ಡುಮಿಂಗ : ಒಂದು ಅನಿಸಿಕೆ

ಡುಮಿಂಗ : ಒಂದು ಅನಿಸಿಕೆ

*** ವಿಶ್ವೇಶ್ವರ ದೀಕ್ಷಿತ
April 12, 2020

Book Image
ಡುಮಿಂಗ, ಕತೆಗಳು
ಲೇಖಕ                : ಶಶಿ ತರೀಕೆರೆ
ಪ್ರಕಾಶನ ವರ್ಷ : 2019
ಪ್ರಕಾಶಕ            : ಛಂದ ಪುಸ್ತಕ
ಪುಟಗಳು           : 108
ಬೆಲೆ                   : ₹ 90.00

 

ಹೊಸ ತಲೆಮಾರಿನ ಲೇಖಕರಲ್ಲಿ ಗುರುತಿಸಿಕೊಂಡಿರುವ ಶಶಿ ತರೀಕೆರೆ ಇವರ 'ಡುಮಿಂಗ' ಕಥಾ ಸಂಕಲನಕ್ಕೆ 2019 ರ ಸಾಲಿನ ಛಂದ ಪ್ರಶಸ್ತಿ ಒಲಿದು ಬಂದಿದೆ. ಇದರಲ್ಲಿ ಪುಸ್ತಕದ ಹೆಸರಿನದೆ ಒಂದು ಸಣ್ಣ ಕತೆ. ನನ್ನ ಈ ಮಾತುಗಳು ಈ ಒಂದು ಕತೆಗೆ ಮಾತ್ರ ಸೀಮಿತ. ಇದನ್ನು ಪುಸ್ತಕ ವಿಮರ್ಶೆ ಎಂದು ತಿಳಿದುಕೊಳ್ಳಬಾರದು.

ಮೊತ್ತ ಮೊದಲು ಕುತೂಹಲ ಕೆರಳಿಸುವುದು ಡುಮಿಂಗ ಅನ್ನುವ ಹೆಸರು. ಇಂಗ್ಲಿಷಿನಲ್ಲಿ Dummy, Idiot ಅಂತ ಅರ್ಥಗಳಿವೆ. ಕನ್ನಡದಲ್ಲಿ ಡುಮ್ಮ, ಡುಮ್ಮಣ್ಣ, ಡುಮ್ಮಿ, ಡುಮ್ಮಕ್ಕ  ಅಂತ ಮುದ್ದಿನಿಂದ ಮಕ್ಕಳಿಗೆ ಕರೆಯುವ ವಾಡಿಕೆಯೂ ಇದೆ.  ಇಂಥ ಹೆಸರನ್ನು ಯಾರಾದರೂ ಇಟ್ಟುಕೊಳ್ಳುತ್ತಾರಾ, ತಂದೆ ತಾಯಿಗಳು ಇಡುತ್ತಾರಾ ಎಂದು ಸಂದೇಹಿಸಬಹುದು. ಆದರೆ ಡುಮಿಂಗ ಒಂದು ಅದಕ್ಕೊಂದು ಸಿದ್ಧ ಕತೆ ಹೇಳುತ್ತ ಅದನ್ನೇ ಅಚಲವಾಗಿ ನಂಬಿಕೊಂಡಿರುತ್ತಾನೆ. ಇನ್ನು ಕೆಲವು ಹೆಸರುಗಳೂ ಕುತೂಹಲಕಾರಿಯಾಗಿವೆ. ಪ್ರಸನ್ನ ಅಂದರೆ ಗಂಡಸೆಂದು ನೀವು ಊಹಿಸಿದರೆ ತಪ್ಪು. ಇಲ್ಲಿ ಪ್ರಸನ್ನ ಡುಮಿಂಗನ ಗರ್ಲ್ ಫ್ರೆಂಡ್.  ಪ್ರಸನ್ನಳ ಅಕ್ಕನ ಹೆಸರು ಪತಿವ್ರತೆ. ಡುಮಿಂಗನ  ಹೋಟೆಲ್ ಹೆಸರು ಅಸಹಜವಾದದ್ದು. ಹೀಗೆ ನಿಮ್ಮ ಪೂರ್ವಕಲ್ಪನೆಗಳು ಬುಡಮೇಲಾಗುತ್ತವೆ. ನಂತರ ಬರುತ್ತಾರೆ ಪ್ರಸನ್ನಳ ತಾಯಿ ಯಶೋದಾ ಮತ್ತು ತಂದೆ ರಾಚಪ್ಪ. ಅಷ್ಟರಲ್ಲೆ, ಹಳೆ ತಲೆಮಾರಿನವರಾದ ಅವರ ಹೆಸರುಗಳು ಪಾತ್ರಕ್ಕೆ ತಕ್ಕಂತೆ ಇವೆ.  ನಿಮ್ಮ ಕಲ್ಪನೆಗಳು ಮತ್ತೆ ಪಲ್ಟಿ ಹೊಡೆಯುತ್ತವೆ.

