ಪವಿತ್ರ ಪ್ರೇಮ ಕವನ


*** ವಿಶ್ವೇಶ್ವರ ದೀಕ್ಷಿತ

ಸುಂದರ ಹೃದಯಂಗಮ ಕಾವ್ಯಗಳನ್ನು ಸೃಷ್ಟಿಸುವಲ್ಲಿ ಸಂಸ್ಕೃತ ಕವಿಗಳು ಎಷ್ಟು ನಿಷ್ಣಾತರೋ ಅವರು ಪದ್ಯ ಪದ ಅಕ್ಷರಗಳೊಂದಿಗೆ ಚೆಲ್ಲಾಟ ಆಡುವಲ್ಲಿಯೂ  ಅಷ್ಟೇ ಚತುರರು. ಒಂದೇ ವ್ಯಂಜನ ಉಪಯೋಗಿಸಿದ ಶ್ಲೋಕ ಇರಬಹುದು.   ಎಡದಿಂದ ಬಲಕ್ಕೆ ಅಥವಾ ಬಲದಿಂದ ಎಡಕ್ಕೆ ಓದಿದರೂ ಒಂದೇ  (palindrome, ಗತಪ್ರತ್ಯಾಗತ) ಇರಬಹುದು.  ಅಥವಾ ಹಿಂದು  ಮುಂದು ಓದಿದರೆ ಬೇರೆ ಬೇರೆ  ಅರ್ಥ ನೀಡುವ ಪದ್ಯ ಇರಬಹುದು. ಇಂತಹ ಚಮತ್ಕಾರಕ ಪದ್ಯ ರಚನೆಯ ಭವ್ಯ ಪರಂಪರೆಯೇ ಸಂಸ್ಕೃತದಲ್ಲಿ ಇದೆ. ಉದಾಹರಣೆಗೆ, ಮಾಘ ಕವಿಯ ಶಿಶುಪಾಲ ವಧೆಯಲ್ಲಿ ಬರುವ ದಕಾರ ಮಾತ್ರ ಉಳ್ಳ  ಈ ನುಡಿ:

ದಾದದೋ ದುದ್ದದುದ್ದಾದೀ ದಾದದೋ ದೂದದೀದದೋಃ  |
ದುದ್ದಾದಂ ದದದೇ ದುದ್ದೇ  ದಾದಾದದದದೋಽದದಃ ||

(ವರಗಳನ್ನು ಕೊಡುವ, ದುರ್ಮತಿಗಳನ್ನು ಶಿಕ್ಷಿಸುವ, ಪಾವನಗೊಳಿಸುವ, ಪೀಡಕ ದುರುಳರನ್ನು ಸಂಹರಿಸುವ (ಶ್ರೀ ಕೃಷ್ಣನು) ತನ್ನ ಆಯುಧವನ್ನು ಶತ್ರುವಿನ ಮೇಲೆ ಪ್ರಯೋಗಿಸಲು ಎತ್ತಿದನು)

ಕನ್ನಡದಲ್ಲೂ ಇಂಥ ರಚನೆಗಳು ಉಂಟಾದರೂ ನನಗೆ ಸಿಕ್ಕಿಲ್ಲ. ಗೆಳೆಯರೊಬ್ಬರು ಇದನ್ನೊಂದು ಚಾಲೆಂಜ್  ಆಗಿ ಮುಂದಿಟ್ಟರು. ಇಲ್ಲಿದೆ ಒಂದು  ಪುಟ್ಟ ಪ್ರಯತ್ನ:

ನಾನೋ ನಿನ್ನೈನ ನೀನೊ ನನ್ನಾನನ
ನಿನ್ನಾನೆ ನನ್ನಿ ನನ್ನನ್ನಿ ನೌ ನು
ನನ್ನ ನಿನ್ನ ನನ್ನಿ ನನು ನನ್ನಿ ನನೆ
ನಾ ನೀನೆನೆ ನೀನೂ ನಾನೇ ನೆನೆ
ನಾನೂನ ನೀನು ನೀನೂನ ನಾನೂ
ನಾನಾನು ನೀನು ನೀನಿನ್ನು ನಿನ್ನೆ
ನಿನ್ನನ್ನ ನನ್ನಿನನ್ನಿ ನನ್ನಿನನ್ನಿ

ಬಿಡಿಸಿ ಬರೆದಾಗ:

