣಾಗು ನನ್ನಲ್ಲೆ;
ಉಳಿಸುವೆನು ನಿನ್ನನ್ನು ನಾನು
   ಕೆಡಕಿನಿಂದೆಲ್ಲ, ಬಿಡು ಶೋಕ. 	[೧೮.೬೬]

ಎಲ್ಲಿ ಯೋಗದ ಎರೆಯ ಕೃಷ್ಣ,
   ಎಲ್ಲಿ ಬಿಲ್ಲಿನ ವೀರ ಪಾರ್ಥ,
ಅಲ್ಲೆ ಸಿರಿ, ಗೆಲವು, ದೃಢ ನಿಲವು,
   ವಿಕಸನವು ಎಂದೆನ್ನ ಮತವು. 	[೧೮.೭೮]

ಧರ್ಮಕ್ಷೇತ್ರೇ ಕುರುಕ್ಷೇತ್ರೇ 
   ಸಮವೇತಾ ಯುಯುತ್ಸವಃ ।
ಮಾಮಕಾಃ ಪಾಂಡವಾಶ್ಚೈವ 
   ಕಿಮಕುರ್ವತ ಸಂಜಯ 	॥ 1-1॥

ಕರ್ಮಣ್ಯೇವಾಧಿಕಾರಸ್ತೇ 
   ಮಾ ಫಲೇಷು ಕದಾಚನ ।
ಮಾ ಕರ್ಮಫಲಹೇತುರ್ಭೂಃ
   ಮಾ ತೇ ಸಂಗೋಽಸ್ತ್ವಕರ್ಮಣಿ ॥ 2-47॥

ಮಯಿ ಸರ್ವಾಣಿ ಕರ್ಮಾಣಿ 
   ಸಂನ್ಯಸ್ಯಾಧ್ಯಾತ್ಮಚೇತಸಾ ।
ನಿರಾಶೀರ್ನಿರ್ಮಮೋ ಭೂತ್ವಾ 
   ಯುಧ್ಯಸ್ವ ವಿಗತಜ್ವರಃ 	॥ 3-30॥

ಯದಾ ಯದಾ ಹಿ ಧರ್ಮಸ್ಯ 
   ಗ್ಲಾನಿರ್ಭವತಿ ಭಾರತ ।
ಅಭ್ಯುತ್ಥಾನಮಧರ್ಮಸ್ಯ 
   ತದಾತ್ಮಾನಂ ಸೃಜಾಮ್ಯಹಮ್ ॥ 4-7॥

ಪರಿತ್ರಾಣಾಯ ಸಾಧೂನಾಂ 
   ವಿನಾಶಾಯ ಚ ದುಷ್ಕೃತಾಮ್ ।
ಧರ್ಮಸಂಸ್ಥಾಪನಾರ್ಥಾಯ 
   ಸಂಭವಾಮಿ ಯುಗೇ ಯುಗೇ ॥ 4-8॥

ತಸ್ಮಾದಜ್ಞಾನಸಂಭೂತಂ 
   ಹೃತ್ಸ್ಥಂ ಜ್ಞಾನಾಸಿನಾತ್ಮನಃ ।
ಛಿತ್ತ್ವೈನಂ ಸಂಶಯಂ ಯೋಗಂ
   ಆತಿಷ್ಠೋತ್ತಿಷ್ಠ ಭಾರತ  ॥ 4-42॥

ಅಹಂ ಸರ್ವಸ್ಯ ಪ್ರಭವಃ
   ಮತ್ತಃ ಸರ್ವಂ ಪ್ರವರ್ತತೇ ।
ಇತಿ ಮತ್ವಾ ಭಜಂತೇ ಮಾಂ 
   ಬುಧಾ ಭಾವಸಮನ್ವಿತಾಃ 	॥ 10-8॥

ಅನಾದಿಮಧ್ಯಾಂತಮನಂತವೀರ್ಯಂ
   ಅನಂತಬಾಹುಂ ಶಶಿಸೂರ್ಯನೇತ್ರಮ್ ।
ಪಶ್ಯಾಮಿ ತ್ವಾಂ ದೀಪ್ತಹುತಾಶವಕ್ತ್ರಂ
   ಸ್ವತೇಜಸಾ ವಿಶ್ವಮಿದಂ ತಪಂತಮ್ 	॥ 11-19॥

ಸರ್ವಧರ್ಮಾನ್ ಪರಿತ್ಯಜ್ಯ 
   ಮಾಮೇಕಂ ಶರಣಂ ವ್ರಜ ।
ಅಹಂ ತ್ವಾ ಸರ್ವಪಾಪೇಭ್ಯಃ 
   ಮೋಕ್ಷಯಿಷ್ಯಾಮಿ ಮಾ ಶುಚಃ 	॥ 18-66॥

ಯತ್ರ ಯೋಗೇಶ್ವರಃ ಕೃಷ್ಣಃ
   ಯತ್ರ ಪಾರ್ಥೋ ಧನುರ್ಧರಃ ।
ತತ್ರ ಶ್ರೀರ್ವಿಜಯೋ ಭೂತಿಃ
   ಧ್ರುವಾ ನೀತಿರ್ಮತಿರ್ಮಮ 	॥ 18-78॥

ತಾಗುಲಿ : gita, Vyasa, vishweshwar dixit