ಡುಮಿಂಗ ಒಳ್ಳೆಯ ಚಾರ್ಮಿಂಗ್ ಮನುಷ್ಯ. ಬಿಜಿನೆಸ್ ನಲ್ಲಿ ಯಶಸ್ವಿ. ಹಿಂದಿನ ಕತೆ ಏನಿದ್ದರೂ ಪ್ರಸನ್ನ ಕೂಡ ಈಗ ಉತ್ತಮ ಸ್ಥಿತಿಯಲ್ಲೇ ಇರುವವಳು. ಇಬ್ಬರು ಪ್ರೀತಿಸುತ್ತಿದ್ದಾರೆ. ಮದುವೆ ಮಾಡಿಕೊಳ್ಳದೆ  ಇರಲು ಯಾವ ಕಾರಣಗಳೂ ಇಲ್ಲ. ಆದರೂ, ಅವಳು "ನನ್ನ ಪಾಡಿಗೆ ಬಿಟ್ಟು ಬಿಡು ಮಾರಾಯಾ.  ಹಾಳಾಗಿ ಹೋಗ್ತೀನಿ. ನಿಂಜೊತೆ ಬಾಳ್ವೆ ಮಾಡೋಕ್ಕಾಗಲ್ಲ ನಂಗೆ" ಎನ್ನುತ್ತಾಳೆ. ಇಲ್ಲಿ ಹೆಸರಿನ ಕಾಟ ಅವಳ ಸುಪ್ತಪ್ರಜ್ಞೆಯಲ್ಲೂ ಇದೆ ಎಂದು ಸೂಚ್ಯವಾಗಿ ಮೂಡಿದೆ ಎನಿಸುತ್ತದೆ. ನೇರವಾಗಿ ಹೇಳಿರುವದಕ್ಕಿಂತ ಇದು ಬಹಳ ಸಮರ್ಥವಾದುದು.