ನಾನು ಓ! ನಿನ್ನ ಇನ, ನೀನೊ? ನನ್ನ ಆನನ.
ನಿನ್ನ ಆನೆ ನನ್ನಿ ನನ್ನ ನನ್ನಿ ನೌ ನು.
ನನ್ನ ನಿನ್ನ ನನ್ನಿ ನನು ನನ್ನಿ ನನೆ.
ನಾ ನೀನು ಎನೆ ನೀನೂ ನಾನೇ, ನೆನೆ.
ನಾನು ಊನ ನೀನು, ನೀನು ಊನ ನಾನೂ
'ನಾ ನಾನು ನೀನು' ನೀ ಇನ್ನು ನಿನ್ನೆ.
ನಿನ್ನ ನನ್ನ ನನ್ನಿ ನನ್ನಿ ನನ್ನಿ ನನ್ನಿ

ನಾನು ನಿನ್ನ ಸೂರ್ಯ. ನೀನು? ನನ್ನ ಮುಖ (ಒಟ್ಟಿಗೆ ಜಗತ್ತನ್ನು ನೋಡುತ್ತೇವೆ).  
ನಿನ್ನ ಬೃಹತ್ ಪ್ರೇಮವೆ  ನನಗೆ ನಿಜವಾದ (ಸಂಸಾರ ಸಾಗರವನ್ನು ದಾಟಿಸುವ) ನೌಕೆ, ಖಂಡಿತ.  
ನಮ್ಮ  ಪ್ರೇಮ  (ಪವಿತ್ರ) ಒಳ್ಳೆಯ (ಅರಳಲು ಅಂತಸ್ಸತ್ವವುಳ್ಳ) ಮೊಗ್ಗು.
ನಾನು ನೀ ಆದರೆ ನೀನು ನಾನು, ನೆನಪಿರಲಿ.
ನಾನು ಇಲ್ಲದ ನೀನು, ನೀನು ಇಲ್ಲದ ನಾನು  ಮತ್ತು
'ನಾ ನಾನು - ನೀನು ನೀ' (ಪ್ರತ್ಯೇಕ ಭಾವ) ಇನ್ನು ಮೇಲೆ ನಿನ್ನೆಯವು .
ನಮ್ಮ ಈ ಪವಿತ್ರ ಪ್ರೇಮವೇ ನಿಜವಾದ ಪ್ರೇಮ.

ಇನ್ನೊಂದು ವಿಶೇಷವೆಂದರೆ ಕನ್ನಡದ ಎಲ್ಲ ಸ್ವರಗಳೂ (ಋ ಮತ್ತು ಅಃ ಹೊರತುಪಡಿಸಿ) ಇದರಲ್ಲಿ ಇವೆ.

ಇದು ಪದ್ಯ ಹೌದೋ ಅಲ್ಲವೋ ಸಂಸ್ಕೃತದ ಮಟ್ಟಕ್ಕಂತೂ ಬಾರದು. ಆದರೂ ವ್ಯಾಲೆಂಟೈನ್ ಕಾರ್ಡ್ ನಲ್ಲಿ ಬರೆಯಲು ತಕ್ಕುದು; ನಿಮ್ಮ ಸಂಗಾತಿಯನ್ನು ರಂಜಿಸಿ ಒಲಿಸುವುದು ಗ್ಯಾರಂಟಿ! ಇಷ್ಟವಾದರೆ, ನಿಮ್ಮ ವಿವಾಹ  ಶಪಥಗಳನ್ನು ಈ ಸಪ್ತಪದಿ (ಏಳು ಸಾಲಿನ  ಪದ್ಯ) ಯೊಂದಿಗೆ ದೃಢೀಕರಿಸಿಕೊಳ್ಳಬಹುದು! ಮೊನ್ನೆ ತಾನೆ, ಮಡದಿ ಧಾರಿಣಿಯೊಂದಿಗೆ ಶೃಂಗೇರಿಯ ತೂಗು ಸೇತುವೆಯ ಮೇಲೆ ಸಾಲಿಗೊಂದು ಹೆಜ್ಜೆ ಇರಿಸುತ್ತ ನಮ್ಮ ದಾಂಪತ್ಯದ ಮೂವತ್ತೆರಡನೆಯ ವರ್ಷವನ್ನು ಆಚರಿಸಿಕೊಂಡದ್ದು ಹೀಗೆಯೆ.


ತಾಗುಲಿ :  Sacred Love Poem, Sanskrit Clever Poetry, Valentine Day Special, Vishweshwar Dixit,