ಹೀಗೆ ಹೆಸರಿನಲ್ಲಿನ ಗಟ್ಟಿ ನಂಬಿಕೆಯಿಂದ ಶುರುವಾದ ಕತೆ,  ಅನುಮಾನಿಸಿ ಹೆಸರನ್ನೆ ಬದಲಾಯಿಸುವ ಮಟ್ಟಕ್ಕೆ ಬಂದಾಗ ಮುಕ್ತಾಯವಾಗುತ್ತದೆ. ಹೆಸರಿನ ವೈಚಿತ್ರ್ಯ, ಪೂರ್ವಗ್ರಹಿಕೆಯನ್ನು ಬಿಡಿಸುವ ಉದ್ದೇಶ, ಮತ್ತು ನಿರೂಪಣೆಯ ಬಲಗಳೇ ಈ ಕತೆಯ ಬಂಡವಾಳ. ಅದರ ಸುತ್ತ ಶಶಿ ತರೀಕೆರೆ ಈ ಕತೆಯನ್ನು ಅತ್ಯಂತ ಸುಂದರವಾಗಿ, ತಾರ್ಕಿಕವಾಗಿ, ಸಂಬದ್ಧವಾಗಿ ಹೆಣೆದಿದ್ದಾರೆ. ಈ ದೃಷ್ಟಿಯಿಂದ, ಹಲವು ವಿಷಯಗಳನ್ನು, ಉದಾಹರಣೆಗೆ, ಪ್ರಸನ್ನಳ ಕುಟುಂಬದ ವಿವರಗಳು, ಅನವಶ್ಯಕ ಎನಿಸುತ್ತವೆ. ಅವನ್ನು ಬಿಟ್ಟಿದ್ದರೆ ಕತೆಗೆ ಇನ್ನೂ ಬಿಗು ಬರಬಹುದಿತ್ತು.

ಇವರ ಉಪಮೆಗಳು ವಿನೂತನವಾಗಿದ್ದು ಮಾರ್ಮಿಕವಾಗಿವೆ. ಉದಾಹರಣೆಗೆ, ಅಪ್ಪ ಸತ್ತಾಗ ಚಿತೆಗೆ ಬೆಂಕಿ ಸೋಂಕಿಸುವ ಪತಿವ್ರತೆಯ "ಕಣ್ಣಲ್ಲಿನ ನೀರು ಹಿಮವಾಗಿತ್ತು. ಕತೆಯ ಎರಡನೆಯ ಪುಟದಲ್ಲಿ "ಕೊನೆಗೆ ಯಾವುದೇ ಬಣ್ಣದ ಮಾತುಗಳು ..." ಎಂದು ಶುರುವಾಗುವ ಮೂರು ವಾಕ್ಯಗಳಲ್ಲಿ ಮೂರು ಉಪಮೆಗಳು ಕಣ್ಣಿಗೆ ಒಂದೊಂದು ಚಿತ್ರ ಕಟ್ಟುತ್ತವೆ. ಆದರೆ ಅವುಗಳ ವೇಗದಿಂದ, ಚಲನ ಚಿತ್ರವನ್ನು ಫಾಸ್ಟ್ ಫಾರ್ವಾರ್ಡ್ ನಲ್ಲಿ ನೋಡಿದ ಹಾಗೆ ಆಗುತ್ತದೆ. ಅದೇ ಒಂದು ದೌರ್ಬಲ್ಯ ಎನಿಸುತ್ತದೆ.  ಇವರ ಕತೆಗಳನ್ನು ಸಾವಧಾನದಿಂದ ಓದಿದರೆ ಸ್ವಾರಸ್ಯ ಹೆಚ್ಚು ಎಂದು ಓದುಗರಿಗೆ ನನ್ನ ಸಲಹೆ. ಒಟ್ಟಿನಲ್ಲಿ, ಉದ್ದೇಶಕ್ಕೆ ಒಪ್ಪವಾಗಿ, ತರ್ಕಬದ್ಧವಾಗಿ, ಬಿಗು ಮಾತಿನಲ್ಲಿ, ಕತೆ ಹೆಣೆದ ಶಶಿ ಅವರಿಗೆ ಅಭಿನಂದನೆಗಳು.

 

ದಕ್ಷಿಣ ಕ್ಯಾಲಿಫೋರ್ನಿಯದ ಶ್ರೀಧರ ರಾಜಣ್ಣ ಅವರು ನಡೆಸುತ್ತಿರುವ "ಪುಸ್ತಕ ಗೂಡು"  ಗುಂಪಿನಲ್ಲಿ ಈ ಕತೆಯ ಒಂದು ಚರ್ಚೆಯನ್ನು ನೋಡಿ:



ತಾಗುಲಿ : Shashi Tarikere, Story Collection, Chanda Pustaka